ಸಹ್ಯಾದ್ರಿಯ ಬೆಟ್ಟಗಳ ನಡುವೆ ಅಜೇಯವಾಗಿ ತಲೆ ಎತ್ತಿ ನಿಂತಿದ್ದ ರಾಯಗಢ ಕೋಟೆಯಲ್ಲಿ 1674 ರ ಜೂನ್ 6 ರಂದು ಹಿಂದೂ ಪಂಚಾಂಗದ ಪ್ರಕಾರ 1596ರ ಆನಂದನಾಮ ಸಂವತ್ಸರ ಜೇಷ್ಠ ಶುದ್ಧ ತ್ರಯೋದಶಿಯಂದು ಮರಾಠಾ ಸ್ವರಾಜ್ ರಾಜನಾಗಿ ಶಿವಾಜಿ ಮಹಾರಾಜನಿಗೆ ಕಿರೀಟಧಾರಣೆ ಮಾಡುವ ಮೂಲಕ ಪಟ್ಟಾಭಿಷೇಕ ಮಾಡಿ ಆತನನ್ನು ಶಕಕರ್ತಾ (ಒಂದು ಯುಗದ ಸ್ಥಾಪಕ) ಮತ್ತು ಛತ್ರಪತಿ (ಪರಮಾಧಿಕಾರ ಸಾರ್ವಭೌಮ), ಹೈಂದವ ಧರ್ಮಧಾರಕ್ (ಹಿಂದೂ ಧರ್ಮದ ರಕ್ಷಕ) ಎಂಬ ಬಿರುದನ್ನು ಸಹ ನೀಡಿದ ನಂತರ ಛತ್ರಪತಿ ಶಿವಾಜಿ ಮಹಾರಾಜರು ಅದೇ ಕೋಟೆಯಿಂದ ಹೈಂದವಿ ಸಾಮ್ರಾಜ್ಯದಆಳ್ವಿಕೆ ನಡೆಸುತ್ತಿದ್ದರು. ಆ ಕೋಟೆಯ ಭಧ್ರತಾ ದೃಷ್ಟಿಯಿಂದ ಸೂರ್ಯಾಸ್ತವಾದ ನಂತರ ಕೋಟೆಯ ಬಾಗಿಲುಗಳನ್ನು ಮುಚ್ಚಿದರೆ, ಮರುದಿನ ಸೂರ್ಯೋದಯವಾಗುವವರೆಗೂ ಯಾರಿಗೂ ಒಳಗೆ ಹೋಗಲು ಅಥವಾ ಹೊರಬರಲು ಅವಕಾಶವೇ ಇರದಂತಹ ಅತ್ಯಂತ ಕಟ್ಟುನಿಟ್ಟಿನ ನಿಯಮವನ್ನು ಶಿವಾಜಿ ಮಹಾರಾಜರು ಜಾರಿಗೆ ತಂದಿದ್ದರು.

ಅದೇ ರಾಯಗಢದ ಬುಡದಲ್ಲಿದ್ದ ಒಂದು ಸಣ್ಣ ಹಳ್ಳಿಯಲ್ಲಿ ಹೀರಾ ಎಂಬ ಬಡ ಹಾಲು ಮಾರುವಾಕಿ ಜೀವನೋಪಾಯಕ್ಕಾಗಿ ಪ್ರತಿದಿನವೂ ಬೆಳಗ್ಗೆ ತನ್ನ ಹಸುಗಳಿಂದ ಹಾಲು ಕರೆದು, ಮನೆಯಲ್ಲಿ ಮೊಲೆಹಾಲು ಕುಡಿವ ಹಸಗಂದನನ್ನು ಬಿಟ್ಟು ಕರೆದ ಹಾಲನ್ನು ರಾಯಗಢ ಕೋಟೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಮಾರಾಟ ಮಾಡುವ ಕಾಯಕದಲ್ಲಿ ನಿರತಳಾಗಿದ್ದರು. ಹಾಲಿನ ವ್ಯಾಪಾರ ಮಾಡುವಾಗಲೂ ಆಕೆಯ ಚಿತ್ತವೆಲ್ಲವೂ ಮನೆಯಲ್ಲಿರುತ್ತಿದ್ದ ತನ್ನ ಕಂದನತ್ತವೇ ಇರುತ್ತಿತ್ತು.
ಅದೊಮ್ಮೆ ಕೋಟೆಯೊಳಗೆ ಹಾಲು ಮಾರುವ ಕಾಯಕದಲ್ಲಿದ್ದಾಗ ಸಮಯವೇ ಹೋದದ್ದು ತಿಳಿಯದೇ ಆಕೆ ತಾನು ತಂದಿದ್ದ ಹಾಲನ್ನೆಲ್ಲಾ ಮಾರಿ ಮನೆಗೆ ಹಿಂದಿರುಗುವ ವೇಳೆಗಾಗಲೇ, ಸೂರ್ಯಾಸ್ತವಾದ ಕಾರಣ, ತನ್ನ ಮಗುವನ್ನೇ ನೆನೆಸಿಕೊಂಡು ಓಡೋಡಿ ಕೋಟೆಯ ಬೃಹತ್ತಾದ ಕಬ್ಬಿಣದ ಬಾಗಿಲುಗಳು ಬಳಿ ಬರುವಷ್ಟರಲ್ಲಿ ರಾಜನ ಆಜ್ಞೆಯಂತೆ ಕೋಟೆಯ ಬಾಗಿಲು ಮುಚ್ಚಿದ್ದನ್ನು ಕಂಡು ಆ ಕಾವಲುಗಾರ ಬಳಿ ಅಣ್ಣಾ ನನ್ನ ಕಂದ ನನಗಾಗಿ ಹಸಿವಿನಿಂದ ಕಾಯುತ್ತಿರುತ್ತದೆ. ದಯವಿಟ್ಟು ನನ್ನ ಹಳ್ಳಿಗೆ ಹೋಗಲು ಕೋಟೆಯ ಬಾಗಿಲು ತೆರೆಯಿರಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಅಮ್ಮಾ, ಮಹಾರಾಜರ ಆದೇಶದಂತೆ, ಒಮ್ಮೆ ಬಾಗಿಲು ಮುಚ್ಚಿದರೆ ಬೆಳಿಗ್ಗೆಯವರೆಗೆ ಯಾರಿಗೂ ತೆರೆಯಲು ಸಾಧ್ಯವಿಲ್ಲ. ನಮ್ಮ ಅಸಹಾಯಕತೆಗಾಗಿ ದಯವಿಟ್ಟು ಕ್ಷಮಿಸಿಬಿಡು ಎಂದು ಕಾವಲುಗಾರರು ಕೇಳಿಕೊಂಡಿದ್ದರು.
ತನ್ನ
ಮಗುವಿನ ಬಗ್ಗೆಯೇ ಯೋಚಿಸುತ್ತಿದ್ದ ಹೀರಾಳಿಗೆ ಕಾವಲುಗಾರ ಮಾತೇ ಕೇಳದಂತಾಗಿ ಹೇಗಾದರೂ ಮಾಡಿ, ತಾನು ಈ ಕೋಟೆಯಿಂದ ಹೊರೆಗೆ ಹೋಗಲೇ ಬೇಕೆಂದು ನಿರ್ಧರಿಸಿ, ಹಾಗೇ ಕೊಟೆಯನ್ನು ಸುತ್ತುತ್ತಿರುವಾಗ, ದೃಷ್ಟಿ ಕೋಟೆಯ ಮತ್ತೊಂದು ಬದಿಯಲ್ಲಿದ್ದ ಭಯಾನಕ ಬಂಡೆಯ ಮೇಲೆ ಬಿತ್ತು. ಅದು ನೇರವಾಗಿ ಕೆಳಕ್ಕೆ ಇಳಿಯುವ ಅಪಾಯಕಾರಿ ಪ್ರಪಾತವಾಗಿತ್ತು. ಹಗಲಲ್ಲೇ ಅದನ್ನು ಇಳಿಯಲು ಯಾರಿಗೂ ಧೈರ್ಯ ಇರಲಿಲ್ಲ. ಆದರೆ ಆ ಕ್ಷಣದಲ್ಲಿ ಹೀರಾಳಿಗೆ ತನ್ನ ಪ್ರಾಣಕ್ಕಿಂತ ತನ್ನ ಮಗುವಿನ ಹಸಿವೇ ದೊಡ್ಡದಾಗಿತ್ತು.
ನನ್ನ ಮಗ ನನ್ನನ್ನು ಕಾಯುತ್ತಿದ್ದಾನೆ ನಾನು ಹೋಗಲೇಬೇಕು, ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿಕೊಂಡು, ಆ ಕತ್ತಲೆಯ ರಾತ್ರಿಯಲ್ಲಿ, ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ, ಜಾರುವ ಬಂಡೆಗಳ ನಡುವೆ ಹೆಜ್ಜೆ ಹಾಕುತ್ತಾ ಆಕೆ ಆ ಭಯಾನಕ ಪ್ರಪಾತವನ್ನು ಇಳಿಯಲು ಆರಂಭಿಸಿದಳು. ಅನೇಕ ಬಾರಿ ಕೈ ಕಾಲುಗಳು ಜಾರಿ, ತರಚು ಗಾಯಗಳಾದರೂ, ತಾಯಿಯ ಪ್ರೀತಿಯ ಮುಂದೆ ಆ ಭಯವೆಲ್ಲವೂ ಸೋತು ಹೋಗಿ ಕೊನೆಗೂ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆ ಬೆಟ್ಟದಿಂದ ಇಳಿದು ತನ್ನ ಹಳ್ಳಿಯನ್ನು ತಲುಪಿ, ತನಗಾಗಿ ಕಾಯುತ್ತಿದ್ದ ತನ್ನ ಮಗನನ್ನು ಮಡಿಲಿಗೆ ಎತ್ತಿಕೊಂಡಾಗ ಆಕೆಯ ದೇಹಕ್ಕೆ ಆದ ಗಾಯವೆಲ್ಲವೂ ಮಾಯವಾಗಿ ಕಣ್ಣಲ್ಲಿ ಸಂತೋಷದ ಕಣ್ಣೀರು ಹರಿದಿತ್ತು.





