ಸ್ವಾದಿಷ್ಟ ಟೊಮೇಟೊ ಭುಜಿಯಾ

ಸಾಮಗ್ರಿ : 3-4 ಮಧ್ಯಮ ಗಾತ್ರದ ಟೊಮೇಟೊ, 1 ಕಪ್‌ ಕಡಲೆಹಿಟ್ಟು, 3-4 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುದೀನಾ ಚಟ್ನಿ, ಕಾಳುಮೆಣಸು, ಓಮ, ಹುರಿದು ಪುಡಿ ಮಾಡಿದ ಜೀರಿಗೆ, ಚಾಟ್‌ ಮಸಾಲ, ಇಂಗು, ಕರಿಯಲು ಎಣ್ಣೆ.

ವಿಧಾನ : ಟೊಮೇಟೊ ಶುಚಿಗೊಳಿಸಿ, ಒರೆಸಿಕೊಂಡು 4-4 ಭಾಗ ಮಾಡಿ. ಇದಕ್ಕೆ ಪುದೀನಾ ಚಟ್ನಿ ಸವರಿ ಒಂದು ಕಡೆ ಇರಿಸಿ. ಒಂದು ಬೇಸನ್ನಿಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರ, ಮೆಣಸು, (ಚಾಟ್‌ ಮಸಾಲ ಬಿಟ್ಟು) ಉಳಿದೆಲ್ಲ ಮಸಾಲೆ ಸೇರಿಸಿ, ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. 10 ನಿಮಿಷ ಬಿಟ್ಟು, ಇದರಲ್ಲಿ ಟೊಮೇಟೊ ತುಂಡುಗಳನ್ನು ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಸರ್ವ್ ಮಾಡುವ ಮುನ್ನ, ಚಿತ್ರದಲ್ಲಿರುವಂತೆ ಇವನ್ನು ಕತ್ತರಿಸಿ, ಚಾಟ್‌ ಮಸಾಲ ಉದುರಿಸಿ, ಟೊಮೇಟೊ ಸಾಸ್‌ ಜೊತೆ, ಬಿಸಿಯಾಗಿ ಸವಿಯಲು ಕೊಡಿ. ಬಿಸಿ ಬಿಸಿ ಕಾಫಿ/ಟೀ ಜೊತೆಗಿರಲಿ.

Bread-Chops

ಬ್ರೆಡ್ಚಾಪ್ಸ್

ಸಾಮಗ್ರಿ : 6-8 ಬ್ರೆಡ್‌ ಸ್ಲೈಸ್‌, ಬೇಯಿಸಿ ಮಸೆದ 2 ಆಲೂ, ಅರ್ಧ ಕಪ್‌ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 4-5 ಹಸಿಮೆಣಸು, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಚಾಟ್‌ ಮಸಾಲ, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಪುದೀನಾ ಚಟ್ನಿ, ಹುಳಿಸಿಹಿ ಚಟ್ನಿ, ಹೆಚ್ಚಿದ 2 ಈರುಳ್ಳಿ, 2 ಟೊಮೇಟೊ, ತುಸು ಕೊ.ಸೊಪ್ಪು, ಅರ್ಧ ಸೌಟು ಎಣ್ಣೆ.

ವಿಧಾನ : ಬ್ರೆಡ್‌ ಸ್ಲೈಸ್‌ ನ್ನು ನೀರಲ್ಲಿ ಅದ್ದಿ ಹಿಂಡಿಕೊಂಡು, ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಮಸೆದ ಆಲೂ, ಕಡಲೆಹಿಟ್ಟು, ಹಸಿಮೆಣಸು, ಶುಂಠಿ, ಉಪ್ಪು, ಮೆಣಸು, ಉಪ್ಪು, ಖಾರ, ಚಾಟ್‌ ಮಸಾಲ, ಜೀರಿಗೆ ಎಲ್ಲಾ ಸೇರಿಸಿ ಮಿಶ್ರಣ ಕಲಸಿಡಿ. ಇದರಿಂದ ಗುಂಡಗೆ ನಿಪ್ಪಟ್ಟಿನ ಆಕಾರ ಮಾಡಿಕೊಂಡು, ಬಿಸಿ ಅಳ್ಳಕ ತವಾ ಮೇಲೆ ಹಾಕಿ ಶ್ಯಾಲೋ ಫ್ರೈ ಮಾಡಿ. ಎರಡೂ ಬದಿ ಹೊಂಬಣ್ಣ ಬಂದಾಗ ಕೆಳಗಿಳಿಸಿ. ಬಿಸಿ ಇರುವಾಗಲೇ ಇದರ ಮೇಲೆ (ಚಿತ್ರದಲ್ಲಿರುವಂತೆ) ಹೆಚ್ಚಿದ ಎಲ್ಲಾ ಪದಾರ್ಥ ಹಾಕಿ ಸವಿಯಲು ಕೊಡಿ.

Lauki-Palak-Balls

ಸೋರೆ ಪಾಲಕ್ಪಕೋಡ

ಸಾಮಗ್ರಿ : 1 ಸಣ್ಣ ಸೋರೆಕಾಯಿ, 1 ಕಂತೆ ಪಾಲಕ್‌ ಸೊಪ್ಪು, 2-3 ಹಸಿಮೆಣಸು, 1 ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ, ಸೋಂಪು, ಅಮ್ಚೂರ್‌ ಪುಡಿ, ಇಂಗು, ದಾಳಿಂಬೆ ಪುಡಿ, ಕರಿಯಲು ಎಣ್ಣೆ.

ವಿಧಾನ : ಸೋರೆಯ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು, ಹಸಿ ಮೆಣಸು, ಶುಂಠಿ, ಕೊ.ಸೊಪ್ಪು ಹಾಗೂ ಇನ್ನಿತರ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ನಿಂಬೆ ಗಾತ್ರದ ಉಂಡೆಗಳಾಗಿಸಿ, ತುಸು ಚಪ್ಪಟೆ ಮಾಡಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್‌ ನಿಂದ ಅಲಂಕರಿಸಿ, ಸಾಸ್‌ ಜೊತೆ ಸವಿಯಲು ಕೊಡಿ.

Aloo-Lachha-Paneer-Balls

ಆಲೂ ಪನೀರ್ಬೋಂಡ

ಸಾಮಗ್ರಿ : 250 ಗ್ರಾಂ ತುರಿದ ಪನೀರ್‌, ಸಿಪ್ಪೆ ಹೆರೆದು ತುರಿದ 4-5 ಆಲೂ, 1 ಕಪ್‌ ಮೈದಾ, 4-5 ಚಮಚ ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಚಾಟ್‌ ಮಸಾಲ, ಅರಿಶಿನ, ನಿಂಬೆ ರಸ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಒಟ್ಟಾಗಿ ಸೇರಿಸಿ. ಇದಕ್ಕೆ ಅಗತ್ಯವಿರುವಷ್ಟು ನೀರು ಬೆರೆಸುತ್ತಾ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಿಂದ ನಿಂಬೆ ಗಾತ್ರದ ಉಂಡೆಗಳನ್ನು ಹಿಡಿದು, ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ತಿರುಗುವಂತೆ ಗರಿಗರಿಯಾಗಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಇದನ್ನು ತುಪ್ಪದಲ್ಲಿ ಕರಿದ ಪನೀರ್‌ ಕ್ಯೂಬ್ಸ್, ಪುದೀನಾ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ. ಜೊತೆಗೆ ಬಿಸಿ ಬಿಸಿ ಕಾಫಿ/ಟೀ ಇರಲಿ.

Masala-Rice-Donut

ಮಸಾಲ ರೈಸ್ಡೋನಟ್

ಸಾಮಗ್ರಿ : 2 ಕಪ್‌ ಅನ್ನ, ಅರ್ಧ ಕಪ್‌ ಕಾರ್ನ್‌ ಫ್ಲೋರ್‌, ಬೇಯಿಸಿ ಮಸೆದ 2-3 ಆಲೂ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 2-3 ಹಸಿ ಮೆಣಸು, 1 ತುಂಡು ಹಸಿ ಶುಂಠಿ, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ಚಾಟ್‌ ಮಸಾಲ, ಗರಂ ಮಸಾಲ, ತುಸು ಬೆಂದ ಕಡಲೆಕಾಳು, ಕರಿಯಲು ಎಣ್ಣೆ.

ವಿಧಾನ : ಬೇಯಿಸಿ ಮಸೆದ 2 ಆಲೂಗಳಿಗೆ ಅನ್ನ ಕಿವುಚಿ ಹಾಕಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. (ಉಳಿದ 1 ಬೆಂದ ಆಲೂ ಹೋಳು ಮಾಡಿ, ಕಡಲೆಕಾಳಿನ ಜೊತೆ ಚಿತ್ರದಲ್ಲಿರುವಂತೆ ಬೇರೆ ಆಗಿಡಿ) ಇದರಿಂದ ಸಣ್ಣ ಉಂಡೆಗಳಾಗಿಸಿ,  ಚಿತ್ರದಲ್ಲಿರುವಂತೆ ಅದನ್ನು ಚಪ್ಪಟೆ ಮಾಡಿ, ವಡೆ ಆಕಾರ ನೀಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಒಂದು ಟ್ರೇನಲ್ಲಿ ಜೋಡಿಸಿಕೊಂಡು, ಅದರ ಮೇಲೆ ಸಾಸ್‌ ಹರಡಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

Tasty-Capsicum-Lollipop

ಟೇಸ್ಟಿ ಕ್ಯಾಪ್ಸಿಕಂ ಲಾಲಿಪಾಪ್

ಸಾಮಗ್ರಿ : 1 ಕಪ್‌ ಸಣ್ಣ ರವೆ, ಬೇಯಿಸಿ ಮಸೆದ 2 ಆಲೂ, 4 ಚಮಚ  ಆರಾರೂಟ್‌ ಪೌಡರ್‌, ತಲಾ 1-1 ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, 2-3 ಹಸಿಮೆಣಸು, 1 ಈರುಳ್ಳಿ, ಅರ್ಧ ಸೌತೆ ತುರಿ, 1 ತುಂಡು ಶುಂಠಿ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಚಾಟ್‌ ಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ, ಕೆಲವು ಐಸ್‌ ಕ್ರೀಂ ಕಡ್ಡಿಗಳು.

ವಿಧಾನ : ಎಲ್ಲಾ ತರಕಾರಿ ಸಣ್ಣಗೆ ಹೆಚ್ಚಿಡಿ. ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿ, ನೀರು ಬೆರೆಸಿ ಮಿಶ್ರಣ ಕಲಸಿಡಿ. ಇದು ಪಕೋಡ ಹದಕ್ಕಿರಲಿ. ಇದರಿಂದ ಸಣ್ಣ ಉಂಡೆಗಳಾಗಿಸಿ, ತುಸು ಚಪ್ಪಟೆ ಮಾಡಿ. ಇದಕ್ಕೆ 1-1 ಐಸ್‌ ಕ್ರೀಂ ಕಡ್ಡಿ ಸಿಗಿಸಿಡಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಆಮೇಲೆ ಈ ಬಿಸಿ ಬಿಸಿ ಲಾಲಿ ಪಾಪ್ಸ್ ನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

Chatpate-Banana-Kabab

ಸ್ಪೆಷಲ್ ಬನಾನಾ ಫ್ರೀಟರ್ಸ್

ಸಾಮಗ್ರಿ : 6 ಬಾಳೆಕಾಯಿ, 2 ಆಲೂ, 1 ಕಪ್‌ ಮೈದಾ, 2-3 ಚಮಚ ಕಡಲೆಹಿಟ್ಟು, 1 ಕಪ್‌ ಬ್ರೆಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಚಾಟ್‌ ಮಸಾಲ, ಗರಂಮಸಾಲ, ಹೆಚ್ಚಿದ 2-3 ಹಸಿಮೆಣಸು, ದಾಳಿಂಬೆ ಪುಡಿ, ಕರಿಯಲು ಎಣ್ಣೆ.

ವಿಧಾನ : ಮೊದಲು ಆಲೂ ಬಾಳೆಕಾಯಿಗಳನ್ನು ಇಡಿಯಾಗಿ ಕುಕ್ಕರ್‌ ನಲ್ಲಿ ಬೇಯಿಸಿ. ಅದರ ಸಿಪ್ಪೆ ಸುಲಿದು, ಮಸೆದಿಡಿ. ಇವೆರಡರ ಮಿಶ್ರಣಕ್ಕೆ ನೀಟಾಗಿ ಇನ್ನಿತರ ಎಲ್ಲಾ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ನಂತರ ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನಾಗಿಸಿ, ಅವನ್ನು ಅದುಮಿ ಚಪ್ಪಟೆ ಮಾಡಿ ಫ್ರೀಟರ್ಸ್‌ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್‌ ನಿಂದ ಅಲಂಕರಿಸಿ, ಟೊಮೇಟೊ ಚಟ್ನಿ ಜೊತೆ, ಬಿಸಿಯಾಗಿ ಸವಿಯಲು ಕೊಡಿ. ಹಬೆಯಾಡುವ ಕಾಫಿ/ಟೀ ಇರಲಿ!

Kakdi-Ke-Appe

ಸೌತೇಕಾಯಿ ಪಡ್ಡು

ಸಾಮಗ್ರಿ : ನೀಟಾಗಿ ತುರಿದ 1 ಸಣ್ಣ ಸೌತೇಕಾಯಿ, 1 ಕಪ್‌ ಸಣ್ಣ ರವೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುಳಿ ಮೊಸರು, ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು, ಕೊ.ಸೊಪ್ಪು, ಚಾಟ್‌ ಮಸಾಲ, ಬೇಕಿಂಗ್‌ ಪೌಡರ್‌, ತುಸು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಳ್ಳಿ. ಇದಕ್ಕೆ ತುಸು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಇದನ್ನು 2 ಗಂಟೆ ಕಾಲ ನೆನೆಸಿ, ಜಿಡ್ಡು ಸವರಿದ ಪಡ್ಡು ಸ್ಟ್ಯಾಂಡಿಗೆ, ಪ್ರತಿ ಗುಳಿಯಲ್ಲೂ ಮುಕ್ಕಾಲು ಭಾಗ ತುಂಬಿಸಿ. ಇದಕ್ಕೆ ಮುಚ್ಚಳ ಮುಚ್ಚಿರಿಸಿ ಒಂದು ಬದಿ ಬೇಯಿಸಿ. ನಂತರ ತಿರುವಿಹಾಕಿ, ಮತ್ತೊಂದು ಬದಿಯನ್ನೂ ನೀಟಾಗಿ ಬೇಯಿಸಿ, ಕಾಯಿ ಚಟ್ನಿ, ಟೊಮೇಟೊ ಸಾಸ್‌, ಸಲಾಡ್‌ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

Cookry-9

ಕ್ರಿಸ್ಪೀ ಪಕೋಡ

ಸಾಮಗ್ರಿ : 1 ಕಪ್‌ ಕಡಲೆ ಹಿಟ್ಟು, ಅರ್ಧ ಕಪ್‌ ರವೆ, ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 2 ಆಲೂ, ತುಸು ಕೊ.ಸೊಪ್ಪು, ಪುದೀನಾ, ಕರಿಬೇವು, ಒಂದಿಷ್ಟು ಬ್ರೋಕ್ಲಿ, 3 ಬಗೆಯ ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), ತುಸು ಪಾಲಕ್‌ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಗರಂಮಸಾಲ, ಚಾಟ್‌ ಮಸಾಲ, ಕರಿಯಲು ಎಣ್ಣೆ.

ವಿಧಾನ : ಹೆಚ್ಚಿದ ಎಲ್ಲಾ ಪದಾರ್ಥಗಳೊಂದಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ನೀರು ಚಿಮುಕಿಸಿ, ಪಕೋಡ ಹದಕ್ಕೆ ಮಿಶ್ರಣ ಕಲಸಿಡಿ. ಎಣ್ಣೆ ಕಾದ ನಂತರ ಇದರಿಂದ ತುಸು ತುಸು ಮಿಶ್ರಣ ಹಾಕುತ್ತಾ, ಹೊಂಬಣ್ಣ ಬರುವಂತೆ ಪಕೋಡ ಕರಿಯಿರಿ.

Cookry-10

ಸ್ಪೆಷಲ್ ಸ್ಯಾಂಡ್ವಿಚ್

ಸಾಮಗ್ರಿ : 5-6 ಬ್ರೆಡ್‌ ಸ್ಲೈಸ್‌, ಸಣ್ಣದಾಗಿ ಹೆಚ್ಚಿದ 3 ಬಗ್ಗೆಯ ಕ್ಯಾಪ್ಸಿಕಂ (ಒಟ್ಟಾಗಿ 1 ಕಪ್‌), 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ವೈಟ್‌ ಪೆಪ್ಪರ್‌ ಪುಡಿ, ಮೆಯೋನೀಸ್‌, ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಬ್ರೆಡ್‌ ಸ್ಲೈಸ್‌ ಗಳನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ಅದರ ಒಂದು ಬದಿಗೆ ಧಾರಾಳವಾಗಿ ಮೆಯೋನೀಸ್‌ ಸವರಿಡಿ. ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಅದನ್ನು ಇದರ ಮೇಲೆ ನೀಟಾಗಿ ಹರಡಿ. ಇದನ್ನು ಪರಸ್ಪರ ಕ್ಲೋಸ್‌ ಮಾಡಿ ಸ್ಯಾಂಡ್‌ ವಿಚ್‌ ಆಕಾರ ನೀಡಿ. ಇದನ್ನು ಹಾಗೇ ಸೇವಿಸಬಹುದು, ಅಗತ್ಯ ಎನಿಸಿದರೆ, ತಲಾ ಮೇಲೆ ತುಸು ಬೆಣ್ಣೆ ಬಿಸಿ ಮಾಡಿ, ಇದರ ಎರಡೂ ಬದಿ ಹೊಂಬಣ್ಣ ಆಗಿಸಿ, ನಂತರ ಸವಿಯಿರಿ.

Cookry-Feb-lst-2024

ವೆಜ್ಟಿಕ್ಕಾ

ಸಾಮಗ್ರಿ : 1 ಸಣ್ಣ ಝುಕೀನಿ (ಆಸ್ಟ್ರೇಲಿಯನ್‌ ಸೌತೆ), 1-2 ಈರುಳ್ಳಿ, 3 ಬಗೆ ಕ್ಯಾಪ್ಸಿಕಂ (ತಲಾ 1-1), 2 ಬೇಬಿ ಸ್ವೀಟ್‌ ಕಾರ್ನ್‌, ಮ್ಯಾರಿನೇಶನ್‌ ಗಾಗಿ ಅರ್ಧ ಕಪ್‌ ಹುಳಿ ಮೊಸರು, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟಿಕ್ಕಾ ಮಸಾಲೆ (ರೆಡಿಮೇಡ್‌), ತುಸು ಕಡಲೆಹಿಟ್ಟು, ಎಣ್ಣೆ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಸೇರಿಸಿ ಪೇಸ್ಟ್ ಮಾಡಿ. ಕಡಲೆಹಿಟ್ಟನ್ನು ಲೈಟಾಗಿ ಹುರಿದುಕೊಳ್ಳಿ. ನಂತರ ಮೊಸರಿನ ಬಟ್ಟಲಿಗೆ ಮ್ಯಾರಿನೇಶನ್‌ ಸಾಮಗ್ರಿ ಪೂರ್ತಿ ಹಾಗೆ ಗೊಟಾಯಿಸಿ. ಎಲ್ಲಾ ತರಕಾರಿಗಳನ್ನೂ (ಚಿತ್ರದಲ್ಲಿರುವಂತೆ) ಕತ್ತರಿಸಿ ಹೋಳಾಗಿಸಿ. ಅವನ್ನು ಈ ಮಿಶ್ರಣಕ್ಕೆ ಹಾಕಿ, 1-2 ಗಂಟೆ ಕಾಲ ನೆನೆಯಲು (ಮ್ಯಾರಿನೇಟ್‌ ಆಗಲು) ಬಿಡಿ. ನಂತರ ಚಿತ್ರದಲ್ಲಿರುವಂತೆ ಸ್ಟೀಲ್ ‌ರಾಡಿಗೆ ಒಂದೊಂದಾಗಿ ಎಲ್ಲಾ ಹೋಳು ಸಿಗಿಸಿ, ಸೇಫ್‌ ಬೇಕಿಂಗ್‌ ಟ್ರೇನಲ್ಲಿರಿಸಿ, ಮೊದಲೇ ಬಿಸಿ ಮಾಡಿದ್ದ ಓವನ್‌ ನಲ್ಲಿ ಇರಿಸಿ, 300 ಡಿಗ್ರಿ ಶಾಖದಲ್ಲಿ ನೀಟಾಗಿ ಬೇಕ್‌ ಮಾಡಿ, ಸಾಸ್‌ ಜೊತೆ ಬಿಸಿಯಾಗಿ ಸವಿಯಲು ಕೊಡಿ.

Cookry-11

ಗ್ರಿಲ್ಡ್ ಪೆರೋಗೀಸ್

ಸಾಮಗ್ರಿ : 500 ಗ್ರಾಂ ಪೆರೋಗೀಸ್‌ (ಪಿಜ್ಜಾ ಬೇಸ್‌ ತರಹ ರೆಡಿಮೇಡ್‌ ಲಭ್ಯ), 3-4 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ (ತಲಾ 1-1), 1 ತುಂಡು ಹಸಿ ಶುಂಠಿ, 6-7 ಹಸಿ ಮೆಣಸು, 250 ಗ್ರಾಂ ಮೋಜೆರೆಲಾ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಪೇಸ್ಟ್.

ವಿಧಾನ : ಪೆರೋಗೀಸ್‌ ನ್ನು 15 ನಿಮಿಷ ನೀರಲ್ಲಿ ನೆನೆಹಾಕಿಡಿ. ನಂತರ ಅದನ್ನ ಒಲೆ ಮೇಲಿರಿಸಿ, 1 ಚಮಚ ಎಣ್ಣೆ ಬೆರೆಸಿ ಚೆನ್ನಾಗಿ ಕುದಿಸಬೇಕು. ನಂತರ ನೀರು ಬಸಿದು ಪೆರೋಗೀಸ್‌ ನ್ನು ಬೇರ್ಪಡಿಸಿ. ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಸೇರಿಸಿ ಪೇಸ್ಟ್ ಮಾಡಿ. ಉಳಿದ ತರಕಾರಿಗಳನ್ನು ದೊಡ್ಡ ಹೋಳಾಗಿಸಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಮಂದ ಉರಿ ಮಾಡಿಕೊಂಡು, ಇದಕ್ಕೆ ಪೇಸ್ಟ್ ಹಾಕಿ ಕೈಯಾಡಿಸಿ, ನಂತರ ಟೊಮೇಟೋ ಪೇಸ್ಟ್ ಹಾಕಿ ಬಾಡಿಸಿ. ಉಪ್ಪು, ಖಾರ ಸೇರಿಸಿ ಕೆದಕಿರಿ. ಆಮೇಲೆ ತರಕಾರಿ ಹೋಳು ಹಾಕಿ ಬಾಡಿಸಿ. ಕೊನೆಯಲ್ಲಿ ಬೆಂದ ಪೆರೋಗೀಸ್‌ ಹಾಕಿ ಎಲ್ಲದರ ಜೊತೆ ಬೆರೆಯುವಂತೆ 3-4 ನಿಮಿಷ ಕೈಯಾಡಿಸಿ. ಇದನ್ನು ಕೆಳಗಿಳಿಸಿ, ಜಿಡ್ಡು ಸವರಿದ ಒಂದು ಓವನ್‌ ಪ್ರೂಫ್‌ ಡಿಶ್ಶಿಗೆ ಹಾಕಿ, ಇದರ ಮೇಲೆ ತುರಿದ ಚೀಸ್ ಹಾಕಿ, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಇರಿಸಿ, 300 ಡಿಗ್ರಿ ಶಾಖದಲ್ಲಿ ಹದನಾಗಿ ಗ್ರಿಲ್ ‌ಮಾಡಿ. ಬಿಸಿ ಬಿಸಿಯಾದ ಇದನ್ನು ಕಾಫಿ/ಟೀ ಜೊತ ಸವಿಯಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ