ಸಂಕ್ರಾಂತಿ ಸಂಭ್ರಮಕ್ಕಾಗಿ ಮಗಳನ್ನು ಹಾಸ್ಟೆಲ್‌ನಿಂದ ಮನೆಗೆ ಕರೆತರಲು ತೆರಳುತ್ತಿದ್ದ ತಂದೆಯೊಬ್ಬರು ಗಾಳಿಪಟದ ಮಾಂಜಾ ದಾರಕ್ಕೆ ಬಲಿಯಾದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮಾಂಜಾ ದಾರ ಬೈಕ್ ಸವಾರನ ಕುತ್ತಿಗೆಯನ್ನೇ ಸೀಳಿ ಹಾಕಿದೆ. ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ನರಳಾಡಿ ಸಂಜೀವ್ ಕುಮಾರ್ ಹೊಸಮನಿ (48) ಸಾವನ್ನಪ್ಪಿದ್ದಾರೆ.
ಸಂಜೀವ್ ಕುಮಾರ್ ಹೊಸಮನಿ ಬಂಬುಳಗಿ ಗ್ರಾಮದವರಾಗಿದ್ದು, ಅವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾರೆ. ಕುಟುಂಬದ ಏಕೈಕ ಆಧಾರವಾಗಿದ್ದ ಅವರ ಮಕ್ಕಳಲ್ಲಿ ಒಬ್ಬ ಮಗಳು ಹುಮನಾಬಾದ್ ಪಟ್ಟಣದ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದಳು. ಸಂಕ್ರಾಂತಿ ಹಬ್ಬಕ್ಕೆ ನಾಳೆ ರಜೆ ಇರುವುದರಿಂದ ಆಕೆಯನ್ನು ಮನೆಗೆ ಕರೆತರಲು ಬೈಕ್‌ನಲ್ಲಿ ಅವರು ಹೊರಟಿದ್ದರು. ಆದರೆ ರಸ್ತೆ ಸಮೀಪದಲ್ಲಿ ತೂಗು ಹಾಕಲಾದ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಕ್ಕಿಕೊಂಡು ಆಳವಾದ ಗಾಯ ಮಾಡಿದೆ. ತಕ್ಷಣ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಈ ಘಟನೆಯು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಮಾತ್ರವಲ್ಲದೆ ಕುಟುಂಬದ ಭವಿಷ್ಯವನ್ನೇ ಅಂಧಕಾರದಲ್ಲಿ ಮುಳುಗಿಸಿದೆ. ನಾಲ್ಕು ಪುಟ್ಟ ಮಕ್ಕಳು ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಮಾಂಜಾ ದಾರದಿಂದಾಗಿ ಇಂತಹ ದುರಂತಗಳು ಹೆಚ್ಚಾಗುತ್ತಿವೆ. ಸಂಕ್ರಾಂತಿ ಸಮಯದಲ್ಲಿ ಗಾಜು ಅಥವಾ ಲೋಹದ ಕೋಟಿಂಗ್ ಮಾಡಿದ ಚೈನೀಸ್ ಮಾಂಜಾ ದಾರಗಳು ರಸ್ತೆಯ ಮೇಲೆ ತೂಗುಹಾಕಿಕೊಂಡಿರುವುದರಿಂದ ಬೈಕ್ ಸವಾರರು, ಸೈಕಲ್ ಸವಾರರು ಮತ್ತು ಪಾದಚಾರಿಗಳಿಗೆ ಅಪಾಯ ಉಂಟಾಗುತ್ತದೆ. ಈ ದಾರಗಳು ರೇಜರ್ ಬ್ಲೇಡ್‌ನಂತೆ ಕತ್ತರಿಸುವ ಸಾಮರ್ಥ್ಯ ಹೊಂದಿರುತ್ತವೆ.
ಈ ದುರಂತದ ನಂತರ ಸ್ಥಳೀಯರು ಮತ್ತು ಸಾರ್ವಜನಿಕರು ಮಾಂಜಾ ದಾರದ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಆಗ್ರಹಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಚೈನೀಸ್ ಮಾಂಜಾ ಮತ್ತು ನೈಲಾನ್ ದಾರಗಳ ಬಳಕೆ ನಿಷೇಧವಿದ್ದರೂ, ಅದರ ಉಲ್ಲಂಘನೆ ಮುಂದುವರೆದಿದೆ.
ಈ ಘಟನೆಯು ಸಂಕ್ರಾಂತಿ ಹಬ್ಬದ ಸಂತೋಷವನ್ನು ಮಾತ್ರವಲ್ಲದೆ, ಮಾಂಜಾ ದಾರದ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.





