ಕಡಾಯಿ ಪನೀರ್
ಸಾಮಗ್ರಿ : ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ ತುಂಡು, ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, 250 ಗ್ರಾ ತುಂಡರಿಸಿದ ಪನೀರ್, ರುಚಿಗೆ ತಕ್ಕಷ್ಟು ಅರಿಶಿನ, ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ರೆಡಿ ಚಿಲೀ ಫ್ಲೇಕ್ಸ್, ಬೆಣ್ಣೆ, ಧನಿಯಾಪುಡಿ, ರೆಡಿಮೇಡ್ ಮಖನಿ ಗ್ರೇವಿ, ಕಸೂರಿಮೇಥಿ, ನಿಂಬೆರಸ, ಅಲಂಕರಿಸಲು ಹೆಚ್ಚಿದ ತುಸು ಕೊ.ಸೊಪ್ಪು, ತುರಿದ ಪನೀರ್.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಎಲ್ಲಾ ಮಸಾಲೆ, ರೆಡಿಮೇಡ್ ಗ್ರೇವಿ, ಉಪ್ಪು ಸೇರಿಸಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ (ಪಕ್ಕದ ಬಾಣಲೆಯಲ್ಲಿ ತುಪ್ಪದಲ್ಲಿ ಹುರಿದ) ಪನೀರ್ ತುಂಡು ಸೇರಿಸಿ ಬಾಡಿಸಿ. ಕೆಳಗಿಳಿಸಿದ ನಂತರ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ. ಇದು ಚಪಾತಿ, ಪೂರಿಗಳಿಗೆ ಸೊಗಸಾಗಿ ಹೊಂದುತ್ತದೆ.

ಸ್ಪೆಷಲ್ ಪುದೀನಾ ಪಲಾವ್
ಸಾಮಗ್ರಿ : ಒಂದಿಷ್ಟು ಹೆಚ್ಚಿದ ಬೀನ್ಸ್, ಕ್ಯಾರೆಟ್, ಆಲೂ, ಹಸಿ ಬಟಾಣಿ, ಬ್ಲಾಂಚ್ ಗೊಳಿಸಲಾದ ಹೂಕೋಸಿನ ತುಂಡು, ತಾಜಾ ಪುದೀನಾ, ಕೊ.ಸೊಪ್ಪು, ಹಸಿ ಶುಂಠಿ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ, 300 ಗ್ರಾಂ ಬಾಸುಮತಿ ಅಕ್ಕಿ, ಸ್ಪೆಷಲ್ ಬಿರಿಯಾನಿ ಮಿಕ್ಸ್, ತುಸು ಕೇವ್ರಾ ವಾಟರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಪ್ಪ, ರಿಚ್ ಕ್ರೀಂ, ರೆಡಿಮೇಡ್ಬ್ರೌನ್ ಗ್ರೇವಿ, ಜೀರಿಗೆ.
ವಿಧಾನ : ಮೊದಲು ಹೆಚ್ಚಿದ ತರಕಾರಿಯನ್ನು ಬೇಯಿಸಿ. ಒಂದು ಕುಕ್ಕರ್ ನಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದಕ್ಕೆ ಒಂದೊಂದಾಗಿ ಎಲ್ಲಾ ಮಸಾಲೆ, ಬ್ರೌನ್ ಗ್ರೇವಿ, ಹೆಚ್ಚಿದ ಪದಾರ್ಥ, ಕೇವ್ರಾ ವಾಟರ್ ಇತ್ಯಾದಿ ಎಲ್ಲಾ ಬೆರೆಸಿ ಕೈಯಾಡಿಸಿ. ಮಂದ ಉರಿಯಲ್ಲಿ 2 ನಿಮಿಷ ಕೆದಕಿರಿ. ಮೊದಲೇ ಬೇಯಿಸಿಕೊಂಡಿದ್ದ ಬಾಸುಮತಿ ಅಕ್ಕಿಯ ಅನ್ನ ಇದಕ್ಕೆ ಬೆರೆಸಿ, 2-3 ನಿಮಿಷ ಮಂದ ಉರಿಯಲ್ಲಿ ಹಾಗೇ ಬಿಡಿ. ಕೊನೆಯಲ್ಲಿ ಮತ್ತಷ್ಟು ಕೊ.ಸೊಪ್ಪು ಉದುರಿಸಿ, ಈರುಳ್ಳಿ, ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಬಿರಿಯಾನಿ ಮಿಕ್ಸ್ ಗಾಗಿ ಸಾಮಗ್ರಿ : 100 ಗ್ರಾಂ ರಿಚ್ ಕ್ರೀಂ, ತುಸು ಬೆಣ್ಣೆತುಪ್ಪ, ಏಲಕ್ಕಿ ಪುಡಿ, ಗಸಗಸೆ, ವೆಟಿವೀರ್ ರೂಟ್ ಪೌಡರ್, ಜಾಪತ್ರೆ ಪುಡಿ, ತೇದ ಜಾಯಿಕಾಯಿ, ಲವಂಗ, ಚಕ್ಕೆ, ಮೊಗ್ಗು, ತುಸು ರೋಸ್ ವಾಟರ್, ರೋಹ್ ಕೇವ್ರಾ ವಾಟರ್, ವೈಟ್ ಪೆಪ್ಪರ್ ಪುಡಿ, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಶುಂಠಿ, ಲವಂಗದ ಎಲೆ, ತುಸು ಉಪ್ಪು, ಬಿಸಿ ನೀರು.
ವಿಧಾನ : ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಎಲ್ಲಾ ಮಸಾಲೆ ಸೇರಿಸಿ, ಮಂದ ಉರಿಯಲ್ಲಿ ಕೈಯಾಡಿಸಿ. ನಂತರ ಉಳಿದ ಸಾಮಗ್ರಿ ಬೆರೆಸಿ 1-2 ಕುದಿ ಬರಿಸಿ, ನೀರಿನ ಪ್ರಮಾಣ ಹಿಂಗುತ್ತಾ ಕ್ರೀಮೀ ಟೆಕ್ಸ್ ಚರ್ ಬರುವವರೆಗೂ ಕೆದಕಿ ಕೆಳಗಿಳಿಸಿ. ಇದೀಗ ಸ್ಪೆಷಲ್ ಬಿರಿಯಾನಿ ಮಿಕ್ಸ್ ರೆಡಿ!

ಪೌಷ್ಟಿಕ ತರಕಾರಿ ಪಲಾವ್
ಸಾಮಗ್ರಿ : ಒಂದಿಷ್ಟು ಹೆಚ್ಚಿದ ಬೀನ್ಸ್, ಕ್ಯಾರೆಟ್, ಆಲೂ, ಹಸಿ ಬಟಾಣಿ, ನವಿಲುಕೋಸು, ಹೂಕೋಸು, 200 ಗ್ರಾಂ ಪನೀರ್ ಕ್ಯೂಬ್ಸ್, 250 ಗ್ರಾಂ ಬಾಸುಮತಿ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೇದಗೆ ಎಸೆನ್ಸ್, ತುಪ್ಪ, ಹೆಚ್ಚಿದ ಈರುಳ್ಳಿ (ತುಪ್ಪದಲ್ಲಿ ಹುರಿದು ಬೇರೆಯಾಗಿಡಿ), ಏಲಕ್ಕಿ ಪುಡಿ, ಜೀರಿಗೆ, ಸೋಂಪು, ತುಸು ತುಪ್ಪ, ಹೆಚ್ಚಿದ ಪುದೀನಾ, ಕೊ.ಸೊಪ್ಪು.
ವಿಧಾನ : ಮೊದಲು ಹೆಚ್ಚಿದ ಎಲ್ಲಾ ತರಕಾರಿಯನ್ನೂ ತುಸು ರೀಫೈಂಡ್ ಎಣ್ಣೆಯಲ್ಲಿ ಬಾಡಿಸಿ ತೆಗೆಯಿರಿ. ಅದೇ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಎಲ್ಲಾ ಮಸಾಲೆ, ಉಪ್ಪು, ಖಾರ, ಎಸೆನ್ಸ್ ಎಲ್ಲಾ ಬೆರೆಸಿಕೊಂಡು ಕೈಯಾಡಿಸಿ. ನಂತರ ತೊಳೆದು, ನೆನೆಸಿದ್ದ ಬಾಸುಮತಿ ಅಕ್ಕಿ, ತರಕಾರಿ, ಉದುರಾಗಿ ಬರುವಷ್ಟು ನೀರು ಬೆರೆಸಿ 2 ಸೀಟಿ ಕೂಗಿಸಿ. ಅದು ತಣಿದ ನಂತರ ಮೇಲೆ ಹುರಿದ ಈರುಳ್ಳಿ, ಹೆಚ್ಚಿದ ಪುದೀನಾ, ಕೊ.ಸೊಪ್ಪು, ನಿಂಬೆಹಣ್ಣು ಹಿಂಡಿಕೊಂಡು, ತುಪ್ಪದಲ್ಲಿ ಹುರಿದ ಪನೀರ್ ಕ್ಯೂಬ್ಸ್ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಇದೀಗ ಪೌಷ್ಟಿಕ ತರಕಾರಿ ಪಲಾವ್ ರೆಡಿ, ನಿಮ್ಮ ನೆಚ್ಚಿನ ರಾಯ್ತಾ ಜೊತೆ ಸವಿಯಿರಿ.

ಹಾಂಡಿ ಸಬ್ಜಿ
ಸಾಮಗ್ರಿ : ಒಂದಿಷ್ಟು ಹೆಚ್ಚಿದ ಆಲೂ, ಬೀನ್ಸ್, ಕ್ಯಾರೆಟ್, 3 ಬಗೆಯ ಕ್ಯಾಪ್ಸಿಕಂ, ಹಸಿ ಬಟಾಣಿ, ಹೆಚ್ಚಿದ 1 ಕಂತೆ ಮೆಂತೆಸೊಪ್ಪು, 3-4 ಈರುಳ್ಳಿ, 3-4 ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, 5-6 ಹಸಿಮೆಣಸು, ತುಪ್ಪದಲ್ಲಿ ಹುರಿದ ಗೋಡಂಬಿ, ಹುರಿಗಡಲೆ, ಗಸಗಸೆ, ಫ್ರೆಶ್ ಕ್ರೀಂ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಮೊದಲು ಮಿಕ್ಸಿಗೆ ಹೆಚ್ಚಿದ ತುಸು ಈರುಳ್ಳಿ, ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುರಿದ ಗೋಡಂಬಿ, ಹಸಿ ಮೆಣಸು, ಹುರಿಗಡಲೆ, ಗಸಗಸೆ ಎಲ್ಲಾ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಹೆಚ್ಚಿದ ತರಕಾರಿ ಸೇರಿಸಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೇಟೊ, ನಂತರ ಮೆಂತೆಸೊಪ್ಪು ಹಾಕಿ ಬಾಡಿಸಿ. ಆಮೇಲೆ ಬೆಂದ ತರಕಾರಿ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಒಂದೊಂದಾಗಿ ಮಸಾಲೆ, ರುಬ್ಬಿದ ಮಿಶ್ರಣ ಎಲ್ಲಾ ಸೇರಿಸಿ ನಿಧಾನವಾಗಿ ಕೈಯಾಡಿಸಿ. ಗ್ರೇವಿ ಬಹಳ ಗಟ್ಟಿ ಎನಿಸಿದರೆ ತುಸು ನೀರು ಬೆರೆಸಿ ಕೆದಕಬೇಕು. ಕೆಳಗಿಳಿಸಿದ ನಂತರ ಹೆಚ್ಚಿದ ಕೊ.ಸೊಪ್ಪು, ಪುದೀನಾ ಸೇರಿಸಿ, ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸೇವಿಸಿ.

ಅವಧ್ ವೆಜ್ ಬಿರಿಯಾನಿ
ಸಾಮಗ್ರಿ : 2 ಕಪ್ ಬಾಸುಮತಿ ಅಕ್ಕಿ, ಅರ್ಧ ಸೌಟು ತುಪ್ಪು, ತುಸು ಜೀರಿಗೆ, ಲವಂಗ, ಚಕ್ಕೆ, ಜಾಪತ್ರೆ, ಏಲಕ್ಕಿ, ಜಾಯಿಕಾಯಿ ಪುಡಿ, ಹಾಲಲ್ಲಿ ನೆನೆಸಿದ ಕೇಸರಿ, 2 ಒಣ ಮೆಣಸಿನಕಾಯಿ, ಶುಂಠಿ ಪೇಸ್ಟ್, ಲವಂಗದ ಎಲೆ, ಕಾಳು ಮೆಣಸು (ತರಿತರಿಯಾಗಿ ಕುಟ್ಟಿಡಿ), 500 ಗ್ರಾಂ ಹೆಚ್ಚಿದ ಮಿಶ್ರ ತರಕಾರಿ, 4-5 ಟೊಮೇಟೊ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಜೀರಿಗೆ ಪುಡಿ, ಉಪ್ಪು, ಖಾರ, ಗರಂಮಸಾಲ, ಅರಿಶಿನ, ಹುಳಿ ಮೊಸರು.
ವಿಧಾನ : ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಎಲ್ಲಾ ಮಸಾಲೆ ಹಾಕಿ 2 ನಿಮಿಷ ಮಂದ ಉರಿಯಲ್ಲಿ ಬಾಡಿಸಿ. ನಂತರ ಮಿಶ್ರ ತರಕಾರಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಮೊಸರು ಬೆರೆಸಿರಿ. ಪುದೀನಾ ಸೇರಿಸಿ ಬಾಡಿಸಿ. ನಂತರ ಉಪ್ಪು, ಖಾರ, ಗರಂಮಸಾಲ ಸೇರಿಸಿ ಕೆದಕಬೇಕು. ಆಮೇಲೆ ಹಾಲಲ್ಲಿ ನೆನೆದ ಕೇಸರಿ ಸೇರಿಸಿ. ಕೊನೆಯಲ್ಲಿ ತೊಳೆದ ಬಾಸುಮತಿ ಅಕ್ಕಿ ಹಾಕಿ. ಅಗತ್ಯವಿದ್ದಷ್ಟೇ ನೀರು ಬೆರೆಸಿ, 1 ಸೀಟಿ ಬರುವಂತೆ ಕೂಗಿಸಿ. ನಂತರ 2 ನಿಮಿಷ ಗ್ಯಾಸ್ ಪೂರ್ತಿ ಸಿಮ್ ಮಾಡಿ ನಂತರ ಆರಿಸಿ. ಇದು ಚೆನ್ನಾಗಿ ತಣಿದ ನಂತರ, ಎಲ್ಲವನ್ನೂ ಲೈಟ್ ಆಗಿ ಬೆರೆಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಪನೀರ್ ಮಖಾನಿ
ಸಾಮಗ್ರಿ : 1 ಬಟ್ಟಲು ಪನೀರ್ ಕ್ಯೂಬ್ಸ್, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಕಸೂರಿಮೇಥಿ, ಹಳದಿ ಬೆಣ್ಣೆ, ಫ್ರೆಶ್ ಕ್ರೀಂ, ಸಕ್ಕರೆ, ತುಸು ಹೆಚ್ಚಿದ ಕೊ.ಸೊಪ್ಪು, ರೆಡಿಮೇಡ್ ಮಖಾನಿ ಗ್ರೇವಿ.
ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಹಸಿ ಮೆಣಸಿನ ಪೇಸ್ಟ್ ಹಾಕಿ, ತಕ್ಷಣ ಮಖಾನಿ ಗ್ರೇವಿ ಬೆರೆಸಿಕೊಳ್ಳಿ. ನಂತರ ಬೆಣ್ಣೆ, ಕ್ರೀಂ, ಕಸೂರಿಮೇಥಿ ಎಲ್ಲಾ ಸೇರಿಸಿ ಕೆದಕಬೇಕು. ಪಕ್ಕದಲ್ಲಿ ಪನೀರ್ ಕ್ಯೂಬ್ಸ್ ನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಸೇರಿಸಿ. ತುಸು ಸಕ್ಕರೆ ಹಾಕಿರಿ. 2 ನಿಮಿಷ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ರೊಟ್ಟಿ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಹೆಸರುಬೇಳೆ ತೊವ್ವೆ
ಸಾಮಗ್ರಿ : 250 ಗ್ರಾಂ ಹೆಸರುಬೇಳೆ, 3-4 ಈರುಳ್ಳಿ, 2-3 ಟೊಮೇಟೊ, 7-8 ಎಸಳು ಬೆಳ್ಳುಳ್ಳಿ, ತುಸು ಜೀರಿಗೆ, ಅರಿಶಿನ, ಶುಂಠಿ ಪೇಸ್ಟ್, 4-5 ಉದ್ದಕ್ಕೆ ಹೆಚ್ಚಿದ ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ನಿಂಬೆರಸ, ಬೆಣ್ಣೆ, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಕುಕ್ಕರಿನಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದಕ್ಕೆ ಹೆಸರುಬೇಳೆ ಹಾಕಿ ಘಂ ಎನ್ನುವಂತೆ ಹುರಿಯಿರಿ. ಇದಕ್ಕೆ ನೀರು ಬೆರೆಸಿ 2 ಸೀಟಿ ಬರುವಂತೆ ಕೂಗಿಸಿ. ತಣಿದ ನಂತರ ಅದನ್ನು ಬೇರೆ ಬಟ್ಟಲಿಗೆ ಹಾಕಿ, ಅದೇ ಕುಕ್ಕರಿನಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಮೆಣಸು, ಅರಿಶಿನ, ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ಕೊನೆಯಲ್ಲಿ ನೀರಿನ ಸಮೇತ ಬೆಂದ ಬೇಳೆ ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕುದಿಸಿರಿ. ಇದನ್ನು ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ನಿಂಬೆ ಹಣ್ಣು ಹಿಂಡಿ, ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಜೊತೆಗೆ ಸವಿಯಲು ಕೊಡಿ.





