– ರಾಘವೇಂದ್ರ ಅಡಿಗ ಎಚ್ಚೆನ್.
ಜೀ ಕನ್ನಡ ವಾಹಿನಿಯ ಅತಿಹೆಚ್ಚು ಟಿಆರ್ಪಿ ಹೊಂದಿರುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿರುವ ರಿಯಾ ಅಲಿಯಾಸ್ ಜಯರಾಮ್ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಧಾರಾವಾಹಿ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಾ ರೀಲ್ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ನಲ್ಲೂ ಸಿಕ್ಕಾಪಟ್ಟ ಜಾಣೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಂಕಿತಾ, It wasn’t easy. ಭಗವಂತ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವಿತೀಯ ಪಿ.ಯೂ.ಸಿ ಯಲ್ಲಿ ಶೇಕಡ 97% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ನಿಮ್ಮ ಪ್ರೀತಿಯ ಅಂಕಿತ. ನಿಮ್ಮೆಲ್ಲರ ಪ್ರೀತಿಯ ಶುಭಾಶೀರ್ವಾದ ಸದಾ ಕಾಲ ಹೀಗೆ ಇರಲಿ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ, ಅಭಿಮಾನಿಗಳೂ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಇನ್ನು ಫೇಸ್ಬುಕ್ನಲ್ಲಿ ಅಂಕಿತಾ ತಂದೆ ಜಯರಾಮ್ ಅವರು, ಮಗಳಿಂದ ಅಪ್ಪನಿಗೆ ಹುಟ್ದಬ್ಬದ ಕಾಣಿಕೆ. #Distinction97%. ಇದು ಕಂಡ_ಕನಸು_ನನಸಾದ_ಸುದಿನ. ಭಗವಂತನ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವೀತೀಯ ಪಿ.ಯೂ.ಸಿ ಯಲ್ಲಿ ಶೇಕಡ #97% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ. ನನ್ನ ಮಗಳು ನನ್ನ ಹೆಮ್ಮೆ. ಶುಭವಾಗಲಿ ಕಂದ… ಎಂದು ಬರೆದುಕೊಂಡು ಮಗಳಿಗೆ ಶುಭ ಹಾರೈಸಿ, ಆಶೀರ್ವಾದ ಮಾಡಿದ್ದಾರೆ. ಕರ್ಣ ಧಾರಾವಾಹಿಯ ರಿಯಾ ಅರ್ಥಾತ್ ಅಂಕಿತಾ ಜಯರಾಮ್ (Ankitha Jayarama) ಅವರು, ಇದಾಗಲೇ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದವರು. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು. ಆಗಲೂ ನಾಡಿನ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಳು. ಆಗ ತಾನು ಅಭ್ಯಾಸ ಮಾಡುತ್ತಿದ್ದಂತೆ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಳು.
ಅಂಕಿತಾ ಅವರು ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ ಇದೀಗ ಕಳೆದ ವರ್ಷ ಬಿಡುಗಡೆಯಾದ ‘ಕಾಗದ’ ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು.
ಅಂಕಿತಾ ಸದ್ಯ ಪಿಯುಸಿಯಲ್ಲಿ ಶೇ.97 ಪರ್ಸೆಂಟ್ ಅಂಕಗಳನ್ನು ಗಳಿಸಿದ್ದಾಳೆ. ಪಿಯುಸಿಯಲ್ಲಿ ವಾಣಿಜ್ಯ (ಕಾಮರ್ಸ) ವಿಭಾಗದಲ್ಲಿ ಅಧ್ಯಯನ ಮಾಡಿದ್ದು, 6 ವಿಷಯಗಳಲ್ಲಿಯೂ 90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾಳೆ. ಇನ್ನು ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ತೆಗೆದುಕೊಂಡಿದ್ದಾರೆ. ಪ್ರಸ್ತುತ ಕರ್ಣ ಧಾರಾವಾಹಿಯಲ್ಲಿ ರಿಯಾ ಪಾತ್ರಧಾರಿಯಾಗಿ ಅಂಕಿತಾ ಜನರಿಗೆ ಹೆಚ್ಚು ಹತ್ತಿರವಾಗುತ್ತಿದ್ದಾಳೆ. ಅಲ್ಲಿ ಕರ್ಣನ ತಮ್ಮ ಸಂಜಯ್ ಆರಂಭದಲ್ಲಿ ಅಪ್ಪನ ಪ್ರಭಾವದಿಂದ ತುಂಬಾ ಕೆಟ್ಟವನಾಗಿದ್ದರೂ, ರಿಯಾ ಅವನನ್ನು ಬದಲಾಯಿಸುವ ಕಾರ್ಯಕ್ಕೆ ಕೈ ಹಾಕಿದ್ದಾಳೆ. ರಿಯಾ ಕೈಗೆ ಸಿಕ್ಕು ಸಂಜಯ್ ಬದಲಾಗುತ್ತಿದ್ದಾನೆ. ಇಬ್ಬರ ನಡುವೆಯೂ ಪ್ರೇಮವೂ ಬೆಳೆಯಬಹುದು ಎಂಬುದು ಕಂಡುಬರುತ್ತಿದೆ.





