ಧರೆಯ ಕೃಷಿ ಶುದ್ಧವಾಗಿಲ್ಲದೆ, ಸಸಿ ಶುದ್ಧವಿಲ್ಲ ಎಂಬ ವಚನಕಾರ ಶಿವಲೆಂಕ ಮಂಚಣ್ಣ ಅವರ ಸಾಲುಗಳೊಂದಿಗೆ ಕೃಷಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆ’ ಎಂಬ ಆಶಯದೊಂದಿಗೆ ಕೃಷಿ ಕ್ಷೇತ್ರಕ್ಕೆ ಹಲವು ಮಹತ್ವದ ಯೋಜನೆಗಳನ್ನು2026-27ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಬೀಜದಿಂದ ಮಾರುಕಟ್ಟೆಯವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ಉದ್ದೇಶದಿಂದ ಈ ಬಾರಿಯ ಬಜೆಟ್‌ನಲ್ಲಿ ತಂತ್ರಜ್ಞಾನ, ಮಾರುಕಟ್ಟೆ ವಿಸ್ತರಣೆ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ:
ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಿ ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡಲು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಜಾರಿಗೆ ತರಲಾಗುವುದು.
ಕೃಷಿಕರಿಗೆ ಕೀಟಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳ ಕಾಲ ‘ಸಸ್ಯ ಸಂಜೀವಿನಿ’ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇದರ ಜೊತೆಗೆ, ಪಶುವೈದ್ಯಕೀಯ ಕಾಲೇಜುಗಳಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಅವುಗಳನ್ನು ಬೆಳಗಾವಿ ಮತ್ತು ಬೆಂಗಳೂರಿನ ಪಶುವೈದ್ಯಕೀಯ ಕಾಲೇಜುಗಳಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಎಐ (AI) ಆಧಾರಿತ ‘ರೈತ ಕರೆ ಕೇಂದ್ರ’: ರೈತರಿಗೆ ಹವಾಮಾನ, ಮಾರುಕಟ್ಟೆ ದರ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ಒಂದೇ ಸೂರಿನಡಿ ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ‘ರೈತ ಕರೆ ಕೇಂದ್ರ’ವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುವುದು.
‘ವಸುಧಾಮೃತ’ ಕಾರ್ಯಕ್ರಮ: ಮಣ್ಣಿನಲ್ಲಿ ಸಾವಯವ ಇಂಗಾಲ ಮತ್ತು ಭೌತಿಕ, ರಾಸಾಯನಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಪರಿಸರ ಸ್ನೇಹಿ ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸಲು ಮುಂದಿನ 3 ವರ್ಷಗಳಲ್ಲಿ ‘ವಸುಧಾಮೃತ’ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು.
ಎಂಎಸ್ಐಎಲ್ (MSIL) ‘ರೈತ ಮಾಲ್: ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು, ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ MSIL ವತಿಯಿಂದ ‘ರೈತ ಮಾಲ್’ಗಳನ್ನು ಸ್ಥಾಪಿಸಲಾಗುವುದು.
ಖೋಟಾ ಬೀಜ, ಕೀಟನಾಶಕ ಜಾಲಕ್ಕೆ ಬ್ರೇಕ್: ರೈತರಿಗೆ ಕಳಪೆ ಹಾಗೂ ದೋಷಪೂರಿತ ಬೀಜ, ಕೀಟನಾಶಕ ಪೂರೈಕೆ ಮಾಡುವುದು ಹಾಗೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲು ‘ರಾಜ್ಯ ಮಟ್ಟದ ಸಲಹಾ ಸಮಿತಿ’ ರಚನೆ.
‘ಮಿಲೆಟ್ ಹಬ್’ ಸ್ಥಾಪನೆ: ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ‘ಮಿಲೆಟ್ ಹಬ್’ ಅನ್ನು ಸ್ವಾವಲಂಬಿ ಸಂಸ್ಥೆಯನ್ನಾಗಿ ಮಾಡಲಾಗುವುದು. ಇದು ರೈತರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ ಮತ್ತು ಗುಣಮಟ್ಟದ ಪ್ರಮಾಣೀಕರಣ ಒದಗಿಸಲಿದೆ.
ಪಾಂಡವಪುರ ‘ ಸಾವಯವ ತಾಲೂಕು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕನ್ನು ‘ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ’ (Fully Organic Taluk) ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
ಅಥಣಿಯಲ್ಲಿ ಕೃಷಿ ಕಾಲೇಜು: ತಜ್ಞರ ವರದಿಯ ಶಿಫಾರಸಿನಂತೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಒದಗಿಸಲಾಗುವುದು.
ಕೃಷಿ ಚಟುವಟಿಕೆಯಲ್ಲಿ ಶ್ರಮ ಮತ್ತು ಸಮಯ ಉಳಿಸಲು ‘ಹೈಟೆಕ್ ಹಾರ್ವೆಸ್ಟರ್ ಹಬ್’ ಯೋಜನೆಯಡಿ ಅತ್ಯಾಧುನಿಕ ನಾಟಿ ಮತ್ತು ಕೊಯ್ಲು ಯಂತ್ರಗಳ ಸೇರ್ಪಡೆ.
ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಕೃಷಿ ತರಬೇತಿ ಕೇಂದ್ರವನ್ನು ‘ರಾಜ್ಯಮಟ್ಟದ ಕೃಷಿ ಉದ್ದಿಮೆ ತರಬೇತಿ ಕೇಂದ್ರ’ವನ್ನಾಗಿ ಉನ್ನತೀಕರಣ.
ಹವಾಮಾನ ಬದಲಾವಣೆ ತಡೆಗಟ್ಟಲು ಭತ್ತದ ಕೃಷಿಯಲ್ಲಿ ನೀರಿನ ದಕ್ಷತೆ ಹೆಚ್ಚಿಸುವ ಪರ್ಯಾಯ ತೇವ-ಒಣಗಿಸುವ (Alternate Wetting & Drying) ವಿಧಾನಕ್ಕೆ ಉತ್ತೇಜನ.
ನೂತನ ದ್ವಿದಳ ಧಾನ್ಯ (ಬೇಳೆಕಾಳು) ತಳಿಗಳ ಬಿತ್ತನೆ ಬೀಜ ಬಳಕೆಗೆ ರೈತರಿಗೆ ನೀಡುತ್ತಿರುವ ಸಹಾಯಧನ ಹೆಚ್ಚಳ.
ಕೃಷಿ ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆದು ನಿಖರ ಪರೀಕ್ಷಾ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ.





