ಮೂಲತಃ ಬೆಂಗಳೂರು ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ (31) ಅವರು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಕ್ಷಿಣ ಸೂಡಾನ್ನಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಯೋಜನೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಸ್ವಾತಿ ಅವರಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ನೀಡುವ “ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ – 2025 (ಸೆಕ್ರೆಟರಿ ಜನರಲ್ ಪ್ರಶಸ್ತಿ) ” ದೊರೆತಿದೆ.
ವಿವಿಧ ಕಾರ್ಯಾಚರಣೆಗಳಲ್ಲಿನ ಶ್ರೇಷ್ಠ ಸೇವೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗಳನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಮೇಜರ್ ಸ್ವಾತಿ ಕುಮಾರ್ ಅವರು ಸಂಘರ್ಘ ಪೀಡಿತ ದಕ್ಷಿಣ ಸುಡಾನ್ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗೆ ಕೈಗೊಂಡ ಸಂವೇದನಾಶೀಲ ಕ್ರಮಗಳಿಗಾಗಿ ಸ್ವಾತಿ ಅವರಿಗೆ ಪ್ರಶಸ್ತಿ ದೊರೆತಿದೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ (UNMISS) ಭಾಗವಾಗಿ ದಕ್ಷಿಣ ಸೂಡಾನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾತಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಜರ್ ಸ್ವಾತಿ ಅವರ “Equal Partners, Lasting Peace” (ಸಮಾನ ಪಾಲುದಾರರು, ಶಾಶ್ವತ ಶಾಂತಿ) ಎಂಬ ಯೋಜನೆ ಲಿಂಗಸಮಾನತೆ ಹಾಗೂ ಒಳಗೊಂಡ ಶಾಂತಿ ಪ್ರಕ್ರಿಯೆಗಳ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಯುಎನ್ನ ಲಿಂಗಸಮಾನತೆ ಉತ್ತೇಜನ ಹಾಗೂ ಶಾಂತಿ ಸ್ಥಾಪನೆಗೆ ಸಂಬಂಧಿಸಿದ ಆದೇಶಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಯೋಜನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಜಾಗತಿಕ ಮಟ್ಟದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಜರ್ ಸ್ವಾತಿ ಅವರ ಯೋಜನೆಯು ಜೆಂಡರ್ ವಿಭಾಗದಲ್ಲಿ ಆಯ್ಕೆಯಾಗಿ ಪ್ರಶಸ್ತಿ ಗೆದ್ದಿದೆ.
ವಿಶ್ವದ ವಿವಿಧ ವಿಶ್ವ ಶಾಂತಿ ಮಿಷನ್ಗಳು ಹಾಗೂ ಏಜೆನ್ಸಿಗಳಿಂದ ಬಂದ ನಾಮನಿರ್ದೇಶನಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ, ನಾಲ್ಕು ಅಂತಿಮ ಸ್ಪರ್ಧಿಗಳ ಪೈಕಿ ಮೇಜರ್ ಸ್ವಾತಿ ಅವರ ಯೋಜನೆಗೆ ಜಾಗತಿಕ ಮತದಾನದಲ್ಲಿ ಅತಿ ಹೆಚ್ಚು ಬೆಂಬಲ ಸಿಕ್ಕಿದೆ. ವಿಶ್ವದ ಎಲ್ಲ ಭಾಗಗಳಿಂದ ವಿಶ್ವಸಂಸ್ಥೆಯ ಸಿಬ್ಬಂದಿ ಈ ಮತದಾನದಲ್ಲಿ ಭಾಗವಹಿಸಿದ್ದರು.
ಈ ಕುರಿತು ಮಾತನಾಡಿದ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್, ದಕ್ಷಿಣ ಸುಡಾನ್ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಮಿಷನ್ನಲ್ಲಿ ಲಿಂಗಸಮಾನತೆಯ ಆಧಾರದ ಶಾಂತಿ ಕಾರ್ಯಾಚರಣೆಗಳನ್ನು ಬಲಪಡಿಸಿದ ಮಹತ್ವದ ಪ್ರಯತ್ನ ಎಂದು ಮೇಜರ್ ಸ್ವಾತಿ ಅವರ ಯೋಜನೆಯನ್ನು ಶ್ಲಾಘಿಸಿದ್ದಾರೆ.
ಭಾರತೀಯ ತಂಡವನ್ನು ಪರಿಣಾಮಕಾರಿಯಾಗಿ ನಿಯೋಜಿಸಿ, ತಳಮಟ್ಟದ ಸಮುದಾಯಗಳೊಂದಿಗೆ ಆಳವಾದ ಸಂಪರ್ಕ ಸಾಧಿಸಿದ್ದು ಈ ಯೋಜನೆಯ ಪ್ರಮುಖ ಅಂಶವಾಗಿದೆ. 5,000 ಮಹಿಳೆಯರಿಗೆ ರಕ್ಷಣೆ ಮೇಜರ್ ಸ್ವಾತಿ ಅವರ ನೇರ ನೇತೃತ್ವದಲ್ಲಿ ತಂಡವು ಅಲ್ಪ ಹಾಗೂ ದೀರ್ಘ ದೂರದ ಗಸ್ತುಗಳು, ನದಿ ಮಾರ್ಗದ ಸಂಯುಕ್ತ ಗಸ್ತು ಹಾಗೂ ವಾಯು ಗಸ್ತು ಸೇರಿ ವಿವಿಧ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದರಿಂದ ದಕ್ಷಿಣ ಸುಡಾನ್ನ ಅತ್ಯಂತ ದೂರದ ಜಿಲ್ಲೆಗಳವರೆಗೂ ಶಾಂತಿ ಕಾರ್ಯಾಚರಣೆ ತಲುಪುವಂತಾಗಿದೆ. ಈ ಕಾರ್ಯಾಚರಣೆಗಳ ಫಲವಾಗಿ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಿದ್ದು, ಸಮುದಾಯದ ನಂಬಿಕೆಯನ್ನು ಹೆಚ್ಚಿಸುವ ಜೊತೆಗೆ ಮಹಿಳೆಯರು ಸ್ಥಳೀಯ ಶಾಂತಿ ಹಾಗೂ ಭದ್ರತಾ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.
ಈ ಗೌರವವು ಸಮಕಾಲೀನ ಸಂಘರ್ಷ ಪರಿಹಾರದಲ್ಲಿ ಮಹಿಳಾ ಶಾಂತಿ ರಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ವಿಶ್ವದ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಒಂದರಲ್ಲಿ ಮೇಜರ್ ಸ್ವಾತಿ ಶಾಂತ ಕುಮಾರ್ ತೋರಿದ ಅಚಲ ಬದ್ಧತೆ, ಭಾರತೀಯ ಸೇನಾ ಪಡೆಗೆ ಮಾತ್ರವಲ್ಲದೆ ಭವಿಷ್ಯದ ಅಂತರರಾಷ್ಟ್ರೀಯ ಶಾಂತಿ ಮಿಷನ್ಗಳಿಗೆ ಮಾದರಿ ಎಂದು ಕರೆಯಲಾಗಿದೆ. ಈ ಪ್ರಶಸ್ತಿ ಮೂಲಕ ಬೆಂಗಳೂರಿನ ಹಿರಿಮೆ ಜಾಗತಿಕವಾಗಿ ಗಮನ ಸೆಳೆದಿದೆ.
ಸ್ವಾತಿ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಬೆಂಗಳೂರಿನ ಲಿಂಗರಾಜಪುರದ ಖಾಸಗಿ ಕಂಪನಿ ಉದ್ಯೋಗಿ ಶಾಂತಕುಮಾರ್, ಸರ್ಕಾರಿ ಶಾಲಾ ಶಿಕ್ಷಕಿ ರಾಜಮಣಿ ದಂಪತಿಯ ಪುತ್ರಿ. ಇವರು ಕಳೆದ ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ದಕ್ಷಿಣ ಸೂಡನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದಾರೆ.





