ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮೆಟ್ರೋ ಟಿಕೆಟ್ ದರ ಏರಿಕೆ ಜಟಾಪಟಿ ಕೊನೆ ಹಂತ ತಲುಪಿದೆ.
ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರ ಏರಿಸಲು ಮುಂದಾಗಿದ್ದ ಬಿಎಂಆರ್‌ಸಿಎಲ್ ನಿರ್ಧಾರವನ್ನು ಕೈಬಿಟ್ಟಿದೆ. ದರ ಏರಿಕೆ ಮಾಡದಂತೆ ಬಿಎಂಆರ್‌ಸಿಎಲ್ ಎಂಡಿಗೆ ಕೇಂದ್ರದಿಂದ ಇ-ಮೇಲ್ ರವಾನೆ ಬೆನ್ನಲ್ಲೇ ದರ ಏರಿಕೆಗೆ ಬ್ರೇಕ್ ಬಿದ್ದಿದೆ.
ಮುಂದಿನ ಆದೇಶದವರೆಗೆ ದರ ಏರಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಹಾಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಆಗುವುದಿಲ್ಲ.
ದರ ಏರಿಕೆಯಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರೆ, ಬಿಎಂಆರ್‌ಸಿಎಲ್ ಎಂಡಿ ನಮಗೆ ಆದೇಶ ಬಂದಿಲ್ಲ. ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಿದ್ದರು. ಇದರ ನಡುವೆ ಬಿಎಂಆರ್‌ಸಿಎಲ್‌ಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಬಂದಿದೆ. ಹಾಗಾಗಿ ಬಿಎಂಆರ್‌ಸಿಎಲ್ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿದಿದೆ.
ಬಿಎಂಆರ್‌ಸಿಎಲ್ ಹೇಳಿದ್ದೇನು? : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಫೆಬ್ರವರಿ 5ರಂದು ಪ್ರಕಟಿಸಿದ್ದ ಪ್ರಕಟಣೆಯಲ್ಲಿ ಫೆಬ್ರವರಿ 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ಥ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಿದೆ.
ಫೆಬ್ರವರಿ 9ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ನಿರ್ಧಾರವಾಗುತ್ತಿದ್ದಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.
ಜನರಿಗೆ ಸಂದ ಜಯ: ದರ ಏರಿಕೆ ಕೈಬಿಟ್ಟಿದ್ದನ್ನು ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಇದು ಬೆಂಗಳೂರು ಜನರಿಗೆ ಸಂದ ಜಯ. ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಕೇಂದ್ರ ತಡೆಹಿಡಿದಿದೆ. ಟಿಕೆಟ್ ದರ ಏರಿಕೆ ಸ್ಥಗಿತ ಕೇವಲ ತಾತ್ಕಾಲಿಕ ರಿಲೀಫ್ ಅಷ್ಟೇ ಎಂದು ಹೇಳಿದ್ದಾರೆ.





