– ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರ ಆರೋಗ್ಯದ ಬಗ್ಗೆ ಆತಂಕಕಾರಿ ಮಾಹಿತಿ ಹೊರಬಂದಿದ್ದು, ಸಂಗೀತ ಪ್ರಿಯರಲ್ಲಿ ಕಳವಳ ಮೂಡಿಸಿದೆ.
ಕಳೆದ ವರ್ಷವೇ ತಮಗೆ ‘ಸೆನ್ಸರಿ ನ್ಯೂರಲ್ ನರ ಶ್ರವಣ ದೋಷ’ (Sensory Neural Nerve Hearing Loss) ಇರುವುದಾಗಿ ಬಹಿರಂಗಪಡಿಸಿದ್ದ ಅವರು, ಇದೀಗ ಕೂಡ ಆ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಾಡುವುದು ಕಷ್ಟವಾಗಬಹುದು ಎಂಬ ಸೂಚನೆಯನ್ನು ನೀಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ಇನ್ನೂ ಆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ಸಂಪರ್ಕಿಸುತ್ತಿದ್ದಾರೆ. ಆದರೆ ನನ್ನ ಆರೋಗ್ಯ ಹಾಡಲು ಸಹಕರಿಸುತ್ತಿಲ್ಲ. ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗಾಗಲೇ ಎರಡು ವರ್ಷಗಳಿಂದ ಅವರು ಗಾಯನದಿಂದ ದೂರವಾಗಿದ್ದು, ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಂ ಕಾಲ್ಜಾ’ ಹಾಡು ಅವರ ಕೊನೆಯ ಗಾನವಾಗಿದೆ. 1980ರ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ 60 ವರ್ಷದ ಅಲ್ಕಾ ಯಾಗ್ನಿಕ್ ಅವರಿಗೆ ಇತ್ತೀಚೆಗಷ್ಟೇ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ನೀಡಿರುವ ಅವರು, ಇನ್ನೂ ಅಪಾರ ಬೇಡಿಕೆ ಹೊಂದಿದ್ದರೂ ಅನಾರೋಗ್ಯದ ಕಾರಣದಿಂದ ಸಂಗೀತ ಲೋಕದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.





