ಟಾಲಿವುಡ್​ ಸ್ಟಾರ್​ ವಿಜಯ್ ಅಭಿನಯದ ʼಜನ ನಾಯಗನ್ʼ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿರುವಾಗಲೇ ಸೆನ್ಸಾರ್‌ ಮಂಡಳಿ ಕೊಕ್ಕೆ ಇಟ್ಟಿದೆ. ಸಿನಿಮಾ ಕುರಿತು ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಮಾನ ಕೈಗೊಂಡಿದೆ.

ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ಪ್ರಮಾಣೀಕರಣಕ್ಕೆ ಸಂಬಂಧಿಸಿದ ವಿವಾದದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ. ಚಿತ್ರಕ್ಕೆ ‘ಯುಎ’ ಪ್ರಮಾಣಪತ್ರ ನೀಡುವಂತೆ ಏಕ ಸದಸ್ಯ ನ್ಯಾಯಾಧೀಶರು ನೀಡಿದ್ದ ಆದೇಶವನ್ನು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ವಿಭಾಗೀಯ ಪೀಠವು, ಆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ.ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು, ಈ ಪ್ರಕರಣದಲ್ಲಿ ಸಿಬಿಎಫ್‌ಸಿಗೆ ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸಲು ಸಾಕಷ್ಟು ಅವಕಾಶ ದೊರೆತಿದೆಯೇ ಎಂಬುದನ್ನು ಪರಿಶೀಲಿಸಿತು. ಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಸಿನಿಮಾಟೋಗ್ರಾಫ್ ಕಾಯ್ದೆಯಡಿ ಇರುವ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಸರಿಸಲಾಗಿಲ್ಲ ಎಂಬುದು ಸಿಬಿಎಫ್‌ಸಿಯ ಪ್ರಮುಖ ವಾದವಾಗಿತ್ತು. ಈ ವಿವಾದದ ಹಿನ್ನೆಲೆ ನೋಡಿದರೆ, ‘ಜನ ನಾಯಗನ್’ ಚಿತ್ರವನ್ನು ಮೊದಲಿಗೆ ಪರಿಶೀಲನಾ ಸಮಿತಿಯು ಕೆಲವು ಬದಲಾವಣೆಗಳೊಂದಿಗೆ ‘ಯುಎ’ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ನಂತರ ಸಮಿತಿ ಸದಸ್ಯರೊಬ್ಬರು, ಚಿತ್ರವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಮತ್ತು ಸಶಸ್ತ್ರ ಪಡೆಗಳನ್ನು ತಪ್ಪಾಗಿ ತೋರಿಸುತ್ತದೆ ಎಂದು ದೂರು ನೀಡಿದ್ದರು. ಇದರಿಂದಾಗಿ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲಾಯಿತು. ಏಕ ನ್ಯಾಯಾಧೀಶರು ಈ ಕ್ರಮದ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿ, ಸಮಿತಿಯ ಸದಸ್ಯರು ತಮ್ಮದೇ ಶಿಫಾರಸುಗಳನ್ನು ಹಿಂಪಡೆಯುವುದು ತಪ್ಪಾದ ಪರಿಪಾಟಿ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಮೇಲ್ಮನವಿಯಲ್ಲಿ ಸಿಬಿಎಫ್‌ಸಿ ಪರ ವಕೀಲರು, ನ್ಯಾಯಾಲಯವು ಮಂಡಳಿಯ ಸಂಪೂರ್ಣ ನಿಲುವನ್ನು ಕೇಳದೇ ತೀರ್ಪು ನೀಡಿದೆ ಎಂದು ವಾದಿಸಿದರು. ವಿಶೇಷವಾಗಿ, ಸಿಬಿಎಫ್‌ಸಿ ಅಧ್ಯಕ್ಷರು ಬರೆದ ಪತ್ರವನ್ನು ಪ್ರಶ್ನಿಸದೇ ಇದ್ದರೂ ಅದನ್ನು ರದ್ದುಗೊಳಿಸಲಾಗಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದರು.

ಚಿತ್ರದ ನಿರ್ಮಾಪಕರ ಪರವಾಗಿ ಹಿರಿಯ ವಕೀಲರು, ಪರಿಶೀಲನಾ ಸಮಿತಿಯೇ ಈಗಾಗಲೇ ‘ಯುಎ’ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿದೆ ಎಂದು ವಾದಿಸಿದರು. ಆದರೆ ನ್ಯಾಯಾಲಯವು, ಪ್ರಮಾಣಪತ್ರ ನೀಡದೇ ಇದ್ದಾಗಲೇ ಬಿಡುಗಡೆ ದಿನಾಂಕ ನಿಗದಿಪಡಿಸುವುದು ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿತು. ಭಾರತ ಸರ್ಕಾರಕ್ಕೆ ಪ್ರತಿಕ್ರಿಯಿಸಲು ಬೇಕಾದಷ್ಟು ಸಮಯ ನೀಡಲಾಗಿಲ್ಲ ಎಂಬ ಕಾರಣದಿಂದ, ಹೈಕೋರ್ಟ್ ‘ಯುಎ’ ಪ್ರಮಾಣಪತ್ರ ನೀಡುವ ಏಕ ನ್ಯಾಯಾಧೀಶರ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಮೇಲ್ಮನವಿಯ ಮುಂದಿನ ವಿಚಾರಣೆಯನ್ನು ಜನವರಿ 21ರ ನಂತರ ನಡೆಸಲು ನ್ಯಾಯಾಲಯ ಆದೇಶಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ