ಗೋಧಿ ನುಚ್ಚಿನ ಪೊಂಗಲ್
ಸಾಮಗ್ರಿ : ಅರ್ಧ ಕಪ್ ಗೋಧಿ ನುಚ್ಚು, ಕಾಲ್ ಕಪ್ ಹೆಸರುಬೇಳೆ, 1 ಕಪ್ ಪುಡಿದ ಮಾಡಿದ ಬೆಲ್ಲ, 1 ಹೋಳು ಕೊಬ್ಬರಿ, ಅರ್ಧ ಕಪ್ ತುಪ್ಪ, ಒಂದಿಷ್ಟು ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ ಚೂರು, ಚಿಟಕಿ ಪಚ್ಚ ಕರ್ಪೂರ, ಏಲಕ್ಕಿ, 2-3 ಲವಂಗ.
ವಿಧಾನ : ಗೋಧಿ ನುಚ್ಚನ್ನು ಸ್ವಲ್ಪ ಬಿಸಿಯಾಗುವವರೆಗೆ ಹುರಿದಿಡಿ. ನಂತರ ಹೆಸರು ಬೇಳೆಯನ್ನು ಹೊಂಬಣ್ಣ ಬರುವಂತೆ ಹುರಿದುಕೊಳ್ಳಿ. ಪಾತ್ರೆಗೆ 3 ಕಪ್ ನೀರು ಹಾಕಿ, ಅದಕ್ಕೆ ಹೆಸರುಬೇಳೆ, ಗೋಧಿ ತರಿ ಹಾಕಿ ಬೇಯಿಸಿಟ್ಟುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಲವಂಗ ಎಲ್ಲವನ್ನು ಹುರಿದುಕೊಳ್ಳಿ. ನಂತರ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಕುದಿಸಿ, ಸ್ವಲ್ಪ ಗಟ್ಟಿ ಪಾಕ ಮಾಡಿಕೊಂಡು ಅದಕ್ಕೆ ಬೆಂದ ಗೋಧಿ ತರಿ, ಹೆಸರುಬೇಳೆ, ತುರಿದ ಕೊಬ್ಬರಿ, ಏಲಕ್ಕಿ, ಪಚ್ಚ ಕರ್ಪೂರದ ಪುಡಿ, ಹುರಿದ ದ್ರಾಕ್ಷಿ. ಗೋಡಂಬಿ, ಬಾದಾಮಿ, ಲವಂಗ ಎಲ್ಲವನ್ನೂ ಹಾಕಿ ಮೇಲೆ ತುಪ್ಪ ಸುರಿದು ಚೆನ್ನಾಗಿ ಕಲಸಿ. ಐದು ನಿಮಿಷ ಸಣ್ಣ ಉರಿಯಲ್ಲಿ ಇಟ್ಟು, ಕೆಳಗಿಳಿಸಿ. ಆರಿದ ನಂತರ ಸವಿಯಲು ಕೊಡಿ.

ಎಳ್ಳಿನ ಚಿತ್ರಾನ್ನ
ಸಾಮಗ್ರಿ : 1-2 ಕಪ್ ಉದುರುದುರಾದ ಅನ್ನ, ಅರ್ಧ ಕಪ್ ಎಳ್ಳು, 2-2 ಚಮಚ ಉದ್ದಿನ ಬೇಳೆ, ಕಡಲೆ ಬೇಳೆ, 4-6 ಚಮಚ ಶೇಂಗಾಬೀಜ, 2-4 ಒಣಮೆಣಸಿನಕಾಯಿ, ಅರ್ಧ ಚಮಚ ಕರಿಮೆಣಸು, ಅರ್ಧ ಹೋಳು ಕೊಬ್ಬರಿ, ಒಗ್ಗರಣೆಗೆ 5-6 ಚಮಚ ಎಣ್ಣೆ, ಸಾಸುವೆ, ಜೀರಿಗೆ, ಇಂಗು, ಕರಿಬೇವು, ಕೊ.ಸೊಪ್ಪು. ರುಚಿಗೆ ತಕ್ಕಷ್ಟು ಉಪ್ಪು, 1 ನಿಂಬೆಹಣ್ಣು.
ವಿಧಾನ : ಮೊದಲು ಕಾದ ಬಾಣಲೆಗೆ ಎಳ್ಳು ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ, ನಂತರ ಅದೇ ಬಾಣಲೆಗೆ ಸ್ವಲ್ಪ ಉದ್ದಿನ ಬೇಳೆ, ಕಡಲೆಬೇಳೆ, ಕರಿಮೆಣಸು, ಒಣಮೆಣಸಿನ ಕಾಯಿ ಹಾಕಿ ಎಣ್ಣೆ ಹಾಕದೆ ಚೆನ್ನಾಗಿ ಹುರಿಯಿರಿ. ಆರಿದ ನಂತರ ಎಳ್ಳಿನೊಂದಿಗೆ ಎಲ್ಲವನ್ನೂ ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಸಾಸುವೆ, ಜೀರಿಗೆ, ಉಳಿದ ಉದ್ದಿನ ಬೇಳೆ, ಕಡಲೆಬೇಳೆ, ಶೇಂಗಾ, ಕರಿಬೇವು ಹಾಕಿ ಚೆನ್ನಾಗಿ ಹುರಿದು ಕೆಳಗಿಳಿಸಿ ಅದಕ್ಕೆ ಪುಡಿ ಮಾಡಿದ ಎಳ್ಳಿನ ಮಿಶ್ರಣ, ಕೊಬ್ಬರಿ ತುರಿ ಹಾಕಿ ಕೈಯಾಡಿಸಿ. ನಂತರ ಅದಕ್ಕೆ ಅನ್ನ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಕಲಸಿ, ಮೇಲೆ ಕೊ.ಸೊಪ್ಪು ಉದುರಿಸಿದರೆ ಎಳ್ಳಿನ ಚಿತ್ರಾನ್ನ ತಿನ್ನಲು ರುಚಿ.

ಮಿಶ್ರ ಲಡ್ಡು
ಸಾಮಗ್ರಿ : 1 ಕಪ್ ಅಕ್ಕಿಹಿಟ್ಟು, 1-1 ಕಪ್ ಕಡಲೆ ಬೀಜ, ಹುರಿಗಡಲೆ, ಅರ್ಧ ಕಪ್ ಬಿಳಿ ಎಳ್ಳು, 4 ಅಚ್ಚು ಬೆಲ್ಲ, 2 ಗಿಟುಕು ಕೊಬ್ಬರಿ, 4 ಏಲಕ್ಕಿ, 1-1 ಚಮಚ ಒಣಶುಂಠಿ, ಜಾಯಿಕಾಯಿ ಪುಡಿ.
ವಿಧಾನ : ಅಕ್ಕಿ ಹಿಟ್ಟನ್ನು ಘಮ್ ಎನ್ನುವಂತೆ ಹುರಿದುಕೊಳ್ಳಿ, ನಂತರ ಕಡಲೆಬೀಜವನ್ನು ಹುರಿದು ಚೆನ್ನಾಗಿ ಉಜ್ಜಿ, ಸಿಪ್ಪೆ ತೆಗೆದು ಎರಡು ಹೋಳು ಮಾಡಿಕೊಳ್ಳಿ. ಎಳ್ಳವನ್ನೂ ಚೆನ್ನಾಗಿ ಹುರಿದುಕೊಳ್ಳಿ, ಕೊಬ್ಬರಿಯನ್ನು ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ. ನಂತರ ಅರ್ಧದಷ್ಟು ಹುರಿಗಡಲೆ, ಶೇಂಗಾವನ್ನು ಬೇರೆ ಬೇರೆಯಾಗಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಮಿಕ್ಕ ಕಡಲೆಬೀಜ, ಹುರಿಗಡಲೆ, ಕತ್ತರಿಸಿದ ಕೊಬ್ಬರಿ ಚೂರು, ಏಲಕ್ಕಿ, ಒಣಶುಂಠಿ, ಜಾಯಿಕಾಯಿ ಪುಡಿ ಎಲ್ಲವನ್ನೂ ಹುರಿದ ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿಕೊಳ್ಳಿ. ನಂತರ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಕರಗಿಸಿ, ಶೋಧಿಸಿ, ಕುದಿಸಿ. ಸ್ವಲ್ಪ ಎಳೆ ಪಾಕ ಬರುವವರೆಗೆ ಚೆನ್ನಾಗಿ ಕುದಿಸಬೇಕು. ತಟ್ಟೆಗೆ ಸ್ವಲ್ಪ ಪುಡಿ ಮಾಡಿದ ಮಿಶ್ರಣ ಹಾಕಿ, ಅದಕ್ಕೆ ಬೆಲ್ಲದ ಪಾಕ ಹಾಕಿ. ಕಡ್ಡಿಯಿಂದ ಚೆನ್ನಾಗಿ ಕೈ ಆಡಿಸಿ. ಕೈಗೆ ಅಕ್ಕಿ ಹಿಟ್ಟನ್ನು ಅದ್ದಿಕೊಂಡು ಉಂಡೆ ಕಟ್ಟಿ. ಇದೇ ರೀತಿ ಸ್ವಲ್ಪ ಸ್ವಲ್ಪ ಹಾಕಿ ಮಾಡಿಕೊಂಡು ಮಿಶ್ರಕ್ಕೆ ಹಾಕಿ, ಉಂಡೆ ಕಟ್ಟಿ. ಬಿಸಿಯಾಗಿರುವಾಗಲೇ ಉಂಡೆ ಕಟ್ಟಬೇಕು. ಈಗ ರುಚಿಕರವಾದ ಪೌಷ್ಟಿಕಾಂಶದ ಮಿಶ್ರ ಲಡ್ಡು ರೆಡಿ.

ಬೇಲದ ಹಣ್ಣಿನ ಪಾನಕ
ಸಾಮಗ್ರಿ : 1 ಬೇಲದ ಹಣ್ಣು, 1 ಅಚ್ಚು ಬೆಲ್ಲ, ಕಾಲು ಚಮಚ ಏಲಕ್ಕಿ ಪುಡಿ, ಅರ್ಧ ಹೋಳು ನಿಂಬೆಹಣ್ಣು.
ವಿಧಾನ : ಬೆಲ್ಲವನ್ನು ಅರ್ಧ ಕಪ್ ನೀರಿನಲ್ಲಿ ಹಾಕಿ ಕರಗಿಸಿಕೊಳ್ಳಿ. ಬೇಲದ ಹಣ್ಣಿನ ತಿರುಳನ್ನು ತೆಗೆದುಕೊಂಡು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಅದನ್ನು ಶೋಧಿಸಿ, ಅದಕ್ಕೆ ಕರಗಿಸಿದ ಬೆಲ್ಲದ ನೀರನ್ನು ಹಾಕಿ ಗೊಟಾಯಿಸಿ. ಅದಕ್ಕೆ ಏಲಕ್ಕಿ ಪುಡಿ, ನಿಂಬೆರಸ ಸೇರಿಸಿ ಕೈಯಾಡಿಸಿ. ಈಗ ರುಚಿಕರವಾದ ಪೌಷ್ಟಿಕಾಂಶವುಳ್ಳ ತಂಪಾದ ಬೇಲದ ಹಣ್ಣಿನ ಪಾನಕ ಕುಡಿಯಲು ಸಿದ್ಧ.

ಮೊಳಕೆ ಮೆಂತ್ಯ, ಹೆಸರುಕಾಳಿನ ಮೊಸರುಬಜ್ಜಿ
ಸಾಮಗ್ರಿ : 2 ಕಪ್ ಮೊಸರು, ಅರ್ಧ ಕಪ್ ಮೆಂತ್ಯ (ಮೊಳಕೆ ಬರಿಸಿದ್ದು), ಅರ್ಧ ಕಪ್ ಮೊಳಕೆ ಬರಿಸಿದ ಹೆಸರುಕಾಳು, 1-1 ಕಪ್ ಕ್ಯಾರೆಟ್, ಎಲೆಕೋಸಿನ ತುರಿ, 1 ಕಪ್ ಕಲ್ಲಂಗಡಿ ಹಣ್ಣಿನ ಬಿಳಿಯ ಭಾಗದ ಚೂರು, 1 ಹಿಡಿ ಕಡಲೆಬೀಜ, 3 ಹಸಿ ಮೆಣಸು, ಸ್ವಲ್ಪ ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ, ಸಾಸುವೆ, ಒಣ ಮೆಣಸಿನಕಾಯಿ, ತುಸು ಎಣ್ಣೆ.
ವಿಧಾನ : ಪಾತ್ರೆಗೆ ಮೊಳಕೆ ಬರಿಸಿದ ಮೆಂತ್ಯ, ಹೆಸರುಕಾಳು, ಕ್ಯಾರೆಟ್ ತುರಿ, ಎಲೆಕೋಸಿನ ತುರಿ, ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಸಣ್ಣ ಸಣ್ಣ ಹೋಳು ಎಲ್ಲವನ್ನೂ ಸೇರಿಸಿ. ಅದಕ್ಕೆ ಹುರಿದ ಕಡಲೆಬೀಜವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ತರಿಯಾಗಿ ಪುಡಿ ಮಾಡಿ ಸೇರಿಸಿ. ಸಾಸುವೆ, ಒಣ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ, ಅದನ್ನು ಕಾಳಿನ ಮಿಶ್ರಣಕ್ಕೆ ಸೇರಿಸಿ. ಊಟಕ್ಕೆ ಕುಳಿತುಕೊಳ್ಳುವಾಗ ಮೊಸರು, ಕೊ.ಸೊಪ್ಪು, ಉಪ್ಪು, ಸೇರಿಸಿ, ಬಡಿಸಿ.

ನವಣೆ ಲಡ್ಡು
ಸಾಮಗ್ರಿ : 1-1 ಕಪ್ ನವಣೆ, ಸಕ್ಕರೆ, ಅರ್ಧ ಕಪ್ ತುಪ್ಪ, ಅರ್ಧ ಕಪ್ ಬಾದಾಮಿ, ಗೋಡಂಬಿ, ಪಿಸ್ತಾ ಚೂರು, ಚಿಟಕಿ ಏಲಕ್ಕಿ ಪುಡಿ.
ವಿಧಾನ : ನವಣೆಯನ್ನು ಘಮ್ಮೆನ್ನುವಂತೆ ಹುರಿದುಕೊಳ್ಳಿ. ಅದು ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅದೇ ರೀತಿ ಸಕ್ಕರೆಯನ್ನು ಸಹ ಪುಡಿ ಮಾಡಿಕೊಳ್ಳಿ. ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹುರಿದು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಪಾತ್ರೆಗೆ ತುಪ್ಪ ಹಾಕಿ ಕಾದ ನಂತರ ಗೋಡಂಬಿ, ಬಾದಾಮಿ, ಪಿಸ್ತಾ ಚೂರು ಹಾಕಿ ಹುರಿದು ಅದರ ಮೇಲೆ ನವಣೆ ಹಾಕಿ ಹಿಟ್ಟನ್ನು ಹಾಕಿ ಕೆಳಗಿಳಿಸಿ. ಅದಕ್ಕೆ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಬಿಸಿ ತುಪ್ಪ ಹಾಕಿ ಕೈಯಾಡಿಸುತ್ತಾ ಉಂಡೆ ಕಟ್ಟಿ. ರುಚಿಯಾದ ಪೌಷ್ಟಿಕಾಂಶವುಳ್ಳ ನವಣೆ ಲಡ್ಡು ರೆಡಿ.

ಸಿಹಿ ಗೆಣಸಿನ ಒಬ್ಬಟ್ಟು
ಸಾಮಗ್ರಿ : ದಪ್ಪನಾದ 2 ಸಿಹಿ ಗೆಣಸು, 4 ಅಚ್ಚು ಬೆಲ್ಲ, ಚಿಟಕಿ ಒಣಶುಂಠಿ, ಜಾಯಿಕಾಯಿ, ಏಲಕ್ಕಿ ಪುಡಿ, 2 ಕಪ್ ಮೈದಾ ಹಿಟ್ಟು, ಕಾಲು ಕಪ್ ತುಪ್ಪ, 5 ಚಮಚ ಎಣ್ಣೆ.
ವಿಧಾನ : ಮೈದಾಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಕಣಕದ ರೀತಿಯಲ್ಲಿ ಕಲಸಿ, ಮೇಲೆ ಸ್ವಲ್ಪ ಎಣ್ಣೆ ಸವರಿ, ಪಾತ್ರೆಯಲ್ಲಿ ಮುಚ್ಚಿಟ್ಟು, 1 ಗಂಟೆ ಕಾಲ ಇಡಿ. ನಂತರ ಕುಕ್ಕರ್ ನಲ್ಲಿ ನೀರು ಹಾಕಿ ಅದರಲ್ಲಿ ಗೆಣಸನ್ನು ಎರಡು ಸೀಟಿ ಕೂಗಿಸಿಕೊಳ್ಳಿ. ಬೆಂದ ಗೆಣಸಿನ ಸಿಪ್ಪೆ ತೆಗೆದು ತುರಿದುಕೊಳ್ಳಿ. ಪಾತ್ರೆಗೆ ಬೆಲ್ಲ, ಸ್ವಲ್ಪ ನೀರು ಹಾಕಿ ಕರಗಿಸಿ, ಶೋಧಿಸಿ, ಕುದಿಸಿ ಸ್ವಲ್ಪ ಗಟ್ಟಿಯಾದಾಗ, ಸಣ್ಣ ಉರಿ ಮಾಡಿ ತುರಿದ ಗೆಣಸನ್ನು ಅದಕ್ಕೆ ಹಾಕಿ ಕೈಯಾಡಿಸುತ್ತಾ, ಅದಕ್ಕೆ ಏಲಕ್ಕಿ, ಒಣಶುಂಠಿ, ಜಾಯಿಕಾಯಿ ಪುಡಿ ಹಾಕುತ್ತಾ ಚೆನ್ನಾಗಿ ಕೈ ಆಡಿಸಿ. ನಂತರ ಕೆಳಗಳಿಸಿ ನಿಂಬೆ ಗಾತ್ರದ ಉಂಡೆ ಕಟ್ಟಿ. ಈಗ ಹೂರಣ ರೆಡಿ. ಈಗ ಮೈದಾ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಅದನ್ನು ಕೊಂಚ ತಟ್ಟಿ ಮಧ್ಯದಲ್ಲಿ ಈ ಹೂರಣವನ್ನು ಇಟ್ಟು, ಲಟ್ಟಣಿಗೆಯಲ್ಲಿ ಲಟ್ಟಿಸಿ, ಕಾವಲಿಯಲ್ಲಿ ಎಣ್ಣೆ ಹಾಕಿ ಎರಡೂ ಕಡೆ ಎಣ್ಣೆ ಬಿಡುತ್ತಾ ಬೇಯಿಸಿ. ಇದನ್ನು ತುಪ್ಪದಲ್ಲಿ ತಿಂದರೆ ಬಲು ರುಚಿ!

ನವಣೆ (ಹುರಕ್ಕಿ) ಹೋಳಿಗೆ
ಸಾಮಗ್ರಿ : 1-1 ಕಪ್ ನವಣೆ, ಬೆಲ್ಲ, ಅರ್ಧ ಕಪ್ ಹುರಿಗಡಲೆ, ಕಾಲ್ ಕಪ್ ಕೊಬ್ಬರಿ ತುರಿ, 5 ಚಮಚ ಗಸಗಸೆ, ಚಿಟಕಿ ಒಣಶುಂಠಿ, ಏಲಕ್ಕಿ ಪುಡಿ, 2 ಚಮಚ ತುಪ್ಪ, ಅರ್ಧರ್ಧ ಕಪ್ ಗೋಧಿ, ಮೈದಾ ಹಿಟ್ಟು, ಚಿಟಕಿ ಉಪ್ಪು, ಕರಿಯಲು ಎಣ್ಣೆ.
ವಿಧಾನ : ಮೈದಾ, ಗೋಧಿ ಹಿಟ್ಟಿಗೆ ಚಿಟಕಿ ಉಪ್ಪು, ಎರಡು ಚಮಚ ಎಣ್ಣೆ ಹಾಕಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ಒದ್ದೆ ಬಟ್ಟೆಯಿಂದ ಮುಚ್ಚಿ, ಅರ್ಧ ಗಂಟೆ ಹಾಕಿ ನೆನೆಸಿಡಿ. ನವಣೆಯನ್ನು ಚೆನ್ನಾಗಿ ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಅದೇ ರೀತಿ ಹರಿಗಡಲೆಯನ್ನೂ ಪುಡಿ ಮಾಡಿಕೊಳ್ಳಿ. ಇದಕ್ಕೆ ಗಸಗಸ, ಕೊಬ್ಬರಿ ತುರಿ, ಒಣಶುಂಠಿ, ಏಲಕ್ಕಿ ಪುಡಿ ಹಾಕಿ ಕಲಸಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಕರಗಿಸಿ ಶೋಧಿಸಿ, ನಂತರ ಕಾಯಿಸಿ. ಸ್ವಲ್ಪ ಅಂಟು ಪಾಕ ಬಂದಾಗ ಕೆಳಗಿಳಿಸಿ ಮಿಕ್ಸ್ ಮಾಡಿ ನವಣೆ ಹಿಟ್ಟಿಗೆ ಹಾಕಿ ಕೈಯಾಡಿಸಿ. ಈಗ ಹೂರಣ ರೆಡಿ. ಕಲಸಿದ ಗೋಧಿ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ತಟ್ಟಿ, ಅದರ ಮೇಲೆ ನವಣೆ ಹೂರಣ ಹಾಕಿ ಮುಚ್ಚಿ. ಪೂರಿ ಅಗಲಕ್ಕೆ ಲಟ್ಟಿಸಬೇಕು. ನಂತರ ಕಾದ ಎಣ್ಣೆಯಲ್ಲಿ ಎರಡೂ ಕಡೆ ಎಣ್ಣೆ ಬಿಡುತ್ತಾ ಬೇಯಿಸಿ. ರುಚಿ ರುಚಿಯಾದ ನವಣೆ ಹೋಳಿಗೆ ರೆಡಿ!

ಆಲೂಗಡ್ಡೆ ಬರ್ಫಿ
ಸಾಮಗ್ರಿ : ದಪ್ಪಗಿರುವ ಎರಡು ಆಲೂಗಡ್ಡೆ, 2 ಕಪ್ ಸಕ್ಕರೆ, 5 ಚಮಚ ತುಪ್ಪ, ಚಿಟಕಿ ಏಲಕ್ಕಿಪುಡಿ, ಒಂದಿಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು.
ವಿಧಾನ : ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು ಕರಿದು ತೆಗೆದಿರಿಸಿ. ನಂತರ ಅದಕ್ಕೆ ತುರಿದ ಆಲೂಗೆಡ್ಡೆ ಹಾಕಿ ಕೈಯಾಡಿಸಿ. ಅದಕ್ಕೆ ಸಕ್ಕರೆ, ತುಪ್ಪ, ಏಲಕ್ಕಿ ಪುಡಿ ಹಾಕಿ ಘಮ ಘಮ ವಾಸನೆ ಬರುವವರೆಗೂ ಬಾಡಿಸಿ. ತಳ ಬಿಟ್ಟಾಗ ತುಪ್ಪ ಸವರಿದ ತಟ್ಟೆಗೆ ಇದನ್ನು ಸುರಿದು, ಬೇಕಾದ ಆಕಾರಕ್ಕೆ ಕತ್ತರಿಸಿ. ಅದರ ಮೇಲೆ ಕರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ, ಪಿಸ್ತಾಗಳಿಂದ ಅಲಂಕರಿಸಿ. ಇದೇ ರುಚಿಯಾದ ಆಲೂಗೆಡ್ಡೆ ಬರ್ಫಿ! ಮೃದುವಾದ ಈ ಬರ್ಫಿ ತಿನ್ನಲು ಬಲು ರುಚಿಯಾಗಿರುತ್ತದೆ.

ಅವರೇಕಾಳು, ಅವಲಕ್ಕಿ ಕಟ್ಲೆಟ್
ಸಾಮಗ್ರಿ : 1 ಕಪ್ ಹಸಿ ಅವರೆಕಾಳು, ಅರ್ಧ ಕಪ್ ಅವಲಕ್ಕಿ, ಕಾಲು ಕಪ್ ರವೆ, ಅರ್ಧ ಕಪ್ ಕಾರ್ನ್ ಫ್ಲೋರ್, ಬಟಾಣಿ, ಬೀನ್ಸ್, ಕ್ಯಾರೆಟ್ ಎಲ್ಲಾ ಒಟ್ಟು ಸೇರಿ 1 ಕಪ್. ಒಂದಿಂಚು ಶುಂಠಿ, 5-6 ಎಸಳು ಬೆಳ್ಳುಳ್ಳಿ, 4 ಹಸಿ ಮೆಣಸಿನಕಾಯಿ, 1 ಚಮಚ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ವಿಧಾನ : ಅವಲಕ್ಕಿಯನ್ನು ತರಿ ತರಿಯಾಗಿ ಮಾಡಿಕೊಳ್ಳಿ, ಅವರೆಕಾಳು, ಬೀನ್ಸ್, ಕ್ಯಾರೆಟ್, ಬಟಾಣಿ ಎಲ್ಲವನ್ನೂ ಬೇಯಿಸಿ, ಸ್ವಲ್ಪ ತರಿ ತರಿಯಾಗಿ ಕಿವುಚಿ. ಇದಕ್ಕೆ ಪುಡಿ ಮಾಡಿದ ಅವಲಕ್ಕಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಉಪ್ಪು ಹಾಕಿ ಕಲಸಿ ಉಂಡೆ ಕಟ್ಟಿ. ಕಾರ್ನ್ ಫ್ಲೋರ್ ಗೆ ಸ್ವಲ್ಪ ನೀರು ಹಾಕಿ ತೆಳ್ಳಗೆ ಕಲಸಿಡಿ. ಉಂಡೆ ಮಾಡಿದ ಮಿಶ್ರಣವನ್ನು ತಟ್ಟಿ ಕಾರ್ನ್ ಫ್ಲೋರ್ ನಲ್ಲಿ ಅದ್ದಿ ರವೆಯಲ್ಲಿ ಹೊರಳಿಸಿ. ಇದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಟೊಮೇಟೊ ಸಾಸ್, ಪುದೀನಾ ಚಟ್ನಿಯೊಂದಿಗೆ ತಿನ್ನಲು ರುಚಿ.

ಮಿಶ್ರ ಹಣ್ಣುಗಳ ಫ್ರೂಟ್ ಸಲಾಡ್
ಸಾಮಗ್ರಿ : 1 ಸೇಬು, 10 ಸೀಡ್ಲೆಸ್ ದ್ರಾಕ್ಷಿ, 1-1 ಕಿತ್ತಳೆ ಹಣ್ಣು, ಮೂಸಂಬಿ, ಸಪೋಟ, ದಾಳಿಂಬೆ ಹಣ್ಣು, 5 ಬಾಳೆಹಣ್ಣು, 5-6 ದ್ರಾಕ್ಷಿ, 10-12 ಬಾದಾಮಿ, ಗೋಡಂಬಿ, ಪಿಸ್ತಾ, 5 ಹಸಿ ಖರ್ಜೂರ, ರುಚಿಗೆ ತಕ್ಕಷ್ಟು ಜೇನುತುಪ್ಪ, ಪುಡಿ ಮಾಡಿದ ಮೆಣಸು, ನಿಂಬೆರಸ, ಉಪ್ಪು.
ವಿಧಾನ : ಮೇಲೆ ಹೇಳಿದ ಎಲ್ಲಾ ತರಹದ ಹಣ್ಣುಗಳನ್ನು ಬಿಡಿಸಿ ಪಾತ್ರೆಗೆ ಹಾಕಿಡಿ. ಅದಕ್ಕೆ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರದ ಚೂರುಗಳನ್ನು ಹಾಕಿ. ಜೇನುತುಪ್ಪ, ಮೆಣಸಿನಪುಡಿ, ನಿಂಬೆರಸ, ಉಪ್ಪು ಎಲ್ಲವನ್ನೂ ಹಣ್ಣಿನ ಚೂರುಗಳ ಮಿಶ್ರಣಕ್ಕೆ ಹಾಕಿ ಕೈಯಾಡಿಸಿ. ಅದನ್ನು ಗಾಜಿನ ಬಟ್ಟಲಿಗೆ ರವಾನಿಸಿ, ಪೌಷ್ಟಿಕಾಂಶವುಳ್ಳ ಹಣ್ಣುಗಳ ಸಲಾಡ್ ತಿನ್ನಲು ರುಚಿ.

ಹೆಸರುಬೇಳೆ ಚಕ್ಕುಲಿ
ಸಾಮಗ್ರಿ : 1 ಕಪ್ ಹೆಸರಬೇಳೆ, 2 ಕಪ್ ಅಕ್ಕಿಹಿಟ್ಟು, ಅರ್ಧ ಹೋಳು ತೆಂಗಿನತುರಿ, ಚಿಟಕಿ ಏಲಕ್ಕಿ, 4 ಚಮಚ ಎಳ್ಳು, 1 ಚಮಚ ಜೀರಿಗೆ, 2 ಚಮಚ ತುಪ್ಪ, 2 ಚಮಚ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಕರಿಯಲು ಎಣ್ಣೆ.
ವಿಧಾನ : ಹೆಸರಬೇಳೆಗೆ 2 ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. ಅಕ್ಕಿಹಿಟ್ಟನ್ನು ಘಮ್ ಎನ್ನುವಂತೆ ಹುರಿದಿಡಿ. ಬೆಂದ ಹೆಸರುಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದೇ ರೀತಿ ತೆಂಗಿನ ತುರಿ, ಏಲಕ್ಕಿಯನ್ನು ರುಬ್ಬಿಕೊಳ್ಳುವುದು. ಹುರಿದ ಅಕ್ಕಿಹಿಟ್ಟಿಗೆ ತಿರುವಿದ ತೆಂಗು, ಹೆಸರುಬೇಳೆ, ಉಪ್ಪು, ಹಾಲು, ಇಂಗು, ಬಿಸಿ ತುಪ್ಪ, ಎಳ್ಳು, ಜೀರಿಗೆ ಎಲ್ಲವನ್ನೂ ಹಾಕಿ ಕಲಸಿಟ್ಟುಕೊಂಡು ಚಕ್ಕುಲಿ ಒರಳಿನಲ್ಲಿ ಒತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಬೇಲದ ಹಣ್ಣಿನ ಗೊಜ್ಜು
ಸಾಮಗ್ರಿ : 2 ಬೇಲದ ಹಣ್ಣು, 1-1 ಚಮಚ ಉದ್ದಿನಬೇಳೆ, ಕಡಲೆಬೇಳೆ, ಕಾಲು ಚಮಚ ಮೆಂತ್ಯ, 3 ಚಮಚ ಕೊತ್ತಂಬರಿ ಬೀಜ, 2 ಚಮಚ ಜೀರಿಗೆ, 3 ಚಮಚ ಬಿಳಿ ಎಳ್ಳು, 6 ಒಣಮೆಣಸಿನ ಕಾಯಿ, 1 ಕಪ್ ಕಾಯಿತುರಿ, ಸ್ವಲ್ಪ ಕರಿಬೇವು, ಕೊ.ಸೊಪ್ಪು, ನಿಂಬೆ ಗಾತ್ರ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 5-6 ಚಮಚ ಎಣ್ಣೆ, ಅರ್ಧ ಚಮಚ ಸಾಸುವೆ.
ವಿಧಾನ : ಬೇಲದ ಹಣ್ಣಿನ ತಿರುಳನ್ನು ತೆಗೆದಿಟ್ಟುಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಮೆಂತ್ಯ, ಕೊತ್ತಂಬರಿ ಬೀಜ, ಜೀರಿಗೆ, ಬಿಳಿ ಎಳ್ಳು, ಒಣಮೆಣಸಿನಕಾಯಿ ಎಲ್ಲವನ್ನೂ ಹುರಿದಿಟ್ಟುಕೊಳ್ಳಿ. ಕಾಯಿ ತುರಿಗೆ ಈ ಹುರಿದ ಪದಾರ್ಥವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಸ್ವಲ್ಪ ನೀರು ಹಾಕಿ, ಬೇಲದ ಹಣ್ಣಿನ ತಿರುಳನ್ನು ಹಾಕಿ ಸ್ವಲ್ಪ ಬೇಯಿಸಿ. ನಂತರ ಉಪ್ಪು, ಬೆಲ್ಲ ಹಾಕಿ. ಕುದಿ ಬಂದ ಮೇಲೆ ರುಬ್ಬಿದ ಮಸಾಲ, ಕರಿಬೇವು, ಉಪ್ಪು ಹಾಕಿ ಬೇಯಿಸಿ. ನಂತರ ಕಾದ ಎಣ್ಣೆಗೆ ಸಾಸುವೆ, ಒಣಮೆಣಸಿನಕಾಯಿ, ಕರಿಬೇವು, ಇಂಗಿನ ಒಗ್ಗರಣೆ ಕೊಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ, ಉಪ್ಪು, ಹುಳಿ, ಖಾರ, ಸಿಹಿ ಎಲ್ಲ ಮಿಶ್ರಿತವಾಗಿರುವುದರಿಂದ ಇದು ಬಲು ರುಚಿ!

ಸಿರಿಧಾನ್ಯಗಳ ಬರ್ಫಿ
ಸಾಮಗ್ರಿ : 1-1 ಕಪ್ ಸಿರಿಧಾನ್ಯಗಳ ಹಿಟ್ಟು, ಬೆಲ್ಲ, 2 ಏಲಕ್ಕಿ, ಅರ್ಧ ಕಪ್ ಕೊಬ್ಬರಿ ತುರಿ, ಕಾಲು ಕಪ್ ತುಪ್ಪ, ಸ್ವಲ್ಪ ದ್ರಾಕ್ಷಿ, ಬಾದಾಮಿ, ಗೋಡಂಬಿ ಪಿಸ್ತಾ ಚೂರು.
ವಿಧಾನ : ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಚೂರು ಹಾಕಿ ಹುರಿದಿಟ್ಟುಕೊಳ್ಳಿ. ಅದೇ ಬಾಣಲೆಗೆ ಸಿರಿಧಾನ್ಯದ ಹಿಟ್ಟನ್ನು ಘಮ್ ಎನ್ನುವಂತೆ ಹುರಿಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿ, ಶೋಧಿಸಿ. ಆನಂತರ ಮತ್ತೆ ಕುದಿಸಿ, ಸ್ವಲ್ಪ ಅಂಟು ಪಾಕ ಬಂದಾಗ ಸಿರಿಧಾನ್ಯದ ಹಿಟ್ಟು, ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ. ಗೋಡಂಬಿ, ಬಾದಾಮಿ ಚೂರುಗಳನ್ನು ಹಾಕಿ. ತಳಬಿಟ್ಟ ಮೇಲೆ ತುಪ್ಪ ಸವರಿದ ತಟ್ಟೆಗೆ ಹಾಕಿ. ಆರಿದ ನಂತರ ಕತ್ತರಿಸಿ, ಆರೋಗ್ಯ ಪೂರ್ಣ ಸಿರಿಧಾನ್ಯದ ಬರ್ಫಿ ರೆಡಿ. ಅರ್ಧರ್ಧ ಕಪ್ ನವಣೆ, ಸಾಮೆ, ಸಜ್ಜೆ, ಕೊರವೆ, ಅರ್ಕ ಇವೆಲ್ಲವನ್ನೂ ಸೇರಿಸಿ ಹಿಟ್ಟು ಮಾಡಿಕೊಳ್ಳಿ. ಬೇಕಾದಾಗ ರೊಟ್ಟಿ, ಗಂಜಿ ಮಾಡಬಹುದು. ಇದನ್ನು ಹಾಲಿಗೆ ಹಾಕಿಕೊಂಡು ಸಹ ಕುಡಿಯಬಹುದು.

ಕ್ಯಾರೆಟ್ ಸಿಹಿ ಕಚೋರಿ
ಸಾಮಗ್ರಿ : 1-1 ಕಪ್ ಕ್ಯಾರೆಟ್ ತುರಿ, ಸಕ್ಕರೆ, 5-6 ಚಮಚ ತುಪ್ಪ, 2 ಏಲಕ್ಕಿ, 10-12 ಬಾದಾಮಿ, ಗೋಡಂಬಿ, 1-1 ಕಪ್ ಹಾಲು, ಗೋಧಿಹಿಟ್ಟು, ಕಾಲು ಕಪ್ ಚಿರೋಟಿ ರವೆ, ಚಿಟಕಿ ಉಪ್ಪು, ಕರಿಯಲು ಏಣ್ಣೆ.
ವಿಧಾನ : ಗೋಧಿಹಿಟ್ಟು, ಚಿರೋಟಿ ರವೆ, ಚಿಟಕಿ ಉಪ್ಪು, 1 ಚಮಚ ತುಪ್ಪ, ನೀರು ಹಾಕಿ ಪೂರಿ ಹದಕ್ಕೆ ಕಲಸಿಡಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಚೂರು ಹುರಿದಿಡಿ. ಆ ನಂತರ ಕ್ಯಾರೆಟ್ ತುರಿ ಹಾಕಿ ಘಮ್ಮೆನ್ನುಂತೆ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಇದಕ್ಕೆ ಒಂದು ಕಪ್ ಹಾಲು ಹಾಕಿ ಬೇಯಿಸಿ. ಗಟ್ಟಿಯಾದಾಗ ಸಕ್ಕರೆ ಹಾಕಿ ಮತ್ತೆ ಕೈಯಾಡಿಸಿ. ಕರಿದ ಗೋಡಂಬಿ, ಬಾದಾಮಿ ಚೂರನ್ನು ಹಾಕಿ, ಏಲಕ್ಕಿ ಪುಡಿ ಹಾಕಿ ಕೈಯಾಡಿಸಿ. ತಣ್ಣಗಾದ ಮೇಲೆ ನಿಂಬೆಗಾತ್ರದ ಉಂಡೆ ಕಟ್ಟಿಡಿ. ಕಲಸಿಟ್ಟ ಪೂರಿ ಉಂಡೆಯನ್ನು ಲಟ್ಟಿಸಿ, ಮಧ್ಯದಲ್ಲಿ ಕ್ಯಾರೆಟ್ ಹೂರಣವನ್ನು ಇಟ್ಟು, ಮುಚ್ಚಿ, ಇದನ್ನು ಮತ್ತೆ ಲಘುವಾಗಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.
– ರಾಜೇಶ್ವರಿ ವಿಶ್ವನಾಥ್





