ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮದಗಳೊಂದಿಗೆ ಮಾತನಾಡಿದ ಸಿಎಂ, ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ವಾಪಸ್ಸು ಕರೆತರಲಾಗುವುದು. ಅನಿರೀಕ್ಷಿತವಾಗಿ ಆರಂಭವಾಗಿರುವ ಯುದ್ಧದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನೇಕ ಕನ್ನಡಿಗರೂ ಸಿಲುಕಿದ್ದಾರೆ. ದುಬೈನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ. ಅಲ್ಲಿರುವ ಕನ್ನಡಿಗರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಲಾಗಿದ್ದು, ಆತಂಕಕ್ಕೆ ಒಳಗಾಗುವ ಅಗತಯ್ವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಪ್ರಯತ್ನ ನಿರಂತರವಾಗಿದೆ ಎಂದು ಹೇಳಿದರು.

ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ, ಅದು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.

ಅಮೆರಿಕಾ ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯದ್ದು, ಒಂದೆಡೆ ಶಾಂತಿ ಮಂತ್ರ ಪಠಿಸುವ ಆ ದೇಶ ಮತ್ತೊಂದೆಡೆ ಯುದ್ಧ ಮಾಡುತ್ತದೆ. ಅದು ತದ್ವಿರುದ್ಧ ನಿಲುವು ಹೊಂದಿದೆ, ಇದನ್ನು ಖಂಡಿಸುತ್ತೇನೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಇರಾನ್ ಅಧ್ಯಕ್ಷ ಆಯಾತೊಲ್ಲಾ ಖಮೇನಿ ಹತ್ಯೆಯಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸಿಎಂ ಪ್ರಾರ್ಥಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ