ಟೆಕ್ಸಾಸ್‌ ನ ಆಸ್ಟಿನ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿಯಾಗಿದ್ದಾರೆ. ಈ ಶೂಟೌಟ್‌ ಭಾನುವಾರ (ಮಾ.1) ನಡೆದಿದ್ದು, ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾಅಲಿ ಖಮೇನಿ ಹತ್ಯೆಯ ಹಿನ್ನಲೆಯಲ್ಲಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಆಸ್ಟಿನ್‌ ನ ಬುಫೋರ್ಡ್‌ನ ಬ್ಯಾಕ್‌ಯಾರ್ಡ್ ಬಿಯರ್ ಗಾರ್ಡನ್ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವ ಭಾರತೀಯ ಮೂಲದ ವಿದ್ಯಾರ್ಥಿ ಸವಿತಾ ಶಾನ್‌  (21) ಎಂದು ಗುರುತಿಸಿದ್ದು, ಈಕೆ ಟೆಕ್ಸಾಸ್‌ನ ಯುಟಿ ಆಸ್ಟಿನ್ ಮೆಕ್‌ಕಾಂಬ್ಸ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿಶ್ವವಿದ್ಯಾಲಯದಲ್ಲಿ ಹಾನರ್ಸ್‌ ಪದವಿ ವ್ಯಾಸಂಗ ಮಾಡುತ್ತಿದ್ದರು.

ಈ ಕುರಿತು ದೃಢಪಡಿಸಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ರಸ್ ಫಿನ್ನಿ, ವಿಶ್ವವಿದ್ಯಾಲಯದಲ್ಲಿದ್ದ ಅತ್ಯಂತ ಉತ್ತಮ ವಿದ್ಯಾರ್ಥಿಗಳಲ್ಲಿ ಈಕೆಯೂ ಒಬ್ಬರು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

“ಸವಿತಾ ಯುಟಿ ಆಸ್ಟಿನ್ ಮೆಕ್‌ಕಾಂಬ್ಸ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ನಮ್ಮ ಸೂಪರ್‌ಸ್ಟಾರ್ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಡಬಲ್‌ ಮೇಜರ್‌ ಪಡೆಯುವ ಮೂಲಕ ಹಾನರ್ಸ್‌ ಪದವೀಧರ ವಿದ್ಯಾರ್ಥಿಯಾಗಿದ್ದು,  ಮೇನಲ್ಲಿ ಪದವಿ ಪಡೆಯುವುದಕ್ಕಿದ್ದರು. ಇದಾದ ಬಳಿಕ ಅವರು ದೊಡ್ಡ ವೃತ್ತಿಪರ ಸೇವಾ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಲು ಸಿದ್ಧರಾಗಿದ್ದರು. ಆದರೆ, ಆಕೆಯನ್ನು ಕಳೆದುಕೊಂಡಿರುವುದು ಅತೀವ ದುಃಖವನ್ನುಂಟು ಮಾಡಿದೆ” ಎಂದು ತಿಳಿಸಿದ್ದಾರೆ.

ಬಿಳಿ ಟಿಶರ್ಟ್ ಧರಿಸಿದ್ದ: ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಘಟನೆಯ ತನಿಖೆಗಿಳಿದಿರುವ ಟೆಕ್ಸಾಸ್‌ ಪೊಲೀಸರು ಹಾಗೂ ಕಾನೂನು ಜಾರಿ ಅಧಿಕಾರಿಗಳು ಶಂಕಿತನ ಪತ್ತೆ ಹಚ್ಚಿದ್ದಾರೆ. ಶಂಕಿತ ಬಂದೂಕುಧಾರಿ 53 ವರ್ಷದ ನ್ಡಿಯಾಗಾ ಡಯಾಗ್ನೆ ಎನ್ನಲಾಗಿದೆ. ಈತ ಸೆನೆಗಲ್‌ ದೇಶದಿಂದ ವಲಸೆ ಬಂದಿದ್ದಾನೆ. ಅಲ್ಲದೆ, ದಾಳಿಯ ಸಮಯದಲ್ಲಿ ಆತ ಇರಾನ್ ಧ್ವಜ ಮತ್ತು ʼಅಲ್ಲಾಹನ ಆಸ್ತಿʼ ಎಂದು ಬರೆದಿರುವ ಬಿಳಿ ಟಿ-ಶರ್ಟ್ ಧರಿಸಿದ್ದ ಎಂದು ಗುರುತಿಸಲಾಗಿದೆ.

ದಾಳಿಯ ಸಮಯ ಹಾಗೂ ಆತ ಧರಿಸಿದ್ದ ಟಿ-ಶರ್ಟ್‌ ಸದ್ಯ ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಬಂದೂಕುಧಾರಿಗೆ ಭಯೋತ್ಪಾದಕ ಸಂಘಟನೆಗಳ ನಂಟಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು FBI ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ