IPL 2026 ರ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಎರಡನೇ ಹಂತ ಏಪ್ರಿಲ್ 13 ರಂದು ಆರಂಭವಾಗಲಿದ್ದು, ಮೇ 24 ರಂದು ಅಂತ್ಯಗೊಳ್ಳಲಿದೆ.

ಮೊದಲ ಹಂತ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿದ್ದು, ಹಾಲಿ ಚಾಂಪಿಯನ್ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮೇ 31 ರಂದು ಬೆಂಗಳೂರಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

50 ಪಂದ್ಯಗಳನ್ನು ಒಳಗೊಂಡಿರುವ ಲೀಗ್ ಹಂತದ 2 ನೇ ಹಂತದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24ರವರಗೆ ದೇಶದ 12 ಸ್ಥಳಗಳಲ್ಲಿ ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯಪುರ ಮತ್ತು ನ್ಯೂ ಚಂಡೀಗಢದಲ್ಲಿ ಈ ಪಂದ್ಯಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಟೂರ್ನಮೆಂಟ್ ನಿರ್ಣಾಯಕ ಹಂತ ಪ್ರವೇಶಿಸುತ್ತಿದ್ದಂತೆ ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ತವರು ಸ್ಥಳಗಳಲ್ಲಿ ಪೈಪೋಟಿ ನಡೆಸಲಿವೆ. ಲೀಗ್ ಹಂತದ ಕೊನೆಯಾರ್ಧದಲ್ಲಿ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ.

ಏಪ್ರಿಲ್ 13 ರಂದು ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸುವುದರೊಂದಿಗೆ 2ನೇ ಹಂತ ಆರಂಭವಾಗುತ್ತದೆ. ಈ ಹಂತದಲ್ಲಿ ಬೇರೆ ಬೇರೆ ಕಡೆ ಮೂರು ಪಂದ್ಯಗಳು ಸೇರಿದಂತೆ ಪಂಜಾಬ್ ಕಿಂಗ್ಸ್ ನ್ಯೂ ಚಂಡೀಗಢ ಮತ್ತು ಧರ್ಮಶಾಲಾದಲ್ಲಿ ತಮ್ಮ ತವರು ಪಂದ್ಯಗಳನ್ನು ಆಡಲಿದೆ.

ರಾಜಸ್ಥಾನ ರಾಯಲ್ಸ್ ನಾಲ್ಕು ತವರಿನ ಪಂದ್ಯಗಳನ್ನು ಜೈಪುರದಲ್ಲಿ ಆಡಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಹೋಮ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಮತ್ತು ಎರಡು ರಾಯಪುರದಲ್ಲಿ ಆಡಲಿದೆ. ಪ್ಲೇಆಫ್‌ಗಳ ಸ್ಥಳಗಳನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ