– ರಾಘವೇಂದ್ರ ಅಡಿಗ ಎಚ್ಚೆನ್.
ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್‌ನಲ್ಲಿ 98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಾಲಿವುಡ್ ಸೇರಿದಂತೆ ಜಗತ್ತಿನ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಹಾಜರಿದ್ದರು.
ಈ ಬಾರಿ ‘ಸಿನ್ನರ್ಸ್’ ಸಿನಿಮಾ ಆಸ್ಕರ್ ಇತಿಹಾಸದಲ್ಲೇ ವಿಶೇಷ ಸಾಧನೆ ಮಾಡಿದ್ದು, ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಷನ್ ಪಡೆದುಕೊಂಡಿದೆ. ಇದಕ್ಕೂ ಮೊದಲು ‘ಆಲ್ ಅಬೌಟ್ ಈವ್’ ಸಿನಿಮಾ 14 ವಿಭಾಗಗಳಲ್ಲಿ ನಾಮಿನೇಷನ್ ಪಡೆದು ದಾಖಲೆ ನಿರ್ಮಿಸಿತ್ತು. ‘ಸಿನ್ನರ್ಸ್’ ಸಿನಿಮಾ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವಲ್ಲೂ ಯಶಸ್ವಿಯಾಯಿತು.
ಇನ್ನೊಂದೆಡೆ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ಚಿತ್ರದಲ್ಲಿ ಟೈಟಾನಿಕ್ ಖ್ಯಾತಿಯ ನಟ ಲಿಯೊನಾರ್ಡೋ ಡಿಕ್ಯಾಪ್ರಿಯೋ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶನ ಮಾಡಿರುವ ಪೌಲ್ ಥಾಮಸ್ ಆಂಡರ್ಸನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಈ ಚಿತ್ರ ಒಟ್ಟು ಆರು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದು, ಅಮೆರಿಕದ ಕಾಲಮಾನದ ಪ್ರಕಾರ ಭಾನುವಾರ ಸಂಜೆ ಈ ಕಾರ್ಯಕ್ರಮ ನಡೆದಿದ್ದು, ಭಾರತದ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರ ಆರಂಭವಾಯಿತು. ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ನಟನಾ ವಿಭಾಗದಲ್ಲಿ ‘ಹ್ಯಾಮ್ನೆಟ್’ ಸಿನಿಮಾದ ಅಭಿನಯಕ್ಕಾಗಿ ಜೆಸ್ಸಿ ಬಕ್ಲಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದರೆ, ‘ಸಿನ್ನರ್ಸ್’ ಸಿನಿಮಾದ ಅಭಿನಯಕ್ಕಾಗಿ ಮೈಕಲ್ ಬಿ. ಜೋರ್ಡನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಪ್ರಮುಖ ಪ್ರಶಸ್ತಿಗಳ ಪಟ್ಟಿ:
ಅತ್ಯುತ್ತಮ ಸಿನಿಮಾ – ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಟಿ – ಜೆಸ್ಸಿ ಬಕ್ಲಿ (ಹ್ಯಾಮ್ನೆಟ್)
ಅತ್ಯುತ್ತಮ ನಟ – ಮೈಕಲ್ ಬಿ. ಜೋರ್ಡನ್ (ಸಿನ್ನರ್ಸ್)
ಅತ್ಯುತ್ತಮ ಒರಿಜಿನಲ್ ಸಾಂಗ್ – ಗೋಲ್ಡನ್
ಅತ್ಯುತ್ತಮ ಛಾಯಾಗ್ರಹಣ – ಸಿನ್ನರ್ಸ್
ಅತ್ಯುತ್ತಮ ಸಿನಿಮಾ ಎಡಿಟಿಂಗ್ – ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಸೌಂಡ್ – ಎಫ್1
ಅತ್ಯುತ್ತಮ ಸಂಗೀತ ಸಂಯೋಜನೆ – ಸಿನ್ನರ್ಸ್
ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ – ಆಲ್ ದಿ ಎಂಪ್ಟಿ ರೂಂ
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್ – ಅವತಾರ್: ಫೈಯರ್ ಆ್ಯಂಡ್ ಆ್ಯಶ್
ನೆನಪಾಗಿಲ್ಲ ಬಾಲಿವುಡ್ ನಟ ಧರ್ಮೇಂದ್ರ
98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆದಿದ್ದು ಭಾರತ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಾರ್ಯಕ್ರಮದಲ್ಲಿ ಮಿಂಚಿದರು. ಅಚ್ಚರಿಯೆಂದರೆ, ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರನ್ನು ಆಸ್ಕರ್ 2026 ‘ಮೆಮೋರಿಯಮ್’ ವಿಭಾಗದಲ್ಲಿ ಸೇರಿಸಲಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಧರ್ಮೇಂದ್ರ ಅವರು ಕಳೆದ ವರ್ಷ ನಿಧನ ಹೊಂದಿದರು. ಅವರು ಭಾರತೀಯ ಮತ್ತು ಜಾಗತಿಕ ಸಿನಿಮಾಗೆ ಹಲವು ದಶಕಗಳ ಕಾಲ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇವರನ್ನು ಅಕಾಡೆಮಿ ಅವಾರ್ಡ್ಸ್ನಲ್ಲಿ ಗೌರವಿಸಲಾಗುವುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದರಲ್ಲಿ ಅವರ ಹೆಸರು ಇರಲೇ ಇಲ್ಲ.





