ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ (64) ಅವರು ಮಂಗಳವಾರ ನಿ*ಧನರಾದರು.
ರಾತ್ರಿ ಸಮಾರಂಭವೊಂದರಲ್ಲಿ ಗಾಯಕರಾಗಿ ಭಾಗವಹಿಸಿ ಮನೆಗೆ ಹಿಂದಿರುಗಿದ್ದ ಗಣೇಶ ಗಂಗೊಳ್ಳಿ ಅವರು ಏಕಾಏಕಿಯಾಗಿ ಕುಸಿದು ಬಿದ್ದಿದ್ದರು. ಬಳಿಕ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಬಳಿಕ ಪರೀಕ್ಷಿಸಿದ ವೈದ್ಯರು ಬ್ರೈನ್ ಹೆಮರೇಜ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ನರು ಮಕ್ಕಳನ್ನು ಅಗಲಿದ್ದಾರೆ.
ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಜಾನಪದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಗಣೇಶ್ ಗಂಗೊಳ್ಳಿ ,ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ದೂರದರ್ಶನ ಚಂದನದ ’ಗಾನಗರಡಿ’ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದಾರೆ.
ಸಣಕಲು ಶರೀರ. ಆದರೆ ಹಾಡಲು ನಿಂತರೆ  ಏರು ಶ್ರುತಿಯ ಕಂಠಶ್ರೀ ಕಲಾವಿದ..
ಗಣೇಶ್  ಏರು ಶ್ರುತಿಯ ಜನಪದ ಹಾಡುಗಳು. ಬಡಿದೆಬ್ಬಿಸುವ ಭಾವಗೀತೆಗಳು. ಶಿಶುನಾಳ ಶರೀಫರ ಗೀತೆಗಳು, ಕುವೆಂಪು ಅವರ ಲಯಪ್ರಧಾನ ಹಾಡುಗಳು, ಓ ನನ್ನ ಚೇತನ, ಬಾರಿಸು ಕನ್ನಡ ಡಿಂಡಿಮವ…….ಇತ್ಯಾದಿ! ವರಕವಿ ಬೇಂದ್ರೆಯವರ  ಅಂತರಂಗದ ತರಂಗಗಳನ್ನು ಬಡಿದೆಬ್ಬಿಸುವ ಇಳಿದು ಬಾ ತಾಯಿ ಇಳಿದು ಬಾ, ಬಂತು ಶ್ರಾವಣ, ಅಂತರಂಗದಾ ಮೃದಂಗ, ಯುಗ ಯುಗಾದಿ ಕರೆದರೂ, ಹಕ್ಕಿ ಹಾರುತಿದೆ ನೋಡಿದಿರಾ, ನಿಸ್ಸಾರರ ಜೋಗದ ಸಿರಿ, ಚೊಕ್ಕಾಡಿಯವರ ಮುನಿಸು ತರವೇ…. ಇತ್ಯಾದಿ ನೂರಾರು ಹಾಡುಗಳನ್ನು ಬಾಯಿಪಾಟದಲ್ಲಿ ಅನುಭವಿಸಿ ಅವರು ಹಾಡುತ್ತಿದ್ದರು. ಕನ್ನಡದಲ್ಲಿ ಸಿ ಅಶ್ವತ್ಥ ಹಾಡಿದ ಅಷ್ಟೂ ಹಾಡುಗಳನ್ನು ಅಷ್ಟೇ ಎತ್ತರದ ಸ್ಥಾಯಿಯಲ್ಲಿ, ಆದರೆ ಯಾವುದೇ ಅನುಕರಣೆಯನ್ನು  ಮಾಡದೇ ಹಾಡುವ ಒಬ್ಬ ಗಾಯಕರಿದ್ದರು ಎಂದರೆ ಅದು ಗಣೇಶ್ ಗಂಗೊಳ್ಳಿಯವರೇ ಆಗಿದ್ದರು.  ಸರಕಾರದ ದೊಡ್ಡ ದೊಡ್ಡ ಕಾರ್ಯಕ್ರಮಗಳು, ಸಮ್ಮೇಳನಗಳು ಎಲ್ಲ ಕಡೆ ನಾಡಗೀತೆ ಮತ್ತು ರೈತಗೀತೆಗಳನ್ನು ಹಾಡಲು ಅವರೇ ಬೇಕು ಎಂದು ಡಿಮ್ಯಾಂಡಿನಲ್ಲಿ ಅವರನ್ನು ಕಾರ್ಯಕ್ರಮಗಳ  ಸಂಘಟಕರು ಕರೆಯುತ್ತಿದ್ದರು.  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಉಡುಪಿಗೆ ಬಂದಿದ್ದಾಗ ಅಧಿಕೃತ ಕಾರ್ಯಕ್ರಮದಲ್ಲಿ ನಾಡಗೀತೆ ಮತ್ತದರ ಬೆನ್ನಿಗೆ ರೈತಗೀತೆಯನ್ನು ಅವರು ಹಾಡಿ ಮುಗಿಸಿದಾಗ ಸೇರಿದ್ದ ಸಾವಿರಾರು ಜನರು ಚಪ್ಪಾಳೆ ಹೊಡೆದು ಖುಷಿ ಪಟ್ಟಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ