– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದ ನಿರ್ಮಾಪಕ ಬಿ.ಜಿ. ಮಂಜುನಾಥ್ (B.G. Manjunath) ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಸಿಲ್ಕ್ ಮಂಜು ಎಂದೇ ಪರಿಚಿತರಾಗಿದ್ದ ಅವರು, ತಮ್ಮ 65ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ನಿರ್ಮಾಪಕರಾಗಿ ಹಲವು ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಮಂಜುನಾಥ್ ಅವರಿಗೆ ವಿಶೇಷ ಹೆಸರು ತಂದುಕೊಟ್ಟಿದ್ದು ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯದ ‘ಎ’ ಸಿನಿಮಾ (A Cinema). ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಲ್ಲದೆ, ನಿರ್ಮಾಪಕರಾಗಿ ಅವರ ವೃತ್ತಿಜೀವನದಲ್ಲೂ ಮಹತ್ವದ ಸ್ಥಾನ ಪಡೆದಿತ್ತು.
‘ಎ’ ಮಾತ್ರವಲ್ಲದೆ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಪ್ರತ್ಯರ್ಥ’, ‘ಸೂರ್ಯಕಾಂತಿ’, ‘ಹಗಲು ವೇಷ’, ‘ಸೈಕಿಕ್’ ಮತ್ತು ‘ಟೆರರ್’ ಸೇರಿದಂತೆ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದ ಸಿಲ್ಕ್ ಮಂಜು, ಸಿನಿಮಾ ವಲಯದಲ್ಲಿ ಪರಿಚಿತ ಹೆಸರಾಗಿದ್ದರು.
ಕಳೆದ ಹಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಸಮಸ್ಯೆ ಎದುರಿಸಿದ್ದ ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಆರೋಗ್ಯ ಸಮಸ್ಯೆಗಳ ನಡುವೆ ಸಾಲದ ಚಿಂತೆಯೂ ಅವರನ್ನು ಕಾಡುತ್ತಿತ್ತು ಎಂದು ವರದಿಯಾಗಿದೆ.
ಅಕ್ಟೋಬರ್ 26ರ ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅಕ್ಟೋಬರ್ 27ರ ಮಂಗಳವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.





