ಕನ್ನಡ ಕಿರುತೆರೆಯ ಮನರಂಜನೆ ಮೂಲಕ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಸಕ್ಸಸ್ ಪಡೆದ ಕಾಂತಾರ: ಚಾಪ್ಟರ್ 1 ಇದೇ ಜನವರಿ 24 ರಂದು ಸಂಜೆ 7 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.

‘ಕಾಂತಾರ: ಚಾಪ್ಟರ್ 1’ ಕಥೆಯು 4ನೇ ಶತಮಾನದ ಕದಂಬ ರಾಜವಂಶದ ಕಾಲದ ಒಂದು ಇತಿಹಾಸ ಕಥೆ. ಕಾಂತಾರ ಎಂಬ ಪ್ರದೇಶದ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನು ತೋರಿಸುತ್ತದೆ. ಅಷ್ಟೇ ಅಲ್ಲ ಕಾಂತಾರ ಎನ್ನುವ ಅದ್ಭುತ ಅರಣ್ಯಭೂಮಿಯ ಹುಟ್ಟಿನ ಕಥೆಯನ್ನು ಹೇಳುತ್ತದೆ. ಈ ನೆಲವನ್ನು ರೂಪಿಸಿದ ಆಳವಾದ ಸಂಪ್ರದಾಯಗಳು, ನಂಬಿಕೆ ಮತ್ತು ಜನಪದ ಕಥೆಗಳನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಸಾಂಸ್ಕೃತಿಕ, ಭಾವನಾತ್ಮಕ, ಜಾನಪದ ಅಂಶಗಳಿಂದ ಪ್ರೇಕ್ಷಕರ ಮನಗೆದ್ದ ಕಾಂತಾರ:ಚಾಪ್ಟರ್ 1, ಭಾರತ ಚಿತ್ರರಂಗದಲ್ಲಿ ಒಂದು ಮೈಲುಗಲ್ಲನ್ನೇ ರೂಪಿಸಿದೆ.

ಈ ಚಿತ್ರದಲ್ಲಿರುವ ಅದ್ಬುತ ತಾರಾಬಳಗ ಈ ಚಿತ್ರದ ಯಶಸ್ಸಿಗೆ ಮತ್ತೊಂದು ಕಾರಣ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಬೇರ್ಮೆ ಮತ್ತು ಮಾಯಕಾರ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಅವರು ಕನಕಾವತಿ ಎಂಬ ಯುವರಾಣಿ ಪಾತ್ರ ನಿರ್ವಹಿಸಿದರೆ, ಮಲಯಾಳಂ ನ ಸೂಪರ್ ಸ್ಟಾರ್ ಜಯರಾಮ್ ಅವರು ರಾಜ ರಾಜಶೇಖರ, ಕನಕಾವತಿ ಮತ್ತು ಕುಲಶೇಖರ ಅವರ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ವರ್ಸಟೈಲ್ ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಖ್ಯಾತ ಕಲಾವಿದ ಪ್ರಮೋದ್ ಶೆಟ್ಟಿ ಭೋಗೇಂದ್ರ ಎಂಬ ಪಾತ್ರ ನಿರ್ವಹಿಸಿದ್ದು, ಇನ್ನು ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಿಷಬ್ ಶೆಟ್ಟಿ ಯ ಅದ್ಬುತ ಅಭಿನಯ ಪ್ರೇಕ್ಷಕರನ್ನು ಮತ್ತೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ಬರ್ಮೆ ಪಾತ್ರದಲ್ಲಿ ಅವರ ಅಭಿನಯ ನೈಜವಾಗಿದ್ದು, ಭಾರೀ ಶಕ್ತಿ ಮತ್ತು ಆಧ್ಯಾತ್ಮಿಕತೆಯಿಂದ ತುಂಬಿದ್ದು, ಸಿನಿಮಾ ನೋಡುವ  ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುತ್ತದೆ. ಮೊದಲಾರ್ಧದಲ್ಲಿ ಬಲವಾದ ಪೌರಾಣಿಕ ಮತ್ತು ಭಾವನಾತ್ಮಕ ದೃಶ್ಯಗಳಿದ್ದರೆ, ದ್ವಿತೀಯಾರ್ಧದಲ್ಲಿ ಅದ್ಭುತವಾದ ಆಕ್ಷನ್ ಮತ್ತು ಪ್ರಬಲ ದೈವಿಕ ಕ್ಷಣಗಳು ಕಾಣಸಿಗಲಿದೆ. ಇನ್ನು ಇದೊಂದು ಉತ್ತಮವಾದ ದೃಶ್ಯಕಾವ್ಯವಾಗಿದ್ದು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

“ಕಾಂತಾರ:ಚಾಪ್ಟರ್ 1  ಸಿನಿಮಾ ಮಾತ್ರವಲ್ಲ; ಇದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್‌ಪೀಸ್ ಚಿತ್ರವನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡಲು ನಮಗೆ ಹೆಮ್ಮೆ ಇದೆ. ನಮ್ಮ ವಾಹಿನಿಯ ಮೂಲಕ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಈ ಸಿನಿಮಾವನ್ನು ನೋಡಬಹುದು” ಎಂದು ಜೀ ಕನ್ನಡ ಮತ್ತು ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ