– ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎರಡನೇ ಬಾರಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ನಡುವೆ, ಅವರು ಅಭಿನಯಿಸುತ್ತಿರುವ ‘ರಾಕಾ’ ಸಿನಿಮಾವನ್ನು ಕುರಿತಾಗಿ ಹರಿದಾಡುತ್ತಿದ್ದ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಬಹುನಿರೀಕ್ಷಿತ ಚಿತ್ರದಿಂದ ದೀಪಿಕಾ ಅವರನ್ನು ಕೈಬಿಡಲಾಗುತ್ತಿದೆ ಅಥವಾ ಅವರ ಪಾತ್ರವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ವರದಿಗಳು ಸಂಪೂರ್ಣ ಆಧಾರರಹಿತ ಎಂದು ಚಿತ್ರತಂಡ ತಿಳಿಸಿದೆ.
‘ಎಲ್ಲವೂ ಯೋಜನೆಯಂತೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣವೂ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ’ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಗರ್ಭಿಣಿಯಾಗಿದ್ದರೂ ಸಹ ದೀಪಿಕಾ ಚಿತ್ರೀಕರಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಕೆಲವು ಪ್ರಮುಖ ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ನಡೆಸಲಾಗುತ್ತಿದೆ.
ಅಟ್ಲಿ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, 2027ರಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದರಿಂದ ಚಿತ್ರಕ್ಕೆ ಭಾರೀ ಕುತೂಹಲ ವ್ಯಕ್ತವಾಗಿದೆ.
ಇದಕ್ಕೂ ಮೊದಲು ದೀಪಿಕಾ ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಿಂದ ಹೊರಬಂದಿದ್ದರೂ, ಅವರ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.





