ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಅಸ್ಸಾಂನ ಸಿಲ್ಚಾರ್‌ನಲ್ಲಿ ಅತ್ಯಂತ ಅಮಾನುಷ ಘಟನೆಯೊಂದು ವರದಿಯಾಗಿದೆ. 28 ವರ್ಷದ ಯುವತಿಯೊಬ್ಬಳ ಮೇಲೆ ಏಳಕ್ಕೂ ಹೆಚ್ಚು ಕಾಮುಕರು ಚಾಕು ತೋರಿಸಿ, ಆಕೆಯ ಪ್ರಿಯಕರನ ಎದುರೇ ಸಾಮೂಹಿಕ ಅತ್ಯಾಚಾರ  (Gang Rape) ಎಸಗಿದ್ದು, ಸಂತ್ರಸ್ತೆಯಿಂದ ಹಣ ಸುಲಿಗೆ ಮಾಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 19 ರಂದು ಈ ಭೀಕರ ಘಟನೆ ನಡೆದಿದೆ. ಯುವತಿ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಸಿಲ್ಚಾರ್ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಬೈಪಾಸ್ ರಸ್ತೆಯಲ್ಲಿದ್ದಳು. ಈ ವೇಳೆ ಏಕಾಏಕಿ ಮಹೀಂದ್ರಾ ಥಾರ್ ವಾಹನದಲ್ಲಿ ಬಂದ 7-8 ಜನರಿದ್ದ ಗುಂಪು ಅವರ ಕಾರನ್ನು ಅಡ್ಡಗಟ್ಟಿದೆ.

ದುಷ್ಕರ್ಮಿಗಳು ಮೊದಲು ಜೋಡಿಯ ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಿಯಕರನನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು, ಆತನ ಕಣ್ಣೆದುರೇ ಯುವತಿಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಹಣ ಸುಲಿಗೆ: ಕಾಮುಕರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಯುವತಿಯ ಬ್ಯಾಂಕ್ ಖಾತೆಯಿಂದ ಬಲವಂತವಾಗಿ 10,000 ರೂ.ಗಳನ್ನು ತಮ್ಮ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಸಂತ್ರಸ್ತೆ ಎಫ್‌ಐಆರ್‌ನಲ್ಲಿ (FIR) ಉಲ್ಲೇಖಿಸಿದ್ದಾರೆ.

ಇಬ್ಬರ ಬಂಧನ: ಈ ಬಗ್ಗೆ ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಭಾನುವಾರದ ವೇಳೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿಲ್ಚಾರ್‌ನ ಆಶ್ರಮ್ ರಸ್ತೆ ನಿವಾಸಿಗಳಾದ ನಿಲೋತ್ಪಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಎಂದು ಗುರುತಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಧೀಶರ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತನ ಮೇಲೂ ಹಲ್ಲೆ! : ಈ ಅಮಾನುಷ ಘಟನೆ ಖಂಡಿಸಿ ಸ್ಥಳೀಯರು ಹಾಗೂ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಈ ಭೀಕರ ಪ್ರಕರಣದ ಬಗ್ಗೆ ವರದಿ ಮಾಡಿದ ಸಿಲ್ಚಾರ್ ಮೂಲದ ಪತ್ರಕರ್ತ ಸುರಜಿತ್ ಚಕ್ರವರ್ತಿ ಎಂಬುವವರ ಮೇಲೆ ಆರೋಪಿಯೊಬ್ಬನ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪೊಲೀಸ್ ಠಾಣೆ ಬಳಿ ಅರಬಿಂದ ದಾಸ್ ಎಂಬ ಸ್ಥಳೀಯ ಉದ್ಯಮಿ ತನ್ನನ್ನು ತಡೆದು ಹಲ್ಲೆ ಮಾಡಿದ್ದಾನೆ ಎಂದು ಪತ್ರಕರ್ತ ಸುರಜಿತ್ ಆರೋಪಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ