– ರಾಘವೇಂದ್ರ ಅಡಿಗ ಎಚ್ಚೆನ್.
ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಬಹುತಾರಾ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಹಾಡು ‘ಸೆರಗ ಸರ್ಸೆ’ ಹಲವು ವಿವಾದಗಳನ್ನು ಸೃಷ್ಟಿಸಿದೆ. ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣವನ್ನು ಅಶ್ಲೀಲವೆಂದು ಪರಿಗಣಿಸಿ, ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಆಯೋಗ ನಿರ್ದೇಶಕ ಪ್ರೇಮ್, ಹಾಡಿನ ಸಾಹಿತ್ಯ ರಚಿಸಿದ ರಖೀಬ್ ಆಲಂ, ನಿರ್ಮಾಪಕ ಕೆವಿಎನ್ ವೆಂಕಟೇಶ್, ಹಾಗೂ ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ ಮತ್ತು ಸಂಜಯ್ ದತ್ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಹೆಚ್ಚಿನ ಗಂಭೀರತೆಯನ್ನು ಗಮನಿಸಿ, ಆಯೋಗ ಮತ್ತೊಮ್ಮೆ ನೋರಾ ಫತೇಹಿಗೆ ನೋಟೀಸ್ ನೀಡಿದ್ದು, ಅವರು ಏಪ್ರಿಲ್ 27 ರಂದು ವಿಚಾರಣೆಗೆ ಹಾಜರಾಗಬೇಕಾಗಿದೆ. ಇದೇ ವೇಳೆ ಸಂಜಯ್ ದತ್ ಏಪ್ರಿಲ್ 8 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಇದಕ್ಕೆ ಮುನ್ನ, ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಆವೃತ್ತಿಯ ಸಾಹಿತ್ಯಕಾರ ರಖೀಬ್ ಆಲಂ, ಲಿಖಿತ ಕ್ಷಮಾಪಣೆ ಸಲ್ಲಿಸಿ ಮಹಿಳಾ ಸಬಲೀಕರಣಕ್ಕಾಗಿ ಮೂರು ತಿಂಗಳ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಪ್ರೇಮ್ ವಿಡಿಯೋ ಮೂಲಕ ಕ್ಷಮೆ ಕೇಳಿ, ಹಾಡನ್ನು ಹಿಂಪಡೆದು ಸಾಹಿತ್ಯವನ್ನು ಮತ್ತೆ ರಚಿಸಿ ಬಿಡುಗಡೆ ಮಾಡಲಾಗುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅವರು ಹಾಡನ್ನು “ಎಣ್ಣೆ ಬಾಟಲಿಗೆ ಹೋಲಿಕೆ” ರೂಪದಲ್ಲಿ ಬರೆದಿದ್ದು, ಯಾರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹೆಚ್ಚು ನಿರೀಕ್ಷೆ ಇರುವ ‘ಕೆಡಿ’ ಸಿನಿಮಾಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 30ರಂದು ತೆರೆಮೇಲೆ ಬರುವಂತೆ ನಿರೀಕ್ಷಿಸಲಾಗಿದೆ. ಸೈಡ್ ಪಾತ್ರಗಳಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಜೀಸು ಸೇನ್ಗುಪ್ತ, ರವಿಚಂದ್ರನ್, ರಮೇಶ್, ಅಭಿಲಾಶ್ ಮತ್ತಿತರರು ನಟಿಸಿದ್ದಾರೆ.





