1896ರ ಹೊತ್ತಿನಲ್ಲಿ ಅಮೆರಿಕದಲ್ಲಿ ಬಾಕ್ಸಿಂಗ್ ಕ್ರೀಡೆ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಈಗ ನಾವು ಸಿನಿ ತಾರೆಗಳನ್ನು, ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತೇವಲ್ಲ, ಹಾಗೆಯೇ ಆಗ ಅಲ್ಲಿ ಬಾಕ್ಸರ್‌ಗಳಿಗೆ ಬಹಳ ಮರ್ಯಾದೆ, ಮಾಧ್ಯಮಗಳಿಂದ ಮನ್ನಣೆ ಸಿಗುತ್ತಿದ್ದ ಕಾಲ. ಅದೊಂಥರ ಲಾಭದಾಯಕ ಕ್ರೀಡೆ ಕೂಡ ಆಗಿತ್ತು. ಆದರೆ ಬಾಕ್ಸಿಂಗ್ ಕಲಿಯುವುದು, ಪ್ರಸಿದ್ಧ ಬಾಕ್ಸರ್ ಆಗುವುದು ಅಷ್ಟೊಂದು ಸುಲಭದ ಹಾದಿಯೂ ಆಗಿರಲಿಲ್ಲ.
ಜ್ಯಾಕ್ ಜಾನ್ಸನ್ ಎಂಬ ಬಿಸಿರಕ್ತದ ಯುವಕನಿಗೆ ತಾನೊಬ್ಬ ಪ್ರಸಿದ್ಧ ಬಾಕ್ಸರ್ ಆಗಬೇಕೆಂಬ ಆಸೆಯಿತ್ತು. ಆದರೆ ಅವನ ಕನಸಿನ ಹಾದಿಗೆ ಒಂದು ದೊಡ್ಡ ಅಡೆತಡೆಯಿತ್ತು. ಅದೇ ಅವನ ಬಣ್ಣ! ಬಣ್ಣಕ್ಕೂ ಬಾಕ್ಸಿಂಗ್‌ಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರ? ಆತ ಇತರ ಅಮೆರಿಕನ್ನರಂತೆ ಬಿಳಿ ತೊಗಲಿನವನಲ್ಲ. ಆತನ ಬಣ್ಣ ಕಪ್ಪು. ಆಗ ಅಮೆರಿಕದಲ್ಲಿ ಕಪ್ಪು ವರ್ಣದವರಿಗೆ ಮನ್ನಣೆ, ಸಮಾನ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಮನುಷ್ಯರಂತೆಯೂ ನಡೆಸಿಕೊಳ್ಳುತ್ತಿರಲಿಲ್ಲ. ಹಾಗಿರುವಾಗ ಬಾಕ್ಸಿಂಗ್ ಕಲಿಯುವ ಅವಕಾಶ ಜ್ಯಾಕ್‌ಗೆ ಸಿಗುವುದಾದರೂ ಹೇಗೆ?
ಜ್ಯಾಕ್‌ಗೆ ಬಾಕ್ಸಿಂಗ್ ಅಕಾಡೆಮಿಗಳಿಗೆ ಪ್ರವೇಶಾವಕಾಶ ಸಿಗಲಿಲ್ಲ. ಆತ ಶಾಸ್ತ್ರಬದ್ಧ ಬಾಕ್ಸಿಂಗ್ ಕಲಿಕೆಯಿಂದ ವಂಚಿತನಾದ. ಆದರೆ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಕಪ್ಪು ವರ್ಣದವರಿಗೂ ಅವಕಾಶವಿತ್ತು. ತರಬೇತಿ ಪಡೆಯಲು ಬಿಡುವುದಿಲ್ಲ, ಆದರೆ ಸ್ಪರ್ಧೆಗೆ ಅವಕಾಶವೇ?!
ಹೌದು, ತರಬೇತಿಯಿಲ್ಲದ ಕಪ್ಪು ಬಣ್ಣದವರನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಹೀನಾಮಾನವಾಗಿ ಹೊಡೆದು ಉರುಳಿಸಲಾಗುತ್ತಿತ್ತು. ಕಪ್ಪು ಬಣ್ಣದವರನ್ನು ಪಂದ್ಯಾವಳಿಗಳಲ್ಲಿ ಬಿಳಿಯರು ಪಂಚಿಂಗ್ ಬ್ಯಾಗ್‌ಗಳಂತೆ ಉಪಯೋಗಿಸುತ್ತಿದ್ದರು. ಬಾಕ್ಸಿಂಗ್‌ನ ಪಟ್ಟುಗಳನ್ನು ಸರಿಯಾಗಿ ಕಲಿಯದ ಕಪ್ಪುವರ್ಣೀಯರು ಬಿಳಿಯರನ್ನು ಎದುರಿಸಲಾಗದೆ ಒದ್ದಾಡುವುದನ್ನು ನೋಡುವುದೇ ಅಲ್ಲಿ ನೆರೆದ ಜನಸ್ತೋಮಕ್ಕೆ ತಮಾಷೆಯ, ಮೋಜಿನ ಸಂಗತಿ. ಬಿಳಿಯ ಬಾಕ್ಸರ್‌ಗಳಿಗೆ ಇದೊಂಥರಾ ಪ್ರತಿಷ್ಠೆ ವಿಷಯ. ‘ಆ ಕರಿಯನನ್ನು ಹೊಡೆದುರುಳಿಸಿ’ ಎಂದು ಬಿಳಿಯ ಪ್ರೇಕ್ಷಕರು ಕೇಕೆ ಹಾಕಿದರೆ ಬಾಕ್ಸರ್‌ಗಳ ಅಹಂಕಾರ ಇನ್ನೂ ಹೆಚ್ಚುತ್ತಿತ್ತು. ಹಾಗಾಗಿ ಹೆಚ್ಚಿನ ಕಪ್ಪುವರ್ಣೀಯರು ಬಾಕ್ಸಿಂಗ್‌ನಿಂದ ದೂರವೇ ಉಳಿಯುತ್ತಿದ್ದರು.
ಆದರೆ ಜ್ಯಾಕ್ ಬೇರೆಯವರಂತೆ ಕನಸು ಕಾಣುತ್ತಾ ಸುಮ್ಮನೆ ಕೂರುವ ಆಸಾಮಿಯಲ್ಲ. ಬಾಕ್ಸಿಂಗ್ ಅಕಾಡೆಮಿಗಳಿಂದ ತಿರಸ್ಕೃತನಾದ ಅವನು ಮೊದಲು ಬಹಳ ಬೇಸರಪಟ್ಟುಕೊಂಡ. ಆದರೂ ತನ್ನ ಕನಸನ್ನು ಮಣ್ಣು ಮಾಡಲಿಲ್ಲ. ಬೇರೆಯವರು ನನಗೆ ಕಲಿಸದಿದ್ದರೇನಂತೆ ನಾನಾಗಿಯೇ ಬಾಕ್ಸಿಂಗ್ ಕಲಿಯುತ್ತೇನೆ ಎಂದು ನಿರ್ಧರಿಸಿದ. ‘ನಾನು ಬಾಕ್ಸರ್ ಆದೆ’ ಎಂದು ಯಾವಾಗ ನನಗನ್ನಿಸುತ್ತದೆಯೋ ಆಗ ನಾನು ಬಾಕ್ಸರ್ ಆಗುತ್ತೇನೆಯೇ ಹೊರತು, ಯಾರೋ ಒಬ್ಬರು ‘ನೀನು ಬಾಕ್ಸರ್ ಆಗಿದ್ದೀಯ’ ಎಂದು ಕೊಡುವ ಸರ್ಟಿಫಿಕೇಟ್‌ಗಳಿಂದ ನಾನು ಬಾಕ್ಸರ್ ಆಗುವುದಿಲ್ಲ. ಹಾಗಿದ್ದ ಮೇಲೆ ನಾನು ಬಾಕ್ಸಿಂಗ್ ಕಲಿಯಲು ಅಕಾಡೆಮಿಗಳನ್ನು ಆಶ್ರಯಿಸುವುದೇಕೆ ಎಂದು ಪ್ರಶ್ನಿಸಿಕೊಂಡ.

ಅಂದಿನಿಂದ ಅವನ ಕನಸಿಗೆ ಬಣ್ಣ ಹಚ್ಚುವ ಕೆಲಸ ಶುರುವಾಯಿತು. ಇಲ್ಲಿಯವರೆಗೆ ಅವನ ಬಣ್ಣದವರು ಮಾಡದ ಕೆಲಸವನ್ನು, ತೋರಿಸದ ಧೈರ್ಯವನ್ನು ಅವನು ತೋರಿಸಿದ. ಆತ ಬಾಕ್ಸಿಂಗ್ ತರಬೇತಿ ಪಡೆಯಲು ಮಾಡಿದ್ದೇನು ಗೊತ್ತೇ? ದೊಡ್ಡ ದೊಡ್ಡ ಬಾಕ್ಸಿಂಗ್ ಪಂದ್ಯಾವಳಿಗಳಿಗೆ ತನ್ನ ಹೆಸರನ್ನು ನೋಂದಾಯಿಸಿದ್ದು!





