ಇಸ್ರೋ (ISRO) ಇಂದು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ EOS-N1 Anvesha ಉಪಗ್ರಹವನ್ನು PSLV-C62 ರಾಕೆಟ್ ಮೂಲಕ ನಭಕ್ಕೆ ಯಶಸ್ವಿಯಾಗಿ ಉಡಾಯಿಸಿದೆ.
2026ರ ವರ್ಷದ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ಇದಾಗಿದ್ದು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:17ಕ್ಕೆ EOS-N1 ಉಪಗ್ರಹ ಹೊತ್ತ PSLV-C62 ರಾಕೆಟ್ ಆಕಾಶಕ್ಕೆ ನೆಗೆದಿದೆ. DRDO ವ್ಯೂಹಾತ್ಮಕ ಕಣ್ಗಾವಲು ಉದ್ದೇಶಕ್ಕಾಗಿ ಹೈಪರ್ಸ್‌ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹ ಅಭಿವೃದ್ಧಿ ಮಾಡಿದೆ. ಈ ಹೈಪರ್ಸ್‌ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹ ಸೇರಿ ಒಟ್ಟು ಭಾರತ ಮತ್ತು ವಿದೇಶಗಳ 14 ಉಪಗ್ರಹಗಳನ್ನು PSLV-C62 ರಾಕೆಟ್ ಹೊತ್ತೊಯ್ದಿದೆ. ಭಾರತದ ಮೇಲೆ ನಭದಿಂದಲೇ ಕಣ್ಗಾವಲು ಇಡುವ ಉಪಗ್ರಹ ಇದಾಗಿದ್ದು, ಶತ್ರು ದೇಶಗಳಾದ ಪಾಕಿಸ್ತಾನ, ಚೀನಾ ಗಡಿಗಳ ಸರಹದ್ದಿನ ಮೇಲೆ ಹದ್ದಿನ ಕಣ್ಣಿಡಲಿದೆ.
ಅನ್ವೇಷಾ ಉಪಗ್ರಹದ ಶಕ್ತಿ: DRDO ಅಭಿವೃದ್ಧಿಪಡಿಸಿದ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹವು 400 ಕೆ.ಜಿ ತೂಕವಿದೆ. 600 ಕಿಮೀ ಎತ್ತರದಿಂದ ಭೂ-ಕಕ್ಷೆ ರೌಂಡ್ ಹಾಕಲಿದ್ದು, ಸಾಮಾನ್ಯ ಉಪಗ್ರಹಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಸಾಮಾನ್ಯ ಕ್ಯಾಮೆರಾಗಿಂತ ಪರಿಣಾಮಕಾರಿಯಾಗಿ ಚಿತ್ರ ಸೆರೆಹಿಡಿಯಲಿದ್ದು, ಭೂಮಿಯ ಮೇಲಿನ ವಸ್ತುವಿನ ವಿಶಿಷ್ಟ 'ಸ್ಪೆಕ್ಟ್ರಲ್ ಸಿಗ್ನೇಚರ್' ಗುರುತು ಪತ್ತೆಹಚ್ಚಲಿದೆ. ರಕ್ಷಣಾ ಉದ್ದೇಶಗಳಲ್ಲದೆ, ಬೇರೆ ಉದ್ದೇಶಕ್ಕೂ ಅನ್ವೇಷಾ ಬಳಕೆಯಾಗಲಿದೆ. ಬೆಳೆಗಳ ಆರೋಗ್ಯ & ಮಣ್ಣಿನ ತೇವಾಂಶ, ಮಾಲಿನ್ಯದ ಮೇಲ್ವಿಚಾರಣೆ, ಭೂಮಿ ಆಳದಲ್ಲಿ ಖನಿಜ ಸಂಪನ್ಮೂಲಗಳನ್ನು ಗುರುತಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ.
ಬಾಹ್ಯಾಕಾಶದ ಕಣ್ಣು: ಸಾಮಾನ್ಯ ಉಪಗ್ರಹಗಳು ಕೇವಲ ಬಣ್ಣಗಳನ್ನು ನೋಡುತ್ತವೆ. ಆದರೆ ಅನ್ವೇಷಾ ಹೈಪರ್‌ಸ್ಪೆಕ್ಟ್ರಲ್ ತಂತ್ರಜ್ಞಾನವು ವಸ್ತುಗಳನ್ನು ಪತ್ತೆ ಮಾಡುತ್ತವೆ. ಗಿಡಗಂಟಿಗಳ ನಡುವೆ ಅಡಗಿಸಿಟ್ಟಿರುವ ಶತ್ರುಗಳ ಟ್ಯಾಂಕ್‌ಗಳು, ಕ್ಷಿಪಣಿ ಲಾಂಚರ್ ಅಥವಾ ಬಂಕರ್‌ಗಳನ್ನು ಪತ್ತೆಹಚ್ಚಬಲ್ಲದು. LoC ಮತ್ತು LAC ಅಲ್ಲಿನ ಶತ್ರುಗಳ ಚಲನವಲನದ ಮೇಲೆ ಕಣ್ಣು ಇಡಲಿದೆ.
ಹೊಸ ಕಟ್ಟಡ ನಿರ್ಮಾಣಗಳನ್ನು ನಿಖರವಾಗಿ ಗಮನಿಸಿ, ಭಾರತೀಯ ಸೇನೆಗೆ ಮಾಹಿತಿ ನೀಡಲಿದೆ. ಚಿತ್ರಗಳನ್ನು ಮಾತ್ರವಲ್ಲ, ವಸ್ತುವಿನ ರಾಸಾಯನಿಕ ಲಕ್ಷಣಗಳ ಬಗ್ಗೆಯೂ ಮಾಹಿತಿ ನೀಡಲಿದೆ. ಸೇನೆ ಕ್ಷಿಪಣಿ ಉಡಾವಣಾ ಸ್ಥಳಗಳ ಮೇಲ್ವಿಚಾರಣೆ, ಯುದ್ಧ ಭೂಮಿಯ ನೈಜ ಚಿತ್ರಣ, ಭೂಮಿ ಮೇಲಿನ 12 ಮೀಟರ್‌ವರೆಗಿನ ಸಣ್ಣ ವಸ್ತುಗಳ ಗುರುತನ್ನೂ ಸಹ ಪತ್ತೆ ಮಾಡುತ್ತದೆ.





