ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ನಲ್ಲಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡ ಘಟನೆ ನಡೆದಿದೆ.
ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ಮಾನ್ವಿ ಕಡೆಗೆ ತೆರಳುತ್ತಿದ್ದ ಕಾರು ಶಾಂತಪುರ ಕ್ರಾಸ್ ಬಳಿ ತೀವ್ರವಾಗಿ ಡಿಕ್ಕಿ ಹೊಡೆದಿದ್ದಾವೆ. ಡಿಕ್ಕಿಯ ತೀವ್ರ ಪ್ರಭಾವದಿಂದ ಕಾರು ಮತ್ತು ಬಸ್ ತಕ್ಷಣವೇ ಬೆಂಕಿ ಹೊತ್ತಿಕೊಂಡಿವೆ. ಬೆಂಕಿ ವೇಗವಾಗಿ ಹಬ್ಬಿದ್ದರಿಂದ ಕಾರಿನಲ್ಲಿದ್ದ ಏಳು ಜನರು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಜೀವವಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಡಿಕ್ಕಿಯ ಆಘಾತಕ್ಕೊಳಗಾಗಿ ತಕ್ಷಣವೇ ಬಸ್‌ನಿಂದ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆದರೆ ಕಾರಿನಲ್ಲಿದ್ದವರು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಮತ್ತು ಬೆಂಕಿಯ ಉರಿ ಆವರಿಸಿತ್ತು, ಸ್ಥಳೀಯರು ಮತ್ತು ಬಸ್ ಪ್ರಯಾಣಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಬೆಂಕಿಯು ಹೆಚ್ಚಿದ್ದ ಕಾರಣದಿಂದ ಅದು ಸಾಧ್ಯವಾಗಲಿಲ್ಲ.
ಸುರಪುರ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತಕ್ಕೆ ಓವರ್ ಸ್ಪೀಡ್ ಅಥವಾ ರಸ್ತೆಯ ನಿಯಂತ್ರಣ ಕಳೆದುಕೊಂಡಿರುವುದು ಮುಖ್ಯ ಕಾರಣವಾಗಿರಬಹುದು ಎನ್ನಲಾಗಿದ್ದು, ಬಸ್ ಚಾಲಕ ಮತ್ತು ಕಾರ್ ಚಾಲಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.





