ಉತ್ತರಾಖಂಡ ರಾಜ್ಯದ ವೈವಿಧ್ಯಮಯ ರಸಗವಳವನ್ನು ಬಾಯಿ ಚಪ್ಪರಿಸಿ ಸವಿಯಲು ನೀವು ಸಿದ್ಧರಿದ್ದೀರಾ….?
ಉದ್ದಿನ ಬೇಳೆಯ ಪಕೋಡ
ಸಾಮಗ್ರಿ : 2 ಕಪ್ ಉದ್ದಿನಬೇಳೆ, ಅರ್ಧ ಕಪ್ ಎಳ್ಳು, ಸಣ್ಣಗೆ ಹೆಚ್ಚಿದ 23 ಈರುಳ್ಳಿ, ತುಸು ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ಕರಿಬೇವು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುರಿದು ಪುಡಿ ಮಾಡಿದ ಜೀರಿಗೆ, ಗರಂಮಸಾಲ, ಕರಿಯಲು ಎಣ್ಣೆ.
ವಿಧಾನ : ಹಿಂದಿನ ರಾತ್ರಿ ನೆನೆಹಾಕಿ ಮಾರನೇ ದಿನ ಉದ್ದಿನ ಬೇಳೆಯನ್ನು ಆದಷ್ಟೂ ನೀರಿಲ್ಲದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಎಳ್ಳು ಬಿಟ್ಟು ಮೇಲಿನ ಎಲ್ಲಾ ಹೆಚ್ಚಿದ ಪದಾರ್ಥಗಳನ್ನೂ ಇದಕ್ಕೆ ಸೇರಿಸಿ. ನಂತರ ಇದರಿಂದ ತುಸು ತುಸುವೇ ಮಿಶ್ರಣ ತೆಗೆದುಕೊಂಡು, ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಪಕೋಡ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಪುದೀನಾ ಚಟ್ನಿ, ಟೊಮೇಟೊ ಕೆಚಪ್ ನೊಂದಿಗೆ, ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.
ಚಪಾತಿ, ಪೂರಿ, ರೊಟ್ಟಿ, ದೋಸೆಗಳಿಗೆ ಇಂಥ ಸೊಗಸಾದ ಆಲೂ ಗ್ರೇವಿ ಇದ್ದರೆ ಎಂಥ ಮಜಾ ಅಲ್ಲವೇ….?

ಸ್ಪೆಷಲ್ ಆಲೂ ಗ್ರೇವಿ
ಸಾಮಗ್ರಿ : ಶುಚಿಗೊಳಿಸಿ ಸಣ್ಣ ಹೋಳು ಮಾಡಲಾದ 350 ಗ್ರಾಂ ಆಲೂ, 2-3 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 2-3 ಟೊಮೇಟೊ, 5-6 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅರಿಶಿನ, ಗರಂಮಸಾಲ, ನಿಂಬೆರಸ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಅರ್ಧ ಸೌಟು ತುಪ್ಪ, ಒಗ್ಗರಣೆ ಪದಾರ್ಥ, ಎಣ್ಣೆ.
ವಿಧಾನ : ಹೆಚ್ಚಿದ ಆಲೂ ಹೋಳನ್ನು ಮೊದಲು ಕುಕ್ಕರ್ ನಲ್ಲಿ ಬೇಯಿಸಿ. ಅಗತ್ಯವೆನಿಸಿದರೆ ಇದಕ್ಕೆ ತುಸು ಹಸಿ ಬಟಾಣಿ ಸಹ ಬೆರೆಸಿ ಬೇಯಿಸಬಹುದು. ಮಿಕ್ಸಿಗೆ 1-1 ಈರುಳ್ಳಿ, ಟೊಮೇಟೊ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಇತ್ಯಾದಿ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಪದಾರ್ಥ, ಕರಿಬೇವು ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಈರುಳ್ಳಿ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ರುಬ್ಬಿದ ಮಿಶ್ರಣ, ಉಪ್ಪು, ಖಾರ, ಉಳಿದ ಮಸಾಲೆ ಎಲ್ಲಾ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಬೆಂದ ಆಲೂ (ನೀರಿನ ಸಮೇತ) ಸೇರಿಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ, ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಉದುರಿಸಿ ಎಲ್ಲ ಬೆರೆತುಕೊಳ್ಳುವೆತೆ ಮಾಡಿ. ಇದನ್ನು ಬಿಸಿ ಬಿಸಿಯಾಗಿ ಚಪಾತಿ, ಪೂರಿ, ಇಡ್ಲಿ, ದೋಸೆಗಳ ಜೊತೆ ಸವಿಯಲು ಕೊಡಿ.

ಹುರುಳಿಕಾಳಿನ ಬೋಂಡಾ ಸೂಪ್
ಸಾಮಗ್ರಿ : 2 ಕಪ್ ಹುರುಳಿ ಕಾಳು, 1 ಕಪ್ ಉದ್ದಿನ ಬೇಳೆ, 5-6 ಈರುಳ್ಳಿ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, 3-4 ಟೊಮೇಟೊ, 7-8 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಗರಂ ಮಸಾಲ, ಚಾಟ್ ಮಸಾಲ, ಒಗ್ಗರಣೆ ಸಾಮಗ್ರಿ, ಓಮ, ಹುರಿದ ಜೀರಿಗೆ, ಕರಿಯಲು ಎಣ್ಣೆ.
ವಿಧಾನ : ಹಿಂದಿನ ರಾತ್ರಿ ಹುರುಳಿ ಕಾಳು, ಉದ್ದನ್ನು ಬೇರೆ ಬೇರೆಯಾಗಿ ನೆನೆಹಾಕಿ, ಮಾರನೇ ಬೆಳಗ್ಗೆ ಬೇರೆಯಾಗಿ ರುಬ್ಬಿಕೊಂಡು, ಒಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ರೆಡಿ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ 2 ಈರುಳ್ಳಿ, ಕೊ.ಸೊಪ್ಪು, ಪುದೀನಾ, ಹಸಿ ಶುಂಠಿ, ಓಮ, ಹುರಿದ ಜೀರಿಗೆ ಸೇರಿಸಿ ಮಿಶ್ರಣವನ್ನು ಸ್ವಲ್ಪ ಹೊತ್ತು ನೆನೆಯಲು ಬಿಡಿ. ಅದೇ ಸಮಯಕ್ಕೆ ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದರಿಂದ ಸ್ವಲ್ಪ ಮಿಶ್ರಣ ತೆಗೆದುಕೊಂಡು ಬೋಂಡ ತರಹ ಹಾಕುತ್ತಾ, ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಕರಿದ ಬೋಂಡಾಗಳನ್ನು ಟಿಶ್ಯು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ.
ಗ್ರೇವಿಗಾಗಿ ಮೊದಲು ಮಿಕ್ಸಿಗೆ 1 ಈರುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, 2 ಹುಳಿ ಟೊಮೇಟೊ, ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು, ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ನಂತರ ಟೊಮೇಟೊ ಹಾಕಿ ಹದನಾಗಿ ಬಾಡಿಸಿ. ಆಮೇಲೆ ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಮಂದ ಉರಿಯಲ್ಲಿ ಹಸಿ ವಾಸನೆ ಹೋಗುವಂತೆ ಕೆದಕಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೈಯಾಡಿಸಿ. ಅರ್ಧ ಲೋಟ ನೀರು ಬೆರೆಸಿ (ಎಷ್ಟು ತೆಳ್ಳಗೆ ಬೇಕೋ ಅಷ್ಟು) ಗ್ರೇವಿ ಗಟ್ಟಿಯಾಗುವಂತೆ ಕುದಿಸಿರಿ. ನಂತರ ಇದಕ್ಕೆ ಬೋಂಡ ಹಾಕಿ, ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಮೇಲೆ ಇನ್ನೊಂದಿಷ್ಟು ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿ ಬೋಂಡಾ ಸೂಪ್ ಸವಿಯಲು ಕೊಡಿ.

ಟೇಸ್ಟಿ ಊದಲು ಖೀರು
ಸಾಮಗ್ರಿ : 1 ಕಪ್ ಊದಲು (ಪೌಷ್ಟಿಕ ಸಿರಿಧಾನ್ಯ/ಮಿಲೆಟ್) ಅರ್ಧ ಕಪ್ ಸಕ್ಕರೆ, 4 ಕಪ್ ಕಾದಾರಿದ (ಕ್ರೀಂ ಸಹಿತ) ಗಟ್ಟಿ ಹಾಲು, ತುಪ್ಪದಲ್ಲಿ ಹುರಿದ ತುಸು ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾರೆ ಅರ್ಧ ಕಪ್), ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್/ಗುಲಾಬಿ ಜಲ, ತುಸು ಹಸಿ ಖರ್ಜೂರ, ಜೇನುತುಪ್ಪ, ಅರ್ಧ ಸೌಟು ತುಪ್ಪ.
ವಿಧಾನ : ಮೊದಲು ತುಸು ತುಪ್ಪದಲ್ಲಿ ಗೋಡಂಬಿ-ದ್ರಾಕ್ಷಿ ಹುರಿದು ತೆಗೆದಿಡಿ. ಇದಕ್ಕೆ ಇನ್ನಷ್ಟು ತುಪ್ಪ ಬೆರೆಸಿ ಊದಲು ಹಾಕಿ ಘಮ್ಮೆನ್ನುವಂತೆ ಹುರಿಯಿರಿ, ಅದನ್ನು ಪಕ್ಕಕ್ಕಿಡಿ. ಅದೇ ಬಾಣಲೆಯಲ್ಲಿ ಹಾಲು ಬಿಸಿ ಮಾಡಿ. ಮಂದ ಊರಿಯಲ್ಲಿ ಅದು ಕುದ್ದು, ಅರ್ಧದಷ್ಟಾದಾಗ ಇದಕ್ಕೆ ಹುರಿದ ಊದಲು ಬೆರೆಸಿ, ಮಂದ ಉರಿಯಲ್ಲಿ ಹದನಾಗಿ ಬೇಯಲು ಬಿಡಿ. ಅದು ಗಂಟಾಗದಂತೆ ಆಗಾಗ ಕೈಯಾಡಿಸುತ್ತಿರಿ. ನಂತರ ಸಕ್ಕರೆ ಹಾಕಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಆಮೇಲೆ ಏಲಕ್ಕಿ, ಕೇದಗೆ ಎಸನ್ಸ್ ಯಾ ಗುಲಾಬಿ ಜಲ ಬೆರೆಸಿರಿ. ಕೆಳಗಿಳಿಸಿದ ನಂತರ ಇದಕ್ಕೆ ಡ್ರೈಫ್ರೂಟ್ಸ್ ಬೆರೆಸಿ, ಈ ಬಾಣಲೆಯನ್ನು ತಣ್ಣೀರ ಬೇಸನ್ನಿನಲ್ಲಿರಿಸಿ ಪೂರ್ತಿ ಆರಲು ಬಿಡಿ. ನಂತರ ಬಟ್ಟಲಿಗೆ ಹಾಕಿ ಫ್ರಿಜ್ ನಲ್ಲಿಟ್ಟು 1-2 ತಾಸು ಸೆಟ್ ಆಗಲು ಬಿಡಿ. ಈ ಖೀರನ್ನು ಹೀಗೆ ತಣ್ಣಗೆ ಸವಿದರೆ ಹೆಚ್ಚು ಸ್ವಾರಸ್ಯಕರ !
ದೋಸೆ, ಚಪಾತಿಗಳಿಗೆ ವಿಭಿನ್ನ ಸೈಡ್ಸ್ ಬೇಕೆನಿಸುತ್ತದೆ, ಅಲ್ಲವೇ? ಇಲ್ಲಿನ 2 ಹೊಸ ರೆಸಿಪಿ ಟ್ರೈ ಮಾಡಿ ನೋಡಿ!

ತಾವರೆ ದಂಟಿನ ಸ್ಪೆಷಲ್
ಸಾಮಗ್ರಿ : 500 ಗ್ರಾಂ ತಾವರೆ ದಂಟು (ಸೂಪರ್ ಬಜಾರ್ ಗಳಲ್ಲಿ ಸುಲಭ ಲಭ್ಯ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಜೇನುತುಪ್ಪ, ವಿನಿಗರ್, ಬಿಳಿ ಎಳ್ಳು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಶೇರ್ ವಾನ್ ಸಾಸ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಈರುಳ್ಳಿ ತೆನೆ, ಅರ್ಧ ಕಪ್ ಅಕ್ಕಿಹಿಟ್ಟು, ಕರಿಯಲು ಎಣ್ಣೆ.
ವಿಧಾನ : ತಾವರೆದಂಟನ್ನು ಬೆಂಡೆಕಾಯಿ ಹೋಳು ಮಾಡುವ ಹಾಗೆ ತೆಳ್ಳಗೆ ಸ್ಲೈಸ್ ಮಾಡಿಡಿ. ಉಪ್ಪು ಕರಗಿದ ನೀರಲ್ಲಿ ಇದನ್ನು ನೆನೆಹಾಕಿಡಿ. ನಂತರ ನೀರು ಬಸಿದು, ಇನ್ನು ಲೈಟ್ ಆಗಿ ಫ್ಯಾನಿನಡಿ ಪಂಚೆ ಮೇಲೆ ಹರಡಿ ಒಣಗಿಸಿ. ಅಕ್ಕಿಹಿಟ್ಟಿಗೆ ನೀರು ಬೆರೆಸಿ, ಉಪ್ಪು, ಖಾರ ಹಾಕಿಡಿ. ಇನ್ನು ಅದರಲ್ಲಿ ಹೊರಳಿಸಿ ಪಕೋಡ ತರಹ ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು, ಒಗ್ಗರಣೆ ಕೊಡಿ. ಅದಕ್ಕೆ 3 ಬಗೆ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಿರಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಸಾಮಗ್ರಿ ಹಾಕಿ ಕೆದಕಬೇಕು. ಇದಕ್ಕೆ ಕರಿದ ದಂಟು ಸೇರಿಸಿ ಎಲ್ಲ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ಇದನ್ನು ಕೆಳಗಿಳಿಸಿ ನಿಂಬೆಹಣ್ಣು ಹಿಂಡಿ, ಹೆಚ್ಚಿದ ಕೊ.ಸೊಪ್ಪು, ಈರುಳ್ಳಿ ತೆನೆ ಉದುರಿಸಿ, ರೊಟ್ಟಿ ಜೊತೆ ಸರಿಯಲು ಕೊಡಿ.

ಆಲೂ ಮಜ್ಜಿಗೆಹುಳಿ
ಸಾಮಗ್ರಿ : 500 ಗ್ರಾಂ ಆಲೂ, 100 ಗ್ರಾಂ ಪನೀರ್, ಅರ್ಧ ಲೀ. ಹುಳಿ ಮೊಸರು, 5-6 ಹಸಿ ಮೆಣಸು, ತುಸು ಹುಣಿಸೇಹಣ್ಣು, 1 ಗಿಟುಕು ತೆಂಗಿನ ತುರಿ, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಅರಶಿನ, ಗರಂಮಸಾಲ, ಹೆಚ್ಚಿದ ಕೊ.ಸೊಪ್ಪು, ಒಗ್ಗರಣೆ ಸಾಮಗ್ರಿ
ವಿಧಾನ : ಮೊದಲು ಆಲೂ ಬೇಯಿಸಿ, ಸಿಪ್ಪೆ ಸುಲಿದು ಮಸೆದಿಡಿ. ಮಿಕ್ಸಿಗೆ ಹಸಿಮೆಣಸು, ಹುಣಿಸೇಹಣ್ಣು, ಉಪ್ಪು, ತೆಂಗಿನ ತುರಿ, ಶುಂಠಿ, ಅರಿಶಿನ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಮೊಸರು ಬೆರೆಸಿ 1-2 ಕುದಿ ಬರಿಸಿ. ಇದಕ್ಕೆ ಉಪ್ಪು ಹಾಕಿ, ಆಲೂ ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ಅಗತ್ಯವೆನಿಸಿದರೆ 1 ಕಪ್ ನೀರು ಬೆರೆಸಿ ಕುದಿಸಿರಿ. ಇದರ ಮೇಲೆ ಗರಂ ಮಸಾಲ ಉದುರಿಸಿ, ಕೆಳಗಿಳಿಸಿ. ಹೆಚ್ಚಿದ ಕೊ.ಸೊಪ್ಪು ಹಾಕಿ, ಅನ್ನದ ಜೊತೆ ಬಿಸಿ ಬಿಸಿಯಾಗಿ ಸವಿಯಿರಿ.
ಎಂದಿನ ಮಿಶ್ರ ತರಕಾರಿ ಗ್ರೇವಿ ಬೋರಾಯಿತೇ? ಇದನ್ನು ಟ್ರೈ ಮಾಡಿ!

ಹಾಂಡಿ ಸಬ್ಜಿ
ಸಾಮಗ್ರಿ : ಒಂದಿಷ್ಟು ಹೆಚ್ಚಿದ ಆಲೂ, ಬೀನ್ಸ್, ಕ್ಯಾರೆಟ್, 3 ಬಗೆಯ ಕ್ಯಾಪ್ಸಿಕಂ, ಹಸಿ ಬಟಾಣಿ, ಹೆಚ್ಚಿದ 1 ಕಂತೆ ಮೆಂತೆಸೊಪ್ಪು, 3-4 ಈರುಳ್ಳಿ, 3-4 ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, 5-6 ಹಸಿಮೆಣಸು, ತುಪ್ಪದಲ್ಲಿ ಹುರಿದ ಗೋಡಂಬಿ, ಹುರಿಗಡಲೆ, ಗಸಗಸೆ, ಫ್ರೆಶ್ ಕ್ರೀಂ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಮೊದಲು ಮಿಕ್ಸಿಗೆ ಹೆಚ್ಚಿದ ತುಸು ಈರುಳ್ಳಿ, ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುರಿದ ಗೋಡಂಬಿ, ಹಸಿ ಮೆಣಸು, ಹುರಿಗಡಲೆ, ಗಸಗಸೆ ಎಲ್ಲಾ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಹೆಚ್ಚಿದ ತರಕಾರಿ ಸೇರಿಸಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೇಟೊ, ನಂತರ ಮೆಂತೆಸೊಪ್ಪು ಹಾಕಿ ಬಾಡಿಸಿ. ಆಮೇಲೆ ಬೆಂದ ತರಕಾರಿ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಒಂದೊಂದಾಗಿ ಮಸಾಲೆ, ರುಬ್ಬಿದ ಮಿಶ್ರಣ ಎಲ್ಲಾ ಸೇರಿಸಿ ನಿಧಾನವಾಗಿ ಕೈಯಾಡಿಸಿ. ಗ್ರೇವಿ ಬಹಳ ಗಟ್ಟಿ ಎನಿಸಿದರೆ ತುಸು ನೀರು ಬೆರೆಸಿ ಕೆದಕಬೇಕು. ಕೆಳಗಿಳಿಸಿದ ನಂತರ ಹೆಚ್ಚಿದ ಕೊ.ಸೊಪ್ಪು, ಪುದೀನಾ ಸೇರಿಸಿ, ಬಿಸಿ ಬಿಸಿಯಾಗಿ ಚಪಾತಿ ಪೂರಿ ಜೊತೆ ಸೇವಿಸಿ.





