ಮಮತೆಯ ಮಡಿಲು ಈ ಮಿನಿಸ್ಟರ್ ಪತ್ನಿ, ಸದ್ದಿಲ್ಲದ ಸಾಧಕಿ ಈ ವಾತ್ಯಲ್ಯಮೂರ್ತಿ! ಇವರ ಅಪಾರ ಸಾಧನೆಗಳ ಕುರಿತಾಗಿ ವಿವರವಾಗಿ ತಿಳಿಯೋಣವೇ….?
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಛಟಿಕದ ಸಲಾಕೆಯಂತಿರಬೇಕು
ಕ್ರಾಂತಿಕಾರಿ ವಚನಕಾರ ಬಸವಣ್ಣ ಹೇಳಿದ ಮಾತು ಪ್ರತಿಯೊಬ್ಬರ ಭವಿಷ್ಯದ ಭವ್ಯ ಬುನಾದಿಯ ಸಾಲುಗಳು, ಕೆಲವರ ಮಾತು ಹಾಗೇ ಇರುತ್ತವೆ. ಅವರು ಮಾತನಾಡುವ ಒಂದೊಂದು ಮಾತು ಮುತ್ತಿನ ಹಾರದಂತಿರುತ್ತದೆ, ನೇರವಾಗಿ ಹೃದಯವನ್ನು ಮುಟ್ಟುವಂತಿರುತ್ತದೆ. ಮತ್ತಷ್ಟು ಇನ್ನಷ್ಟು ಕೇಳುತ್ತಿರಬೇಕು ಎನ್ನುವಷ್ಟು ಮನಸ್ಸಿಗೆ ಮಧುರವಾಗಿರುತ್ತದೆ. ಅಂತೆಯೇ ಅವರು ತಾವು ಇದ್ದೂ, ಇಲ್ಲದವರಂತೆ, ಕಂಡೂ ಕಾಣದವರಂತೆ, ಎಲೆ ಮರೆಯ ಕಾಯಾಗಿ, ತಮ್ಮ ವೃತ್ತಿ, ಹವ್ಯಾಸ, ವೈಯಕ್ತಿಕ, ಸಾಮಾಜಿಕ ಬದುಕು ಎಲ್ಲವನ್ನೂ ಸ್ತಿತಪ್ರಜ್ಞರಾಗಿ ಸಮಚಿತ್ತದಿಂದ ನಡೆಸಿಕೊಂಡು ಹೋಗುತ್ತಿರುತ್ತಾರೆ.
ಯಾವುದೇ ಹಮ್ಮುಬಿಮ್ಮುಗಳಿಲ್ಲದೆ, ಸಮಾಜ ನನ್ನನ್ನು ಗುರುತಿಸಲಿ ಎಂಬ ಯಾವ ಅಪೇಕ್ಷೆಯೂ ಇಲ್ಲದೆ, ತನ್ನ ಕಾಯಕದ ಮೂಲಕ ಸಮಾಜಕ್ಕೆ ನನ್ನಿಂದ ಕಿಂಚಿತ್ತಾದರೂ ಸೇವೆ ಸಲ್ಲಲ್ಲಿ ಎನ್ನುವ ನಿಸ್ವಾರ್ಥ ಮನೋಭಾವದಿಂದ ಸದ್ದಿಲ್ಲದೆ ಕೆಲಸ ಮಾಡುವ ಮಹಿಳೆಯೊಬ್ಬರಿದ್ದಾರೆ. ಅವರೇ ಡಾ. ಭಾಗ್ಯಶ್ರೀ ಎಸ್. ಪಾಟೀಲ್, ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರವಣಪ್ರಕಾಶ್ ಪಾಟೀಲ್ ರ ಪತ್ನಿ.
ಸರಳ ಜೀವನ ಸೂತ್ರ ಅಳವಡಿಸಿಕೊಂಡಿರುವ ಡಾ. ಭಾಗ್ಯಶ್ರೀಗೆ ತಾವೊಬ್ಬ ಡಾಕ್ಟರ್ ಎನ್ನುವ ಬಿಗುಮಾನವಾಗಲಿ, ನನ್ನ ಪತಿ ರಾಜಕಾರಣಿ ಅನ್ನುವ ಅಹಂ ಆಗಲಿ ಇಲ್ಲವೇ ಇಲ್ಲ. ಪ್ರಚಾರವಂತೂ ಇವರಿಗೆ ಬೇಕಾಗಿಯೇ ಇಲ್ಲ. ಇಂತಹ ಒಂದು ಪರಿಪೂರ್ಣ ವ್ಯಕ್ತಿತ್ವದಿಂದಲೇ ಪ್ರತಿಯೊಬ್ಬ ಮಹಿಳೆಗೆ ಈಕೆ ರೋಲ್ ಮಾಡೆಲ್ ಆಗಿರುವವರು.
ಪತಿಗೆ ತಕ್ಕ ಪತ್ನಿಯಾಗಿ, ಮಕ್ಕಳಿಗೆ ತಕ್ಕ ತಾಯಿಯಾಗಿ, ಸಂಬಂಧಿಕರಿಗೆ ತಕ್ಕ ಸಂಬಂಧಿಯಾಗಿ, ಮನೆಗೆ ತಕ್ಕ ಸೊಸೆಯಾಗಿ, ಸ್ನೇಹಿತೆಯರಿಗೆ ತಕ್ಕ ಆಪ್ತೆಯಾಗಿ. ಎಲ್ಲದಕ್ಕಿಂತ ಕಷ್ಟ ಅಂತ ಬಂದವರಿಗೆ ಕರುಣಾಮಯಿಯಾಗಿ, ಸಮಸ್ಯೆ ಎಂದು ಬರುವ ರೋಗಿಗಳಿಗೆ ದೇವರಾಗಿ, ಯಾವುದೇ ಬಿಗುಮಾನವಿಲ್ಲದೇ ಬಾಂಧ್ಯದಿಂದಲೇ ಬದುಕುತ್ತಿರುವ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳ ಏಕೈಕ ಮಹಿಳೆ ಅಂದ್ರೆ ಇವರೇ ಎಂದರೂ ಅತಿಶಯೋಕ್ತಿಯಲ್ಲ.
ಡಾ. ಭಾಗ್ಯಶ್ರೀಯವರ ಪ್ರಾಥಮಿಕ ಶಿಕ್ಷಣ ಬೀದರ್ ಜಿಲ್ಲೆಯ ಹುಮನಾಬಾದ್ ನಲ್ಲಿ ಆರಂಭವಾಯ್ತು. ಗುಲ್ಬರ್ಗಾದ ಶರಣಬಸವೇಶ್ವರ ಇನ್ ಸ್ಟಿಟಿಟ್ಯೂಟ್ ನಲ್ಲಿ ಹೈಸ್ಕೂಲ್, 11 ಮತ್ತು 12ನೇ ತರಗತಿ ಪೂರ್ಣಗೊಳಿಸಿ, ನಂತರ ಕಲಬುರಗಿಯ ಪ್ರತಿಷ್ಠಿತ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪೂರ್ಣಗೊಳಿಸಿದ್ದಾರೆ. ಫೈನಲ್ ಇಯರ್ ನಲ್ಲಿದ್ದಾಗ, ಡಾ. ಶರಣಪ್ರಕಾಶ್ ಪಾಟೀಲ್ ರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು. ಪತಿಯ ಪ್ರೋತ್ಸಾಹದಿಂದ ಶಿಕ್ಷಣ ಮುಂದುವರಿಸಿದರು. ಮಗ ಹುಟ್ಟಿದ ನಂತರ 2 ವರ್ಷ ಅರ್ಬನ್ ಸೆಕ್ಟರ್ ನಲ್ಲಿ ಕೆಲಸ ಮಾಡಿದ್ದಾರೆ. ಅಷ್ಟರಲ್ಲಿ ಅವರ ಪತಿ ಮಿನಿಸ್ಟರ್ ಆಗಿದ್ದರು.
ಇನ್ನೇನು ತನ್ನ ಗಂಡ ಮಂತ್ರಿ, ನಾನ್ಯಾಕೆ ಈ ಕೆಲಸ ಮಾಡಬೇಕು ಎಂದು ಅಂದೇ ಭಾಗ್ಯಶ್ರೀ ಯೋಚಿಸಿದ್ದರೆ, ತಾವು ಪತಿ ಜೊತೆ ಅಲ್ಲಲ್ಲಿ ರಾಜಕೀಯ ಸಮಾರಂಭಗಳಲ್ಲಿ ಓಡಾಡಬಹುದಿತ್ತು. ಆದರೆ, ಭಾಗ್ಯಶ್ರೀ ಆಲೋಚನೆಯೇ ಬೇರೆಯದಾಗಿತ್ತು. ತನ್ನ ವೃತ್ತಿ ಬದುಕಿನಲ್ಲಿ ಜನಸೇವೆ ಮಾಡುವುದೆಂದು ನಿರ್ಧರಿಸಿಬಿಟ್ಟಿದ್ದರು. ಪತಿ ರಾಜಕೀಯ ಕೃಷಿ ಮಾಡುತ್ತಿದ್ದರೆ, ಭಾಗ್ಯಶ್ರೀ ವೈದ್ಯಕೀಯ ಬೇಸಾಯ ಮುಂದುವರಿಸಿದ್ದರು. ಅದರ ಫಲವಾಗಿಯೇ ಪ್ರಸಿದ್ಧ ಸ್ತ್ರೀರೋಗತಜ್ಞೆ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕಿ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಖ್ಯಾತ ವೈದ್ಯೆ ಕಾಮಿನಿ ರಾವ್ ರ ಬಳಿ ಫೆಲೋಶಿಪ್ ಮತ್ತು ಕೊಯಮತ್ತೂರಿನ ವಿಜಿ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಸರ್ಜರಿಯಲ್ಲಿ ಡಿಪ್ಲೊಮಾ ಮತ್ತು ಮುಂಬೈನ ಐಎಂಎಂಎಸ್ಟಿಯಿಂದ ಅಡ್ವಾನ್, ಲ್ಯಾಪ್ರೋಸ್ಕೋಪಿ ಪದವಿ ಪಡೆದಿದ್ದಾರೆ. ಕಲಬುರಗಿಯಲ್ಲಿ ಐವಿಎಫ್ಲ್ಯಾಪ್ರೋಸ್ಕೋಪಿಕ್ ಸೆಂಟರ್ ಸ್ಥಾಪಿಸಿರು ಡಾ. ಭಾಗ್ಯಶ್ರೀ ಎಸ್. ಪಾಟೀಲ್, ಕದಳಿ ಸಿರಿ ಆಸ್ಪತ್ರೆಯ ನಿರ್ದೇಶಕಿಯೂ ಹೌದು. ಅಲ್ಲದೆ ಜಿಒಜಿಎಸ್ ನ ಉಪಾಧ್ಯಕ್ಷೆ ಹಾಗೂ ಐಎಸ್ಎಆರ್ ಸದಸ್ಯೆಯೂ ಆಗಿದ್ದಾರೆ.
ಎಂಆರ್ಎಂಸಿ ಕಲಬುರಗಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಾ, ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಸಾವಿರಾರು ಬಂಜೆತನದ ಪ್ರಕರಣಗಳಿಗೆ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ. ಇದೆಲ್ಲದರ ಜೊತೆ ಪತಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ರ ಪ್ರತಿ ರಾಜಕೀಯ ಹೆಜ್ಜೆಗೂ ಬೆನ್ನೆಲುಬಾಗಿ ನಿಂತಿದ್ದಾರೆ. ಇವರಿಗೆ ಸಿದ್ಧಾಂತ್ ಮತ್ತು ಶಿವಾಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಸದಾ ಮಾಧ್ಯಮಗಳಿಂದ ದೂರ ಇರುವ ಭಾಗ್ಯಶ್ರೀಗೆ ಪ್ರಚಾರದ ಯಾವುದೇ ಗೀಳಿಲ್ಲ. ಅವರ ಪರಿಶುದ್ಧ ಮನಸ್ಸು, ಸರಳ ವ್ಯಕ್ತಿತ್ವ, ಸೌಮ್ಯತೆ, ಆಪ್ತತೆಯ ಅನುಬಂಧ ಎಂತಹವರನ್ನೂ ತಲೆದೂಗುವಂತೆ ಮಾಡಿಬಿಡುತ್ತದೆ. ಮಹಿಳೆಯರು ಹೆಮ್ಮೆಪಡುವಂತಹ, ಪುರುಷರೂ ಕೂಡ ಗೌರವಿಸುವಂತಹ, ಬಡವರು, ಮಧ್ಯಮ ವರ್ಗದವರಿಗೆ ದೇವರಂತೆ ಕಾಣುವ, ಅಷ್ಟೈಶ್ವರ್ಯವಿದ್ದರೂ ಸಾಮಾನ್ಯರಂತೆ ಉಡುಗೆ ತೊಟ್ಟು ಬಂದವರಿಗೆ ಹೃದಯ ವೈಶಾಲ್ಯತೆ ತೋರುವ ಡಾ. ಭಾಗ್ಯಶ್ರೀ ಪಾಟೀಲ್, ಗೃಹಶೋಭಾ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಲವಾರು ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಭಾಗ್ಯಶ್ರೀಯವರ ವೈಯಕ್ತಿಕ ಬದುಕು, ವೃತ್ತಿ ಎಂದಿಗೂ ಕ್ಲಾಶ್ ಆಗಲಿಲ್ಲ. ಪತಿ ಎಲ್ಲದಕ್ಕೂ ಸಪೋರ್ಟಿವ್ ಆಗಿಯೇ ಇದ್ದರು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡರೆ ವೈವಾಹಿಕ ಜೀವನ ಸುಗಮವಾಗಿ ಸಾಗಲು ಸಾಧ್ಯ. ಅದರಲ್ಲಿ ಜೀವನದ ಸತ್ವ ಇರೋದು. ನಾನು ಮೇಲೆ, ತಾನು ಕೆಳಗೆ ಅನ್ನೋದರಲ್ಲಿ ಅರ್ಥವಿಲ್ಲ. ಗಂಡಾಗಲೀ, ಹೆಣ್ಣಾಗಲೀ, ಯಾರ ಮೇಲೂ ದಬ್ಬಾಳಿಕೆ ಹೇರಬಾರದು, ಇಬ್ಬರೂ ಒಟ್ಟಾಗಿ ಸಾಗಬೇಕು ಅನ್ನೋದೇ ಸುಖ ಸಂಸಾರದ ಸೂತ್ರ ಅನ್ನೋದು ಭಾಗ್ಯಶ್ರೀಯವರ ಸಲಹೆ.
ಡಾ. ಕಾಮಿನಿ ರಾವ್ ಸ್ಛೂರ್ತಿ
ಪ್ರೊಫೆಷನಲ್ ಫೆಲೋಷಿಪ್ ರಿಪ್ರೊಡಕ್ಟೀವ್ ಪ್ರೊಡಕ್ಷನ್ ಬಗ್ಗೆ ಡಾ. ಕಾಮಿನಿ ರಾವ್ ಬಳಿ ತರಬೇತಿ ಪಡೆದಿದ್ದಾಯ್ತು. ನಮ್ಮ ಜೀವನದಲ್ಲಿ ನಾವು ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ ಅಂದುಕೊಂಡಿರುತ್ತೇವೆ. ಆದರೆ, ಅವರನ್ನೆಲ್ಲಾ ನೋಡಿದಾಗ, ನಾವು ಇನ್ನೂ ಹೆಚ್ಚಿಗೆ ಏನನ್ನಾದರೂ ಸಾಧಿಸಬಹುದು ಎಂಬ ಸ್ಛೂರ್ತಿ ಸಿಕ್ಕಿತು ಎಂದು ತಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದಾರೆ.

ಜನರಿಗೋಸ್ಕರ ಗುಲ್ಬರ್ಗಾಕ್ಕೆ
ನಮ್ಮ ಜನರಿಗೆ ಏನಾದರೂ ಮಾಡಬೇಕು ಅಂತ ಮನಸ್ಸು ಹಾತೊರೆಯುತ್ತಿತ್ತು. ಗುಲ್ಬರ್ಗಾ ಜನ ಬೆಂಗಳೂರಿಗೆ ಬಂದು ಟ್ರೀಟ್ ಮೆಂಟ್ ತಗೊಳ್ಳೋದು ಕಷ್ಟವಾಗಿತ್ತು. ಅಲ್ಲಿ ಓದು ಮುಗಿದ ನಂತರ ಗುಲ್ಬರ್ಗಾಕ್ಕೆ ಹೋದೆ. ಅಲ್ಲಿ ಸ್ವಂತ ಐವಿಎಫ್ ಸೆಂಟರ್ ತೆರೆದು, ನರ್ಸಿಂಗ್ ಹೋಮ್ ಕೂಡಾ ಇತ್ತು. ಮಗ ಹಾಗೂ ಪತಿ ಬೆಂಗಳೂರಿನಲ್ಲಿ ಇದ್ದಿದ್ದರಿಂದ ನನಗೆ ಬಹಳ ಸಮಯ ಇದೆ ಅನ್ನಿಸಿತು. ಹಾಗಾಗಿ ಎಂಆರ್ಎಂಸಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು.
ಸಿಸ್ಟಮ್ ಬದಲಾಗಬೇಕು
ಕುಟುಂಬದ ಸದಸ್ಯರು ಪತಿಯ ರಾಜಕೀಯ ಬದುಕಿನಲ್ಲಿ ಭಾಗಿಯಾಗಲು ಹೋಗಬಾರದು. ಕೆಳಹಂತದ ಜನರ ಬಳಿ ಹೋಗಿ, ಸುಳ್ಳು ಭರವಸೆಗಳನ್ನು ನೀಡುತ್ತಾ, ವೋಟು ಕೇಳೋದನ್ನು ಮಾಡಬಾರದು. ನಮ್ಮ ಇಂಡಿಯಾದಲ್ಲಿ ಇದು ಹೋಗಬೇಕು. ವೋಟಿನ ಸಲುವಾಗಿ ಕ್ಯಾಂಪೇನಿಂಗ್ ಮಾಡದೆಯೇ, ಮಾಡಿರುವ ಕೆಲಸಕ್ಕಾಗಿ ವೋಟು ಹಾಕುವಂಥ ಸಿಸ್ಟಮ್ ಬರಬೇಕು. ವೋಟಿಗಿಂತ ಮುಂಚೆ ಎಲ್ಲರೂ ಹೋಗೋದು, ಸುಳ್ಳು ನಂಬಿಕೆಗಳನ್ನು ಹುಟ್ಟಿಸೋದು ಮಾಡಬಾರದು.
ಪತಿಯ ರಾಜಕೀಯ ಬದುಕಿಗೆ ಎಂದೂ ಭಾಗಿಯಾಗಲು ತಾನು ಇಷ್ಟಪಡಲ್ಲ. ಪತಿ ಹೋಗಿ ಕೆಲಸ ಮಾಡಿ, ಜನರಲ್ಲಿ ವಿಶ್ವಾಸ ಗಳಿಸಿದ್ದು, ಅವರು ಈ ಹಂತ ತಲುಪಿದ್ದಾರೆ. ಕೆಳಹಂತದ ಜನರಲ್ಲಿ ಎಷ್ಟು ಕಷ್ಟಗಳಿವೆ? ಏನೇನು ಅಗತ್ಯಗಳಿವೆ? ಚುನಾಯಿತ ಪ್ರತಿನಿಧಿಯಿಂದ ಸಾಮಾನ್ಯ ಜನ ಎಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ? ಏನೆಲ್ಲಾ ಕನಸುಗಳನ್ನು ಕಾಣ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಚುನಾಯಿತ ವ್ಯಕ್ತಿಯಾಗಲೀ ಅದನ್ನು ಮರೆಯಬಾರದು. ವೋಟು ಕೇಳಲು ಹೋದಾಗ ನಾವು ಏನು ಹೇಳಿರುತ್ತೇವೆ ಎನ್ನುವುದನ್ನು ಸ್ವಲ್ಪ ಮನಸ್ಸಿನಲ್ಲಿ ಇಟ್ಟೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅತ್ತೆ ಮನೆಯವರ ಸಹಕಾರ
ನಮ್ಮದು ಅವಿಭಕ್ತ ಕುಟುಂಬ. ಪ್ರತಿಯೊಬ್ಬರೂ ನನ್ನ ಬದುಕಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಮಕ್ಕಳ ಜವಾಬ್ದಾರಿ ಕೂಡ ಅವರೇ ನೋಡಿಕೊಳ್ಳುತ್ತಾರೆ. ಗಂಡನ ಮನೆಯ ಸಂಪೂರ್ಣ ಸಹಕಾರ ನನಗಿದೆ. ನಾನು ಸಮಾಜಕ್ಕೆ ಒಂದಷ್ಟು ಕೊಡುಗೆ ನೀಡುತ್ತಿದ್ದೇನೆಂದರೆ, ಅವರೆಲ್ಲರ ಸಹಕಾರವೇ ಕಾರಣ ಎನ್ನುತ್ತಾರೆ. ಜನರಿಗೆ ಐವಿಎಫ್ ಬಗ್ಗೆ ಮಾರ್ಗದರ್ಶನ ನೀಡುವುದು, ಕ್ಯಾಂಪ್ ಮಾಡುವುದು, ಕಡಿಮೆ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಿಗುವಂತಹ ಚಿಕಿತ್ಸೆಯನ್ನು ಸಹ ಗುಲ್ಬರ್ಗಾದಲ್ಲಿ ನೀಡಲಾಗುತ್ತಿದೆ.
ಮಗ ಹುಟ್ಟಿದ ನಂತರ ಬೆಂಗಳೂರಿಗೆ ಶಿಫ್ಟ್ ಆಗಬೇಕಾಗಿ ಬಂತು. ಬಹಳ ಬದಲಾವಣೆಗಳಿದ್ದವು. ಪ್ರಾಕ್ಟೀಸ್ ಆಗುತ್ತಿತ್ತು. ಇತ್ತ ಗಂಡನಿಗೂ ಸಪೋರ್ಟ್ ಮಾಡಬೇಕು ಅಂತ ಆಯ್ತು. ಆಮೇಲೆ ಮಗನನ್ನು ಶಾಲೆಗೆ ಸೇರಿಸುವುದು ಡಿಸೈಡ್ ಆಗಿ ಬೆಂಗಳೂರಿಗೆ ಬರಬೇಕಾಯ್ತು. ತದನಂತರ ಪತಿ ಹಾಗೂ ಮಗ ಇಲ್ಲಿದ್ದು, ನಾನು ಮತ್ತೆ ಗುಲ್ಬರ್ಗಾಕ್ಕೆ ಹೋಗಿ ವೃತ್ತಿ ಮುಂದುವರಿಸುವುದು ಅಂತಾಯ್ತು. ಇಂತಹ ಏರಿಳಿತಗಳು ಸಾಂಸಾರಿಕವಾಗಿ ಅಲ್ಪಮಟ್ಟಿಗೆ ಕಷ್ಟವಾಗುತ್ತಿದ್ದರೂ, ವೃತ್ತಿ ಜೀವನದಲ್ಲಿ ಬಹಳ ಖುಷಿಯಿದೆ ಎನ್ನುತ್ತಾರೆ ಭಾಗ್ಯಶ್ರೀ.
ಕದಳಿಯಲ್ಲಿ ಎಲ್ಲಾ ಚಿಕಿತ್ಸೆ
ಕದಳಿ ನರ್ಸಿಂಗ್ ಹೋಂನಲ್ಲಿ ತಿಂಗಳಿಗೆ 50-60 ಡೆಲಿವರಿ ಆಗುತ್ತಿದೆ. ಇದನ್ನು ಬಹಳ ಮುತುವರ್ಜಿಯಿಂದ ನಿಭಾಯಿಸಬೇಕಾಗುತ್ತದೆ. ಕಲಬುರಗಿ ಭಾಗದ ಎಲ್ಲರಿಗೂ ಎಲ್ಲಾ ರೀತಿಯ ಚಿಕಿತ್ಸೆಗಳು, ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉದ್ದೇಶದಿಂದ ನರ್ಸಿಂಗ್ ಹೋಮ್ ತೆರೆಯಲಾಗಿದೆ. ಜನ ಏನೆಲ್ಲಾ ಬಯಸಿ ಬರುತ್ತಾರೋ, ಅದೆಲ್ಲಾ ಅವರಿಗೆ ಇಲ್ಲಿ ಸಿಗಲಿ ಎಂಬ ಕಾರಣಕ್ಕೆ ಕದಳಿ ಎಂದು ಹೆಸರಿಡಲಾಗಿದೆ.
ಟೀನ್ ಏಜರ್ಸ್ ವಿಷಯಕ್ಕೆ ಬಂದಾಗ ಅವರಲ್ಲಿ ತೂಕ ಹೆಚ್ಚಳ, ಅನ್ ಹೆಲ್ದಿ ಈಟಿಂಗ್ ಹ್ಯಾಬಿಟ್, ಪೀರ್ ಪ್ರೆಶರ್ ಪ್ರತಿಯೊಂದಕ್ಕೂ ಒತ್ತಡ ತಂದುಕೊಳ್ಳುತ್ತಾರೆ. ಮಕ್ಕಳಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಜಂಕ್ ತಿನ್ನಬಾರದು ಎಂದು ಗೊತ್ತಿದ್ದೂ, ಮತ್ತೆ ಅದೇ ಅಭ್ಯಾಸವಾಗಿಬಿಟ್ಟಿರುತ್ತೆ. ಬೇರೆಯವರು ಏನೋ ಮಾಡ್ತಾರೆ, ನಾನು ಅದನ್ನು ಮಾಡಬೇಕು ಎನ್ನುವಂತಹ ಪೀರ್ ಪ್ರೆಶರ್ಹೆಚ್ಚಾಗಿರುತ್ತದೆ. ಇದನ್ನೆಲ್ಲಾ ಹೇಗೆ ಕಂಟ್ರೋಲ್ ಮಾಡೋದು ಎಂಬುದೇ ಪೋಷಕರಿಗೆ ಸವಾಲಾಗಿ ಪರಿಣಮಿಸಿದೆ.

ಮಕ್ಕಳು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ ಪಡೆಯುವವರೆಗೂ ತಾಯಿ ತಂದೆ ಅವರಿಗೆ ಸಪೋರ್ಟ್ ಆಗಿ ನಿಲ್ಲಬೇಕು. ತಪ್ಪಾದಾಗ ಅಲ್ಲಿ ತಿದ್ದಬೇಕು. ಈಗ ಮೆನಾರ್ಕೆ ಏಜ್ ಬಹಳ ಬೇಗ ಬಂದುಬಿಡುತ್ತದೆ. ಇದಕ್ಕೆ ಕಾರಣ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳು. ಆಹಾರ ಪದ್ಧತಿಯಲ್ಲಿ ಆಗುವ ವ್ಯತ್ಯಾಸಗಳು, ಮಗುವಿನ ಶಾರೀರಿಕ ವಿಕಾಸ ಕೂಡಾ ಸರಿಯಾಗಿ ಆಗುತ್ತಿಲ್ಲ. ಮಗುವಿಗೆ ದೈಹಿಕ ಚಟುವಟಿಕೆ ಬಹಳ ಕಡಿಮೆಯಾಗಿಬಿಟ್ಟಿದೆ. ಜೊತೆಗೆ ಸೈಕಾಲಜಿಕಲಿ ಮಗುವಿನ ಬೆಳವಣಿಗೆ ಹೆಚ್ಚಾಗುತ್ತಿದೆ. ಇದೆಲ್ಲಾ ಒಟ್ಟುಗೂಡಿಸಿ ಈ ಬದಲಾವಣೆ ಆಗುತ್ತಿದೆ.
ಎಚ್ಐವಿ ವ್ಯಾಕ್ಸಿನ್
ಕ್ಯಾನ್ಸರ್ ಪ್ರಿವೆನ್ಷನ್ಸ್ ವ್ಯಾಕ್ಸಿನೇಷನ್ ಎಲ್ಲರೂ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಎಚ್ಐವಿ ವ್ಯಾಕ್ಸಿನ್ 9-14 ವರ್ಷದ ಮಕ್ಕಳಿಗೆ ಎರಡು ಡೋಸ್ ಕೊಡಿಸಬೇಕು. ತಪ್ಪಿದಲ್ಲಿ, 14-15 ವರ್ಷದವರೆಗೆ ಮೂರು ಡೋಸ್ ಕೊಡಬೇಕಾಗುತ್ತದೆ. ಮದುವೆಗಿಂತ ಮುಂಚೆ ಕೊಟ್ಟಾಗ ಅದರ ಎಫೆಕ್ಟ್ ಜಾಸ್ತಿ ಇರುತ್ತೆ. ಇದು ಸರ್ವೈಕಲ್ ಕ್ಯಾನ್ಸರ್ ಪ್ರಿವೆಂಟ್ ಮಾಡಲು ಸಹಾಯವಾಗುತ್ತದೆ.
ಐವಿಎಫ್ ಬಗ್ಗೆ ಹೇಳುವುದಾದರೆ, ಗುಲ್ಬರ್ಗಾದಂಥ ಸ್ಥಳಗಳಲ್ಲಿ ಮದುವೆ ಆಯ್ತು ಇನ್ನು ಮಕ್ಕಳಾಗಲಿಲ್ಲ ಅಂತ ಮಾತಾಡ್ತಾರೆ. ಒಂದು ಮಗು ಮಾಡಿಕೊಳ್ಳಲು 23-28 ಪೀಕ್ ಇಯರ್ಸ್ ಆಗಿರುತ್ತದೆ. ಇತ್ತೀಚೆಗೆ ಬಹುತೇಕ ಮನಸ್ಸುಗಳು ಕೆರಿಯರ್ ಓರಿಯೆಂಟೆಡ್ ಆಗಿಬಿಟ್ಟಿವೆ. ಬೇರೆ ದಾರಿಗಳಿವೆ ಎಂಬ ಮನಸ್ಥಿತಿಯೂ ಬಂದುಬಿಟ್ಟಿದೆ, ಇದು ಬದಲಾಗಬೇಕು.
ಸಕಾಲಕ್ಕೆ ಮದುವೆ
ವಯಸ್ಸಿಗೆ ಮುಂಚೆ ಅಥವಾ ತುಂಬಾ ತಡವಾಗಿ ಮದುವೆ ಆಗುವುದು ಎರಡೂ ಒಳ್ಳೆಯದಲ್ಲ. ಎರಡಕ್ಕೂ ಅದರದೇ ಆದ ತೊಂದರೆಗಳು ಇರುತ್ತವೆ. ಒಮ್ಮೆ ಪೀರಿಯಡ್ಸ್ ಸರಿಯಾದ ಕ್ರಮದಲ್ಲಿ ಆಗುತ್ತಿಲ್ಲ ಅಂತಾಗಿ ಮದುವೆಯಾದರೆ, ಗರ್ಭಧಾರಣೆಗೆ ತೊಂದರೆ, ಎಂಡೋಗ್ರಾಮ್ ಅಥವಾ ಥೈರಾಯಿಡ್ ತೊಂದರೆ ಎದುರಾಗುತ್ತದೆ. ನಂತರ ಬಿ.ಪಿ, ಶುಗರ್ ಬರುತ್ತದೆ. ಇದನ್ನು ನಾವು ಮೆಟಬಾಲಿಕ್ ಸಿಂಡ್ರೋಮ್ ಎಂದು ಹೇಳ್ತೀವಿ. ಮಗು ಮಾಡಿಕೊಳ್ಳುವ ಮುಂಚೆ ದಂಪತಿಗೆ ಕೌನ್ಸಿಲಿಂಗ್ ಬೇಕು. ದಂಪತಿ ಮಾನಸಿಕವಾಗಿ, ದೈಹಿಕವಾಗಿ ತಯಾರಾಗಿದ್ದಾರೆಯೇ ಎಂಬುದು ಬಹಳ ಮುಖ್ಯ.
ಆರೋಗ್ಯ ಮುಖ್ಯ
ಒಬ್ಬ ತಾಯಿ ತನ್ನ ಹೊಟ್ಟೆಯಲ್ಲಿ ಮಗು ಮಾಡಿಕೊಂಡು ಬಂದಾಗಿನಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತಾಯಿ ಆರೋಗ್ಯವಂತಳಾಗಿದ್ದರೆ, ಆರೋಗ್ಯವಂತ ಮಗು ಹುಟ್ಟುತ್ತೆ. ಮಗು ಹೆಣ್ಣಾಗಲಿ, ಗಂಡಾಗಲಿ ಅದು ಪ್ರೌಢಾವಸ್ಥೆ ತಲುಪುವವರೆಗೂ ಅದರಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪ್ರೌಢಾವಸ್ಥೆ ತಲುಪಿದಾಗ, ಶಾರೀರಿಕ ವ್ಯತ್ಯಾಸಗಳು ಕಂಡುಬರುತ್ತವೆ. ಪೋಷಕರು ಈ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಕೊಡುವುದು ಬಹಳ ಮುಖ್ಯ.
ರೈಟ್ ಪ್ಲೇಸ್ ನೋಡಿ
ಮಕ್ಕಳಾಗಿಲ್ಲ ಅಂದ್ರೆ, ಸರಿಯಾದ ಸ್ಥಳದಲ್ಲಿ ಚಿಕಿತ್ಸೆ ಪಡೆಯಬೇಕು. ಮಕ್ಕಳಾಗದೆ ಇರುವವರು ಬಹಳ ನಂಬಿಕೆ ಇಟ್ಟುಕೊಂಡು ಬಂದಿರ್ತಾರೆ. ಅವರಿಗೆ ಸುಳ್ಳು ನಂಬಿಕೆ ಹುಟ್ಟಿಸಬಾರದು. ರಿಯಾಲಿಟಿ ಏನಿರುತ್ತದೋ ಅದನ್ನು ಮನವರಿಕೆ ಮಾಡಬೇಕು. ಅಡಾಪ್ಶನ್ ಪ್ರಮೋಟ್ ಮಾಡಬೇಕು. ಮೂರನೇ ವ್ಯಕ್ತಿಯಿಂದ ಡೋನರ್ಸ್ ಸ್ಪರ್ಮ್ಸ್ ತೆಗೆದುಕೊಂಡು ಮಕ್ಕಳನ್ನು ಪಡೆಯೋದಕ್ಕಿಂತ, ಮಗುವನ್ನು ದತ್ತು ತೆಗೆದುಕೊಂಡು ಒಂದು ಮಗುವಿಗೆ ಜೀವನ ಕೊಡುವುದು ಬಹಳ ಉತ್ತಮವಾದ ಕೆಲಸ. ಅಂತಹ ದಂಪತಿಗೆ ನಾವು ಹುರಿದುಂಬಿಸಬೇಕು. ಹೈಯರ್ ಲೆವೆಲ್ ಆರ್ಟಿಫಿಷಿಯಲ್ ಮೆಥೆಡ್ ಗೆ ಮೊದಲು ಅದನ್ನು ಅವರಿಗೆ ಮನವರಿಕೆ ಮಾಡಬೇಕು.
ಡಯೆಟ್ ಫಾಲೋ ಮಾಡಿ
ನೀವು ಇಂದು ಏನು ಮಾಡುತ್ತಿದ್ದೀರೋ ಅದಕ್ಕೆ ಪ್ರಾಮಾಣಿಕವಾಗಿರಿ. ಡಯೆಟ್ ಸರಿಯಾಗಿ ಫಾಲೋ ಮಾಡಿ. ನಾವು ಯಾವ ಪ್ರದೇಶದ ಮಣ್ಣಿನಲ್ಲಿ ಹುಟ್ಟಿರುತ್ತೇವೋ ಆ ಮಣ್ಣಿನಲ್ಲಿ ಬೆಳೆಯುವ ಆಹಾರವೇ ನಮ್ಮ ದೇಹಕ್ಕೆ ಸೂಕ್ತವಾಗಿರುತ್ತದೆ. ನಾವು ಯಾವ ವಾತಾವರಣದಲ್ಲಿ ಬೆಳೆದಿರುತ್ತೇವೋ ಆ ರೀತಿ ನಮ್ಮ ದೇಹ ಇರುತ್ತದೆ ಅದನ್ನು ಸ್ವೀಕಾರ ಮಾಡಿ ಅನುಸರಿಸಬೇಕು.
ಆರೋಗ್ಯಕ್ಕೆ ಗಮನ ಕೊಡಿ
ಮಹಿಳೆ ತನ್ನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ತನ್ನ ಎಲ್ಲಾ ಪಾತ್ರದಲ್ಲೂ ಹೆಣ್ಣು ಸಪೋರ್ಟಿವ್ ಆಗಿರುತ್ತಾಳೆ. ತಾನು ಆರೋಗ್ಯವಾಗಿದ್ದರೆ ಎಲ್ಲಾ ಕೆಲಸಗಳನ್ನೂ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಊಟ, ವ್ಯಾಯಾಮಗಳಿಂದ ನಮ್ಮ ಗೊಂದಲಗಳನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸುವುದು ಅತ್ಯಗತ್ಯ.
ಸಪೋರ್ಟ್ ಬೇಕು
ಎಲ್ಲಾ ಮಹಿಳೆಯರಿಗೂ ಮುಂದೆ ಹೋಗಲು ಆಸ್ಪದ ಸಿಗಬೇಕು. ಮಹಿಳೆಯನ್ನು ಶಾರೀರಕವಾಗಿ ದುರ್ಬಲೆ ಎನ್ನುತ್ತಾರೆ. ಆದರೆ ಪ್ರಾಕೃತಿಕ ವಿಚಾರವಂತಿಕೆ, ಧೈರ್ಯ, ತಾಳ್ಮೆಯಲ್ಲಿ ಆಕೆ ಗಂಡಿಗಿಂತ ಮುಂದೆ ಇರ್ತಾಳೆ. ದಂಪತಿ ಜೊತೆ ಜೊತೆಗಿದ್ದು ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಂಡು ಸಮಾಜಮುಖಿ ಜೀವನ ನಡೆಸಬೇಕು.
ಸುಖ ಸಂಸಾರಕ್ಕೆ ತಾಳ್ಮೆ, ಶ್ರಮ, ಧೈರ್ಯ, ಗುರಿ, ಛಲ, ಸಹಬಾಳ್ವೆ ಮತ್ತು ಪರೋಪಕಾರ ಎನ್ನುವ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ, ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದು ಸೊಗಸಾಗಿ ಹೇಳುವುದರ ಜೊತೆಗೆ ತಮ್ಮ ಜೀವನದಲ್ಲೂ ಇವನ್ನೆಲ್ಲಾ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರುವ ಡಾ. ಭಾಗ್ಯಶ್ರೀಯವರನ್ನು ದಿಟ್ಟ ಸಾಧಕಿ ಎಂದು ಹೇಳಿದ್ರೂ ತಪ್ಪಾಗಲಿಕ್ಕಿಲ್ಲ.
– ಸುನೀತಾ ಬಿ.ಎಂ.





