ಸರಸ್ವತಿ*
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾರರ್ ಫ್ಯಾಂಟಸಿ ಚಿತ್ರ ‘ದಿ ರಾಜಾಸಾಬ್’ನ ಟ್ರೈಲರ್ 2.0 ಬಿಡುಗಡೆಯಾಗಿದ್ದು, ಚಿತ್ರದ ಕಥೆ ಮತ್ತು ಭಾವನಾತ್ಮಕ ಆಯಾಮಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ಸಂಮೋಹನ ವಿದ್ಯೆಯ ಮೂಲಕ ಭಯವನ್ನು ನಿಯಂತ್ರಿಸುವ ಶಕ್ತಿಯಾಗಿ ಸೂಪರ್‌ಸ್ಟಾರ್ ಸಂಜಯ್ ದತ್ ಅಬ್ಬರಿಸಿದ್ದಾರೆ.
ಚಿತ್ರದಲ್ಲಿ ಪ್ರಭಾಸ್ ‘ರಾಜಾಸಾಬ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಜ್ಜಿ (ಜರೀನಾ ವಹಾಬ್) ಮೇಲೆ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿಯಾಗಿ ನಟಿಸಿದ್ದಾರೆ. ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ ನಾಯಕ, ಅಂತಿಮವಾಗಿ ಪಾಳುಬಿದ್ದ ಬಂಗಲೆ ತಲುಪುತ್ತಾನೆ. ಆ ಬಂಗಲೆಯೇ ದಿ ರಾಜಸಾಬ್ ಸಿನಿಮಾದ ಕರಾಳ ರಹಸ್ಯಗಳ ತಾಣ. ಅಲ್ಲಿ ಸಂಮೋಹನ ವಿದ್ಯೆಯ ಮೂಲಕ ಮನಸ್ಸನ್ನೇ ಸೆರೆಹಿಡಿಯುವ ವಿಲನ್ ಸಂಜಯ್ ದತ್ ಎದುರಾಗುತ್ತಾರೆ. ದೈಹಿಕ ಬಲಕ್ಕಿಂತ ಹೆಚ್ಚಾಗಿ ಮಾನಸಿಕ ಆಟಗಳ ಮೂಲಕ ಪ್ರಭಾಸ್ ಅವರನ್ನು ಕಟ್ಟಿಹಾಕುವ ವಿಭಿನ್ನ ಪಾತ್ರದಲ್ಲಿ ಸಂಜಯ್ ದತ್ ಮಿಂಚಿದ್ದಾರೆ.
*ಪಾತ್ರವರ್ಗ ಮತ್ತು ತಾಂತ್ರಿಕತೆ*
ಬೋಮನ್ ಇರಾನಿ ನಿಗೂಢ ಮನೋವೈದ್ಯ ಮತ್ತು ಪ್ಯಾರಾನಾರ್ಮಲ್ ತನಿಖಾಧಿಕಾರಿಯಾಗಿ ಚಿತ್ರಕ್ಕೆ ಹೊಸ ತಿರುವು ನೀಡಿದ್ದಾರೆ. ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಕಥೆಗೆ ಗ್ಲಾಮರ್ ಮತ್ತು ಭಾವನಾತ್ಮಕ ಬಲ ತುಂಬಿದ್ದಾರೆ. ಚಿತ್ರವು ಉನ್ನತ ಮಟ್ಟದ VFX ಮತ್ತು ಅದ್ಧೂರಿ ಸೆಟ್‌ಗಳನ್ನು ಹೊಂದಿದ್ದು, ಹಾರರ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.
*ನಟ ಪ್ರಭಾಸ್ ಮಾತು*
“ಕಳೆದ ಮೂರು ವರ್ಷಗಳ ಪರಿಶ್ರಮ ಮತ್ತು ಜವಾಬ್ದಾರಿಯು ನಿರ್ದೇಶಕ ಮಾರುತಿ ಅವರ ಕಣ್ಣಲ್ಲಿ ನೀರು ತರಿಸಿದೆ. ಸಾಲು ಸಾಲು ಆಕ್ಷನ್ ಸಿನಿಮಾಗಳ ನಡುವೆ ಪ್ರೇಕ್ಷಕರಿಗೆ ಒಂದು ಪರಿಪೂರ್ಣ ಮನರಂಜನಾ ಸಿನಿಮಾ ನೀಡಬೇಕೆಂಬ ಹಂಬಲದಿಂದ ಈ ‘ಹಾರರ್-ಕಾಮಿಡಿ’ ಸಿದ್ಧವಾಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಕೇಳಿದಾಗ ನಾನು ಮಾರುತಿ ಅವರ ಬರವಣಿಗೆಯ ಫ್ಯಾನ್ ಆದೆ. 15 ವರ್ಷಗಳ ನಂತರ ನನ್ನ ಅಭಿಮಾನಿಗಳಿಗೆ ‘ಡಾರ್ಲಿಂಗ್’ ಶೈಲಿಯ ಪೂರ್ಣ ಪ್ರಮಾಣದ ಎಂಟರ್‌ಟೈನ್‌ಮೆಂಟ್ ಸಿಗಲಿದೆ. ಈ ಸಂಕ್ರಾಂತಿಗೆ ಎಲ್ಲ ಸಿನಿಮಾಗಳು ಗೆಲ್ಲಲಿ, ಅದರ ಜೊತೆಗೆ ‘ರಾಜಾಸಾಬ್’ ಬ್ಲಾಕ್‌ಬಸ್ಟರ್ ಆಗಲಿ” ಎಂದು ಆಶಿಸಿದರು.
*ನಿರ್ದೇಶಕ ಮಾರುತಿ ಮಾತು*
“ಪ್ರಭಾಸ್ ಅವರಂತಹ ದೊಡ್ಡ ನಟರಿದ್ದಾಗ ನಿರೀಕ್ಷೆಗಳು ಆಕಾಶ ಮುಟ್ಟಿರುತ್ತವೆ. ಅದಕ್ಕೆ ತಕ್ಕಂತೆ ನಾವು ಕಳೆದ ಮೂರು ವರ್ಷಗಳಿಂದ ಹಗಲಿರುಳು ಶ್ರಮಿಸಿದ್ದೇವೆ. ಈ ಹಾರರ್-ಕಾಮಿಡಿ ಪ್ರಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಈ ಸಿನಿಮಾ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ” ಎಂದರು.
ಮಾರುತಿ ನಿರ್ದೇಶನದ ಹಾಗೂ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸಿರುವ ಈ ಚಿತ್ರವು 2026ರ ಜನವರಿ 9 ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.





