ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು ಫೆಬ್ರವರಿ 18 – ಕನ್ನಡ ನೆಲ-ಜಲ-ಭಾಷೆಯ ವಿಚಾರಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಿಟ್ಟ ಅಪರೂಪದ ಬರಹಗಾರ ಡಾ. ಎಂ. ಚಿದಾನಂದಮೂರ್ತಿ. ಅವರು ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ವೈಚಾರಿಕತೆಗೆ ಕೊಟ್ಟ ಕೊಡುಗೆ ಅನನ್ಯವಾದದ್ದು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದ್ದಾರೆ.

image (3)

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ “ಡಾ. ಎಂ. ಚಿದಾನಂದಮೂರ್ತಿಯವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತಿದ್ದರು. ಚಿದಾನಂದಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆಯನ್ನು ಒಂದು ಹಿಡಿತದಲ್ಲಿ ಅಳತೆ ಮಾಡಲಾಗದು. ಸೃಜನಶೀಲ, ಸೃಜನೇತರ ಬರಹಗಳ ಜೊತೆಜೊತೆಗೆ ಅವರ ಸಂಶೋಧನಾಶೀಲ ವಿಚಾರ ವೈಖರಿಯು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕೃತಿ ಸಂಶೋಧಕರ ಪಾಲಿಗೆ ಭಗವದ್ಗೀತೆಯಾಗಿದೆ.

image (5)

ಚಿದಾನಂದಮೂರ್ತಿಗಳಿಗೆ ಗುರುಪರಂಪರೆಯಲ್ಲಿರುವ ರೀತಿಯ ಪ್ರಾಮಾಣಿಕತೆ, ನಿಷ್ಠೆ ಇದೆ. ಅವರ ಅಧ್ಯಯನದ ಹರವು, ಹಾಸು, ಮಹತ್ವ ಬಹಳದೊಡ್ಡದು. ಅವರ ಸಾಹಿತ್ಯದ ವಿಸ್ತಾರ ಮತ್ತು ಶಾಸ್ತ್ರೀಯ ಅಧ್ಯಯನ ಮಾಡುವ ಅವಶ್ಯಕತೆ ಹಿಂದೆಂದಿಗಿಂತ ಅಧಿಕವಾಗಿದೆ ಎಂದು ಅವರು ಹೇಳಿದರು.

image
ಕನ್ನಡ ಪರಿಚಾರಿಕೆಗೆ ಚಿದಾನಂದಮೂರ್ತಿಗಳ ಕೊಡುಗೆ ಬಹಳ ದೊಡ್ಡದು. ಅವರೊಬ್ಬ ಒಳ್ಳೆಯ ಅಧ್ಯಾಪಕರ. ಬರಹ ಮತ್ತು ಬದುಕನ್ನು ಒಂದೇ ಎಂದು ಭಾವಿಸಿದ ಅಪರೂಪದ ಚೈತನ್ಯ. ಅವರು ಕೊಟ್ಟ ಬೆಳಕು ಕನ್ನಡ ಸಾಹಿತ್ಯವನ್ನು ಬಹಳಕಾಲ ಬೆಳಗುತ್ತದೆ ಎಂದು ಹಂಪನಾ ಹೇಳಿದರು.

image (1)

ಕೃತಿಯ ಸಂಪಾದಕರ ಡಾ. ಬಸವರಾಜ ಕಲ್ಗುಡಿ ಅವರು ಮಾತನಾಡಿ ಡಾ. ಎಂ. ಚಿದಾನಂದಮೂರ್ತಿ ಅವರು ಬಹುಮುಖಿ ಸಂವೇದನೆ ಮತ್ತು ಬಹುಮುಖಿ ಚಿಂತನೆಯುಳ್ಳ ಅಪರೂಪದ ವ್ಯಕ್ತಿ ಅವರು ಬರೆದ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದು ಈಗ ನಾವು 15 ಸಂಪುಟಗಳಲ್ಲಿ ಅವರ ಕೃತಿಗಳನ್ನು ವಿಂಗಡಿಸಿದ್ದೇವೆ. ಆದರೆ ಅಪ್ರಕಟಿತವಾದ ಇನ್ನೂ ಬಹುದೊಡ್ಡ ಸಾಹಿತ್ಯ ಭಂಡಾರವೇ ಅವರ ಬಳಿ ಇದೆ. ಪುಸ್ತಕ ಪ್ರಾಧಿಕಾರ ಈ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಡಾ. ಚಿದಾನಂದಮೂರ್ತಿಯವನ್ನು ಗೌರವಿಸುವ ಪ್ರಶಂಸನೀಯ ಕೆಲಸ ಮಾಡಿದೆ ಎಂದು ಹೇಳಿದರು. ಚಿದಾನಂದಮೂರ್ತಿ ಭಾವನಾತ್ಮಕವಾಗಿ ಬಹಳ ಮಿಡಿಯುವಂತಹ ವ್ಯಕ್ತಿ. ಅದರಲ್ಲಿಯೂ ಕನ್ನಡದ ನೆಲ-ಜಲ-ಭಾಷೆಗಳ ವಿಷಯ ಬಂದಾಗ ಅವರು ಭಾವನಾತ್ಮಕ ಉತ್ಕರ್ಷದ ಸ್ಥಿತಿಯನ್ನು ತಲುಪಿಬಿಡುತ್ತಾರೆ. ಬೆಂಗಳೂರಿನಿಂದ ಹಂಪಿಯ ವರೆಗೂ ಕಲ್ನಡಿಗೆಯಲ್ಲಿ ಕನ್ನಡಕ್ಕಾಗಿ ನಡೆಸಿದ ಪಾದಯಾತ್ರೆ ಅದಕ್ಕೆ ಒಂದು ಉದಾಹರಣೆ ಎಂದು ಅವರು ತಿಳಿಸಿದರು. ಬೆಂಗಳೂರಿನ ಚರ್ಚ್ಗಳಲ್ಲಿ ಕನ್ನಡ ಪ್ರಾರ್ಥನೆ ಮೊಳಗುವಂತೆ ಮಾಡಿದ ಕೀರ್ತಿ ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಕಲ್ಗುಡಿ ಹೇಳಿದರು.

image (7)

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಮಾನಸ ಕನ್ನಡ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದೆ. ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ ಹಾಗೂ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮಗಳಿಗೆ ದೊಡ್ಡಮಟ್ಟದ ಯಶಸ್ಸು ಸಿಕ್ಕಿದೆ. ಹಾಗೆಯೇ ಪ್ರಾಧಿಕಾರ ಪ್ರಕಟಿಸುತ್ತಿರುವ ಪುಸ್ತಕಗಳ ಮಾರಾಟ ಪ್ರಮಾಣವನ್ನು ಸಹ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇವೆ ಎಂದರು. ದೇವಾಲಯಗಳ ಹುಂಡಿಗಳಿಗೆ ಹಣಹಾಕುವ ಜನ ಪುಸ್ತಕಕೊಳ್ಳಲು ಹಿಂದುಮುಂದು ನೋಡುತ್ತಾರೆ. ಇಂತಹ ಭಾವನೆ ಬದಲಾಗಬೇಕು. ಮನೆಗೊಂದು ಪೂಜಾಕೊಠಡಿ ಇರುವಂತೆ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಎಂ. ಚಿದಾನಂದಮೂರ್ತಿಗಳ ಮಗ ವಿನಯ್   ಚಿದಾನಂದಮೂರ್ತಿ ನಾಡು-ನುಡಿಯ ವಿಷಯ ಬಂದಾಗ ನಮ್ಮ ತಂದೆ ಯಾವುದಕ್ಕೂ ಹೆದರುತ್ತಿರಲಿಲ್ಲ. ಅವರಿಗೆ ಜೀವ ಬೆದರಿಕೆ ಬಂದಾಗಲೂ ಪ್ರಾಣ ಭಯ ತೊರೆದು ಕನ್ನಡ ನೆಲ-ಜಲ-ಭಾಷೆಗಾಗಿ ಹೋರಾಡಿದರು  ಎಂದರು.

image (2)
ಡಾ. ಸಿ.ಆರ್. ಚಂದ್ರಶೇಖರ ಅವರು ಮಾತನಾಡಿ ಇಂದಿನ ಯುವಪೀಳಿಗೆ ಸಾಧ್ಯವಾದಷ್ಟು ಪಾಸಿಟೀವ್ ಮನೋಭಾವನೆ ಬೆಳೆಸಿಕೊಳ್ಳಬೇಕು. ಅದಕ್ಕೆ ಬೇಕಾದದ್ದು ಸಾಹಿತ್ಯಾಸಕ್ತಿ. ಒಳ್ಳೆಯ ಸಾಹಿತ್ಯವನ್ನು ಓದಿ, ಒಳ್ಳೆಯ ಚಿಂತನೆ ಮಾಡುವುದನ್ನು ಇಂದಿನ ಯುವಜನತೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಚಿದಾನಂದಮೂರ್ತಿಗಳ ಸಮಗ್ರ ಪ್ರಕಟಣೆ ಹಾಗೂ ಇತರೆ 09 ಮರು ಮುದ್ರಣ ಕೃತಿಗಳ ಬಗ್ಗೆ ಮಾಹಿತಿ ನೀಡಿದರು.

image (8)

ಕಾರ್ಯಕ್ರಮದಲ್ಲಿ ಹೊಸಗನ್ನಡ ಅರುಣೋದಯ ಕೃತಿ ಲೇಖಕ ಶ್ರೀನಿವಾಸ ಹಾವನೂರ ಅವರ ಪುತ್ರಿ ನಿವೇದಿತ ಹೊನ್ನತ್ತಿ, ಟಿ.ಎಸ್. ವೆಂಕಣ್ಣಯ್ಯ ಅವರ ಮಗ ಟಿ.ಎಸ್. ಶ್ರೀಕಂಠಯ್ಯ ಭಾಗವಹಿಸಿದ್ದರು. ಪ್ರಾಧಿಕಾರದ ಸದ್ಯರಾದ ಬಿ.ಸಿ. ಕುಶಾಲ ಸ್ವಾಗತಿಸಿದರು, ಲಕ್ಷ್ಮಣ ಕೊಡಸೆ ವಂದಿಸಿದರು ಹಾಗೂ ಬಿ.ಹೆಚ್. ನಿರಗುಡಿ ಕಾರ್ಯಕ್ರಮ ನಿರೂಪಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ