ಅಮೃತಧಾರೆ ಛಾಯಾಸಿಂಗ್
ಬಹುಭಾಷಾ ನಟಿ ಛಾಯಾಸಿಂಗ್ ತಮಿಳು, ಮಲೆಯಾಳಂ, ಬಂಗಾಳಿ, ಭೋಜಪುರಿ, ತೆಲುಗು, ಒರಿಯಾ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ ರಂಗದಿಂದ ನಟನೆ ಆರಂಭಿಸಿದ ಛಾಯಾಸಿಂಗ್, ಪಿ ಶೇಷಾದ್ರಿ ನಿರ್ದೇಶನದ `ಮುನ್ನುಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅವರ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ `ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು, ತುಂಟಾಟ, ಸಖಸಖಿ, ಆಕಾಶಗಂಗೆ, ರೌಡಿ ಅಳಿಯ....' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡ ಕಿರುತೆರೆಯ `ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ.

ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ
ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಕೊಡಗಿನವರಾದ ರೀಷ್ಮಾ ನಾಣಯ್ಯ, ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಹೊಂದಿದ್ದರು. ಶಿಕ್ಷಣದ ಬಳಿಕ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದರು. `ದಿ ಲಿವೆನ್ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಜೋಗಿ ಪ್ರೇಮ್ ನಿರ್ದೇಶನದ `ಏಕ್ ಲವ್ ಯಾ ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ನಂತರ ರಾಣಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ಹಳೇ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ನಂತರ `ಬಾನ ದಾರಿಯಲ್ಲಿ, ಯುಐ, ಕೆಡಿ ದಿ ಡೆವಿಲ್, ವಾಮನ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಕಲಕಲಾ ವಲ್ಲಭೆ ಯಶಾ ಶಿವಕುಮಾರ್
ಯಶಾ ಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯಶಾ ಶಿವಕುಮಾರ್, `ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭರತನಾಟ್ಯ, ಕಥಕ್, ಬಾಲಿವುಡ್, ಮಣಿಪುರಿ ಹಾಗೂ ಜಾನಪದ ಪ್ರಕಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. `ಪದವಿಪೂರ್ವ' ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಇವರು, ಶಿವರಾಜ್ ಕುಮಾರ್ ಅಭಿನಯದ ಬೈರಾಗಿ, ಪ್ರಜ್ವಲ್ ದೇವರಾಜ್ ಅಭಿನಯದ ಗಣ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾಗಳಲ್ಲೂ ನಟಿಸಿದ್ದಾರೆ.

`ಮಿಸ್ ಸುಪ್ರಾ ಇಂಟರ್ ನ್ಯಾಷನಲ್' ಆಶಾ ಭಟ್
ನಟಿ, ಮಾಡೆಲ್ ಹಾಗೂ ನಿರ್ದೇಶಕಿ ಆಶಾ ಭಟ್ ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರು. ಬಾಲಿವುಡ್ ನ ಜಂಗ್ಲಿ ಚಿತ್ರದಲ್ಲಿ ನಟಿಸಿದ್ದ ಆಶಾ ಭಟ್ ಕನ್ನಡದಲ್ಲಿ `ರಾಬರ್ಟ್' ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡರು. ಆಸ್ಟ್ರಾ ಫೌಂಡೇಶನ್ ಸ್ಥಾಪಿಸಿ ಅದರ ನಿರ್ದೇಶಕಿಯಾಗಿದ್ದಾರೆ. ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರೈಸಿದ ಅವರು ಓದುತ್ತಿದ್ದಾಗಲೇ ಫ್ಯಾಷನ್‌ಲೋಕಕ್ಕೆ ಎಂಟ್ರಿ ಕೊಟ್ಟರು. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ `ಮಿಸ್ ಸುಪ್ರಾ ಇಂಟರ್ ನ್ಯಾಷನಲ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಕಿರೀಟ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನಂತರ ಜಾಹೀರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು.

ಡ್ಯಾನ್ಸ್ ಗೂ ಸೈ, ಮಾಡೆಲಿಂಗ್ ಗೂ ಜೈ ಅದ್ವಿತಿ ಶೆಟ್ಟಿ





