– ರಾಘವೇಂದ್ರ ಅಡಿಗ ಎಚ್ಚೆನ್.
ಹಿಂದೆ ಟಾಲಿವುಡ್ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮೀ ಅಭಿನಯದ ‘ಆದಿಪರ್ವ’ ಸೇರಿದಂತೆ ಅನೇಕ ಹಿಟ್ ಚಿತ್ರಗಳ ನಿರ್ದೇಶನ ಮಾಡಿದ್ದ ಸಂಜೀವ್ ಕುಮಾರ್ ಮೆಗೋಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಬಾರಿ ಅವರು “ಪೋಲೀಸ್ ಕಂಪ್ಲೆಂಟ್” ಎನ್ನುವ ಚಿತ್ರ ನಿರ್ದೇಶಿಸಿದ್ದಾರೆ. ಇದರಲ್ಲಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರಿನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡದ ಖ್ಯಾತ ನಟಿ ಪ್ರೇಮಾ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ. ವಿಶ್ವನಾಥ್ ಅವರು “ಪೋಲೀಸ್ ಕಂಪ್ಲೆಂಟ್” ಚಿತ್ರದ ಹಾಡುಗಳ ಬಿಡುಗಡೆಗೊಳಿಸಿದರು.

ರವಿ ಕಿರಣ್ ನಿರ್ದೇಶನ ಮಾಡಿದ್ದ ‘ಬದುಕು’ ಧಾರಾವಾಹಿಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತವಾದ ಸಂಜೀವ್ ಕುಮಾರ್ ಮೆಗೋಟಿ ಅವರು, ನಂತರ ಪೂಜಾ ಗಾಂಧಿ ನಟನೆಯ ‘ಆಪ್ತ’, ‘ಕ್ಯೂ’ ಚಿತ್ರಗಳನ್ನು ನಿರ್ದೇಶಿಸಿದರು. ಕಳೆದ 8 ವರ್ಷಗಳಿಂದ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದರು. 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಬರೆದಿರುವ ಇವರು ಈಗ ಬಹುದಿನಗಳ ಬಳಿಕ ಹಿರಿತೆರೆಗೆ ಮರಳಿದ್ದು, “ಪೋಲೀಸ್ ಕಂಪ್ಲೆಂಟ್” ಚಿತ್ರ ನಿರ್ದೇಶನ ಮಾಡಿದ್ದಾರೆ.
ಎಂ.ಎಸ್.ಕೆ. ಪ್ರಮಿದಾಶ್ರೀ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾದ ಈ ಸಿನಿಮಾದಲ್ಲಿ ಇತ್ತೀಚೆಗಷ್ಟೇ ‘ಮಾರ್ಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರಲಕ್ಷ್ಮಿ ಶರತ್ ಕುಮಾರ್, ರಾಗಿಣಿ ದ್ವಿವೇದಿ, ನವೀನ್ ಚಂದ್ರ, ಕೃಷ್ಣ ಸಾಯಿ , ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮತ್ತಿತರರು ಅಭಿನಯಿಸಿದ್ದಾರೆ. ‘ಚಿತ್ರದ ಮೊದಲ ಗೀತೆಗೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಬಿ. ಆರ್. ಛಾಯಾ ಈ ಗೀತೆಗೆ ಧ್ವನಿಯಾಗಿದ್ದಾರೆ. ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣವಾಗಿದ್ದು ಚಿತ್ರ ಇದೇ ವರ್ಷ ತೆರೆಗೆ ಬರಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿರ್ದೇಶಕ ಸಂಜೀವ್ ‘ಸುಮಾರು ಹತ್ತು ವರ್ಷದ ನಂತರ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ನಾನು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದರು.

‘ನನ್ನ ಸಿನಿಮಾ ಕೆರಿಯರ್ ನಲ್ಲಿ ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಕೂಡ ಸಿನಿಮಾದಲ್ಲಿದೆ. ಎಲ್ಲಾ ಥರದ ಆಡಿಯನ್ಸ್ ಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ನಟಿ ರಾಗಿಣಿ ದ್ವಿವೇದಿ ನುಡಿದರು.
‘ಇಲ್ಲಿಯವರೆಗೆ ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ನಾಯಕ ನಟನಾಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾಕ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ’ ಎಂದು ನಟ ಕೃಷ್ಣ ಸಾಯಿ ಹೇಳಿದ್ದಾರೆ.





