ಪೃಥ್ವಿಪತಿಯಾದ ರಾಜ ಯಯಾತಿಯ ಮಗಳಾದ ನಾನು ಮಾಧವಿ…! ಹೆಸರಿಗೆ ತಕ್ಕಂತೆ ಹೂವಿನ ಮಧುರ ಕಂಪನೆಲ್ಲ ಮೈಗೂಡಿಸಿಕೊಂಡು ಸೌಂದರ್ಯದ ಖನಿಯಾಗಿ ವಿವಾಹದ ವಯಸ್ಸಿಗೆ ಬಂದಿರುವ ವಿಷಯ ದೇಶದೆಲ್ಲೆಡೇ ಪಸರಿಸಿತ್ತು.

ಉದ್ಯಾನವನದಲ್ಲಿ ಕುಳಿತು ಸುಂದರ ಕನಸಿನ ಲೋಕದಲ್ಲಿ ತೇಲುತ್ತಾ ತಿಳಿಗೊಳದ ನೀರನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದ ನನಗೆ ನನ್ನದೇ ಪ್ರತಿಬಿಂಬವನ್ನು ಕಂಡು ಆಹಾ!!! ಎಂತಹ ಅಪರೂಪದ ಸೌಂದರ್ಯ ರಾಶಿ ನನ್ನದು ಇಂತಹ ಸುಗುಣೆಯ ಕೈ ಹಿಡಿವ ಕನಸಿನ ರಾಜಕುಮಾರ ಯಾರಿರಬಹುದು…!? ಎನ್ನುವ ಕಲ್ಪನೆ ಮೂಡುತ್ತಲೇ ಬಂಗಾರ ವರ್ಣದ ಮೀನೊಂದು ನೀರಿನಿಂದ ಮೇಲಕ್ಕೆ ಬಂದು ಮತ್ತೆ ನೀರಿಗಿಳಿದಾಗ ನನ್ನ ಪ್ರತಿಬಿಂಬವು ಒಂದರಿಂದ ನೂರಾಗಿ ಹರಡಿದ್ದನ್ನು ಕಂಡು ನನ್ನನ್ನು ನಾನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದ್ದೆ ಆಗ ಸಖಿಯಿಂದ ಬಂದ ಸಂದೇಶ ಮಹಾರಾಜರ ಆದೇಶದಂತೆ ರಾಜಸಭೆಗೆ ತುರ್ತಾಗಿ ಬರಬೇಕೆಂದು… ಹೀಗೆ ಆಹ್ವಾನಿಸಿದ್ದರ ಉದ್ದೇಶವೇನು…!! ಎಂಬ ಸಂದಿಗ್ಧದಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ರಾಜಸಭೆ ಸ್ತಬ್ಧ ವಾದಂತೆ ಕಂಡಿತು. ಅಲ್ಲಿ ನಿಂತಿದ್ದ ಮುನಿಯೋರ್ವರ ದೃಷ್ಟಿ ನನ್ನ ಮೇಲೆಯೇ ಇರುವುದನ್ನು ಗಮನಿಸಿ ನಮಸ್ಕರಿಸಿದ ನಂತರ ನನ್ನ ಸ್ಥಾನದಲ್ಲಿ ಕುಳಿತುಕೊಂಡೆ. ಸಭೆ ಮುಂದುವರೆದಾಗ ತಿಳಿದದ್ದು ನಮ್ಮ ರಾಜ್ಯಕ್ಕೆ ಆಗಮಿಸಿದ ಈ ಮುನಿವರ್ಯ ಋಷಿ ವಿಶ್ವಾಮಿತ್ರ ರ ಪ್ರಿಯ ಶಿಷ್ಯನೆಂತಲೂ ಗುರುದಕ್ಷಿಣೆಯ ರೂಪದಲ್ಲಿ ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟು ನೂರು ಶ್ವೇತಾಶ್ವಗಳನ್ನು ನೀಡಲು ಶಕ್ತನಲ್ಲನಾದ್ದರಿಂದ ದೇಹಿ ಅಂತ ಬಂದಿದ್ದಾನೆ. ಅಷ್ಟೊಂದು ಶ್ವೇತಾಶ್ವಗಳಿಲ್ಲವಾದ್ದರಿಂದ ಒಂದು ಪ್ರಸವದ ನಂತರ ಮತ್ತೆ ಕನ್ಯತ್ವ ಮರಳಿ ಪಡೆಯುವಂತಹ ವರವನ್ನು ಹೊಂದಿದ ಸರ್ವಗುಣ ಸಂಪನ್ನೆಯಾದ ತನ್ನ ರಾಜಕುಮಾರಿಯನ್ನು ದಾನವಾಗಿ ಸ್ವೀಕರಿಸಿ ಅವಳ ಮೂಲಕ ನಿಮಗೆ ಎಂಟು ನೂರು ಶ್ವೇತಾಶ್ವಗಳು ದೊರೆವಂತಾಗಲಿ ಎಂದು ರಾಜಾ ಯಯಾತಿ ಘೋಷಿಸಿದಾಗ ರಾಜಸಭೆಯಲ್ಲಿ ಜೋರಾದ ಜೈ ಕಾರ ಮೊಳಗಿದರೆ ನನ್ನೆದೆಯಲ್ಲಡಗಿದ ನೂರಾರು ಕನಸುಗಳು ಹೇಳ ಹೆಸರಿಲ್ಲದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದವು.

ಸಾವಿರಾರು ಸಭಿಕರ ಸಮ್ಮುಖದಲ್ಲಿ ಮನಮೆಚ್ಚಿದ ರಾಜಕುಮಾರನನ್ನು ವರಿಸಿ ಎಲ್ಲರ ಹಾರೈಕೆ ಮತ್ತು ಶುಭಾಶೀರ್ವಾದದೊಂದಿಗೆ ಮಡಿಲು ತುಂಬಿಸಿಕೊಂಡು ಹೊರಡಬೇಕಾದ ನನ್ನನ್ನು ಭಿಕ್ಷೆಗೆ ದಾನವಾಗಿ ಮುನಿಗೆ ನೀಡಿದ್ದ ನನ್ನಪ್ಪ ಇವರೇನಾ…!? ಹುಟ್ಟಿದಂದಿನಿಂದ ಇಂದಿನವರೆಗೂ ಕ್ಷಣ ಮಾತ್ರದಲ್ಲಿ ನನ್ನಿಚ್ಛೆಯನ್ನೆಲ್ಲಾ ಪೊರೈಸುತ್ತಿದ್ದ ನನ್ನ ತಂದೆಯ ಕಡೆಗೆ ದೃಷ್ಟಿ ಹಾಯಿಸಿದಾಗ ಕಂಡಿದ್ದು ರಾಜಾ ಯಯಾತಿ ಋಷಿಗಳ ಕೋಪದಿಂದ ಪಾರಾಗಲು ಚದುರಂಗದ ಕಾಯಿಯಂತೆ ನನ್ನನ್ನು ಬಳಸಿಕೊಂಡಿದ್ದು ಮಾತ್ರ. ಇಹ ಪ್ರಪಂಚದ ಅರಿವಾಗುವಷ್ಟರಲ್ಲಿ ಅದಾಗಲೇ ಗಾಲವನೊಂದಿಗೆ ರಾಜ್ಯದ ಪರಿಧಿಯನು ದಾಟಿಯಾಗಿತ್ತು. ಸ್ವಲ್ಪ ಸಮಯದ ಹಿಂದೆಯಷ್ಟೇ ನನ್ನ ಸೌಂದರ್ಯದ ಕುರಿತು ನನಗಿದ್ದ ಸುಂದರ ಕನಸುಗಳೆಲ್ಲವೂ ನುಚ್ಚು ನೂರಾಗಿ ಇಂತಹ ಜೀವನಕ್ಕಿಂತ ಸಾವೇ ಮೇಲು ಎಂದು ಜೋರಾಗಿ ಅಳುತ್ತಲೇ ಗಾಲವನ ಅಧೀನಳಾಗಿ ಬಿಟ್ಟಿದ್ದೆ. ತನ್ನ ಯೋಗ್ಯತೆಯನ್ನು ಮೀರಿ ಗುರುದಕ್ಷಿಣೆಯನ್ನು ಒತ್ತಾಯಪೂರ್ವಕವಾಗಿ ನೀಡುವ ಈ ಮುನಿವರ್ಯನ ಮಹದಾಸೆಗೆ ಬಲಿಪಶುವಾಗಿದ್ದ ನನ್ನನ್ನು ಕರೆದೊಯ್ದು ಇನ್ಯಾರಿಗೆ ಒಪ್ಪಿಸುತ್ತಾನೆಯೋ  ಏನೋ ಎಂಬ ನಿಟ್ಟುಸಿರಿನೊಂದಿಗೆ ಪಯಣವದು ಸಾಗಿತ್ತು…!

ಅಯೋಧ್ಯೆಯ ಮಹಾದ್ವಾರ ಪ್ರವೇಶಿಸಿ ರಾಜನಾದ ಹರ್ಯಾಸ್ವನೊಂದಿಗೆ ಗುಟ್ಟಾಗಿ ಮಾತನಾಡಿ ಗಾಲವ ಹೊರಬಂದಾಗ ರಾಜನ ಕಂಗಳಲ್ಲಿ ಹೊಸ ಬಯಕೆಯೊಂದು ಮೂಡಿದಂತೆ ಕಾಣುತಿತ್ತು. ಪ್ರಾಯ ಸಂದ ರಾಜನ ಅರಮನೆ ರಾಣಿಯರಿಂದ ತುಂಬಿ ತುಳುಕುವಂತಿದ್ದರೂ ಒಂದೇ ಒಂದು ವಂಶದ ಕುಡಿಯಿರಲಿಲ್ಲ. ಎಲ್ಲಿಯ ನನ್ನ ಕನಸಿನ ರಾಜಕುಮಾರ ಎಲ್ಲಿಯ ಈ ಮುದಿ ರಾಜ ಎಂದುಕೊಳ್ಳುತ್ತಿರುವಾಗಲೇ ರಾಣಿಯರಿಗೆಲ್ಲ ನನ್ನ ಅಪ್ರತಿಮ ಸೌಂದರ್ಯದ ಬಗ್ಗೆ ಮತ್ಸರ ಭಾವನೆ ಬರಲು ಪ್ರಾರಂಭವಾಗಿತ್ತು…!

ಸದಾ ಕಾಲ ನನ್ನ ಹಿಂದೆ ಮುಂದೆ ಸುಳಿದಾಡುತ್ತ ನನ್ನನ್ನು ತನ್ನ ಪ್ರೇಮಪಾಶದಲ್ಲಿ ಸಿಲುಕಿಸುವಲ್ಲಿ ಅಂತೂ ರಾಜ ಯಶಸ್ವಿಯಾದ. ಇಂದು ಯಾಕೋ ಹುಷಾರಿಲ್ಲದಂತಾಗಿ ಊಟ ತಿಂಡಿ ಬೇಡವೆನಿಸುತ್ತಲೇ ದಾಸಿಯ ಕಂಗಳಲ್ಲಿ ಮಿಂಚು ಕಂಡಿತು.ಒಡಲಲ್ಲಿ ರಾಜವಂಶದ ಕುಡಿಯೊಂದು ಚಿಗುರುತಿದೆಯೆಂದು ಮಹಾರಾಜನಿಗೆ ಈ ಖುಷಿಯ ಸಮಾಚಾರವನ್ನು ತಿಳಿಸಿ ಉಡುಗೊರೆ ಪಡೆವ ಹೆಬ್ಬಯಕೆಯಿಂದ ಕೂಡಲೇ ಓಡಿದಳು…!

ನವಮಾಸ ತಾಯ್ತನದ ಸುಖದಲ್ಲಿರುವಾಗ ಒಂದಿನವಾದರೂ ರಾಜನ ಮುಖ ದರ್ಶನವಾಗಲಿಲ್ಲ.

ಪುಟ್ಟ ಕಂದನ ಜನನವಾಗುತ್ತಲೇ ವಾತ್ಸಲ್ಯದಿಂದ ಹಾಲೂಣಿಸಲು ಮುಂದಾದಾಗ ದಾಸಿಯರು ಕೈ ಹಿಡಿದು ನಿಲ್ಲಿಸಿ ಮಗುವಿಗೆ ಎದೆ ಹಾಲಿನ ಅಭ್ಯಾಸವಾದರೆ ಕಷ್ಟವೆಂದಾಗ ಆ ಮಾತಿನ ಹಿಂದಿನ ಮರ್ಮವನ್ನು ಅರಿಯದಾದೆ. ಮತ್ತೆ ಗಾಲವ ಪ್ರತ್ಯಕ್ಷನಾಗಿ ಹರ್ಯಾಸ್ವನ ಬಳಿ ಕೇವಲ ಇನ್ನೂರು ಶ್ವೇತಾಶ್ವಗಳಿರುವುದು ಅಷ್ಟೇ ಅದಕ್ಕಾಗಿ ಈ ಕೂಡಲೇ ನೀನು ನನ್ನೊಂದಿಗೆ ಬರಬೇಕೆಂದು ಹಸುಳೆಯ ಮುಖವನ್ನು ನೋಡಲು ಕೊಡದಂತೆ ಎಳೆದೊಯ್ದು ಕಾಶಿ ರಾಜನಾದ ದೀವೊದಾಸನಿಗೆ ನನ್ನನ್ನು ಒಪ್ಪಿಸಿಬಿಟ್ಟಿದ್ದ…!

ರಾಜನು ನನ್ನ ಸೌಂದರ್ಯದ ಆರಾಧಕನಾಗಿ ದಿನವೆಲ್ಲ ಹಾಡಿ ಹೊಗಳುತ್ತ ತನ್ನ ಪ್ರೀತಿಯ ಬಲೆಯನ್ನು ಬೀಸಿದ್ದು ನಾನದರಲ್ಲಿ ಬಂಧಿಯಾಗಿ ಮತ್ತೊಂದು ಕರುಳ ಕುಡಿ ಗರ್ಭದಲ್ಲಿರುವ ಸೂಚನೆ ನೀಡಿತ್ತು. ಇಷ್ಟೊಂದು ಪ್ರೀತಿಸುವ ಆಜಾನುಬಾಹು ರಾಜ ಒಡಲಲ್ಲಿ ಅವನ ಕುಡಿ ಆಹಾ!! ಸ್ವರ್ಗವೇ ಸಿಕ್ಕಂತೆ ಖುಷಿ ಪಟ್ಟಿದ್ದೆ ಅವನೂ ಕೂಡ ತನ್ನ ಪುರುಷತ್ವಕ್ಕೆ ಮೆರುಗು ತುಂಬಿದೆಯೆಂದು ಕುಣಿದು ಕುಪ್ಪಳಿಸಿದ್ದ…!

ನವಮಾಸ ಗತಿಸಿ ಹಾಲ್ಗೆನ್ನೆಯ ಪುಟ್ಟ ಕಂದನ ಮಡಿಲಲ್ಲಿ  ಮಲಗಿಸಿಕೊಂಡು ಹಾಲೂಣಿಸಿದಾಗ ಅದಮ್ಯ ಸಾರ್ಥಕ ಭಾವದಿ ಮೊದಲ ಮಗುವಿನ ನೆನಪಾಗಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು.

ಕಂದನ ನೋಡಲು ಬರುತ್ತಿರುವ ರಾಜನ ಕಂಡು ಕಣ್ಣೀರನು ಮರೆಮಾಚಿ ಮುದ್ದು ಮಗುವಿನ ಮುಖ ತೋರುತ್ತಲೇ ರಾಜನು ನೋವಿನಿಂದ ನಗುತ್ತ ನನ್ನ ಹತ್ತಿರವೂ ಇನ್ನೂರು ಶ್ವೇತಾಶ್ವಗಳು ಮಾತ್ರ ಇರೋದು ಎಂದಾಗಲೇ ಗಾಲವ ದ್ವಾರದ ಬಳಿ ನಿಂತಿದ್ದು ಕಾಣಿಸಿ ಮನವು ಮೂಕವಾಯ್ತು…!

ಮತ್ತೇ ಗಾಲವನೊಂದಿಗೆ ನಿರ್ವಿಕಾರ ಭಾವದಿಂದ ನಡೆಯುತ್ತಲೇ ಇದ್ದೆ. ಮತ್ತೊಂದು ದೇಶ ಮತ್ತೊಬ್ಬ ರಾಜ ಅವನಿಗೆ ವಂಶ ಬೆಳಗುವ ಕುಡಿ ಬೇಕಿತ್ತು ಗಾಲವನಿಗೆ ಇನ್ನೂರು ಶ್ವೇತಾಶ್ವಗಳು ಬೇಕಿತ್ತು ಅಷ್ಟೇ. ನಾನು ಮಾತ್ರ ಭಾವನೆಗಳೇ ಇರದ ಬರಡು ಭೂಮಿಯಂತಾಗಿದ್ದೆ. ಮತ್ತದೇ ಪ್ರೀತಿ ಪ್ರೇಮದಾಟ ಮತ್ತದೇ ಮಡಿಲು ತುಂಬಿದ ಶುಭ ಸೂಚನೆಯ ಜೊತೆಗೆ ಮತ್ತೊಂದು ದೇಶಕ್ಕೆ ಪಯಣ. ಜೀವಂತ ಶವದಂತೆ ಯಾಂತ್ರಿಕವಾದ ಬದುಕು ನನ್ನದಾಗಿತ್ತು. ಯಾರನ್ನು ದೂರಿದರೂ ಅಷ್ಟೇ ಎಲ್ಲ ನನ್ನ ದುರದೃಷ್ಟವೆಂದುಕೊಂಡು ನನಗೇ ನಾನೇ

ಸಮಾಧಾನ ಮಾಡಿಕೊಂಡು ಗಾಲವನನ್ನು ಹಿಂಬಾಲಿಸಿದೆ…!

ರಾಜಕುಮಾರಿ ಎಂದು ಆಪ್ತವಾದ ಗಾಲವನ ನುಡಿ ಕೇಳಿ ಕ್ಷಮೆ ಯಾಚಿಸಬಹುದೆಂಬ ನಿರೀಕ್ಷೆಯಲ್ಲಿದ್ದ ನನಗೆ ಮತ್ತೇ ಯೌವನ ಮರಳಿ ಬಂದಿತ್ತು. ಈಗಷ್ಟೇ

ಹರೆಯಕ್ಕೆ ಕಾಲಿಟ್ಟ ಹೆಣ್ಣಿನಂತೆ ನನ್ನ ಅಂಗ ಸೌಷ್ಟವದ

ಬಗ್ಗೆ ಹೆಮ್ಮೆಯಿಂದ ಬೀಗುತ್ತಿದ್ದಾಗ ಇನ್ಯಾವ ರಾಜ್ಯದಲ್ಲಿಯೂ ನಾನು ಬಯಸುವ ಶ್ವೇತಾಶ್ವಗಳಿದ್ದಂತೆ ತೋರುತ್ತಿಲ್ಲ ಜೊತೆಗೆ ಹುಡುಕುವ  ಚೈತನ್ಯವೂ ನನ್ನಲ್ಲಿ ಉಳಿದಿಲ್ಲವಾದ್ದರಿಂದ ನಿನ್ನನ್ನು ವಿಶ್ವಾಮಿತ್ರರಿಗೆ ಒಪ್ಪಿಸುತ್ತಿದ್ದೇನೆ ಎಂದು ನುಡಿದಾಗ

ಹುಚ್ಚಿಯಂತೆ ನಕ್ಕಿದ್ದೆ…! ಮನದ ಮೂಲೆಯಲ್ಲುಳಿದ ನೋವುಗಳೆಲ್ಲ ನಗುವಾಗಿ ಮಾರ್ಪಾಟಾಗಿತ್ತು. ಇನ್ನೂರು ಶ್ವೇತಾಶ್ವಗಳ ಬದಲಿಗೆ ಈ ಎಂಜಲು ದೇಹವನ್ನು ಗುರುಗಳಿಗೆ ಒಪ್ಪಿಸುವ ಬದಲು ಮೊದಲೇ ಒಪ್ಪಿಸಿದ್ದರೆ ಎಂಟುನೂರು ಶ್ವೇತಾಶ್ವಗಳ ಬದಲಾಗಿ ನನ್ನ ಯೌವನ ಸರಿಸಮಾನವಾಗುತ್ತಿತ್ತಲ್ಲವೇ…!? ಎಂದು ಕೇಳಿದಾಗ ಗಾಲವ ದಿಗ್ಭ್ರಾಂತನಾಗಿ ಮೌನದ ಮೊರೆ ಹೊಕ್ಕ…!

ವನದ ಜೀವನದಲ್ಲಿ ಸುಕ್ಕುಗಟ್ಟಿದ ಮೈ ನೀಳ ಜಡೆಯ ಉಗ್ರ ರೂಪಿ ವಿಶ್ವಾಮಿತ್ರ ನನ್ನ ಕಡೆಗೆ ನೋಡುತ್ತಲೇ ಲಾಲಸೆಯಿಂದ ನಗುತ್ತ ನಿನ್ನ ಗುರುದಕ್ಷಿಣೆ ಸಂದಾಯವಾಯ್ತು…! ನೀನಿನ್ನು ಹೊರಡು ಎಂದು ಗಾಲವನಿಗೆ ಹೇಳಿದಾಗ ನನ್ನ ಈ ಬಂಧದಲಿ ದೂಡಿ ತಾನು ಋಣಮುಕ್ತನಾದ…!

ಹೊರಡುವ ಮುನ್ನ ನನ್ನ ಬಳಿ ಬಂದು ನನ್ನ ಪುಣ್ಯ ಸಂಚಯವನ್ನೆಲ್ಲ ನಿನ್ನ ಮಕ್ಕಳಿಗೆ ಧಾರೆಯೆರೆದು ಕೊಡುತ್ತೇನೆ ಅವರು ಅತ್ಯಂತ ಪ್ರತಿಭಾಶಾಲಿಗಳೆಂದು

ಗುರುತಿಸಿಕೊಳ್ಳುವರು ಎಂದು ಹರಿಸಿ ಮುನ್ನಡೆದ…!

ಪುಣ್ಯವೇ…!? ಒಂದು ಹೆಣ್ಣಿನ ಜೀವನವನ್ನೇ ಬಲಿಯಾಗಿಸಿದ ಇವರಿಗೆಲ್ಲ ಸ್ತ್ರೀ ಹತ್ಯಾ ದೋಷವು ತಟ್ಟದೇ ಇದ್ದೀತೇ…!?  ಸಾವಾದರೂ ಒಂದೇ ಸಲಕ್ಕೆ ಪ್ರಾಣಪಕ್ಷಿ ಹಾರಿಹೋಗುತ್ತೆ… ಆದರೆ ಇದು ಜೀವಂತ ನರಕ ಯಾತನೆ. ನನ್ನನ್ನು ಇಂತಹ ಪಾಪದ ಕೂಪಕ್ಕೆ ದೂಡಿದ ಇವರದ್ದೆಲ್ಲ ಪುಣ್ಯ ಸಂಚಯವೇ…!? ಎಂದು ಯೋಚಿಸುತ್ತಲೇ ಇದ್ದೆ. ಗಾಲವ ಹೊರಟ ಕೂಡಲೇ ಅದ್ಯಾವ ಮಾಯದಲ್ಲಿ ವಿಶ್ವಾಮಿತ್ರನು ಹಸಿದ ಹೆಬ್ಬುಲಿಯಂತೆ ನನ್ನ ಮೇಲೆರಗಿದಾಗ ಅರಣ್ಯದೆಲ್ಲೆಡೇ ತೃಪ್ತಿಯ ಕೇಕೆ ಮಾರ್ಧನಿಸಿತು.

ಪ್ರಕೃತಿಯಂತೆ ಮತ್ತೆಮತ್ತೇ ಚಿಗುರುತ್ತ ವಿಶ್ವಾಮಿತ್ರ ರ ಕುಡಿಯೊಡೆದ ವಿಷಯ ತಿಳಿಯುತ್ತಲೇ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡಂತೆ ಮಹಾಪರಾಧ ಮಾಡಿದಂತಹ ನಡೆನುಡಿಯನು ಕಂಡು ಗಡ್ಡದಿಂದ ಮುಚ್ಚಿ ಹೋದ ಮುಖದ ಭಾವನೆ ಸ್ಪಷ್ಟವಾಗಿ ಗೋಚರಿಸದೇ ಹೋಯ್ತು. ಮರುಜನ್ಮವೆತ್ತಿದಂತೆ ಮಗುವಿನ ಜನನವಾಗುತ್ತಲೇ ವಿಶ್ವಾಮಿತ್ರ ದೀರ್ಘ ತಪಸ್ಸಿಗೆ ತೆರಳಲು ನಿರ್ಧರಿಸಿ ಮತ್ತೆ ನನ್ನ ಜೀವನ ಅಂತಂತ್ರ ಸ್ಥಿತಿಗೆ ಬಂದು ನಿಂತಿತ್ತು.

ನೀನಿಗ ಸ್ವತಂತ್ರಳು ನಿನ್ನನ್ನು ಕರೆದೊಯ್ಯಲು ನಿನ್ನ ರಾಜ್ಯದ ಸೇವಕರು ಅದಾಗಲೇ ಬಂದಿದ್ದಾರೆ ಎಂದು ನುಡಿದು ಒಂದು ಬಾರಿಯೂ ನನ್ನತ್ತ ಹಿಂತಿರುಗಿ ನೋಡದೆಯೇ ಹೊರಟುಹೋದ…!

ನನ್ನ ರಾಜ್ಯವೇ…!? ಯಾವುದು ಇನ್ನೂರು ಶ್ವೇತಾಶ್ವಗಳಿರದ್ದಕ್ಕೆ ನನ್ನನ್ನು ದಾನವಾಗಿ ನೀಡಿದ ಯಯಾತಿಯೇ…!? ತಮ್ಮಲ್ಲಿಯೂ  ಇನ್ನೂರು ಶ್ವೇತಾಶ್ವಗಳೇ ಇದ್ದರೂ ಕೂಡ ಬದಲಾಗಿ ನನ್ನಿಂದ ವಂಶದ ಕುಡಿ ಪಡೆದು ಬೀದಿಗೆ ತಳ್ಳಿದಂತಹ ಈ ರಾಜರುಗಳೇ…!?

ನಾನು ಯಾರ ಮಗಳು, ಯಾರ ಮಡದಿ, ಯಾರ ತಾಯಿ…!? ಎಂದು ಜೋರಾಗಿ ಅಳುತ್ತಲೇ ಈ ಮಗು ನನ್ನ ಫಲ ಎಂದು ನೀನು ಭೂಮಿಯಿದ್ದಂತೆ ಬೀಜ ಮೊಳೆಕೆಯೊಡೆದು ಸಸ್ಯವಾದಾಗ ಪ್ರತಿಫಲವು ನೆಟ್ಟವನದ್ದೇ ಎಂದು ಬೀಗಿದ ರಾಜರುಗಳ ಮುಖ ಕಣ್ಮುಂದೆ ಬಂತು…!

ಮತ್ತೆ ಅರಮನೆಗೆ ಮರಳುತ್ತಲೇ ಶರ್ಮಿಷ್ಠೆಯ ಮರುಕದ ನೋಟ ಒಂದೆಡೆಯಾದರೆ, ದೇವಯಾನಿಯ ನೋಟ ಅನಿಷ್ಟವನ್ನು ಕಂಡಂತಿತ್ತು.

ಯಾವುದನ್ನೂ ಲೆಕ್ಕಿಸದೇ ಮುನ್ನಡೆದಾಗ ಕೈಯೊಂದು ತಡೆದಿತ್ತು ಮಗಳೇ…! ಇಷ್ಟೆಲ್ಲ ಅನುಭವಿಸಿದರೂ ನಿನ್ನ ಯೌವನ ಕಿಂಚಿತ್ತೂ ಮಾಸಿಲ್ಲವಲ್ಲ…!  ನಿನಗಾಗಿಯೇ ಸ್ವಯಂವರವನ್ನು ಏರ್ಪಡಿಸುತ್ತೇನೆಂದು ನುಡಿದಾಗ ಅಂದು ಇದೇ ತಿಳಿಗೊಳದಿ ತನ್ನ ಪ್ರತಿಬಿಂಬ ಒಂದು ನೂರಾಗಿದ್ದನ್ನು ನೆನೆದು ಅಷ್ಟೇ ಕೋಪದಿಂದ ರಾಜಾ ಒಂದು ಕಾಲದಲ್ಲಿ  ನಿನ್ನ ಬಾಯಿಂದ ಇಂತಹ ಮಾತನ್ನು ಕೇಳಲು ಕಾತುರದಿಂದ ಕಾಯುತ್ತಿದ್ದೆ ನಿಜ ಆದರೆ ಇಂದು ಈ ನಿನ್ನ ಮಗಳು ನೀನು ಕನ್ಯಾದಾನ ಮಾಡದೆಯೇ ಅದಾಗಲೇ ಎಷ್ಟೊಂದು ಮದುವೆಯಾಗಿದ್ದಾಳೆಂದು ಬಲ್ಲೆಯಾ…!? ಎಂದು ವ್ಯಂಗವಾಗಿ  ನಗುತ್ತ ಮತ್ತೆ  ಮತ್ತೇ ಯೌವನ ಹೊದ್ದುಕೊಂಡಿರುವ ನಿನ್ನ ಮೈ ಮನಸ್ಸುಗಳು ಅದೆಷ್ಟು ಕೊಳೆತು ನಾರುತ್ತಿವೆಂಬುದನ್ನು ಒಮ್ಮೆಯಾದರೂ ಗಮನಿಸು ಎಂದಾಗ ಎಲ್ಲೆಡೆ

ನೀರವ ಮೌನ ಆವರಿಸಿತು.

ಆದರೂ ಮೌನದ ಕಟ್ಟೆಯೊಡೆದು ನನ್ನನ್ನು ದಾನವಾಗಿ ನೀಡಿದ ಕ್ಷಣದಿಂದಲೇ ನೀನು ನಿನ್ನ ಹಕ್ಕನ್ನು ಕಳೆದುಕೊಂಡಾಗಿದೆ. ನಾನೀಗ ಸ್ವತಂತ್ರಳು ನನ್ನ ಬದುಕು ನನ್ನಿಚ್ಛೆಯಂತೆ ಕಾಡಿನಲ್ಲಿ ವಾಸಿಸುವೆ. ಹಗಲಿರುಳು ಕುಕ್ಕಿ ಕುಕ್ಕಿ ತಿನ್ನುವ ನರ ರಕ್ಕಸರ ನಡುವಿನ ಈ ನರಕ ಸದೃಶ ಜೀವನಕ್ಕಿಂತ ವನ್ಯಮೃಗಗಳು ಅದೆಷ್ಟೋ ವಾಸಿಯೆನ್ನುತ್ತ ದಿಟ್ಟ ಹೆಜ್ಜೆಯನ್ನಿಡುತ್ತ ಅರಮನೆಯಿಂದ ನನ್ನ ಗಮ್ಯದತ್ತ ಮುನ್ನಡೆಯುತ್ತಲೇ ಸಾಗಿದೆ ಪ್ರತಿದಿನ ಪ್ರತಿಕ್ಷಣ…!!!

ಉಮಾ ಶೂರ್ಪಾಲಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ