ರಾಘವೇಂದ್ರ ಅಡಿಗ ಎಚ್ಚೆನ್.

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ದಿವ್ಯ ಸ್ಪಂದನಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಇಂದು ನಡೆದ ವಿಚಾರಣೆಯಲ್ಲಿ ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ.

ನ್ಯಾಯಮೂರ್ತಿ ಈ. ರಾಜೀವ ಗೌಡ ಅವರ ಮುಂದೆ ನಡೆದ ವಿಚಾರಣೆಯಲ್ಲಿ ರಮ್ಯಾ ತಮ್ಮ ವೃತ್ತಿ ಜೀವನ ಮತ್ತು ರಾಜಕೀಯ ಬದುಕಿನ ಕುರಿತು ವಿವರಿಸಿದರು. ಜೊತೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮತ್ತು ಆರೋಪಿಗಳು ಕಳುಹಿಸಿದ್ದ ಅಸಭ್ಯ ಸಂದೇಶಗಳ ಕುರಿತು ಮಾಹಿತಿ ನೀಡಿದರು.

ನಟ ದರ್ಶನ್ ಸಂಬಂಧಿತ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ನಂತರ ಕೆಲವರು ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಸೂಕ್ಷ್ಮವೆಂದು ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ (ಇನ್‌ಕ್ಯಾಮರಾ) ನಡೆಸಿತು. ಇನ್‌ಸ್ಟಾಗ್ರಾಂನಲ್ಲಿ ತಮ್ಮನ್ನು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ಕೆಲವರು ರಮ್ಯಾಗೆ ಅಸಭ್ಯ ಕಾಮೆಂಟ್ ಮತ್ತು ಸಂದೇಶಗಳನ್ನು ಕಳುಹಿಸಿದ್ದರೆಂದು ತಿಳಿದುಬಂದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜೊತೆಗೆ ಸುಮಾರು 50 ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಲಾಗಿದೆ. ಬಂಧನ ಭಯದಿಂದ 20ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಬಂಧಿತರು ಒಂದು ಲಕ್ಷ ರೂ. ಬಾಂಡ್ ಹಾಗೂ ಇತರೆ ಭದ್ರತೆಗಳನ್ನು ಒದಗಿಸಿ ಜಾಮೀನು ಪಡೆದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ