– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ತೀರ್ಥರೂಪ ತಂದೆಯವರಿಗೆ
ನಿರ್ಮಾಣ: ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್
ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ
ತಾರಾಂಗಣ: ನಿಹಾರ್ ಮುಕೇಶ್, ರಚನಾ ಇಂದರ್, ಸಿತಾರಾ, ರಾಜೇಶ್ ನಟರಂಗ, ರವೀಂದ್ರ ವಿಜಯ್, ಅಶ್ವಿತಾ ಆರ್. ಹೆಗಡೆ, ಶ್ರೀವತ್ಸ, ಶ್ರವಣ್,
ರೇಟಿಂಗ್: 3/5
2023ರಲ್ಲಿ ಬಂದ ‘ಹೊಂದಿಸಿ ಬರೆಯಿರಿ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ರಾಮೇನಹಳ್ಳಿ ಜಗನ್ನಾಥ. ಈಗ ‘ತೀರ್ಥರೂಪ ತಂದೆಯವರಿಗೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ.ಈ ಬಾರಿ ಸಹ ಭಾವನೆಗಳನ್ನು ತಟ್ಟುವ ಕಥೆಯೊಂದಿಗೆ ಬಂದಿದ್ದಾರೆ.
ಜಾನಕಿ (ಸಿತಾರಾ )ಮಗ ಪೃಥ್ವಿ ಸಂಚಾರಿ (ನಿಹಾರ್ ಮುಕೇಶ್) ಇಅವರಿಬ್ಬರ ಜೀವನದಲ್ಲಿ ಸಾಕಷ್ಟು ಏರಿಳಿತ ಇರುತ್ತದೆ. ಯೂಟ್ಯೂಬ್ ಚಾನೆಲ್ ಹೊಂದಿರುವ ಮಗನಿಗೆ ತಾಯಿ ಎಂದರೆ ಅಷ್ಟಕ್ಕಷ್ಟೆ. ಅದಕ್ಕೆ ಕಾರಣ ಜಾನಕಿಯ ಪರಿಚಯಸ್ಥನಾದ ವಿಶ್ವನಾಥ್ (ರಾಜೇಶ್ ನಟರಂಗ) ಒಡನಾಟ ಕಾರಣವಾಗಿದೆ. ಜೊತೆಗೆ ತನ್ನ ಜೀವನದಲ್ಲಿ ಒಮ್ಮೆಯೂ ಕಣ್ಣೆದುರಿಗೆ ಬರದ ತಂದೆ ಕುರಿತಂತೆ ತಾಯಿ ಎಲ್ಲವನ್ನೂ ಮುಚ್ಚಿಟ್ಟಿದ್ದಾರೆ ಎನ್ನುವ ಕೋಪವಿದೆ. ಇದೌ ಹೀಗೆ ಸಾಗುತ್ತಿರುವಾಗಲ್ಲೇ ಪೃಥ್ವಿ ಬಾಳಲ್ಲಿ ಅಕ್ಷರಾನ (ರಚನಾ ಇಂದರ್) ಆಗಮನವಾಗುತ್ತದೆ. ಅಲ್ಲಿಂದ ಅವನು ತಾನು ತಂದೆಯ ಹುಡುಕಾಟ ನಡೆಸಬೇಕಾಗುತ್ತದೆ, ಭಾವನೆಗಳ ಮೇಲಾಟ ಇಲ್ಲಿಂಡ ಮೊದಲಾಗುತ್ತದೆ. ಕೊನೆಗೆ ಮನೆಯಿಂದ ದೂರವಾದ ತಂದೆ ಪುನಃ ಸಿಗುತ್ತಾರಾ? ಪೃಥ್ವಿ ಸಂಚಾರಿ ತನ್ನ ತಾಯಿ ಜಾನಕಿಯನ್ನು ಕ್ಷಮಿಸಿ ಪ್ರೀತಿಸಲು ತೊಡಗಿದನಾ? ಗೊತ್ತಾಗಬೇಕಾದರೆ ನೀವು ಈ ಸಿನಿಮಾವನ್ನು ನೋಡಬೇಕು.
ನಿರ್ದೇಶಕರು ಯಾವುದೇ ಕಮರ್ಷಿಯಲ್ ಎಲಿಮಿಮೆಂಟ್‌ಗಳಿಗೆ ಗಂಟು ಬೀಳದೆ, ತಾವು ಅಂದುಕೊಂಡ ಕಥೆಯನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ‘ಹೊಂದಿಸಿ ಬರೆಯಿರಿ’ ಸಿನಿಮಾದಂತೆಯೇ ಇಲ್ಲಿಯೂ ಕೌಟುಂಬಿಕ ಮೌಲ್ಯ ಹಾಗೂ ಭಾವನೆಗಳ ಮೇಳವನ್ನು ಕಾಣಿಸಿದ್ದಾರೆ. ಜೋ ಕೋಸ್ಟಾ ಅವರ ಹಿನ್ನೆಲೆ ಸಂಗೀತ ಹಾಗೂ ದೀಪಕ್ ಯರಗೆರಾ ಛಾಯಾಗ್ರಹಣ ಇಡೀ ಸಿನಿಮಾದ ಪ್ರಮುಖ ಹೈಲೈಟ್ ಆಗಿದೆ. ಹಾಡುಗಳು ಸಿನಿಮಾದ ಆಶಯಕ್ಕೆ ಹೊಂದಿಕೊಂಡಿವೆ.
ರವೀಂದ್ರ ವಿಜಯ್ ಹಾಗೂ ಸಿತಾರಾ ಅವರ ಅಭಿನಯ ಚಿತ್ರದುದ್ದಕ್ಕೂ ಗಮನ ಸೆಳೆಯುತ್ತದೆ. ರಾಜೇಶ್ ನಟರಂಗ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಿಹಾರ್ ಮುಖೇಶ್ ತಮ್ಮ ಮೊದಲ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸುವುದಕ್ಕೆ ಸಾಕಷ್ಟು ಪ್ರಯತ್ನ ಹಾಕಿರುವುದು ಕಾಣಿಸುತ್ತದೆ. ರಚನಾ ಇಂದರ್ ತೆರೆಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕ ಸನ್ನಿವೇಶದಲ್ಲಿ ಅವರಿಗೆ ಮ್ಮಷ್ಟು ಉತ್ತಮವಾಗಿ ಕಾಣಿಸಿಕೊಳ್ಳುವ ಅವಕಾಶವಿದ್ದವು.
ಇಲ್ಲಿ ಒಟ್ಟಾರೆ ಹೇಳಬೇಕೆಂದರೆ ಪೃಥ್ವಿ ಸಂಚಾರಿ ಬಾಲ್ಯದಲ್ಲಿ ಅವನ ಕುಟುಂಬದಲ್ಲಿ ನಡೆದೊಂದು ಘಟನೆ ಹಾಗೂ ಅದರ ಪರಿಣಾಮವೇ ಒಟ್ಟರೆ ಸಿನಿಮಾದ ಪ್ರಮುಖ ಅಂಶ. ಅಂದು ನಡೆದ ಆ ಘಟನೆ ಪತ್ರಿಕೆಯಲ್ಲಿ ಬಂದು ಸುದ್ದಿಯಾಗಿದ್ದರೂ ಆಕ್ಷರಾ ಮನೆ ಬಾಗಿಲಿಗೆ ಬರುವವರೆಗೂ ಅ ವಿಷಯ ಪೃಥ್ವಿ ಸಂಚಾರಿಗೆ ಗೊತ್ತಿರುವುದಿಲ್ಲ ಎನ್ನುವುದು ವಿಚಿತ್ರ ಸತ್ಯ,.
ಚಿತ್ರದಲ್ಲಿ ಸಾಕಷ್ಟು ಅನಗತ್ಯ ಪಾತ್ರ, ಸನ್ನಿವೇಶಗಳಿದ್ದು ಅವುಗಳನ್ನು ತೆಗೆದು ಚಿತ್ರವನ್ನು ಮತ್ತಷ್ಟು ಟ್ರಿಮ್ ಮಾಡುವ ಮೂಲಕ ಅಪ್ಪ ಮಗನ ಸಂಬಂಧ, ಕುಟುಂಬದ ಮಹತ್ವ ತಿಳಿಸುವ ಅವಕಾಶ ನಿರ್ದೇಸಕರು ಇಲ್ಲಿ ಕೈಚೆಲ್ಲಿದ್ದಾರೆ, ಇನ್ನು ಮಧ್ಯಂತರದಲ್ಲಿಯೇ ಅಂತ್ಯವಾಗಿದ್ದ ಚಿತ್ರದ ಬಹುಮುಖ್ಯ ಪಾತ್ರವೊಂದು ಕ್ಲೈಮ್ಯಾಕ್ಸ್ ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುತ್ತದೆ. ಅದಕ್ಕೆ ಕಾರಣವೇನೆನ್ನುವುದನ್ನು ನಿರ್ದೇಶಕರು ಕಡೆಗೂ ಎಲ್ಲಿಯೂ ಹೇಳಿಲ್ಲ
ಹೀಗೆ ಕೆಲವು ನ್ಯೂನತೆಗಳಿದ್ದರೂ ಸಹ ಸಿನಿಮಾ ಸರಳ, ಸುಂದರವಾಗಿದೆ ಎನ್ನಲಡ್ಡಿಯಿಲ್ಲ.





