ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ
`ಕಾಂತಾರಾ' ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿ ದೇಶಾದ್ಯಂತ ಜನಪ್ರಿಯರಾದವರು ರಿಷಬ್ ಶೆಟ್ಟಿ, ಈ ಸಿನಿಮಾ ರಿಲೀಸ್ ಆದ ನಂತರ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಕುಟುಂಬದ ಕಡೆಗೆ ಗಮನಹರಿಸುವುದನ್ನು ಅವರು ಎಂದಿಗೂ ಕಡಿಮೆ ಮಾಡಿಲ್ಲ. ಸಿನಿಮಾದ ಜೊತೆಗೆ ಕುಟುಂಬಕ್ಕೂ ಮೊದಲ ಆದ್ಯತೆ ನೀಡುತ್ತಾರೆ. ಶೂಟಿಂಗ್ ನಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಪತ್ನಿ ಪ್ರಗತಿಯೊಂದಿಗೆ ಆಗಾಗ ಪ್ರವಾಸ ಹೊರಡುತ್ತಾರೆ. ಈ ದಂಪತಿ ತಮ್ಮ ಭಾಗದ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಾರೆ. ಸಂಸ್ಕೃತಿಯ ಜೊತೆ ಕನೆಕ್ಟ್ ಆಗುವಂತಹ ವಾತಾವರಣ ಸೃಷ್ಟಿಸುತ್ತಾರೆ.
ಪ್ರಗತಿ ಶೆಟ್ಟಿ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆ ಬಳಿಕ ಸಿನಿಮಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದರು. ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ಸ್ ಡಿಸೈನರ್ ಆಗಿರುವ ಪ್ರಗತಿ, `ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು, ಬೆಲ್ ಬಾಟಂ, ಕಥಾಸಂಗಮ, ರುದ್ರಪ್ರಯಾಗ, 777 ಚಾರ್ಲಿ' ಚಿತ್ರಗಳಿಗೂ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಪತಿಯ ಬಹುತೇಕ ಸಿನಿಮಾಗಳಿಗೆ ಅವರೇ ಕಾಸ್ಟ್ಯೂಮ್ ಡಿಸೈನರ್.

ಡಾಲಿ ಧನಂಜಯ್ ಹಾಗೂ ಧನ್ಯತಾ
ನಟ ರಾಕ್ಷಸ ಡಾಲಿ ಧನಂಜಯ್ ಬಹಳ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು. `ಜಯನಗರ 4ನೇ ಬ್ಲಾಕ್' ಕಿರುಚಿತ್ರದ ಮೂಲಕ ವಿಶಿಷ್ಟವಾದ ಛಾಪು ಮೂಡಿಸಿದರು. `ಡೈರೆಕ್ಟರ್ ಸ್ಪೆಷಲ್' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ ಅವರು, `ರಾಟೆ, ಬಾಕ್ಸರ್, ಜೆಸ್ಸಿ, ಅಲ್ಲಮ, ಹ್ಯಾಪಿ ನ್ಯೂ ಇಯರ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. `ಟಗರು' ಚಿತ್ರದಲ್ಲಿ ಡಾಲಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಿದ್ದು, ಇದೀಗ ಬಹುಭಾಷಾ ನಟರಾಗಿ ಹೊರಹೊಮ್ಮಿದ್ದಾರೆ. ನಾಯಕ ನಟ, ವಿಲನ್ ಆಗಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ಧನಂಜಯ್ `ಬಡವ ರಾಸ್ಕಲ್, ಹೆಡ್‌ಬುಷ್' ಚಿತ್ರದ ಮೂಲಕ ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಡಾ. ಧನ್ಯತಾರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಡಾ. ಧನ್ಯತಾ ಮೂಲತಃ ಚಿತ್ರದುರ್ಗದವರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯಾಗಿದ್ದಾರೆ. ವೈದ್ಯಕೀಯ ಪದವಿಯಲ್ಲಿ ರಾಂಕ್ ಪಡೆದಿದ್ದಾರೆ. ಧನಂಜಯ್ ಯಶಸ್ಸಿಗೆ ಕೈಜೋಡಿಸಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅತ್ಯಂತ ಜನಪ್ರಿಯ ಕಪ್. ಆರಂಭಿಕ ವೃತ್ತಿ ಜೀವನದಲ್ಲಿ ಒಟ್ಟಿಗೆ ಕೆಲಸ ಮಾಡಿದ ಯಶ್, ರಾಧಿಕಾ ಪ್ರೀತಿಸಿ ಮದುವೆಯಾದರು. ಯಶ್ ಮೊದಲು ಕಿರುತೆರೆಯ `ನಂದಗೋಕುಲ, ಮಳೆಬಿಲ್ಲು, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ, ಶಿವ' ಧಾರಾವಾಹಿಗಳಲ್ಲಿ ನಟಿಸಿ, ಜಂಭದ ಹುಡುಗಿ ಮೂಲಕ ಚಿತ್ರರಂಗ ಪ್ರವೇಶಿಸಿದರು.
`ಮೊದಲ ಸಲ, ಕಿರಾತಕ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಮೊಗ್ಗಿನ ಮನಸು, ಗಜಕೇಸರಿ, ಮಿಸ್ಟರ್‌ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೈಟ್ ಫಾರ್ವರ್ಡ್, ಕೆಜಿಎಫ್ ಚಾಪ್ಟರ್, ಕೆಜಿಎಫ್ ಚಾಪ್ಟರ್-2' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ `ಟಾಕ್ಸಿಕ್' ಸದ್ಯ ಬಿಡುಗಡೆಯಾಗಬೇಕಿದೆ.





