ಟಿಬೆಟಿಯನ್ ನಿರಾಶ್ರಿತರ ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ನೆಲೆವೀಡು ಮುಂಡಗೋಡ. ಇದರ ಬಗ್ಗೆ ವಿವರವಾಗಿ ತಿಳಿಯೋಣವೇ….?
ಕರ್ನಾಟಕದ ಮಿನಿ ಟಿಬೆಟ್ ಎಂದೇ ಹೆಸರುವಾಸಿ ಆಗಿರುವ ಮುಂಡಗೋಡ ಟಿಬೆಟಿಯನ್ ಜನರ ಜೀವನ ಹಾಗೂ ಸಂಸ್ಕೃತಿಯ ಭಂಡಾರವಾಗಿದೆ. ಈ ಪುಟ್ಟದಾದ ಮುಂಡಗೋಡ ಪಟ್ಟಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಕಾರವಾರ ಜಿಲ್ಲೆಯಿಂದ 132 ಕಿ.ಮೀ. ದೂರದಲ್ಲಿದೆ. ಈ ಸುಂದರವಾದ ಮುಂಡಗೋಡ ಪಟ್ಟಣ ಭತ್ತದ ಗದ್ದೆಗಳಿಂದ ಕೂಡಿದ್ದು, ನೋಡುಗರ ಕಣ್ಣಿಗೆ ಆನಂದವನ್ನು ಉಂಟು ಮಾಡುತ್ತದೆ.
ಇಲ್ಲಿ ನಾವು ಟಿಬೆಟಿಯನ್ ಸನ್ಯಾಸಿಗಳನ್ನು ವರ್ಣರಂಜಿತ ನಿಲುವಂಗಿಯಲ್ಲಿ ಮತ್ತು ಗ್ರಾಮಸ್ಥರನ್ನು ಸಾಂಪ್ರದಾಯಿಕ ಉಡುಪಿನಲ್ಲಿ ನೋಡಬಹುದು. ಇಲ್ಲಿರುವ ಹೆಚ್ಚು ಕುಟುಂಬಗಳು ತಮ್ಮ ಜೀವನಕ್ಕಾಗಿ ಸಣ್ಣ ಕೃಷಿ, ರೆಸ್ಟೋರೆಂಟ್, ಸಿಹಿ ತಿನಿಸುಗಳ ಅಂಗಡಿ, ಬುಟ್ಟಿ ಹೆಣೆಯುವುದು, ಸ್ವೆಟರ್ ಮಾರಾಟ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ವಸಾಹತುಗಳ ಒಳಗಿನ ಪುಟ್ಟ ಟೌನ್ ಶಿಪ್ ಟಿಬೆಟಿಯನ್‌ಜನರು ನಡೆಸುವ ಸಣ್ಣ ಅಂಗಡಿಗಳು ಹಾಗೂ ರೆಸ್ಟೋರೆಂಟ್ ಗಳಿಂದ ತುಂಬಿರುತ್ತವೆ. ಇಲ್ಲಿ ಸಾಂಪ್ರದಾಯಿಕ ಟಿಬೆಟಿಯನ್ ಶೈಲಿಯ ಆಹಾರವಾದ ನೂಡಲ್ಸ್, ಸೂಪ್ ಹಾಗೂ ರುಚಿಕರ ಮೋಮೋಸ್ ದೊರೆಯುತ್ತವೆ.

ಗೋಲ್ಡನ್ ಟೆಂಪಲ್ ಇಲ್ಲಿನ ಪ್ರವಾಸಿಗರ ಅತಿ ಆಕರ್ಷಣೀಯ ಕೇಂದ್ರಬಿಂದುವಾದ ಬುದ್ಧನ ಗೋಲ್ಡನ್ ಟೆಂಪಲ್ ನೋಡಲೇಬೇಕಾದ ಸ್ಥಳ. ದೇವಾಲಯವನ್ನು ಕಲಾತ್ಮಕವಾಗಿ ರಚಿಸಲಾಗಿದ್ದು, ಒಳ ಪ್ರವೇಶಿಸುತ್ತಿದ್ದಂತೆ ನಾವು ಟಿಬೆಟ್ ನಲ್ಲಿ ಇರುವಂತೆ ಭಾಸವಾಗುತ್ತದೆ ಹಾಗೂ ಮನಸ್ಸಿಗೆ ಒಂದು ರೀತಿಯ ಸಮಾಧಾನ ಮತ್ತು ಶಾಂತಿಯ ಅನುಭವ ಆಗುತ್ತದೆ. ದೇವಾಲಯದ ಒಳಭಾಗದಲ್ಲಿ ನಾವು ಬಂಗಾರ ಬಣ್ಣ ಹೊಂದಿರುವ ಶಾಂತಿಪ್ರಿಯ ಬುದ್ಧನ ಹಾಗೂ ಟಿಬೆಟಿಯನ್ ದೇವತೆಗಳ ಪ್ರತಿಮೆಗಳನ್ನು ನೋಡಬಹುದು. ಹಾಗೆಯೇ ಔಷಧಿಯ ಕಲಶವನ್ನು ಹಿಡಿದಿರುವ ಮೆಡಿಸಿನ್ ಬುದ್ಧನ ವಿಗ್ರಹವನ್ನು ನೋಡಬಹುದು.

ದೇವಾಲಯದ ಹೊರಾಂಗಣದಲ್ಲಿ ದೊಡ್ಡದಾದ ಗಂಟೆ ಇದ್ದು ಇಲ್ಲಿನ ಬೌದ್ಧ ಭಿಕ್ಕುಗಳು ಈ ಗಂಟೆ ಬಾರಿಸುವುದರ ಮೂಲಕ ತಮ್ಮ ದಿನ ನಿತ್ಯದ ಪೂಜೆಯನ್ನು ಪ್ರಾರಂಭಿಸುವರು. ಇಲ್ಲಿ 70% ರಷ್ಟು ಬೌದ್ಧ ಸನ್ಯಾಸಿಗಳಿದ್ದು 30% ರಷ್ಟು ಸಾಮಾನ್ಯ ಜನರಿದ್ದಾರೆ. ಈ ದೇವಾಲಯದಲ್ಲಿ ನಾವು ನಮ್ಮ ಮನಸ್ಸಿನಲ್ಲಿರುವ ಇಚ್ಛೆಯನ್ನು ಬೇಡಿಕೊಂಡು ಮೇಣದ ಬತ್ತಿಯನ್ನು ಬೆಳಗಿಸಿದರೆ ನಮ್ಮ ಇಷ್ಟಾರ್ಥ ಪೂರೈಸುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿನ ಗೋಡೆಗಳ ಮೇಲೆ ಟಿಬೆಟಿಯನ್ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಟಿಬೆಟಿಯನ್ ದೇವತೆ ಹಾಗೂ ದುಷ್ಟಶಕ್ತಿಯನ್ನು ವರ್ಣರಂಜಿತವಾಗಿ ಚಿತ್ರೀಕರಿಸಲಾಗಿದೆ. ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿ ಬೌದ್ಧ ಸನ್ಯಾಸಿಗಳು ಮತ್ತು ವಿದ್ಯಾರ್ಥಿಗಳು ಮುಂಜಾನೆ ಹಾಗೂ ಮಧ್ಯಾಹ್ನ ಮಂತ್ರ ಪಠಿಸಿ ಪೂಜೆ ಸಲ್ಲಿಸುವ ವಿಧಾನವಿದೆ.

ಮುಂಡಗೋಡಕ್ಕೆ ಹೋಗುವುದು ಹೇಗೆ?
ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಇದು ಸುಮಾರು 54 ಕಿ.ಮೀ. ದೂರದಲ್ಲಿದೆ. ನೀವು ಹುಬ್ಬಳ್ಳಿಯಿಂದ ಹೋಗುವುದಾದರೆ ಸುಮಾರು 49 ಕಿ.ಮೀ. ದೂರದಲ್ಲಿದೆ ಹಾಗೂ ಕಾರವಾರ ಜಿಲ್ಲೆಯಿಂದ 132 ಕಿ.ಮೀ. ದೂರದಲ್ಲಿದೆ. ನೀವು ಖಾಸಗಿ ವಾಹನ ಅಥವಾ ಸರ್ಕಾರಿ ಬಸ್ಸುಗಳ ಮೂಲಕ ಹೋಗಬಹುದು.
ಹಿನ್ನೆಲೆ
1949ರಲ್ಲಿ ಚೀನಾದ ಸೈನ್ಯ ಟಿಬೆಟ್ ನ ಪೂರ್ವ ಪ್ರಾಂತ್ಯಗಳಾದ ಡೊಮೆಡ್ ಮತ್ತು ಡುಟೋಡ್ ಗಳ ಮೇಲೆ ಆಕ್ರಮಣ ನಡೆಸಿತು. ತದನಂತರ ಮುಂಬರುವ ವರ್ಷಗಳಲ್ಲಿ, ಚೀನೀಯರು ಟಿಬೆಟ್ ನ್ನು ಸಂಪೂರ್ಣವಾಗಿ ಆಕ್ರಮಿಸಿ ಸ್ವಾಧೀನಪಡಿಸಿಕೊಂಡರು. ಆಗ ಟಿಬೆಟಿಯನ್ ಜನಾಂಗ ಮನೆ ಹಾಗೂ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ತದನಂತರ 1960ರ ದಶಕದ ಆರಂಭದಲ್ಲಿ ಟಿಬೆಟಿಯನ್ ನಿರಾಶ್ರಿತರಿಗಾಗಿ ವಸಾಹತುಗಳನ್ನು ಸ್ಥಾಪಿಸಲು ಸಹಾಯ ಮಾಡುವಂತೆ ಕೇಂದ್ರ ಟಿಬೆಟಿಯನ್ ಆಡಳಿತ ಟಿಬೆಟಿಯನ್ ಧರ್ಮಗುರು ದೈ ಲಾಮಾರವರ ನೇತೃತ್ವದಲ್ಲಿ ಭಾರತ ಸರ್ಕಾರವನ್ನು ವಿನಂತಿಸಿತು.

ಟಿಬೆಟಿಯನ್ ನಿರಾಶ್ರಿತರು ಒಟ್ಟಿಗೆ ನೆಲೆಸಲು ಮತ್ತು ಅವರ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಜೀವನ ವಿಧಾನವನ್ನು ಉಳಿಸಿಕೊಳ್ಳಲು ಟಿಬೆಟಿಯನ್ ಜನರು ಭಾರತ ಸರ್ಕಾರದ ಮೊರೆಹೋದರು. ಆಗ ಭಾರತ ಸರ್ಕಾರ ಟಿಬೆಟಿಯನ್ ನಿರಾಶ್ರಿತರಿಗೆ ಹಲವಾರು ವಸಾಹತುಗಳನ್ನು ಒದಗಿಸಿತು. ಅದರಲ್ಲಿ ಮುಂಡಗೋಡ ಕೂಡಾ ಒಂದು. ನಮ್ಮ ಕರ್ನಾಟಕ ಸರ್ಕಾರ ಹುಬ್ಬಳ್ಳಿ ಬಳಿಯ ಪುಟ್ಟ ಪಟ್ಟಣ ಮುಂಡಗೋಡದಲ್ಲಿ 4,000 ಎಕರೆ ಅರಣ್ಯ ಭೂಮಿಯನ್ನು ನೀಡಿತು. ಆರಂಭದಲ್ಲಿ ನಿರಾಶ್ರಿತರಿಗೆ ಡೇರೆಗಳನ್ನು ಹಾಗೂ ಬಿದಿರಿನ ಪುಟ್ಟ ಪುಟ್ಟ ಮನೆಗಳನ್ನು ಒದಗಿಸಿದರು. ತದನಂತರ ಟಿಬೆಟಿಯನ್ನರು 1966ರಲ್ಲಿ ಡೋಗುಲಿಂಗ್ ಟಿಬೆಟಿಯನ್ ವಸಾಹತುಗಳನ್ನು ಸ್ಥಾಪಿಸಿದರು. ಇಂದು, ಇದು ವಿಶ್ವದ ಅತಿದೊಡ್ಡ ಟಿಬೆಟಿಯನ್ ನಿರಾಶ್ರಿತರ ಕೇಂದ್ರವಾಗಿದ್ದು, ಹದಿನೆಂಟು ಸಾವಿರ ಜನರನ್ನು ಮೀರಿದೆ. ಡೋಗುಲಿಂಗ್ ಟಿಬೆಟಿಯನ್ ವಸಾಹತು ಒಟ್ಟು 7 ಮಠಗಳನ್ನು ಹೊಂದಿದ್ದು, ಪ್ರತಿ ಮಠದಲ್ಲಿಯೂ ಬುದ್ಧನ ಪ್ರತಿಮೆಗಳು, ಸ್ತೂಪಗಳು ಹಾಗೂ ಗೋಡೆಗಳ ಮೇಲೆ ಸಾಂಪ್ರದಾಯಿಕ ಚಿತ್ರಕಲೆಗಳನ್ನು ನೋಡಬಹುದು. ಅಷ್ಟೇ ಅಲ್ಲದೆ, ಅನೇಕ ಶಾಲಾ ಕಾಲೇಜು, ವೈದ್ಯಕೀಯ ಚಿಕಿತ್ಸಾಲಯ, ಉತ್ತಮ ಆಧುನಿಕ ಆಸ್ಪತ್ರೆ ಹಾಗೂ ಮೈದಾನಗಳನ್ನು ನೋಡಬಹುದಾಗಿದೆ.

ಬೌದ್ಧ ಶಿಕ್ಷಣ
ಮುಂಡಗೋಡ ಬೌದ್ಧ ಸನ್ಯಾಸಿಗಳ ಶಿಕ್ಷಣದ ಅತ್ಯುತ್ತಮ ಕೇಂದ್ರವಾಗಿದೆ. ಇಲ್ಲಿನ ಪ್ರಸಿದ್ಧ ಗಾರ್ಡನ್ ಜೆಂಗ್ಟ್ಸೆ ಮೊನಾಸ್ಟಿಕ್ ಕಾಲೇಜು, ಸುಮಾರು 500 ವರ್ಷಗಳಷ್ಟು ಹಳೆಯದಾದ ಡೂಗುಲಿಂಗ್ ಮೊನಾಸ್ಟಿಕ್ ವಿಶ್ವವಿದ್ಯಾಲಯದ ಪ್ರತಿರೂಪವಾಗಿದೆ. ಈ ವಿಶ್ವವಿದ್ಯಾಲಯ 4000 ವಿದ್ಯಾರ್ಥಿ ಸನ್ಯಾಸಿಗಳಿಗೆ ಬೌದ್ಧ ಧರ್ಮದ ಶಿಕ್ಷಣವನ್ನು ಬೋಧಿಸುತ್ತಿದ್ದು, ಇಲ್ಲಿನ ಜನರು ಏಕಸ್ವಾಮ್ಯ ಸರಳ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ.

ಇಲ್ಲಿನ ವಸಾಹತುವಿನಲ್ಲಿ ಒಟ್ಟು ಸನ್ಯಾಸಿಗಳ ಸಂಖ್ಯೆ 8000ಕ್ಕಿಂತಲೂ ಹೆಚ್ಚು. ಇಲ್ಲಿ ಪ್ರತಿ ವರ್ಷ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಭೇಟಿ ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಒಟ್ಟಿನಲ್ಲಿ ಮುಂಡಗೋಡ ಟಿಬೆಟಿಯನ್ ನಿರಾಶ್ರಿತರ ಜೀವನಶೈಲಿ ಮತ್ತು ಮಹತ್ವಾಕಾಂಕ್ಷೆಗಳನ್ನು ತೋರಿಸುವ ನೆಲೆಯಾಗಿದ್ದು, ಸಾಂಪ್ರದಾಯಿಕ ಸಮಾಜವನ್ನು ಕ್ರಮೇಣ ಆಧುನಿಕತೆಗೆ ಪರಿರ್ತಿಸುವುದನ್ನು ಪ್ರತಿಬಿಂಬಿಸುತ್ತದೆ. ಅದ್ದರಿಂದ ಇದನ್ನು ಕರ್ನಾಟಕದ `ಮಿನಿ ಟಿಬೆಟ್’ ಎಂದು ಕರೆಯಲಾಗುತ್ತದೆ.
– ಸಂಜ್ಞಾ ಭಟ್





