ರಾಧಾ : ಏನ್ರೀ…. ನಾಳೆ ಮನೆಗೆ ಅತಿಥಿಗಳು ಬರ್ತಿದ್ದಾರೆ, ಆದರೆ ಮನೆಯಲ್ಲಿ ಏನೂ ಇಲ್ಲ…..
ಮೋಹನ್ : ಅಷ್ಟೇ ತಾನೇ? ಅತಿಥಿಗಳು ಬಂದು ಅರ್ಧ ಗಂಟೆ ಆಗುವಷ್ಟರಲ್ಲಿ ನೀನು ಕಿಚನ್ ನಲ್ಲಿ 1 ಪಾತ್ರೆ ಜೋರಾಗಿ ಬೀಳಿಸಿ, `ಅಯ್ಯೋ!’ ಅನ್ನು. ಏನಾಯ್ತು ಅಂತ ನಾನು ಕೇಳಿದಾಗ, `ಛೇ…. ವೆಜಿಟೆಬಲ್ ಕುರ್ಮ ಪೂರ್ತಿ ಚೆಲ್ಲಿ ಹೋಯ್ತು,’ ಅನ್ನು. ಆಮೇಲೆ ಸ್ವಲ್ಪ ಹೊತ್ತಿಗೆ ಇನ್ನೊಂದು ಪಾತ್ರೆಯನ್ನು ಮತ್ತೆ ಹಾಗೇ ಬೀಳಿಸು. ಏನಾಯ್ತು ಅಂತ ನಾನು ಕೇಳಿದಾಗ, `ಮಾಡಿದ್ದ ಘೀ ರೈಸ್ ಪೂರ್ತಿ ಕೆಳಗೆ ಬಿದ್ದು ಚೆಲ್ಲಿ ಹೋಯ್ತು. ಈಗೇನು ಮಾಡಲಿ….?’ ಅನ್ನು. ಆಗ ನಾನು, `ಸರಿ… ಅನ್ನ ಬೇಳೆ ಸಾರು ತಗೊಂಬಾ,’ ಅಂತೀನಿ. ಆಯ್ತಾ? ಹೇಗೋ ಮ್ಯಾನೇಜ್ ಮಾಡಿದರಾಯ್ತು.
ಮರೆಗುಳಿ ಸ್ವಭಾವದ ರಾಧಾ ಏನು ಮಾಡಿಬಿಡ್ತಾಳೋ ಎಂದು ಮೋಹನನಿಗೆ ಅಂಜಿಕೆ ಇತ್ತು. ಅತಿಥಿಗಳು ಬಂದ ನಂತರ 2-2 ಸಲ ರಾಧಾ ಪಾತ್ರೆ ಬೀಳಿಸಿ, ಮೋಹನ ಪ್ರಶ್ನಿಸಿದ್ದೂ ಆಯ್ತು. ಸ್ವಲ್ಪ ಹೊತ್ತಿನ ನಂತರ ರಾಧಾ 3ನೇ ಪಾತ್ರೆಯನ್ನೂ ಬೀಳಿಸಿಬಿಡಬೇಕೇ….?
ಮೋಹನ್ : ಈಗೇನು ಆಯ್ತು?
ರಾಧಾ : ಈಗ ನಿಜಾಗ್ಲೂ ಬೇಳೆ ಸಾರಿನ ಪಾತ್ರೆ ಚೆಲ್ಲಿ ಹೋಯ್ತು, ಬಂದವರಿಗೆ ನೀರು ಕೊಡಲೇ…..?
ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿಕೊಂಡು ಪ್ರಸನ್ನ ಸೈಕಲ್ ಏರಿ ಮನೆಗೆ ಹೊರಟಿದ್ದ. ಆ ದಿನ ಸಂಬಳ ಬಂದಿತ್ತು. ಖುಷಿಯಲ್ಲಿ ಹಾಡುತ್ತಾ ಹೊರಟವನನ್ನು ರಾತ್ರಿ 11 ಗಂಟೆಯಲ್ಲಿ ಚೂರಿ ಹಿಡಿದಿದ್ದ ಕಳ್ಳನೊಬ್ಬ ಅಡ್ಡಗಟ್ಟಿದ. ಇವನಿಗೆ ಆ ಭಾರಿ ಚೂರಿಯನ್ನು ಝಳಪಿಸುತ್ತಾ, “ಮರ್ಯಾದೆಯಾಗಿ ನಿನ್ನ ಜೇಬಿನಲ್ಲಿರುವ ಎಲ್ಲಾ ಹಣ ಕೊಟ್ಟು ಬಿಡು…. ಇಲ್ಲದಿದ್ದರೆ…..”
“ಅಯ್ಯೋ…. ಹಾಗೇ ಮಾಡಬೇಡ ಕಳ್ಳಣ್ಣ… ಹಣ ಇಲ್ಲದೆ ಮನೆಗೆ ಹೋದರೆ ನನ್ನ ಹೆಂಡತಿ ನನ್ನನ್ನು ಹಾಗೇ ಉದ್ದುದ್ದಕ್ಕೆ ನುಂಗಿಬಿಡುತ್ತಾಳೆ…” ಎಂದ ಪ್ರಸನ್ನ.
“ಈಗ ನಾನು ನಿನ್ನ ಬಳಿ ಏನೂ ಸಂಪಾದಿಸದೆ ಮನೆಗೆ ಹೋದರೆ, ನನ್ನ ಹೆಂಡತಿ ನನ್ನನ್ನು ಅಡ್ಡಡ್ಡ ನುಂಗಿಬಿಡುತ್ತಾಳೆ. ನಾನೇನು ಮಾಡಲಿ…..?”
ನೀತಿ : ಒಟ್ಟಾರೆ ಎಲ್ಲಾ ಗಂಡಂದಿರ ಪಾಡೂ ಒಂದೇ!
ವರುಣ್ : ನಾನು ಯಾವ ಕೆಲಸ ಮಾಡಲು ಹೋದರೂ ನನ್ನ ಹೆಂಡತಿ ಮಧ್ಯದಲ್ಲಿ ಅಡ್ಡ ಬರ್ತಾಳೆ. ನೆಟ್ಟಗೆ ಒಂದು ಕೆಲಸವನ್ನೂ ಪೂರ್ತಿ ಮಾಡ್ಲಿಕ್ಕೆ ಬಿಡಲ್ಲ…
ಕಿರಣ್ : ಯಾವುದಕ್ಕೂ ಒಂದು ಸಲ ಬುಲ್ಡೋಝರ್ ಓಡಿಸಿ ನೋಡು, ಆಗ ಅವಳ ಈ ದುರಭ್ಯಾಸ ತಂತಾನೇ ನಿಂತುಹೋಗಬಹುದು.
ಪತ್ನಿ : ಕಳೆದ ವರ್ಷ ನಮ್ಮ ಮದುವೆಯ ವಾರ್ಷಿಕೋತ್ಸಕ್ಕೆ ಕಬ್ಬಿಣದ ಮಂಚವನ್ನು ಉಡುಗೊರೆಯಾಗಿ ಕೊಡಿಸಿದ್ದಿರಿ. ಈ ಸಲ ಏನು ಉಡುಗೊರೆ ಕೊಡ್ತೀರಿ?
ಪತಿ : ಈ ಸಲ ಅದಕ್ಕೆ 2 ದಿಂಬು ಕೊಂಡರಾಯ್ತು ಬಿಡು.
ಸುರೇಶ್ : ಯಾರಿಗಾದರೂ ಕೆಟ್ಟ ಕಾಲ ಬಂದಾಗ, ಅವರ ಮನೆಯವರೆಲ್ಲ ಖಂಡಿತಾ ಅವರ ಹಿಂದೆ ನಿಂತೇ ನಿಲ್ಲುತ್ತಾರೆ.
ಸತೀಶ್ : ಯಾವುದನ್ನು ಆಧರಿಸಿ ಹೀಗೆ ಹೇಳ್ತಿದ್ದೀಯಾ?
ಸುರೇಶ್ : ನಂಬಿಕೆ ಇಲ್ಲ ಅಂದ್ರೆ ಯಾರದಾದರೂ ಮದುವೆ ಫೋಟೋ ಆಲ್ಬಂ ನೋಡು….
ಒಮ್ಮೆ ಬಡ್ಡಿ ಬಂಗಾರಮ್ಮ ತಮ್ಮ ಮೂವರು ಅಳಿಯಂದಿರಲ್ಲಿ ಯಾರು ತಮ್ಮನ್ನು ಹೆಚ್ಚು ಆದರಿಸಿ, ಗೌರವಿಸುತ್ತಾರೆ ಎಂದು ತಿಳಿಯಲು ಬಯಸಿದರು. ಇದಕ್ಕಾಗಿ ಆಕೆ ಹಿರಿಯ ಅಳಿಯ ರಾಜೇಶನ ಎದುರು ಬೇಕು ಬೇಕೆಂದೇ ಕಾಲು ಜಾರಿ ನದಿಗೆ ಬಿದ್ದುಬಿಟ್ಟರು. ಇದನ್ನು ನೋಡಿ ರಾಜೇಶ್ ಹಿಂದೂ ಮುಂದೂ ಸ್ವಲ್ಪ ಯೋಚಿಸದೆ, ತಾನೂ ನದಿಗೆ ಬಿದ್ದು ಅತ್ತೆಮ್ಮನನ್ನು ಕಾಪಾಡಿದ. ಮಾರನೇ ದಿನ ರಾಜೇಶ್ ಮನೆ ಮುಂದೆ ಒಂದು ಹೊಸ ಹೋಂಡಾಸಿಟಿ ಕಾರು ನಿಂತಿತ್ತು. ಅದರ ಕನ್ನಡಿಯಲ್ಲಿ ಹೀಗೊಂದು ಸ್ಟಿಕರ್ ಸಿಗಿಸಲಾಗಿತ್ತು. `ಥ್ಯಾಂಕ್ಸ್…. ಇದು ನಿನ್ನ ಅತ್ತೆಯ ಜೀವ ಉಳಿಸಿದ್ದಕ್ಕೆ ಪ್ರೀತಿಯ ಉಡುಗೊರೆ.’
ಬಂಗಾರಮ್ಮ ಈ ಸಲ ತಮ್ಮ 2ನೇ ಅಳಿಯ ಸುರೇಶನೆದುರು ಸಹ ಇದೇ ಡ್ರಾಮಾ ನಡೆಸಿದರು. ಸುರೇಶನೂ ಅತ್ತೆಮ್ಮನನ್ನು ರಾಜೇಶನಂತೆಯೇ ಬದುಕಿಸಿಕೊಂಡ. ಮಾರನೇ ದಿನ ಅವನ ಮನೆಯ ಮುಂದೆ ಒಂದು ಹೊಸ ಟೊಯೋಟಾ ಕಾರು ನಿಂತಿತ್ತು. ಅದರ ಕನ್ನಡಿಗೆ ಸಿಗಿಸಿದ ಸ್ಟಿಕರ್ ನಲ್ಲಿ, `ಥ್ಯಾಂಕ್ಸ್… ನಿನ್ನ ಅತ್ತೆಯಿಂದ ಪ್ರೀತಿಯ ಆಶೀರ್ವಾದಗಳೊಂದಿಗೆ,’ ಎಂದಿತ್ತು.
ಈಗ 3ನೇ ಅಳಿಯ ಮಹೇಶನನ್ನು ಪರೀಕ್ಷಿಸಿಯೇ ಬಿಡೋಣ ಎಂದು ಅವರು ನಿರ್ಧರಿಸಿದರು. ಆದರೆ ನದಿಯ ಆಳಕ್ಕೆ ಬಿದ್ದ ಅತ್ತೆ ಮುಳುಗಿಹೋಗುತ್ತಿದ್ದರೂ, ಮಹೇಶ ಏನೂ ಮಾಡದೆ, ರೀಲ್ಸ್ ನೋಡುತ್ತಾ ನಿಂತಿದ್ದ, ರಕ್ಷಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. `ಆಹಾ…. ಈ ದಿನಕ್ಕಾಗಿ ಎಷ್ಟು ಕಾದಿದ್ದೆ…. ಅಂತೂ ನನ್ನ ಆಸೆ ಈಡೇರಿತು,’ ಎಂದು ಕೈ ಕೊಡವುತ್ತಾ ಅವನು ಹೋಗಿ ಮನೆಗೆ ಸೇರಿಕೊಂಡ. ಪಾಪ, ಬಡ್ಡಿ ಬಂಗಾರಮ್ಮ ಅಂತಿಮ ಯಾತ್ರೆಗೆ ಹೊರಟೇಬಿಟ್ಟರು.
ಮಾರನೇ ದಿನ ಮಹೇಶ್ ಜಾಗಿಂಗ್ ಹೋಗೋಣವೆಂದು ಮನೆ ಬಾಗಿಲು ತೆರೆದು ನೋಡುತ್ತಾನೆ, ಅದ್ಭುತವಾದ ಒಂದು ಹೊಚ್ಚ ಹೊಸ ಮರ್ಸಿಡಿಸ್ ಕಾರು ಲಕಲಕ ಹೊಳೆಯುತ್ತಾ ಅವನ ಮನೆ ಮುಂದೆ ನಿಂತಿತ್ತು. ಅದರ ಕನ್ನಡಿಯಲ್ಲಿ ಸಿಗಿಸಿದ್ದ ಸ್ಟಿಕರ್ ನಲ್ಲಿ, `ಥ್ಯಾಂಕ್ಸ್…. ನಿನ್ನ ಮಾವನ ಪ್ರೀತಿಪೂರ್ವಕ ಆಶೀರ್ವಾದಗಳೊಂದಿಗೆ!’ ಎಂದು ಬರೆದಿರುವುದೇ….???
ಪತಿ : ಡಿಯರ್, ಇವತ್ತು ಎಂಥ ಟೀ ಮಾಡಿಕೊಡು ಅಂದ್ರೆ, ಅದನ್ನು ಕುಡಿದು ತನುಮನ ಉಲ್ಲಾಸವಾಗಿ ದೇಹ ಹಗುರ ಆಗಿಹೋಗಬೇಕು…. ಇಡೀ ದೇಹ ಬಳ್ಳಿಯಂತೆ ಬಳುಕುತ್ತಿರಬೇಕು. ಒಟ್ಟಾರೆ…
ಪತ್ನಿ : ಸಾಕು ಸಾಕು…. ನೀವು ತಂದಿರೋ ಈ ನೀರು ಹಾಲಿಗೆ ಅದು ಬೇರೆ ಕೇಡು! ಇದು ಈ ಲೋಕದ ಬಡಕಲು ಹಸುವಿನ ಹಾಲೇ ಹೊರತು ದೇವಲೋಕದ ಕಾಮಧೇನುವಿನ ಹಾಲಲ್ಲ….!
ಪ್ರಿಯಾ ಹೊಸದಾಗಿ ಪರ್ಸನಲ್ ಸೆಕ್ರೆಟರಿ ಕೆಲಸಕ್ಕೆ ಸೇರಿದ್ದಳು. ಹೇಗಾದರೂ ಬಾಸ್ ನ ಕೃಪಾಕಟಾಕ್ಷ ಗಿಟ್ಟಿಸಿ, ಸಂಬಳ ಹೆಚ್ಚಿಸಿಕೊಳ್ಳಲು ಬಯಸಿದ್ದಳು.
ಒಮ್ಮೆ ಆಕೆ ಯಾವುದೋ ಕಾರಣಕ್ಕೆ ಬಾಸ್ ಚೇಂಬರ್ ನಿಂದ ದುಮುಗುಡುತ್ತಾ ಹೊರಗೆ ಬಂದಳು. ಅದನ್ನು ಗಮನಿಸಿದ ಸಹೋದ್ಯೋಗಿ ಆಶಾ ವಿಚಾರಿಸಿದಳು.
ಆಶಾ : ಏನಾಯ್ತು? ಯಾಕೆ ಹಾಗೆ ಸಿಡುಕುತ್ತಿರುವೆ?
ಪ್ರಿಯಾ : ನಾನು ಬಾಸ್ ಚೇಂಬರ್ ಒಳಗೆ ಹೋದಾಗ ಅವರು ಪ್ರೀತಿಯಿಂದ ನನ್ನನ್ನು ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು.
ಆಶಾ : ಹ್ಞೂಂ…. ಆಮೇಲೆ….
ಪ್ರಿಯಾ : ನೀನು ಇವತ್ತು ಸಂಜೆ ಫ್ರೀ ಆಗಿದ್ದೀಯಾ? ಎಂದು ಬಹಳ ಪ್ರೀತಿಯಿಂದಲೇ ವಿಚಾರಿಸಿಕೊಂಡರು.
ಆಶಾ : ಹ್ಞೂಂ…. ಆಮೇಲೆ…
ಪ್ರಿಯಾ : ಆಮೇಲೇನು ಬಂತು ನನ್ನ ಕರ್ಮ…. ಹಾಗಾದರೆ ಇದನ್ನೆಲ್ಲ ಟೈಪ್ ಮಾಡಿ ಸಂಜೆ 7ರೊಳಗೆ ನನಗೆ ಇಮೇಲ್ ಮಾಡಿಬಿಡು ಅಂತ 25 ಪತ್ರ ಕೊಟ್ಟಿದ್ದಾರೆ…..!
ಮರಣಶಯ್ಯೆಯಲ್ಲಿದ್ದ ತನ್ನ ಪತ್ನಿಯನ್ನು ಪತಿರಾಯ ಕೇಳಿದ, “ನಿನ್ನ ಕೊನೆಯ ಆಸೆ ಏನಾದರೂ ಇದೆಯೇ? ಖಂಡಿತಾ ಅದನ್ನು ನೆರವೇರಿಸಲು ಪ್ರಯತ್ನಿಸುವೆ.”
ಅದಕ್ಕೆ ಆಕೆ ದೃಢವಾಗಿ, “ನಾನು ತೀರಿಕೊಂಡ ಮೇಲೆ ನನ್ನ ಒಂದು ಬ್ಯೂಟಿಫುಲ್ ಫೋಟೋವನ್ನು ಪೇಪರ್ ನಲ್ಲಿ ದೊಡ್ಡ ಸೈಜ್ ನಲ್ಲಿ ಹಾಕಿಸಿ. ಅಪ್ಪಿತಪ್ಪಿಯೂ ಅದರ ಕೆಳಗೆ ಜನನ ಮರಣಗಳ ವಿವರ ತಿಳಿಸಲೇಬೇಡಿ. ಮೋಸ್ಟ್ ಎಲಿಗೆಂಟ್, ಎಕ್ಸಲೆಂಟ್, ಸ್ಟೈಲಿಶ್, ಗ್ಲಾಮರಸ್ ಬ್ಯೂಟಿ….. ಅಂತಿರಲಿ!
ಮನೋಹರ್ : ನೀನು ನಿನ್ನ ಹೆಂಡತಿಗೆ ವಿಚ್ಛೇದನ ನೀಡಿದ ಮೇಲೆ ಈಗ ಬಹಳ ಕಷ್ಟ ಪಡ್ತಿದ್ದೀಯಾ ಅನ್ಸುತ್ತೆ ಅಲ್ಲವೇ….?
ಸುಧಾಕರ್ : ಛೇ…ಛೇ! ಖಂಡಿತಾ ಇಲ್ಲ. ಈಗ ನಾನು ಆರಾಮವಾಗಿ ಇದ್ದೀನಿ. ಮುಂಚೆ ಆದರೆ 2 ಮನೆ ಗುಡಿಸಿ, ಸಾರಿಸಿ ಇಬ್ಬಿಬ್ಬರಿಗೆ ಅಡುಗೆ ಮಾಡಿ, ಪಾತ್ರೆ ತೊಳೆದು, ಬಟ್ಟೆ ಒಗೆಯಬೇಕಿತ್ತು. ಈಗ ಸಿಂಗ್ ರೂಮಲ್ಲಿ ನಾನೇ ರಾಜ…..!





