– ರಾಘವೇಂದ್ರ ಅಡಿಗ ಎಚ್ಚೆನ್.
ಇತ್ತೀಚಿನ ಸಮಕಾಲೀನ ಬರಹಗಾರ್ತಿಯರಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ‘ಆಶಾ ರಘು’ ಅವರು ಕೇವಲ ತಮ್ಮ 47ನೇ ವಯಸ್ಸಿನಲ್ಲಿ ಅಕಾಲಿಕ ನಿಧನರಾಗಿದ್ದಾರೆ.
ಆಶಾ ಅವರ ಪತಿ ರಘು ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ರಘು ಅವರು ಕರ್ನಾಟಕದ ಖ್ಯಾತ ಆಹಾರ ತಜ್ಞರಾಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ರಘು ಕನಸಿನಲ್ಲಿ ಬಂದರು ಎಂದು ಅವರು ಪೋಸ್ಟ್ ಹಾಕಿದ್ದರು, ಈಗ ಆತ್ಮ*ತ್ಯೆ ಮಾಡಿಕೊಂಡು ತೀರಿಕೊಂಡಿದ್ದಾರೆ ಎನ್ನಲಾಗಿದೆ. ಇವರಿಗೆ ಓರ್ವ ಮಗಳಿದ್ದಾಳೆ.
ಜೂನ್ 18 1979, ಆಶಾ ರಘು ಅವರ ಜನ್ಮದಿನ. ತಂದೆ ಕೇಶವ ಅಯ್ಯಂಗಾರ್. ತಾಯಿ ಸುಲೋಚನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದರು.
ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದ ಆಶಾ ಅವರು ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಮುಂದೆ ಇವರು ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆಶಾ ರಘು ಅವರು ‘ಆವರ್ತ’, ‘ಗತ’, ‘ಮಾಯೆ’, ‘ಚಿತ್ತರಂಗ’ ಮೊದಲಾದ ಕಾದಂಬರಿಗಳನ್ನೂ, ‘ಆರನೇ ಬೆರಳು’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’ ಮೊದಲಾದ ಕಥಾಸಂಕಲನಗಳನ್ನೂ, ‘ಚೂಡಾಮಣಿ’, ‘ಕ್ಷಮಾದಾನ’, ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ‘ಪೂತನಿ ಮತ್ತಿತರ ನಾಟಕಗಳು’ ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದರು. ಇವರ ‘ಆವರ್ತ’ ಕಾದಂಬರಿಯ ಕುರಿತ ಕೃತಿ ‘ಆವರ್ತ-ಮಂಥನ’ ಕೂಡಾ ಪ್ರಕಟಗೊಂಡಿದೆ.
ಆಶಾ ರಘು ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ, ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯಾಮೃತ ಸರಸ್ವತಿ’ ಬಿರುದು ಸೇರಿದಂತೆ ಅನೇಕ ಗೌರವಗಳು ಲಭಿಸಿದ್ದವು.





