– ರಾಘವೇಂದ್ರ ಅಡಿಗ ಎಚ್ಚೆನ್.
ನಮ್ಮ ದೈನಂದಿನ ಜೀವನದಲ್ಲಿ ದೃಷ್ಟಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾವು ಸುತ್ತಮುತ್ತಲಿನ ಪರಿಸರವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಜಗತ್ತಿನೊಂದಿಗೆ ಹೇಗೆ ಸಂವಹನ ನಡೆಸುತ್ತೇವೆ ಎಂಬುದರಲ್ಲಿ ದೃಷ್ಟಿಯು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವು ಮಕ್ಕಳಿಗೆ ಈ ಅನುಭವ ವಿಭಿನ್ನವಾಗಿರುತ್ತದೆ.
ಕೋರ್ಟಿಕಲ್ ವಿಜುವಲ್ ಇಂಪೇರ್ಮೆಂಟ್ (CVI), ಆಟಿಸಮ್, ಅಟೆನ್ಶನ್ ಡೆಫಿಸಿಟ್/ಹೈಪರ್‌ಆಕ್ಟಿವಿಟಿ ಡಿಸಾರ್ಡರ್ (ADHD) ಹಾಗೂ ಮೇದುಳಿನ ಗಾಯಗಳು ಮುಂತಾದ ನ್ಯೂರೋಲಾಜಿಕಲ್ ಸಮಸ್ಯೆಗಳಿರುವ ಮಕ್ಕಳಲ್ಲಿ ದೃಷ್ಟಿ ಪ್ರಕ್ರಿಯೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವು ಮಕ್ಕಳ ಬೆಳವಣಿಗೆ, ಕಲಿಕೆ ಮತ್ತು ಸ್ವಾವಲಂಬಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸಮಸ್ಯೆಗಳಲ್ಲಿ ಕೋರ್ಟಿಕಲ್ ವಿಜುವಲ್ ಇಂಪೇರ್ಮೆಂಟ್ (CVI) ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶಾಶ್ವತ ದೃಷ್ಟಿ ದೋಷಗಳ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.

ತಮ್ಮ ಸ್ಥಾಪನೆಯ ಒಂದು ವರ್ಷವನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ ನಾರಾಯಣ ನೇತ್ರಾಲಯ, ವೈಟ್‌ಫೀಲ್ಡ್, ದೃಷ್ಟಿ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಸಮರ್ಪಿತ CVI ಕ್ಲಿನಿಕ್ ಹಾಗೂ ವೈಯಕ್ತಿಕವಾಗಿ ತಯಾರಿಸಲಾದ ಕೃತಕ ಕಣ್ಣುಗಳ ನಿರ್ಮಾಣಕ್ಕಾಗಿ ಓಕ್ಯುಲರಿಸ್ಟ್ರಿ ಲ್ಯಾಬ್ ಅನ್ನು ಪ್ರಾರಂಭಿಸುವ ಮೂಲಕ ತನ್ನ ಸೇವೆಗಳನ್ನು ವಿಸ್ತರಿಸಿದೆ.
ನಾರಾಯಣ ನೇತ್ರಾಲಯದ ನಿರ್ದೇಶಕರಾದ ಡಾ. ನರೇನ್ ಶೆಟ್ಟಿ ಮತ್ತು ಅವರ ಪತ್ನಿ ಶ್ರೀಮತಿ ನಮ್ರತಾ ಶೆಟ್ಟಿ ಅವರು ಈ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ನರಸಂಬಂಧಿ ದೃಷ್ಟಿ ದೋಷಗಳ ನಿರ್ವಹಣೆಯಲ್ಲಿ ಸಮಗ್ರ ಪ್ರಯತ್ನದ ಅಗತ್ಯವನ್ನು ಮನಗಂಡು, ಸುತ್ತಮುತ್ತಲ ಪ್ರದೇಶಗಳ ಫಿಸಿಯೋಥೆರಪಿಸ್ಟ್‌ಗಳು, ಆಕ್ಯುಪೇಷನಲ್ ಥೆರಪಿಸ್ಟ್‌ಗಳು ಮತ್ತು ಸ್ಪೀಚ್ ಥೆರಪಿಸ್ಟ್‌ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ನೇತ್ರಾಲಯದ ನಿರ್ದೇಶಕರು ಡಾ. ನರೇನ್ ಶೆಟ್ಟಿ ಅವರು, “ನಮ್ಮ ಇತರ ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಇದುವರೆಗೆ 1.8 ಲಕ್ಷ ನರಸಂಬಂಧಿ ದೃಷ್ಟಿ ದೋಷವುಳ್ಳ ಮಕ್ಕಳಿಗೆ ಚಿಕಿತ್ಸೆ ನೀಡಿದ್ದೇವೆ. ನಮ್ಮ ಸಮಗ್ರ ಚಿಕಿತ್ಸಾ ಪದ್ಧತಿಯಿಂದಾಗಿ ಸುಮಾರು 20,000 ಮಕ್ಕಳು ವಿಶೇಷ ಶಾಲೆಗಳಿಂದ ಸಾಮಾನ್ಯ ಶಾಲೆಗಳಿಗೆ ಸೇರ್ಪಡೆಗೊಳ್ಳುವಂತಾಗಿದೆ. ಇದೇ ಅನುಭವದೊಂದಿಗೆ, ಈಗ ವೈಟ್‌ಫೀಲ್ಡ್ ಶಾಖೆಯಲ್ಲೂ ಈ ಕೇಂದ್ರವನ್ನು ಆರಂಭಿಸಿದ್ದೇವೆ. ಇದರಿಂದ ಹೆಚ್ಚಿನ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಮಕ್ಕಳು ಸ್ವತಂತ್ರ ಜೀವನ ನಡೆಸಲು ಸಹಕಾರಿಯಾಗಲಿದೆ,” ಎಂದು ತಿಳಿಸಿದರು.

ವೈಟ್‌ಫೀಲ್ಡ್ ನಾರಾಯಣ ನೇತ್ರಾಲಯದ ವೈದ್ಯಕೀಯ ಅಧೀಕ್ಷಕರಾದ ಡಾ. ಹರ್ಷ ನಾಗರಾಜ ಅವರು ಮಾತನಾಡಿ, “ಈ ಸಿ.ವಿ.ಐ (CVI) ಕ್ಲಿನಿಕ್‌ನಲ್ಲಿ ನರಸಂಬಂಧಿ ದೃಷ್ಟಿ ದೋಷವುಳ್ಳವರಿಗೆ ಸಮಗ್ರ ದೃಷ್ಟಿ ತಪಾಸಣೆ ಮತ್ತು ಅವರ ದೈನಂದಿನ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸಲು ಪೂರಕವಾದ ಪುನರ್ವಸತಿ ಕಾರ್ಯಕ್ರಮಗಳನ್ನು ನೀಡಲಾಗುವುದು. ಇಲ್ಲಿ ಭಾರತದ ಕೆಲವೇ ಕೇಂದ್ರಗಳಲ್ಲಿ ಲಭ್ಯವಿರುವ ‘ಸಿಂಟೋನಿಕ್ ಫೋಟೋಥೆರಪಿ’ಯಂತಹ ವಿಶೇಷ ಚಿಕಿತ್ಸೆಗಳ ಜೊತೆಗೆ, ಸೋಮಾರಿ ಕಣ್ಣು (Amblyopia) ಮತ್ತು ಓರೆಗಣ್ಣಿನ (Squint) ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗುವುದು,” ಎಂದರು.
ಓಕ್ಯುಲರಿಸ್ಟ್ರಿ ಲ್ಯಾಬ್ ನಲ್ಲಿ ಅಪಘಾತ, ರೋಗ ಅಥವಾ ಜನ್ಮಸಹಜ ಕಾರಣಗಳಿಂದ ಕಣ್ಣು ಕಳೆದುಕೊಂಡಿರುವವರಿಗೆ ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ ಕೃತಕ ಕಣ್ಣುಗಳು ತಯಾರಿಸಲಾಗುತ್ತದೆ. ಇವು ಮುಖದ ಸ್ವಾಭಾವಿಕ ರೂಪವನ್ನು ಪುನಃಸ್ಥಾಪಿಸುವುದರ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರ ದೈನಂದಿನ ಜೀವನಕ್ಕೆ ಮರಳಲು ಸಹ ನೆರವಾಗುತ್ತವೆ.
ವೈಟ್‌ಫೀಲ್ಡ್ ಶಾಖೆಯಲ್ಲಿ ಈ ಹೊಸ ಸೇವೆಗಳನ್ನು ಆರಂಭಿಸುವ ಮೂಲಕ, ನಾರಾಯಣ ನೇತ್ರಾಲಯವು ತನ್ನ ಸಮಗ್ರ ಕಣ್ಣಿನ ಆರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ. ನರಸಂಬಂಧಿ ದೃಷ್ಟಿ ದೋಷವುಳ್ಳ ರೋಗಿಗಳ ದೈನಂದಿನ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸುವುದು, ಪುನರ್ವಸತಿ ಕಲ್ಪಿಸುವುದು ಮತ್ತು ಆ ಮೂಲಕ ರೋಗಿಗಳು ಹಾಗೂ ಅವರ ಕುಟುಂಬದವರ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಈ ಕೇಂದ್ರವು ಮಹತ್ವದ ಹೆಜ್ಜೆಯನ್ನಿಟ್ಟಿದೆ.





