ಸ್ಟೀಮ್ಡ್ ಆಲೂ ಕೋಫ್ತಾ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, 3-4 ಬೆಂದ ಆಲೂ, ಅರ್ಧ ಕಪ್‌ ತುರಿದ ಪನೀರ್‌, ಸಣ್ಣಗೆ ಹೆಚ್ಚಿದ ಹಸಿರು, ಹಳದಿ, ಕೆಂಪು, ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), 2 ಈರುಳ್ಳಿ, ತುಸು ಹಸಿಶುಂಠಿ, ಕೊ.ಸೊಪ್ಪು, ಕರಿಬೇವು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.

ವಿಧಾನ : ಬೆಂದ ಆಲೂ ಸಿಪ್ಪೆ ಸುಲಿದು ಅದನ್ನು ಮಸೆದಿಡಿ. ಇದಕ್ಕೆ ಪನೀರ್‌ ಮತ್ತಿತರ ಎಲ್ಲಾ ಹೆಚ್ಚಿದ ಸಾಮಗ್ರಿ ಸೇರಿಸಿ. ನಂತರ ಉಪ್ಪು, ಖಾರ, ಉಳಿದೆಲ್ಲ ಸೇರಿಸಿ ಮಿಶ್ರಣ ಮಾಡಿ, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ. ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಖಾರ, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ತುಸು ಗಟ್ಟಿಯಾಗಿ ಕಲಸಿಡಿ. ಇದರಲ್ಲಿ ಆಲೂ ಉಂಡೆ ಅದ್ದಿಕೊಂಡು, ಇಡ್ಲಿ ಕುಕ್ಕರ್ ನಲ್ಲಿ ಹದನಾಗಿ ಹಬೆಯಲ್ಲಿ ಬೇಯಿಸಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಇಂಗು, ಕರಿಬೇವಿನ ಒಗ್ಗರಣೆ ಕೊಡಿ. ಈ ಸ್ಟೀಮ್ಡ್ ಕೋಫ್ತಾಗಳನ್ನು ಒಮ್ಮೆ ಅದರಲ್ಲಿ ಬಾಡಿಸಿ, ಚಿತ್ರದಲ್ಲಿರುವಂತೆ ಸಾಸ್‌ ನಿಂದ ಅಲಂಕರಿಸಿ ತುಪ್ಪು ಹಾಕಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

AA-daal-masala-poori

ದಾಲ್ ಮಸಾಲಾ ಪೂರಿ

ಸಾಮಗ್ರಿ : ಅರ್ಧರ್ಧ ಕಪ್‌ ಹೆಸರು ಬೇಳೆ, ಸಣ್ಣ ರವೆ,  2 ಕಪ್‌ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಇಂಗು, ಧನಿಯಾಪುಡಿ, ಅರ್ಧ ಸೌಟು ತುಪ್ಪ, ಕರಿಯಲು ಎಣ್ಣೆ.

ವಿಧಾನ : ಹೆಸರುಬೇಳೆಯನ್ನು 1-2 ಗಂಟೆ ಕಾಲ ನೆನೆಸಿ, ನಂತರ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಮೇಲೆ ತಿಳಿಸಿದ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಪೂರಿ ಹಿಟ್ಟಿನ ತರಹ ಮೃದುವಾದ ಹಿಟ್ಟು ಕಲಸಿಕೊಳ್ಳಿ. ನಂತರ ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿ ಲಟ್ಟಿಸಿ, ಚೂಪಾದ ತುದಿಯುಳ್ಳ ಸ್ಟೀಲ್ ಮುಚ್ಚಳದಿಂದ ಪುಟ್ಟ ಪೂರಿಗಳಾಗಿ ಕತ್ತರಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಪೂರಿ ಕರಿದು ತೆಗೆಯಿರಿ. ಇದನ್ನು ಟೊಮೇಟೊ ಗೊಜ್ಜು ಅಥವಾ ಆಲೂಪಲ್ಯ ಜೊತೆ ಸವಿಯಲು ಕೊಡಿ.

AA-chawal-ke-shakarpare-(2)

ಅಕ್ಕಿಹಿಟ್ಟಿನ ಶಂಕರಪೋಳಿ

ಸಾಮಗ್ರಿ : 1 ಕಪ್‌ ಅಕ್ಕಿಹಿಟ್ಟು, 1 ಕಪ್‌ ಬೆಲ್ಲದ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾರೆ ಅರ್ಧ ಕಪ್‌), 2 ಚಮಚ ಎಳ್ಳು, 1 ಗಿಟುಕು ಕೊಬ್ಬರಿ ತುರಿ, ಕರಿಯಲು ಎಣ್ಣೆ, 4 ಚಮಚ ತುಪ್ಪ.

ವಿಧಾನ : ಮೊದಲು ಬೆಲ್ಲವನ್ನು ತುಸು ಬೆಚ್ಚಗಿನ ನೀರಿನಲ್ಲಿ ಕರಗಿಸಿ, ಶೋಧಿಸಿ. ಈ ಬೆಲ್ಲದ ನೀರಿಗೆ ಮೇಲೆ ಹೇಳಲಾದ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. 1-2 ಗಂಟೆ ಬಿಟ್ಟು, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ ಪುಟ್ಟ ಪುಟ್ಟ ನಿಪ್ಪಟ್ಟು ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಮಕ್ಕಳಿಗೆ ಬೇಕಾದಾಗ ಸವಿಯಲು ಕೊಡಿ.

AA-broken-wheat-pancake-(1)

ಬ್ರೋಕನ್ವೀಟ್ದೋಸೆ

ಸಾಮಗ್ರಿ : 1 ಕಪ್‌ ಬ್ರೋಕನ್‌ ವೀಟ್‌, ಸಣ್ಣಗೆ ಹೆಚ್ಚಿದ 1-2 ಈರುಳ್ಳಿ, ಟೊಮೇಟೊ, 3 ವಿಧದ ಕ್ಯಾಪ್ಸಿಕಂ (ಒಟ್ಟಾರೆ ಅರ್ಧ ಕಪ್‌), ತುರಿದ ಸೋರೆಕಾಯಿ ಪನೀರ್‌ (ಅರ್ಧರ್ಧ ಕಪ್‌), ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಕರಿಬೇವು, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮಜ್ಜಿಗೆ, ದೋಸೆಗೆ ಬೇಕಾದಷ್ಟು ಎಣ್ಣೆ.

ವಿಧಾನ : ಬ್ರೋಕನ್‌ ವೀಟ್‌ ನ್ನು ತುಸು ಹುಳಿ ಮಜ್ಜಿಗೆಯಲ್ಲಿ 2 ಗಂಟೆ ಕಾಲ ನೆನೆಸಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಪ್ಪು, ಖಾರದ ಜೊತೆಗೆ ಇದಕ್ಕೆ ಹೆಚ್ಚಿದ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತೆಳು ಮಾಡಿ, 1 ಗಂಟೆ ಕಾಲ ಹಾಗೇ ಬಿಡಿ. ನಂತರ ಇದರಿಂದ ಒಂದೊಂದೇ ದೋಸೆ ತಯಾರಿಸಿ. ಎಣ್ಣೆ ಬಿಟ್ಟು ಎರಡೂ ಬದಿ ಬೇಯಿಸಿ. ಚಿತ್ರದಲ್ಲಿರುವಂತೆ ಟೊಮೇಟೊ ಸಾಸ್‌, ಚಟ್ನಿ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

AA-chhesy-roll

ಚೀಝೀ ಡಿನ್ನರ್ಬನ್

ಸಾಮಗ್ರಿ : 3-4 ಬರ್ಗರ್‌ ಬನ್‌, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 2 ಟೊಮೇಟೊ, 100 ಗ್ರಾಂ ತುರಿದ ಸಿಹಿಗುಂಬಳ, 3 ಬಗೆಯ ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), ಅರ್ಧ ಕಪ್‌ ತುರಿದ ಪನೀರ್‌, ಕ್ಯಾರೆಟ್‌, ರುಚಿಗೆ ತಕ್ಕಷ್ಟು ಉಪ್ಪುಮೆಣಸು, ಬೆಣ್ಣೆ, ಚೀಸ್‌.

ವಿಧಾನ : ಮೇಲಿನ ಎಲ್ಲಾ ತರಕಾರಿಗಳನ್ನೂ ಶುಚಿಗೊಳಿಸಿ ಆದಷ್ಟೂ ಬಿಲ್ಲೆಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಈರುಳ್ಳಿ ಹಾಕಿ ಬಾಡಿಸಿ. ನಂತರ 3 ಬಗೆಯ ಕ್ಯಾಪ್ಸಿಕಂ ಹಾಕಿ, ಆಮೇಲೆ ಉಳಿದೆಲ್ಲ ತರಕಾರಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮೆಣಸು ಹಾಕಿ ಕೆದಕಿರಿ. ನಂತರ ಪನೀರ್‌ ಸೇರಿಸಿ ಬಾಡಿಸಿ. ಮುಚ್ಚಳ ಮುಚ್ಚಿರಿಸಿ 1-2 ನಿಮಿಷ ಬೇಯಿಸಿ ಕೆಳಗಿಳಿಸಿ. ಬರ್ಗರ್‌ ಬನ್‌ ಗಳನ್ನು ಗೋಲಾಕಾರ ಕತ್ತರಿಸಿ, ಒಳಭಾಗಕ್ಕೆ ಬೆಣ್ಣೆ ಸವರಬೇಕು. ಇದಕ್ಕೆ ಬಾಡಿಸಿದ ತರಕಾರಿ ಮಿಶ್ರಣವನ್ನು (ಎಲ್ಲಕ್ಕೂ ಬರುವಂತೆ) ಸಮನಾಗಿ ತುಂಬಿಸಿ. ಇದರ ಮೇಲೆ ಒಂದಿಷ್ಟು ತುರಿದ ಮೋಜರೆಲಾ ಚೀಸ್‌ ಉದುರಿಸಿ, ಅದು ಕರುಗುವವರೆಗೂ ಓವನ್ನಿನಲ್ಲಿರಿಸಿ ಬಿಸಿ ಮಾಡಿ. ನಂತರ ಬಿಸಿ ಬಿಸಿಯಾಗಿ ಸಾಸ್‌ ಜೊತೆ ಸವಿಯಲು ಕೊಡಿ.

AA-coconut-desert-(1)

ಕೋಕೋನಟ್ಡೆಸರ್ಟ್

ಸಾಮಗ್ರಿ : 1 ಕಪ್‌ ತೆಂಗಿನ ಹಾಲು, ಅರ್ಧ ಕಪ್‌ ಗಟ್ಟಿ ಹಾಲು, ತುಸು ಕಂಡೆನ್ಸ್ಡ್ ಮಿಲ್ಕ್, 4-5 ಚಮಚ  ಸಕ್ಕರೆ, 5-6 ಚಮಚ ಫ್ರೆಶ್‌ ಕ್ರೀಂ, ಅಷ್ಟೇ ಪ್ರಮಾಣದ ಬಾದಾಮಿ/ಪಿಸ್ತಾ /ಗೋಡಂಬಿ ಪೇಸ್ಟ್.

ವಿಧಾನ : ಒಂದು ಬಾಣಲೆಯಲ್ಲಿ ತೆಂಗಿನ ಹಾಲು ಬಿಸಿ ಮಾಡಿ (ಮಂದ ಉರಿ ಇರಲಿ). ನಂತರ ಇದಕ್ಕೆ ಕಂಡೆನ್ಸ್ಡ್ ಮಿಲ್ಕ್, ಇನ್ನಿತರ ಎಲ್ಲಾ ಸಾಮಗ್ರಿ ಹಾಕಿ ಸತತ ಕೈಯಾಡಿಸಿ. ಇದು ಸಾಕಷ್ಟು ಗಟ್ಟಿಯಾದಾಗ, ಚಿತ್ರದಲ್ಲಿರುವಂಥ ಅಚ್ಚುಗಳಿಗೆ ತುಂಬಿಸಿ ಆರಲು ಬಿಡಿ. ತಣ್ಣಗಾದಾಗ ಫ್ರೀಝರ್‌ ನಲ್ಲಿಟ್ಟು ಸೆಟ್‌ ಆಗಲು ಬಿಡಿ. ನಂತರ ಅದನ್ನು ಒಂದು ಟ್ರೇನಲ್ಲಿ ಜೋಡಿಸಿಕೊಂಡು, ಮೇಲೊಂದಿಷ್ಟು ಡ್ರೈ ಫ್ರೂಟ್ಸ್ ಉದುರಿಸಿ ಸವಿಯಲು ಕೊಡಿ.

AA-butter-cookies-(1)

ಬಟರ್ಕುಕೀಸ್

ಸಾಮಗ್ರಿ : 60 ಗ್ರಾಂ ಬೆಣ್ಣೆ, 1 ಕಪ್‌ ಮೈದಾ, ಅರ್ಧರ್ಧ ಕಪ್‌ ಕಾರ್ನ್‌ಫ್ಲೋರ್‌ ಸಕ್ಕರೆ, ತುಸು ತುಪ್ಪ.

ವಿಧಾನ : ಬೆಣ್ಣೆಗೆ ಸಕ್ಕರೆ ಹಾಕಿ ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಬೆರೆಸಿ ಮೃದು ಮಿಶ್ರಣ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿಸಿ, ಚಿತ್ರದಲ್ಲಿರುವ ಆಕಾರದಂತೆ ಚೌಕಾಕಾರ ನೀಡಿ, ಬಿಸಿ ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ 8-10 ನಿಮಿಷ ಬೇಕ್‌ ಮಾಡಿ. ಇದರ ಮೇಲೆ ಡ್ರೈ ಫ್ರೂಟ್ಸ್ ಚೂರು ಉದುರಿಸಿ ಸವಿಯಲು ಕೊಡಿ.

ಟೇಸ್ಟಿ ಗುಲಾಬ್ಜಾಮೂನು

ಮೂಲ ಸಾಮಗ್ರಿ : 1 ಕಪ್‌ ಮಿಲ್ಕ್ ಪೌಡರ್‌, 4-5 ದೊಡ್ಡ ಚಮಚ ಮೈದಾ, 2 ಚಮಚ ಸಣ್ಣ ರವೆ, ಚಿಟಕಿ ಬೇಕಿಂಗ್‌ ಸೋಡ, 3 ಚಮಚ ತುಪ್ಪ, 2 ಚಮಚ ಮೊಸರು, 4-5 ದೊಡ್ಡ ಚಮಚ ಕಾದಾರಿದ ಗಟ್ಟಿ ಹಾಲು, ಕರಿಯಲು ರೀಫೈಂಡ್‌ ಎಣ್ಣೆ, ಅಲಂಕರಿಸಲು ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್.

ಪಾಕದ ಸಾಮಗ್ರಿ : 1 ಕಪ್‌ ಸಕ್ಕರೆ, 1 ಕಪ್‌ ನೀರು, ತುಸು ಏಲಕ್ಕಿ ಪುಡಿ, ನಿಂಬೆರಸ, ಗುಲಾಬಿ ಜಲ.

ವಿಧಾನ : ಒಂದು ಪ್ಯಾನಿನಲ್ಲಿ ನೀರು ಬಿಸಿ ಮಾಡಿ ಕುದಿಸಿರಿ. ಇದಕ್ಕೆ ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಇದರಿಂದ ಒಂದೆಳೆ ಪಾಕ ತಯಾರಿಸಿ, ನಂತರ ಏಲಕ್ಕಿಪುಡಿ ಸೇರಿಸಿ. ಆಮೇಲೆ ನಿಂಬೆಹಣ್ಣು ಹಿಂಡಿಕೊಳ್ಳಿ. ಇದನ್ನು ಕೆಳಗಿಳಿಸಿ ಆರಲು ಬಿಡಿ. ನಂತರ 1 ಬೇಸಿನ್‌ ಗೆ ಮೈದಾ, ಹಾಲಿನ ಪುಡಿ, ರವೆ, ಬೇಕಿಂಗ್‌ ಸೋಡ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಲು, ಮೊಸರು, ತುಪ್ಪ ಬೆರೆಸಿ ಮೃದು ಮಿಶ್ರಣ ಕಲಸಿಡಿ, ಗಂಟಾಗದಂತೆ ನೀಟಾಗಿ ನಾದಿಕೊಳ್ಳಿ. ಸ್ವಲ್ಪ ಹೊತ್ತು ನೆನೆಯಲು ಬಿಟ್ಟು, ಸಣ್ಣ ಗೋಲಿ ಗಾತ್ರದ ಉಂಡೆಗಳಾಗಿಸಿ. ಆಮೇಲೆ ಕಾದ ಎಣ್ಣೆಯಲ್ಲಿ (ಮಂದ ಉರಿ) ಕರಿದು ತೆಗೆಯಿರಿ. ಅವನ್ನು ನೇರ ಪಾಕಕ್ಕೆ ಹಾಕಿ. 4-5 ಗಂಟೆ ಕಾಲ ಬಿಟ್ಟು, ಜಾಮೂನು ಸವಿಯಲು ಕೊಡಿ. ಇದರ ಮೇಲೆ ಅಗತ್ಯವಾಗಿ ಒಂದಿಷ್ಟು ತುಂಡರಿಸಿದ ಡ್ರೈ ಫ್ರೂಟ್ಸ್ ಉದುರಿಸಿ.

ಸ್ಪೆಷಲ್ ಕೊಬ್ಬರಿ ಮಿಠಾಯಿ

ಸಾಮಗ್ರಿ : 1 ದೊಡ್ಡ ತೆಂಗಿನಕಾಯಿಯ ತುರಿ, 1 ಕಪ್‌ ಬೆಲ್ಲದ ಪುಡಿ/ಸಕ್ಕರೆ, ಅರ್ಧ ಕಪ್‌ ಸಿಹಿ ಖೋವಾ, ಹಾಲಲ್ಲಿ ನೆನೆಸಿದ ಒಂದಿಷ್ಟು ಕೇಸರಿ ಎಸಳು, ಒಂದಿಷ್ಟು ಬಾದಾಮಿ, ಪಿಸ್ತಾ ಚೂರು, ಅರ್ಧ ಕಪ್‌ ತುಪ್ಪ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, (ಮಂದ ಉರಿಯಲ್ಲಿ) ಕಾಯಿ ತುರಿ ಹಾಕಿ ಬಾಡಿಸಿ. ಇದನ್ನು ಬೇರೆ ಕಡೆ ಇರಿಸಿ, ಅದೇ ಬಾಣಲೆಗೆ ಬೆಲ್ಲ/ಸಕ್ಕರೆ ಹಾಕಿ, ಅದು ತಾನಾಗಿ ಕರಗುವಂತೆ ಇದಕ್ಕೆ ಆಗಾಗ ತುಸು ತುಪ್ಪ ಬೆರೆಸುತ್ತಾ ಕೆದಕುತ್ತಿರಿ. ನಂತರ ಇದಕ್ಕೆ ಕಾಯಿತುರಿ ಹಾಕಿ ಕೆದಕಬೇಕು. ನಂತರ ಹಾಲು ಬೆರೆಸಿ ಕೈಯಾಡಿಸಿ. ನಂತರ ಖೋವಾ, ಏಲಕ್ಕಿ, ಕೇಸರಿ ಬೆರೆಸಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸಲು ಮರೆಯದಿರಿ. 2 ನಿಮಿಷ ಕೆದಕಿ ಕೆಳಗಿಳಿಸಿ ಪಿಸ್ತಾ, ಬಾದಾಮಿ ಚೂರು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದನ್ನು ತುಪ್ಪ ಸರಿದ ತಟ್ಟೆಯಲ್ಲಿ ಹರಡಿ, ಆರಿದ ನಂತರ ವಜ್ರಾಕೃತಿಯಲ್ಲಿ ಕತ್ತರಿಸಿದರೆ, ಕೊಬ್ಬರಿ ಮಿಠಾಯಿ ರೆಡಿ!

AA-DSC-5198

ಗ್ರೀನ್ಆ್ಯಪಲ್  ಶ್ರೀಖಂಡ

ಸಾಮಗ್ರಿ : ಅರ್ಧ ಕಪ್‌ ಗಟ್ಟಿಯಾದ ಕೆನೆ ಮೊಸರು, 1 ಗ್ರೀನ್‌ ಆ್ಯಪಲ್, ರುಚಿಗೆ ತಕ್ಕಷ್ಟು ದಾಲ್ಚಿನ್ನಿ ಪುಡಿ, ಗ್ರೀನ್‌ ಆ್ಯಪಲ್ ಸಿರಪ್. ವಿಧಾನ : ಸೇಬನ್ನು ನೀಟಾಗಿ ಚಿತ್ರದಲ್ಲಿರುವಂತೆ ಕತ್ತರಿಸಿ. ಒಂದು ಬಟ್ಟಲಲ್ಲಿ ಕೆನೆ ಮೊಸರು ತೆಗೆದುಕೊಂಡು, ಅದಕ್ಕೆ ಗ್ರೀನ್‌ ಆ್ಯಪಲ್ ಸಿರಪ್‌ ಬೆರೆಸಿಕೊಳ್ಳಿ. ಅದು ಚೆನ್ನಾಗಿ ಬೆರೆತಾಗ, ದಾಲ್ಚಿನ್ನಿ ಹಾಕಿ ನೀಟಾಗಿ ಕದಡಿಕೊಳ್ಳಿ. ನಂತರ ಸೇಬಿನ ತುಂಡು ಸೇರಿಸಿ, ಫ್ರಿಜ್‌ ನಲ್ಲಿ 1 ಗಂಟೆ ಕಾಲ ಇರಿಸಿ, ಸೆಟ್‌ ಆಗಲು ಬಿಡಿ. ನಂತರ ಚಿತ್ರದಲ್ಲಿರುವಂತೆ ಮತ್ತಷ್ಟು ಸೇಬಿನ ತುಂಡುಗಳಿಂದ ಅಲಂಕರಿಸಿ, ಸವಿಯಲು ಕೊಡಿ.

AA-DSC-5209

ಆರೆಂಜ್ಅಂಡ್ಲೆಮನ್ಡ್ರಿಂಕ್

ಸಾಮಗ್ರಿ : ಅಗತ್ಯವಿದ್ದಷ್ಟು ಕಿತ್ತಳೆ ಹಣ್ಣಿನ ರಸ, ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು, ಜೇನುತುಪ್ಪ, ಶುಂಠಿ ರಸ, ಹೆಚ್ಚಿದ ಪುದೀನಾ, ಅಗತ್ಯವೆನಿಸಿದರೆ ಒಂದಿಷ್ಟು ಐಸ್‌ ಕ್ಯೂಬ್ಸ್, ತಂಪಾದ ಫ್ರಿಜ್‌ ನೀರು.

ವಿಧಾನ : ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನೂ ಒಂದು ಬಟ್ಟಲಲ್ಲಿ ಬೆರೆಸಿಕೊಳ್ಳಿ. ಇದನ್ನು ನೀಟಾಗಿ ಗ್ಲಾಸುಗಳಿಗೆ ತುಂಬಿಸಿ, ಐಸ್‌ ಕ್ಯೂಬ್ಸ್ ಹಾಕಿ, ಪುದೀನಾ ಉದುರಿಸಿ, ಅತಿಥಿಗಳಿಗೆ ವೆಲ್ ‌ಕಂ ಡ್ರಿಂಕ್‌ ಆಗಿ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ