– ರಾಘವೇಂದ್ರ ಅಡಿಗ ಎಚ್ಚೆನ್.
ಖ್ಯಾತ ತಮಿಳು ಕವಿ, ಗೀತರಚನೆಕಾರ ಹಾಗೂ ಕಾದಂಬರಿಕಾರ ವೈರಮುತ್ತು ರಾಮಸಾಮಿ ಅವರನ್ನು ಭಾರತೀಯ ಸಾಹಿತ್ಯದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2002ರ ಬಳಿಕ ತಮಿಳು ಭಾಷೆಗೆ ಈ ಪ್ರಶಸ್ತಿ ದೊರೆಯುತ್ತಿರುವುದು ಇದೇ ಮೊದಲ ಬಾರಿ. ತಮಿಳು ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ಅವರಿಗೆ ನೀಡಲಾಗಿದೆ. ಜ್ಞಾನಪೀಠ ಪ್ರಶಸ್ತಿಯಲ್ಲಿ 11 ಲಕ್ಷ ರೂ. ನಗದು, ವಾಗ್ದೇವಿ (ಸರಸ್ವತಿ) ಕಂಚಿನ ಪ್ರತಿಮೆ ಹಾಗೂ ಫಲಕವನ್ನು ಒಳಗೊಂಡಿದೆ. ವೈರಮುತ್ತು ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳೂ ಲಭಿಸಿವೆ.
ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ 72 ವರ್ಷದ ವೈರಮುತ್ತು, ಕಾವ್ಯ, ಕಾದಂಬರಿ, ಪ್ರವಾಸಕಥನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಧುನಿಕ ತಮಿಳು ಕವಿ ಸಿ. ಸುಬ್ರಮಣ್ಯ ಭರತ್ ಅವರ ಕಾವ್ಯಾತ್ಮಕ ಕೃತಿ ‘ಕವಿರಾಜನ್ ಕಥೈ’ ಸೇರಿದಂತೆ ಹಲವು ಕೃತಿಗಳು ಅವರ ಸಾಹಿತ್ಯಸಾಧನೆಯ ಭಾಗವಾಗಿವೆ. ಜ್ಞಾನಪೀಠ ಪ್ರಶಸ್ತಿ ಪಡೆದ ತಮಿಳುನಾಡಿನ ಸಾಹಿತ್ಯ ಲೋಕದ ಮೂರನೇ ವ್ಯಕ್ತಿಯಾಗಿರುವ ಅವರು, ಈ ಹಿಂದೆ ಈ ಗೌರವ ಪಡೆದ ಅಖಿಲನ್ ಮತ್ತು ಜಯಕಾಂತನ್ ಅವರ ಸಾಲಿನಲ್ಲಿ ಸೇರಿದ್ದಾರೆ.
ಥೇಣಿ ಜಿಲ್ಲೆಯ ವಡುಗಪಟ್ಟಿ ಗ್ರಾಮದಲ್ಲಿ 1953ರ ಜುಲೈ 13ರಂದು ರಾಮಸಾಮಿ ಮತ್ತು ಅಂಗಮ್ಮಾಳ್ ದಂಪತಿಗೆ ಕೃಷಿಕ ಕುಟುಂಬದಲ್ಲಿ ಜನಿಸಿದ ವೈರಮುತ್ತು, ಚಲನಚಿತ್ರ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಭಾರತಿರಾಜ ನಿರ್ದೇಶನದ ‘ನಿಝಲ್ಗಲ್’ ಚಿತ್ರದ “ಇದು ಒರು ಪೊನ್ಮಾಲೈ ಪೊಝುತು” ಹಾಡಿನ ಮೂಲಕ ಗೀತರಚನೆಕಾರರಾಗಿ ಅವರು ಗುರುತಿಸಿಕೊಂಡರು. ಬಳಿಕ ಸಾವಿರಾರು ಜನಪ್ರಿಯ ಗೀತೆಗಳನ್ನು ರಚಿಸಿದ್ದಾರೆ.
ವೈರಮುತ್ತು 8,000ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದು, ಏಳು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಏಕೈಕ ಗೀತರಚನೆಕಾರರಾಗಿದ್ದಾರೆ. ಅವರ ಕೃತಿಗಳಲ್ಲಿ 12 ಕವನ ಸಂಕಲನಗಳು ಹಾಗೂ 10 ಕಾದಂಬರಿಗಳು ಸೇರಿವೆ.
“ಈ ಮಹಾನ್ ಗೌರವವನ್ನು ನನ್ನ ಭೂಮಿ ಮತ್ತು ಜನತೆಗೆ ಅರ್ಪಿಸುತ್ತೇನೆ. ಇನ್ನು ಮುಂದೆ ನನ್ನ ಸಾಹಿತ್ಯಯಾನ ಹೊಸ ಹರಿವು ಮತ್ತು ವೇಗದೊಂದಿಗೆ ಮುಂದುವರಿಯಲಿದೆ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ತಮಿಳಿನ ಹೆಮ್ಮೆ ಮತ್ತು ಪರಂಪರೆಯನ್ನು ಎತ್ತಿಹಿಡಿಯಲು ಬದ್ಧರಾಗಿರುವ ವೈರಮುತ್ತು, ದ್ರಾವಿಡ ಸಿದ್ಧಾಂತದ ಅನುಯಾಯಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಶಸ್ತಿ ಲಭಿಸಿದ ಬಳಿಕ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.
ದಿವಂಗತ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ದೀರ್ಘಕಾಲದ ನಿಷ್ಠಾವಂತ ಬೆಂಬಲಿಗರಾಗಿರುವ ವೈರಮುತ್ತು, ಸಾಂಸ್ಕೃತಿಕ ವಿಚಾರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ತಿರುಕ್ಕುರಳಿನ ಕರ್ತೃ ತಿರುವಳ್ಳುವರ್ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದ ಪ್ರಯತ್ನಗಳಲ್ಲಿಯೂ ಅವರು ಗಮನ ಸೆಳೆದಿದ್ದರು. ಈ ಸಂಬಂಧ ತರುಣ್ ವಿಜಯ್ ಅವರಿಗೆ ಚೆನ್ನೈನಲ್ಲಿ ಸನ್ಮಾನ ಸಮಾರಂಭವನ್ನೂ ಆಯೋಜಿಸಿದ್ದರು. ಆದರೆ ಪ್ರತಿಮೆಯನ್ನು ಪ್ರಮುಖ ಸ್ಥಳದಲ್ಲಿ ಸ್ಥಾಪಿಸದಿರುವುದು ಟೀಕೆಗೆ ಕಾರಣವಾಗಿತ್ತು.
ಗಾಯಕಿ ಚಿನ್ಮಯಿ ಶ್ರೀಪಾದ ಆಕ್ಷೇಪ
ಈ ನಡುವೆ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ ಸಂಬಂಧ ಗಾಯಕಿ ಚಿನ್ಮಯಿ ಶ್ರೀಪಾದ ತಮಿಳು ಚಿತ್ರರಂಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಹೊರಬಂದ ಲೈಂಗಿಕ ದುರ್ನಡತೆಯ ಆರೋಪಗಳನ್ನು ಪುನಃ ಉಲ್ಲೇಖಿಸಿ, ಹಿರಿಯ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ನೇರವಾಗಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿದ ಚಿನ್ಮಯಿ, “2018ರಲ್ಲಿ ವಿವಿಧ ವಯೋಮಾನದ ಅನೇಕ ಮಹಿಳೆಯರು ಒಬ್ಬ ಕವಿ–ಗೀತರಚನೆಕಾರನನ್ನು ತಮ್ಮ ಕಿರುಕುಳ ನೀಡಿದ ವ್ಯಕ್ತಿ ಎಂದು ಹೆಸರಿಸಿದ್ದರು. ಇಂದು ಅದೇ ವ್ಯಕ್ತಿಗೆ ಜ್ಞಾನಪೀಠ ನೀಡಲಾಗುತ್ತಿದೆ. ಆತನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಸಾಮೂಹಿಕ ಧ್ವನಿಯನ್ನು ಮೌನಗೊಳಿಸಲಾಗಿದೆ. ನಾನು ಇದಕ್ಕಾಗಿ ಭಾರೀ ಬೆಲೆ ತೆತ್ತಿದ್ದೇನೆ; ತಮ್ಮ ಕನಸುಗಳನ್ನು ಬಿಟ್ಟು ಬಂದ ಉಳಿದ ಮಹಿಳೆಯರು ನನ್ನಷ್ಟು ಅದೃಷ್ಟವಂತರಾಗಿರಲಿಲ್ಲ,” ಎಂದು ಹೇಳಿದ್ದಾರೆ.





