ಫೆಬ್ರವರಿ 14 ಮತ್ತು 15 ರಂದು ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗಾಗಿ ಗೋವಾದ ಬೀದಿಗಳು ಹೈ-ಇಂಟೆನ್ಸಿಟಿ ರೇಸಿಂಗ್ ಅಖಾಡವಾಗಿ ಬದಲಾಗಲು ಸಜ್ಜಾಗಿವೆ.

ತಂಡದ ಮಾಲೀಕ ಹಾಗೂ ಖ್ಯಾತ ನಟ ಜಾನ್ ಅಬ್ರಹಾಂ ಮಾತನಾಡಿ, “ತವರು ನೆಲದ ಬೀದಿಗಳಲ್ಲಿ ರೇಸಿಂಗ್ ಮಾಡುವುದು ಮೋಟಾರ್ ಸ್ಪೋರ್ಟ್ ಅನ್ನು ಕೇವಲ ಕ್ರೀಡೆಯಾಗಿ ಉಳಿಸದೆ, ಅದನ್ನು ಹೆಮ್ಮೆಯ ವಿಷಯವನ್ನಾಗಿ ಮಾಡಿದೆ” ಎಂದಿದ್ದಾರೆ.

“ಇದು ಕೇವಲ ಪಾಯಿಂಟ್‌ಗಳನ್ನು ಗಳಿಸುವುದು ಅಥವಾ ಪೋಡಿಯಂ ಏರುವುದಕ್ಕೆ ಮಾತ್ರ ಸೀಮಿತವಲ್ಲ. ನಾವು ನಮ್ಮ ನಗರದಲ್ಲಿ, ನಮ್ಮ ಜನರ ಮುಂದೆ ರೇಸ್ ಮಾಡುತ್ತಿದ್ದೇವೆ. ಇದು ಬೇರೆಲ್ಲೂ ಸಿಗದಂತಹ ಜವಾಬ್ದಾರಿಯ ಪ್ರಜ್ಞೆ ಮೂಡಿಸುತ್ತದೆ. ಇದು ಅತ್ಯಂತ ವೈಯಕ್ತಿಕವಾದ ವಿಷಯವಾಗುತ್ತದೆ,” ಎಂದಿದ್ದಾರೆ.

ಕಾಯಂ ರೇಸಿಂಗ್ ಸರ್ಕ್ಯೂಟ್‌ಗಳಿಗಿಂತ ಭಿನ್ನವಾಗಿ, ಸ್ಟ್ರೀಟ್ ರೇಸಿಂಗ್ ಅತ್ಯಂತ ಕಿರಿದಾದ ಹಾದಿಗಳನ್ನು ಹೊಂದಿರುತ್ತದೆ. ಇಲ್ಲಿ ಸಣ್ಣ ತಪ್ಪುಗಳಿಗೂ ಕ್ಷಮೆಯಿಲ್ಲ. “ನೀವು ರೇಸ್ ಮಾಡುವ ರಸ್ತೆಗಳು, ಬ್ಯಾರಿಯರ್‌ಗಳು ಮತ್ತು ಅಲ್ಲಿನ ಪರಿಸರಕ್ಕೆ ಗೌರವ ನೀಡಲೇಬೇಕು. ಇಂತಹ ಕಾರ್ಯಕ್ರಮಗಳು ಗೋವಾವನ್ನು ಭಾರತದ ಕ್ರೀಡಾ ಭೂಪಟದಲ್ಲಿ ಭದ್ರವಾಗಿ ಪ್ರತಿಷ್ಠಾಪಿಸುತ್ತವೆ. ಗೋವಾ ಈಗಾಗಲೇ ತನ್ನ ಕಡಲತೀರಗಳು ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈಗ ಇದು ವಿಶ್ವದರ್ಜೆಯ ಕ್ರೀಡೆಗಳ ತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ,” ಎಂದು ತಿಳಿಸಿದ್ದಾರೆ.

“ಒಬ್ಬ ಮಾಲೀಕನಾಗಿ, ನಾನು ಒತ್ತಡದ ಸಂದರ್ಭದಲ್ಲಿಯೂ ಚಾಲಕರು ಶಾಂತವಾಗಿರುವುದನ್ನು ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ನಿರೀಕ್ಷಿಸುತ್ತೇನೆ,” ಎಂದಿದ್ದಾರೆ.

“ರೇಸಿಂಗ್ ನಗರದೊಳಗೆ ಬಂದಾಗ, ಅಭಿಮಾನಿಗಳು ಅದನ್ನು ಕೇವಲ ನೋಡುವುದಿಲ್ಲ; ಬದಲಿಗೆ ಅದನ್ನು ಅನುಭವಿಸುತ್ತಾರೆ. ಗೋವಾದ ಪಾಲಿಗೆ ಈ ವಾರಾಂತ್ಯವನ್ನು ನಿಜಕ್ಕೂ ವಿಶೇಷವಾಗಿಸಲಿದೆ,” ಎಂದು ಜಾನ್  ಹೇಳಿದ್ದಾರೆ.

ಗೋವಾ ಏಸಸ್ ಜೆಎ ರೇಸಿಂಗ್ (Goa Aces JA Racing) ತಂಡವು ಅಂತರರಾಷ್ಟ್ರೀಯ ಅನುಭವ ಹೊಂದಿರುವ ಬಲಿಷ್ಠ ಚಾಲಕರ ಪಡೆಯೊಂದಿಗೆ ಕಣಕ್ಕಿಳಿಯುತ್ತಿದೆ.  ರೌಲ್ ಹೈಮನ್  ಇಂಡಿಯನ್ ರೇಸಿಂಗ್ ಲೀಗ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಚಾಲಕ ಮತ್ತು ಸತತ ಎರಡು ಬಾರಿಯ ಚಾಂಪಿಯನ್. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಐದನೇ ತಲೆಮಾರಿನ ಭಾರತೀಯರಾದ ಇವರು ತಂಡಕ್ಕೆ ಸ್ಥಿರತೆಯನ್ನು ನೀಡಲಿದ್ದಾರೆ. ಆಕಾಶ್ ಗೌಡ ಇವರ ಅಂತರರಾಷ್ಟ್ರೀಯ ಅನುಭವವು ತಂಡದ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಪಡಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ