– ರಾಘವೇಂದ್ರ ಅಡಿಗ ಎಚ್ಚೆನ್.
‘ಲವ್ ಮಾಕ್ಟೇಲ್’ ಸಿನಿಮಾದ ಒಂದು ಡೈಲಾಗ್‌ಗೆ ಸಂಬಂಧಿಸಿದಂತೆ ನಟಿ ಗೀತಾ ಭಾರತಿ ಭಟ್ ಮಾಡಿದ್ದ ಬಾಡಿಶೇಮಿಂಗ್ ಆರೋಪ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. “ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ” ಎಂಬ ಡೈಲಾಗ್ ಸಿನಿಮಾದಲ್ಲಿ ಬಳಕೆಯಾಗಿದ್ದು, ಈ ದೃಶ್ಯವನ್ನು ತಾವು ಚಿತ್ರಿಸುವಾಗ ಅದರ ಅರ್ಥ ತಿಳಿದಿರಲಿಲ್ಲ ಎಂದು ಗೀತಾ ಭಾರತಿ ಭಟ್ ಹೇಳಿದ್ದರು. ಥಿಯೇಟರ್‌ನಲ್ಲಿ ಸಿನಿಮಾ ನೋಡಿದಾಗ ತಮಗೆ ಶಾಕ್ ಆಗಿತ್ತು ಎಂದು ಅವರು ಆರೋಪಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಗೀತಾ ಆರೋಪವನ್ನು ತಳ್ಳಿ ಹಾಕಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃಷ್ಣ, “ಅದು ಬಾಡಿಶೇಮಿಂಗ್ ಮಾಡುವ ಉದ್ದೇಶದಿಂದ ಬರೆಯಲಾದ ಡೈಲಾಗ್ ಅಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ,” ಎಂದು ಸ್ಪಷ್ಟಪಡಿಸಿದ್ದಾರೆ.
ನಿರ್ಮಾಪಕಿ ಮಿಲನಾ ನಾಗರಾಜ್ ಮಾತನಾಡಿ, “ಅವರಿಗೆ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಕಲಾವಿದರಿಗೆ ತಿಳಿಸದೇ ನಾವು ಯಾವುದೇ ದೃಶ್ಯ ಮಾಡೋದಿಲ್ಲ. ಆ ಬಳಿಕ ಅವರಿಗೆ ಹಾಗೆ ಅನಿಸಿರಬಹುದು. ಆದರೆ ಅಷ್ಟಿದ್ರೆ ಆ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು. ಯಾವುದನ್ನೂ ಮುಚ್ಚಿಟ್ಟು ಮಾಡಿಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಲಾಗಿದೆ,” ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದಲ್ಲದೆ, ಗೀತಾ ಭಾರತಿ ಭಟ್ ಅವರು ಹಿಂದೆ ಧಾರಾವಾಹಿಯಲ್ಲಿ ಕೂಡ ಇದೇ ರೀತಿಯ ಕಥೆ ಹೊಂದಿದ ಪಾತ್ರದಲ್ಲಿ ಮೂರು ವರ್ಷಗಳ ಕಾಲ ನಟಿಸಿದ್ದರು ಎಂದು ಕೃಷ್ಣ ಹೇಳಿದ್ದಾರೆ. “ನಮ್ಮ ಸಿನಿಮಾದ ಒಂದು ದೃಶ್ಯಕ್ಕೆ ಮಾತ್ರ ತಕರಾರು ತೆಗೆದುಕೊಳ್ಳುವುದು ಸರಿಯಲ್ಲ. ಮೇಕಿಂಗ್ ವಿಡಿಯೋ ಯೂಟ್ಯೂಬ್‌ನಲ್ಲೇ ಇದೆ. ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.





