ಸೇತುವೆ ಎಂದರೆ ಎರಡು ಭೂಪ್ರದೇಶಗಳು ಅಥವಾ ಸಂಬಂಧಗಳನ್ನು ಬೆಸೆಯುವ ಸುಂದರ ಸಾಧನ. ತ್ರೇತಾಯುಗದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟಿರುವ ವಿಷಯವನ್ನು ಹನುಮಂತ ಪ್ರತ್ಯಕ್ಷಿಸಿ ನೋಡೀ ತಿಳಿಸಿದ ಮೇಲೆ ಸೀತಾದೇವಿಯನ್ನು ಬಿಡಿಸಿಕೊಂಡು ಬರಲು ಕಪೀ ಸೇನೆಯೊಂದಿಗೆ ಹೊರಟ ರಾಮ ರಾಮೇಶ್ವರದ ಧನುಷ್ಕೋಟಿಯಿಂದ ಲಂಕೆಯ ಮಧ್ಯೆ ನಳ ನೀಲರ ಸಾರಥ್ಯದಲ್ಲಿ ಕಪಿಗಳ ನೆರವಿನಿಂದ ಸೇತುವೆಯನ್ನು ನಿರ್ಮಿಸಿ ಲಂಕೆಗೆ ಹೋಗಿ ರಾವಣನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆತಂದದ್ದನ್ನು ನಾವೆಲ್ಲರೂ ರಾಮಾಯಣದಲ್ಲಿ ನೋಡಿದ್ದೇವೆ. ಅದೇ ರೀತಿ ಕೂಗಳತೆಯ ದೂರದಲ್ಲೇ ಇರುವ ಎರಡು ಹಳ್ಳಿಗಳ ಮಧ್ಯೆ ನದಿ ಅಥವಾ ಹಳ್ಳ ಕೊಳ್ಳಗಳಿದ್ದಲ್ಲಿ ಅವುಗಳ ಮಧ್ಯೆ ಸಂಪರ್ಕ ಸಾಧಿಸಲು ಹತ್ತಾರು ಮೈಲಿಗಳ ದೂರವನ್ನು ಕ್ರಮಿಸಬೇಕಾಗುತ್ತದೆ ಇಲ್ಲವೇ ಸಣ್ಣ ಸಣ್ಣ ದೋಣಿಗಳ ಸಹಾಯದಿಂದ ತಲುಪಬೇಕಾಗುತ್ತದೆ. ಇನ್ನು ಮಳೆಗಾಲದಲ್ಲಿ ನೀರು ಉಕ್ಕಿ ಹರಿಯಲು ಆರಂಭಿಸಿದರಂತೂ ಆ ಎರಡೂ ಪ್ರದೇಶಗಳ ನಡುವೆ ಅಕ್ಷರಶಃ ಸಂಪರ್ಕವೇ ತಪ್ಪಿ ಹೋದಂತಾಗುತ್ತದೆ. ಅಂತಹ ಹಳ್ಳಿಗಳ ನಡುವೆ ಅತ್ಯಂತ ಕಡಿಮೆ ಖರ್ಚಿನಲ್ಲಿ, ಅತ್ಯಂತ ಕಡಿಮೆ ಸಮಯದಲ್ಲಿ, ಸಢೃಡವಾದ ತೂಗು ಸೇತುವೆಗಳನ್ನು ದೇಶಾದ್ಯಂತ ನಿರ್ಮಿಸಿ ತೂಗು ಸೇತುವೆಗಳ ಸರದಾರ ಎನಿಸಿಕೊಂಡಿರುವ ಶ್ರೀ ಗಿರೀಶ್ ಭಾರದ್ವಾಜ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.
ಮಂಗಳೂರು ಜಿಲ್ಲೆಗೆ ಸೇರಿದ ಸುಳ್ಯ ತಾಲ್ಲೂಕಿನ ಅರಂಬೂರು ಸಮೀಪದ ಇಡ್ಯಡ್ಕ ಭಾರದ್ವಾಜಾಶ್ರಮದ ನಿವಾಸಿಯಾಗಿರುವ ಬಲೆಕ್ಕಳ ಗಿರೀಶ್ ಭಾರದ್ವಾಜ್ 1975ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಯಾವುದಾದರೂ ಕಛೇರಿಗೆ ಸೇರಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಆದರೆ ತಮ್ಮ ತಂದೆಯ ಆಸೆಯಂತೆ ಅವರು ಯಾವುದೇ ಕೆಲಸಕ್ಕೆ ಸೇರದೇ ಸುಳ್ಯದಲ್ಲಿ ಆಯಶ್ಶಿಲ್ಪ ಎಂಬ ಎಂಜಿನಿಯರಿಂಗ್ ವರ್ಕ್ ಶಾಪ್ ಆರಂಭಿಸಿ ಜೀವನ ಸಾಗಿಸುತ್ತಿದ್ದರು.
ಅವರ ಊರಾದ ಅರಂಬೂರು ಮತ್ತು ತಮ್ಮ ವರ್ಕಶಾಪ್ ಮಧ್ಯೆ ಹರಿಯುತ್ತಿದ್ದ ಪಯಸ್ವಿನಿ ನದಿಯನ್ನು ದಾಟಿಕೊಂಡು ಹೋಗುವುದು ಅವರಿಗೆ ಪ್ರತಿ ದಿನವೂ ಅಭ್ಯಾಸವಾಗಿತ್ತು. ಪಯಸ್ವಿನಿ ನದಿಗೆ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವ ಪ್ರಗತಿಯನ್ನೂ ಕಾಣದಿದ್ದಾಗ, 1989ರಲ್ಲಿ ಸ್ಥಳೀಯರೆಲ್ಲರೂ ಸೇರಿ ಅರಂಬೂರು ಗ್ರಾಮದ ಜನರು ಸುಳ್ಯದೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವಂತಹ ಸೇತುವೆಯೊಂದನ್ನು ಕಟ್ಟಿಕೊಡಲು ಸಾಧ್ಯವೇ ಎಂದು ಗಿರೀಶ್ ಅವರನ್ನು ಕೇಳಿಕೊಂಡರು. ಸ್ಥಳೀಯರ ಈ ನಿವೇದನೆ ಆರಂಭದಲ್ಲಿ ಗಿರೀಶರಿಗೆ ಸ್ವಲ್ಪ ಮುಜುಗರವೆನೆಸಿದರೂ, ಇದಕ್ಕೇ ಏನಾದರೂ ಪರಿಹಾರವನ್ನು ಕಂಡು ಹಿಡಯಲೇ ಬೇಕೆಂದು ಧೃಢ ಸಂಕಲ್ಪ ಮಾಡಿ ಅದರ ಬಗ್ಗೆ ಅನೇಕ ವಿಚಾರಗಳನ್ನು ಮಾಡುತ್ತಿದ್ದಾಗಲೇ ಅವರ ಮನಸ್ಸಿನಲ್ಲಿ ಮೂಡಿದ ಕಲ್ಪನೆಯೇ ತೂಗು ಉಯ್ಯಾಲೆ. ಕಬ್ಬಿಣ ಮತ್ತು ಮರಗಳ ಸಹಾಯದಿಂದ ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಸಧೃಢವಾದ ಸೇತುವೆಯನ್ನೇಕೆ ಕಟ್ಟಬಾರದು ಎಂದು ಯೋಚಿಸಿ ತಮ್ಮ ಇಂಜೀನಿಯರಿಂಗ್ ಅನುಭವವನ್ನು ಉಪಯೋಗಿಸಿ ಅದರ ರೂಪು ರೇಷೆಗಳನ್ನು ತಯಾರಿಸಿಯೇ ಬಿಟ್ಟರು. ಆ ದಿನಗಳಲ್ಲಿ ತೂಗು ಸೇತುವೆಯ ಕಲ್ಪನೆಯೇ ಹೊಸತು.

ರಾಮೇಶ್ವರದಲ್ಲಿ ರಾಮ ತನ್ನ ಸೇನೆಯೊಂದಿಗೆ ರಾಮ ಸೇತು ಕಟ್ಟಿದಂತೆಯೇ, ತಮ್ಮೂರಿನ 40ಕ್ಕೂ ಅಧಿಕ ಸ್ವಯಂ ಪ್ರೇರಿತ ಯುವಕರ ತಂಡವೊಂದನ್ನು ಕಟ್ಟಿಕೊಂಡು ತೂಗು ಸೇತುವೆಯ ಕೆಲಸವನ್ನು ಆರಂಭಿಸಿ ನೋಡ ನೋಡುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ಬಲಾಢ್ಯ ಸೇತುವೆಯನ್ನೇ ಕಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳುಡುವಂತೆ ಮಾಡಿಯೇ ಬಿಟ್ಟರು. ಈ ಮೂಲಕ ಎಂತಹ ಸಮಯದಲ್ಲಿಯಾದರೂ, ಎಂತಹ ಪರಿಸ್ಥಿತಿಯಲ್ಲಿಯಾದರೂ ತಮ್ಮೂರಿನ ಜನ ಸುಳ್ಯದೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವಂತೆ ಮಾಡಿ ಎಲ್ಲರ ಮೆಚ್ಚಿಗೆಗೆ ಪಾತ್ರರಾದರು. ಅಂದಿನ ದಿನಗಳಲ್ಲಿ ಈ ಸೇತುವೆ ಸುತ್ತ ಮುತ್ತಲಿನ ಊರಿನವರಿಗೆ ಪ್ರಮುಖ ಪ್ರವಾಸೀ ತಾಣವಾಗಿತ್ತು ಎನ್ನುವುದು ನಂಬಲೇ ಬೇಕಾದ ಸತ್ಯ.





