ಚಾಮೀನ್ ಸಾಮಗ್ರಿ : 150 ಗ್ರಾಂ ನೂಡಲ್ಸ್ ತರಹದ ಚಾಮೀನ್ (ರೆಡಿಮೇಡ್ ಲಭ್ಯ), 1-1 ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, 4-6 ತುಂಡು ಹೆಚ್ಚಿದ ಬ್ರೋಕ್ಲಿ, 1-1 ಕಪ್ ಸಣ್ಣಗೆ ಹೆಚ್ಚಿದ ಹೂಕೋಸು, ಎಲೆಕೋಸು, 1-2 ಈರುಳ್ಳಿ, 3-4 ಹಸಿ ಮೆಣಸು, 7-8 ಎಸಳು ಬೆಳ್ಳುಳ್ಳಿ, 1-2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸೋಯಾ ಸಾಸ್, ಚಿಲೀ ಸಾಸ್, ಆಲಿಲ್ ಆಯಿಲ್.
ವಿಧಾನ : ಒಂದು ದೊಡ್ಡ ಸ್ಟೀಲ್ ಪಾತ್ರೆಗೆ ಚಾಮೀನ್ ಹಾಕಿ, ಅದು ಮುಗುಳುವಷ್ಟು ನೀರು, 2 ಚಮಚ ಎಣ್ಣೆ ಹಾಕಿ ಹದನಾಗಿ ಬೇಯಿಸಿ. ಇದನ್ನು ಸೋಸಿ ಒಂದು ಸ್ಟೀಲ್ ಜರಡಿಗೆ ಹಾಕಿಡಿ. ಒಂದು ಬಾಣಲೆಗೆ 4 ಚಮಚ ಆಲಿವ್ ಆಯಿಲ್ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಒಂದೊಂದೇ ತರಕಾರಿ ಹಾಕಿ ಎಲ್ಲವನ್ನೂ ಮಧ್ಯಮ ಉರಿಯಲ್ಲಿ ಬಾಡಿಸಿ. ಇದನ್ನು ಒಂದು ಬೇಸನ್ನಿಗೆ ಹಾಕಿರಿಸಿ, ಅದೇ ಬಾಣಲೆಯಲ್ಲಿ ಮತ್ತೆ 2 ಚಮಚ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು ಕೊನೆಗೆ ಟೊಮೇಟೊ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಮೆಣಸು, 2 ಬಗೆ ಸಾಸ್ ಹಾಕಿ ಕೈಯಾಡಿಸಿ. ನಂತರ ಇದಕ್ಕೆ ಮೊದಲೇ ಬಾಡಿಸಿದ ತರಕಾರಿ, ಕೊನೆಯಲ್ಲಿ ಚಾಮೀನ್ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಬಿಸಿ ಬಿಸಿಯಾಗಿ ಇದನ್ನು ಟೊಮೇಟೊ ಸಾಸ್ ಜೊತೆ ಸವಿಯಿರಿ.

ಟೇಸ್ಟಿ ಆಲೂ ಟಿಕ್ಕಿ
ಸಾಮಗ್ರಿ : ಸಿಪ್ಪೆ ಸುಲಿದ 4 ಬೆಂದ ಆಲೂ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ತುರಿದ 4-5 ಕ್ಯಾರೆಟ್, 100 ಗ್ರಾಂ ತುರಿದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್ ಪುಡಿ, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮಸೆದ ಆಲೂ ಹಾಕಿ, ಅದಕ್ಕೆ ಮೇಲಿನ ಇತರ ಎಲ್ಲಾ ಸಾಮಗ್ರಿ ಸೇರಿಸಿ, ಪಕೋಡ ಮಿಶ್ರಣದ ಹದಕ್ಕೆ ನೀಟಾಗಿ ಕಲಸಿಡಿ. ಇದರಿಂದ ಸಣ್ಣ ಗೋಲಿ ಗಾತ್ರದ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಗೋಳಿ ಬಜೆ ಆಕಾರ ಕೊಡಿ. ತುಸು ಮೈದಾ ಡಸ್ಟಿಂಗ್ ಮಾಡಿಕೊಳ್ಳುತ್ತಾ, ಎಲ್ಲಾ ಉಂಡೆಗಳನ್ನೂ ಹೀಗೆ ರೆಡಿ ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ.

ಅವಕಾಡೋ ಚಟ್ನಿ ವಿತ್ ನಾಚೋಸ್
ಸಾಮಗ್ರಿ : 2-3 ಅವಕಾಡೋ, ಹೆಚ್ಚಿದ 1-2 ಈರುಳ್ಳಿ, 3-4 ಹಸಿ ಮೆಣಸು, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಚಿಲೀ ಫ್ಲೇಕ್ಸ್.
ವಿಧಾನ : ಅವಕಾಡೋ (ಬೆಣ್ಣೆ ಹಣ್ಣು) ಗಳನ್ನು ಹೆಚ್ಚಿ, ಬೀಜ ಬೇರ್ಪಡಿಸಿ, ಅದರ ತಿರುಳನ್ನು ಹೆರೆದು ತೆಗೆಯಿರಿ. ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸಿಯಲ್ಲಿ ಚಟ್ನಿ ತಿರುವಿಕೊಳ್ಳಿ. ಇದಕ್ಕೆ ಒಗ್ಗರಣೆ ಕೊಟ್ಟ ನಂತರ, ಇದನ್ನು ರೆಡಿಮೇಡ್ ನಾಚೋಸ್ (ಚಿತ್ರದಲ್ಲಿರುವಂತೆ ಅಥವಾ ಅದೇ ತರಹದ ಚಿಪ್ಸ್) ಜೊತೆ ಸವಿಯಲು ಕೊಡಿ.





