ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆರಂಭಕ್ಕೆ ಇನ್ನೇನು 10 ದಿನಗಳು ಬಾಕಿಯಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೇರಿದ್ದು, ವಿರಾಟ್ ಕೊಹ್ಲಿ ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ, ಕೊಹ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಬಿಗಿ ಭದ್ರತೆಯಲ್ಲಿ ಆಗಮಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿರುವುದನ್ನು, ಫ್ರಾಂಚೈಸಿ ಕೂಡ ದೃಢಪಡಿಸಿದ್ದು, ‘ಅವರು ಬರುತ್ತಿದ್ದಾರೆಂದು ತಿಳಿಯಲು, ನೀವು ಅವರನ್ನು ನೋಡಬೇಕಾಗಿಲ್ಲ… ಕ್ಯಾಲೆಂಡರ್ ಪರಿಶೀಲಿಸಿ, ಅಲ್ಲಿ ಸನ್ನೆಯಿದೆ…’ ಎಂದು ವಿಡಿಯೋ ಪೋಸ್ಟ್ ಮಾಡಿದೆ.
2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. 2025ರಲ್ಲಿ ಫ್ರಾಂಚೈಸಿ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದಾಗ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 144.71ರ ಸ್ಟ್ರೈಕ್ ರೇಟ್ ಮತ್ತು 54.75ರ ಸರಾಸರಿಯಲ್ಲಿ 657 ರನ್‌ಗಳನ್ನು ಗಳಿಸಿದ್ದರು. 17 ವರ್ಷಗಳ ಬಳಿಕ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಕೊಹ್ಲಿ, ಟಿ20ಐ ಮತ್ತು ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದು, ಏಕದಿನ ಪಂದ್ಯಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಿಸಿಸಿಐ ಟೂರ್ನಮೆಂಟ್‌ನ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಆರ್‌ಸಿಬಿ ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ಆಡಲಿದೆ. ನಂತರ ಏಪ್ರಿಲ್ 5 ರಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ಆತಿಥ್ಯ ವಹಿಸಲಿದೆ. ನಂತರ ಏಪ್ರಿಲ್ 10 ರಂದು ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಮತ್ತು ಏಪ್ರಿಲ್ 12 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ.





