ಭಾರತದ ಪ್ರಮುಖ ಉದ್ಯಮ ಸಂಸ್ಥೆ ಜೆಎಸ್‌ಡಬ್ಲ್ಯೂ (JSW) ಸಮೂಹದ ಕ್ರೀಡಾ ವಿಭಾಗವಾದ ‘ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್’, 2025ರ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ನಿಕಿ ಪ್ರಸಾದ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದೆ.
ಕೇವಲ 20 ವರ್ಷದ ನಿಕಿ, ಈಗಾಗಲೇ ಅಸಾಧಾರಣ ನಾಯಕತ್ವ ಮತ್ತು ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್ ಲೋಕದ ಭವಿಷ್ಯದ ತಾರೆ ಎಂದು ಗುರುತಿಸಿಕೊಂಡಿದ್ದಾರೆ.
ಈ ಒಪ್ಪಂದದ ಕುರಿತು ಮಾತನಾಡಿದ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಟ್ಯಾಲೆಂಟ್ ಮತ್ತು ಬ್ರ್ಯಾಂಡ್ ಕನ್ಸಲ್ಟಿಂಗ್ ವಿಭಾಗದ ಮುಖ್ಯಸ್ಥ ಹಿಮಾಂಶು ಶರ್ಮಾ, “ಚಿಕ್ಕ ವಯಸ್ಸಿನಲ್ಲಿಯೇ ಕೌಶಲ್ಯ, ನಾಯಕತ್ವ ಮತ್ತು ಪ್ರೌಢಿಮೆ ಮೈಗೂಡಿಸಿಕೊಂಡಿರುವ ಹೊಸ ತಲೆಮಾರಿನ ಭಾರತೀಯ ಕ್ರಿಕೆಟಿಗರನ್ನು ನಿಕಿ ಪ್ರತಿನಿಧಿಸುತ್ತಾರೆ. ದೇಶೀಯ ಕ್ರಿಕೆಟ್‌ನಿಂದ ಅಂಡರ್-19 ವಿಶ್ವಕಪ್ ಪ್ರಶಸ್ತಿಯವರೆಗೆ ಅವರ ಪಯಣ ಸ್ಫೂರ್ತಿದಾಯಕವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸುವ ಅಪಾರ ಸಾಮರ್ಥ್ಯ ಅವರಲ್ಲಿದೆ ಎಂದು ನಾವು ನಂಬುತ್ತೇವೆ,” ಎಂದಿದ್ದಾರೆ.
ತಮ್ಮ ಸಂತಸ ಹಂಚಿಕೊಂಡ ನಿಕಿ ಪ್ರಸಾದ್, “ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಕುಟುಂಬವನ್ನು ಸೇರಲು ನನಗೆ ಹೆಮ್ಮೆಯಾಗುತ್ತಿದೆ. ವಿವಿಧ ಕ್ರೀಡೆಗಳ ಕ್ರೀಡಾಪಟುಗಳನ್ನು ನಿರಂತರವಾಗಿ ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಇಂತಹ ಸಂಸ್ಥೆಯ ಭಾಗವಾಗುವುದು ನನ್ನ ಪಾಲಿನ ಗೌರವ. ಯುವ ಪ್ರತಿಭೆಗಳ ಮೇಲಿನ ಅವರ ನಂಬಿಕೆಯು ನನ್ನ ವೃತ್ತಿಜೀವನದ ಮುಂದಿನ ಹಂತಗಳಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡುತ್ತದೆ,” ಎಂದು ತಿಳಿಸಿದ್ದಾರೆ.
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನೊಂದಿಗೆ ಸೇರ್ಪಡೆಗೊಳ್ಳುವುದರಿಂದ ನಿಕಿ ಅವರಿಗೆ ವಿಶ್ವದರ್ಜೆಯ ತರಬೇತಿ ವ್ಯವಸ್ಥೆ, ಅನುಭವಿ ಕ್ರೀಡಾಪಟು ನಿರ್ವಹಣಾ ಮಾರ್ಗದರ್ಶನ ಮತ್ತು ಸಮಗ್ರ ವೃತ್ತಿಜೀವನದ ಬೆಂಬಲ ದೊರೆಯಲಿದೆ.
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಪಟ್ಟಿಯಲ್ಲಿ ಈಗಾಗಲೇ ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಅಕ್ಷರ್ ಪಟೇಲ್, ಅಂಗ್ಕ್ರಿಶ್ ರಘುವಂಶಿ ಮತ್ತು ಸೂರ್ಯಂಶ್ ಶೆಡ್ಗೆ ಅವರಂತಹ ಭಾರತದ ಅತ್ಯಂತ ಯಶಸ್ವಿ ಕ್ರಿಕೆಟಿಗರಿದ್ದಾರೆ. ನಿಕಿ ಪ್ರಸಾದ್ ಅವರ ಸೇರ್ಪಡೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯವಿರುವ ಮುಂದಿನ ಪೀಳಿಗೆಯ ಭಾರತೀಯ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ತನ್ನ ಬದ್ಧತೆಯನ್ನು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಮತ್ತಷ್ಟು ಬಲಪಡಿಸಿದೆ.





