– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ. ತಮಿಳು ಸ್ಟಾರ್ ನಟ ಸೂರ್ಯ ಜೊತೆ ಕೈಜೋಡಿಸಿರುವ ಸಂಸ್ಥೆ, ಹೊಸ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.
‘ದಿ ನೆಕ್ಸ್ಟ್ ಚಾಪ್ಟರ್’ (#SuriyaXHombale) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ಮೂರು ದಶಕಗಳಿಂದ ತಮ್ಮ ಅಭಿನಯದ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಗೆದ್ದಿರುವ ಸೂರ್ಯ ಅವರನ್ನು ಸಂಸ್ಥೆಗೆ ಸ್ವಾಗತಿಸಿದೆ.
ಈ ಚಿತ್ರದ ನಿರ್ದೇಶಕರಾಗಿ ಟಿ.ಜೆ. ಜ್ಞಾನವೇಲ್ ಹೆಸರು ಬಹುತೇಕ ಖಚಿತವಾಗಿದೆ. ಹೊಂಬಾಳೆ ಸಂಸ್ಥೆ ಪ್ರಕಟಿಸಿರುವ ಪೋಸ್ಟ್‌ನಲ್ಲಿ ಅವರನ್ನು ಟ್ಯಾಗ್ ಮಾಡಿರುವುದು ಈ ಊಹೆಗೆ ಮತ್ತಷ್ಟು ಬಲ ನೀಡಿದೆ. ಸಂಗೀತ ನಿರ್ದೇಶಕರಾಗಿ ಇತ್ತೀಚಿನ ಟ್ರೆಂಡಿಂಗ್ ಸಂಗೀತ ಸಂಯೋಜಕ ಸಾಯಿ ಅಭಯಂಕರ್ ಹೆಸರು ಕೂಡ ಕೇಳಿಬರುತ್ತಿದೆ.
ಇನ್ನೊಂದೆಡೆ, ಈ ಚಿತ್ರದಲ್ಲಿ ಸೂರ್ಯ ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿ ಹಲವು ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್‌ಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಸೂರ್ಯ ಜೊತೆ ಹೊಸ ಅಧ್ಯಾಯ ಆರಂಭಿಸಿದ್ದು, ಈ ಮೆಗಾ ಕಾಂಬಿನೇಷನ್ ಮೇಲೆ ಭಾರೀ ನಿರೀಕ್ಷೆ ಮೂಡಿದೆ.





