ಸುಖ ಸೌಲಭ್ಯಗಳು ತುಂಬಿರುವ ಜೀವನವಿದ್ದರೂ ಬದುಕಲ್ಲಿ ಸಂತಸ ಮರೀಚಿಕೆ ಎನಿಸುತ್ತದೆ. ಅಂಥವರೂ ಸಹ ಸದಾ ಖುಷಿ ಖುಷಿಯಾಗಿರಲು ಏನು ಮಾಡಬೇಕು…..?

ಕೆಲವು ದಿನಗಳ ಹಿಂದೆ ರೇಖಾಳ ಬರ್ತ್‌ ಡೇ ಇತ್ತು. ಹುಟ್ಟಿದ ಹಬ್ಬ ಅಂತ ತಾನು ಗ್ರಾಂಡಾಗಿ ಸ್ವಾದಿಷ್ಟ ವ್ಯಂಜನಗಳನ್ನು ತಯಾರಿಸಿದಳು. ಮಧ್ಯಾಹ್ನದ ಗ್ರಾಂಡ್‌ ಊಟ ಮುಗಿಸಿ ಅವಳ ಮನೆಯವರೆಲ್ಲರೂ ಸಂಜೆ ಕಬ್ಬನ್‌ ಪಾರ್ಕ್‌ ಕಡೆ ಹಾಯಾಗಿ ಹೊರಟರು. ಅದೆಲ್ಲ ಮುಗಿಸಿ ರಾತ್ರಿ ಹೊರಗೆ ಡಿನ್ನರ್‌ ಸವಿದು, ಮನೆಗೆ ಬಂದಾಗ 11 ಗಂಟೆ ದಾಟಿತು, ತುಸು ಹೊತ್ತು ಟಿವಿ, ಫೋನು ಎಂದು ಗಮನಿಸಿ ಮಲಗುವಷ್ಟರಲ್ಲಿ 12 ದಾಟಿತು. ಆಗ ಏನನ್ನಿಸಿತೋ ಏನೋ, ರೇಖಾಳ ಗಂಡ ಮಧುಕರ್‌, ಇತ್ತೀಚೆಗೆ ಯಾಕೋ ನಾನು ಖುಷಿ ಖುಷಿಯಾಗಿ ಇರುತ್ತಿಲ್ಲ, ಎಂದ.

ಆತನ ಮಾತು ಕೇಳಿ ಅವಳಿಗೆ ಆಶ್ಚರ್ಯವಾಯಿತು. ಕನಿಷ್ಠ ಈ ದಿನ ಈ ಟಾಪಿಕ್‌ ತೆಗೆಯಬಾರದಿತ್ತು ಎಂದು ಅವಳು ನಿಡುಸುಯ್ದಳು. ಆ ದಿನ ಹಾಯಾಗಿ ಕಳೆದಿತ್ತು. ಆತ ಹಾಗೆ ಹೇಳಿದ್ದು ಯಾಕೆ ಅಂತ ರೇಖಾ ಯೋಚನೆಗೆ ಬಿದ್ದಳು. ಅದರ ಹಿಂದೆ ಏನೋ ಒಂದು ಕಾರಣ ಇದ್ದಿರಲೇಬೇಕು. ಆಗ ರೇಖಾ ಗಂಡನನ್ನು ಪರಿಪರಿಯಾಗಿ ಅದಕ್ಕೆ ಕಾರಣ ಏನೆಂದು ವಿಚಾರಿಸಿದಳು. ಆದರೆ ಅದಕ್ಕೆಲ್ಲ ಆತ ಹಾರಿಕೆ ಉತ್ತರ ನೀಡುತ್ತಾ, ಎಲ್ಲಾ ವಿಧದಲ್ಲೂ ಜೀವನ ಚೆನ್ನಾಗಿದೆ, ಏನೂ ತೊಂದರೆ ಇಲ್ಲ, ಆದರೂ….. ಜೀವನದಲ್ಲಿ ಖುಷಿ ಇಲ್ಲ!

ಹಾಗಾದರೆ ತಾನು ಮಾತ್ರ ಖುಷಿಯಾಗಿ ಇದ್ದೇನೆಯೇ ಎಂದು ರೇಖಾ ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಆಗ ಅವಳಿಗೆ ಅನ್ನಿಸಿತು, ಬಹುಶಃ ತಾನೂ ಖುಷಿ ಖುಷಿಯಾಗಿಲ್ಲ! ಅರೆರೆ…. ಹಾಗೇಕೆ? ಅಂದುಕೊಂಡಳು. ಎಲ್ಲಾ ಸುಖ ಸೌಲಭ್ಯಗಳಿರುವ ಆರಾಮದ ಜೀವನ ನಡೆಸುತ್ತಿದ್ದರೂ, ಇಬ್ಬರೂ ಸಂತೋಷವಾಗಿಲ್ಲ ಎಂದರೆ ಏನರ್ಥ?

ಈ ವಿಷಯ ಅವಳನ್ನು ವಿಚಲಿತಳಾಗಿಸಿತು. ಜೀವನದ ವಾಸ್ತವಿಕತೆಗೆ ಸಂಬಂಧಿಸಿದ ಪುಸ್ತಕಗಳನ್ನೂ ಅವಳು ತಿರುವಿ ಹಾಕತೊಡಗಿದಳು. ಇಂಟರ್‌ ನೆಟ್‌ ನ ಹಲವು ಸೈಟ್ಸ್ ಸಂದರ್ಶಿಸಿದಳು. ಹೀಗೆ ಸಂತಸ ಇಲ್ಲದಿರುವುದು ಏಕೆ, ಅದನ್ನು ಮರಳಿ ಪಡೆಯುವ ದಾರಿ ಏನು ಎಂದು ಹುಡುಕಾಡಿದಳು. ಎಷ್ಟೋ ಸಾಧು ಸಂತರ ಸಲಹೆಗಳನ್ನೂ ಪರಿಶೀಲಿಸಿದಳು. ಆದರೆ ಎಲ್ಲೂ ಅವಳಿಗೆ ತೃಪ್ತಿದಾಯಕ ಉತ್ತರ ಮಾತ್ರ ಸಿಗಲೇ ಇಲ್ಲ.

ಇದರಿಂದ ಸೋತಂತಾಗಿ ರೇಖಾ ನೇರವಾಗಿ ತನ್ನ ಫ್ಯಾಮಿಲಿ ಡಾಕ್ಟರ್‌ ಬಳಿ ಹೋದಳು. ಅವರ ಬಳಿ ತನ್ನ ಸಮಸ್ಯೆ ಹೇಳಿಕೊಂಡು, ಇದು ಒಂದು ಬಗೆಯ ಮಾನಸಿಕ ರೋಗವೇ ಎಂದು ಕೇಳಿದಳು. ಅದಕ್ಕೆ ಪರಿಹಾರವಾದರೂ ಏನು? ಎಂದು ಪ್ರಶ್ನಿಸಿದಳು.

ಇದೊಂದು ರೋಗವೇ….? ಅದಕ್ಕೆ ಡಾಕ್ಟರ್‌ ಮುಗುಳ್ನಗುತ್ತಾ, ಇದನ್ನು ರೋಗ ಎಂದು ಭಾವಿಸಬಹುದು ಅಥವಾ ಏನೂ ಇಲ್ಲ ಅಂತಲೂ ಸಹ! ಆದರೆ ಇದಕ್ಕೆ ಚಿಕಿತ್ಸೆಯೂ ನಿಮ್ಮ ಕೈಲೇ ಪರಿಹಾರ ಇದೆ, ಎಂದರು. ಯಾವ ವ್ಯಕ್ತಿಯೇ ಆಗಲಿ ಸಂತೋಷವಾಗಿ ಇರುವುದು ಬಿಡುವುದು, ನಮ್ಮ ದೇಹ ಸ್ರವಿಸುವ 4 ಹಾರ್ಮೋನ್ಸ್ ನ್ನು ಅವಲಂಬಿಸಿದೆ. ನಮ್ಮ ದೇಹ ಎಲ್ಲಿಯವರೆಗೆ ಈ 4 ಹಾರ್ಮೋನ್ಸ್ ಸ್ರವಿಸುತ್ತಿರುತ್ತವೋ ಅಲ್ಲಿಯವರೆಗೆ ನಾವು ಖುಷಿಯಾಗಿರುತ್ತೇವೆ.

ಇದರಲ್ಲಿ ಮೊದಲ ಹಾರ್ಮೋನ್‌ ಎಂಡಾರ್ಫಿನ್‌. ನಾವು ವ್ಯಾಯಾಮ ಮಾಡುತ್ತಿದ್ದರೆ ಎಂಡಾರ್ಫಿನ್‌ ತಂತಾನೇ ಸಲೀಸಾಗಿ ಸ್ರವಿಸುತ್ತದೆ. ಆಗ ವ್ಯಾಯಾಮದಿಂದ ಆಗುವ ನೋವು, ಟೆನ್ಶನ್ಸ್ ನ್ನು ಸಹಿಸಲು ಸಾಧ್ಯವಾಗುತ್ತದೆ. ಇದೇ ಹಾರ್ಮೋನಿನ ಕಾರಣ ನಾವು ವ್ಯಾಯಾಮದಿಂದ ಆಗುವ ನೋವಿಗೆ ಬದಲಾಗಿ ಸಂತಸ ಪಟ್ಟುಕೊಳ್ಳುತ್ತೇವೆ.

ಎರಡನೇ ಹಾರ್ಮೋನ್‌ ಡೋಪಾಮಿನ್‌. ನಾವು ಹಿಡಿದ ಕೆಲಸವನ್ನು ಪೂರ್ಣಗೊಳಿಸಿದಾಗ ಉಂಟಾಗುವ ಸಂತೃಪ್ತಿಯಿಂದ ಇದು ಸ್ರವಿಸಲ್ಪಡುತ್ತದೆ. ನಮ್ಮ ಸುದೀರ್ಘ ಜೀವನದಲ್ಲಿ ನಾವು ಎಷ್ಟೋ ಕೆಲಸಗಳನ್ನು ಮಾಡುತ್ತಿರುತ್ತೇವೆ, ಅದರಲ್ಲಿ ಮಾಡುವ ಎಷ್ಟೋ ಕೆಲಸಗಳಿಂದ ನಮಗೆ ಸಂತೋಷ ಸಿಗುತ್ತದೆ, ಅದರಲ್ಲೂ ನಮ್ಮ ಶ್ರಮದಾಯಕ ಕೆಲಸ ಹೊಗಳಲ್ಪಟ್ಟಾಗ! ಹಾಗಾದಾಗ ಈ ಡೋಪಾಮಿನ್‌ ವೇಗಾಗಿ ಸ್ರವಿಸಲ್ಪಟ್ಟು, ನಮ್ಮ ಸಂತಸ ಹೆಚ್ಚುತ್ತದೆ.

ಶಾಪಿಂಗ್ಮಾಡಿ ಖುಷಿಯಾಗಿರಿ!

ಗೃಹಿಣಿಗೆ ತನ್ನ ಮನೆಗೆಲಸಗಳ ಕುರಿತಾಗಿ ಅತೃಪ್ತಿಗೆ ಕಾರಣ, ಅವಳ ಆ ಕೆಲಸಕ್ಕಾಗಿ ಯಾರೂ ಪ್ರೋತ್ಸಾಹ ನೀಡುವುದಿಲ್ಲ, ಹೊಗಳುವುದೂ ಇಲ್ಲ. ಅವಳ ಕೆಲಸಗಳಲ್ಲಿನ ಕುಂದುಕೊರತೆ ಎತ್ತಿ ಆಡುತ್ತಾರಷ್ಟೆ. ಆಗ ಅವಳು ತನ್ನ ಕೆಲಸದ ಪ್ರತಿಯೊಂದು ಹಂತಲ್ಲಿ ಹೆಚ್ಚು ಉದಾಸೀನಳಾಗುತ್ತಾಳೆ. ಹೀಗಾಗಿ ಮನೆಯವರೆಲ್ಲರೂ ಅವಳ ಪ್ರತಿಯೊಂದು ಸಣ್ಣಪುಟ್ಟ ಕೆಲಸಗಳನ್ನೂ ಆಗಾಗ ಹೊಗಳುತ್ತಿರಬೇಕು.

ನಾವು ಯಾವುದೇ ಹೊಸ ಕೆಲಸ ಶುರು ಮಾಡಿದಾಗ ಯಾವ ಹೊಸ ವಸ್ತು ಕೊಂಡಾಗ ಅಂದ್ರೆ ಹೊಸ ಮನೆ, ಕಾರು, ಬಟ್ಟೆ, ಉಪಕರಣ ಇತ್ಯಾದಿ. ಆಗಲೂ ಸಹ ನಮ್ಮ ದೇಹದಲ್ಲಿ ಡೋಪಾಮಿನ್‌ ಹಾರ್ಮೋನ್‌ ಸ್ರವಿಸುತ್ತದೆ. ಹಾಗಾಗಿ ನಮಗೆ ಹೆಚ್ಚು ಖುಷಿ ಎನಿಸುತ್ತದೆ. ಹೀಗಾಗಿಯೇ ಹೆಚ್ಚು ಶಾಪಿಂಗ್‌ ಮಾಡುವ ಮಂದಿ ಹೆಚ್ಚು ಸಂತೋಷವಾಗಿರುತ್ತಾರೆ.

ಮೂರನೇ ಹಾರ್ಮೋನ್‌ ಅಂದ್ರೆ ಸೆರಾಟೊನಿನ್‌. ಯಾವುದೇ ಉತ್ತಮ ಕೆಲಸ ಮಾಡುವುದರಿಂದ, ಯಾರಿಗಾದರೂ ಸಹಾಯ ಮಾಡುವುದರಿಂದ, ಒಬ್ಬರಿಗೆ ಒಳಿತು ಮಾಡುವುದರಿಂದ, ಪರೋಪಕಾರ ಮಾಡುವುದರಿಂದ ಈ ಹಾರ್ಮೋನ್ ಸ್ರವಿಸಲ್ಪಡುತ್ತದೆ.

ನಾವು ಪ್ರಕೃತಿಯ ನೈಸರ್ಗಿಕ ವಸ್ತುಗಳನ್ನು ಕಾಪಾಡಲು ಯತ್ನಿಸಿದಂತೆ, ಪರಿಸರದ ಸುರಕ್ಷತೆಯ ಕಾಳಜಿ ವಹಿಸತೊಡಗಿದಂತೆ ಅಂದ್ರೆ ಮರಗಿಡ ಬೆಳೆಸುವುದು, ಅದರ ಸಂರಕ್ಷಣೆ ಮಾಡುವುದು, ಸಮಾಜಸೇವೆಗೆ ತೊಡಗುವುದು ಇತ್ಯಾದಿ ಮಾಡುವುದರಿಂದ ಈ ಹಾರ್ಮೋನ್‌ ಸ್ರವಿಸಲ್ಪಡುತ್ತದೆ. ಒಂದು ಉತ್ತಮ ಲೇಖನ ಓದಿ/ಬರೆದರೆ, ಇಂಟರ್‌ ನೆಟ್‌ ಗಾಗಿ ಬ್ಲಾಗ್‌ ಬರೆದರೆ, ಯಾರಿಗಾದರೂ ಗುಡ್‌ ನ್ಯೂಸ್‌ ನೀಡಿದರೆ, ಯಾರ ವಿದ್ಯಾಭ್ಯಾಸಕ್ಕಾದರೂ ಸಹಾಯ ಮಾಡಿದರೆ, ಆಗಲೂ ಈ ಹಾರ್ಮೋನ್ ಸ್ರವಿಸಲ್ಪಡುತ್ತದೆ.

ಸಂತೋಷ ಹುಡುಕುವ ನೆಪ

ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವ, ಒಗಟನ್ನು ಬಿಡಿಸುವ, FB ‌ಗ್ರೂಪ್‌ ನಲ್ಲಿ ವಿಚಾರ ಹಂಚಿಕೊ, ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದಲೂ ಸಹ ಈ ಹಾರ್ಮೋನ್‌ ಹೆಚ್ಚಾಗುತ್ತದೆ. ಏಕೆಂದರೆ ಇವೆಲ್ಲವನ್ನೂ ಮಾಡಿ ನಾವು ನಮ್ಮ ಅಮೂಲ್ಯ ವೇಳೆಯನ್ನು ಇತರರ ಏಳಿಗೆಗಾಗಿ ಮೀಸಲಿರಿಸಿದ್ದೇವೆ ಎಂದುಕೊಂಡಾಗ, ಖಂಡಿತವಾಗಿಯೂ ನಮಗೆ ತೃಪ್ತಿ, ನೆಮ್ಮದಿ, ಸಂತಸ ಸಿಗುತ್ತದೆ. ಅಂದ್ರೆ ಒಳ್ಳೆಯದನ್ನು ಯೋಚಿಸುತ್ತಾ ಒಳ್ಳೆಯದನ್ನೇ ಮಾಡಿ ಎಂದರ್ಥ.

ನಾಲ್ಕನೇ ಹಾರ್ಮೋನ್‌ ಎಂದರೆ ಆಕ್ಸಿಟಾಸಿನ್‌. ಇದು ಆಪ್ತರೆನಿಸುವ ವ್ಯಕ್ತಿ ಹತ್ತಿರ ಇರುವುದರಿಂದ, ಒಬ್ಬರ ಸಂಗೀತ ಕೇಳುವುದರಿಂದ, ಸ್ನೇಹತ ಆತ್ಮೀಯತೆಯಿಂದ, ಪ್ರೀತಿ ವಾತ್ಸಲ್ಯಗಳಿಂದ ಉಂಟಾಗುತ್ತದೆ. ನಾವು ಯಾರನ್ನಾದರೂ ಸ್ನೇಹ ಪ್ರೀತಿಯಿಂದ ಅಪ್ಪಿದಾಗ, ಹಸ್ತಲಾಘವ ಕೊಟ್ಟಾಗ ಇದು ಹೆಚ್ಚುತ್ತದೆ. ಹೀಗೆಲ್ಲ ಮಾಡುವುದರಿಂದ, ಚುಂಬನದಿಂದ ನಮಗೆ ಅತ್ಯಧಿಕ ಸಂತಸ ಸಿಗುತ್ತದೆ. ಎಷ್ಟೋ ಸಲ ನಮಗೆ ಬಹಳ ಬೇಕಾದರ ಕೈಯನ್ನು ಕೈಲಿ ತೆಗೆದುಕೊಂಡು ಕುಲಕುವುದರಿಂದಲೂ, ಈ ಹಾರ್ಮೋನ್‌ ಸ್ರವಿಸುವಿಕೆ ಹೆಚ್ಚಿ, ಸಂತಸಮಯ ವಾತಾವರಣ ಮೂಡುತ್ತದೆ.

ಸಣ್ಣಪುಟ್ಟ ಉಪಾಯಗಳನ್ನು ಹುಡುಕಿರಿ

ಎಂಡಾರ್ಫಿನ್‌ ಹಾರ್ಮೋನ್‌ ಪಡೆಯಲು ನಾವು ದಿನನಿತ್ಯ ತಪ್ಪದೆ ವ್ಯಾಯಾಮಗಳಲ್ಲಿ ತೊಡಗಬೇಕು. ಡೋಪಾಮಿನ್ ಹಾರ್ಮೋನ್‌ ಗಾಗಿ ನಮ್ಮ ಜೀವನದಲ್ಲಿ ಸಣ್ಣಪುಟ್ಟ ಪರೋಪಕಾರಿ ಉದ್ದೇಶಗಳನ್ನು ಗುರುತಿಸಿ, ಅವನ್ನು ಪೂರ್ತಿಗೊಳಿಸಬೇಕು. ಸೆರೊಟೋನಿನ್‌ ಹಾರ್ಮೋನಿಗಾಗಿ ನಾವು ಇತರರ ಜೊತೆ ಸದಾ ಶಿಷ್ಟಾಚಾರದಿಂದ ಸದ್ವರ್ತನೆಯಲ್ಲಿ ತೊಡಗಬೇಕು. ಆಕ್ಸಿಟೋಸಿನ್‌ ಗಾಗಿ ನಮ್ಮ ಆತ್ಮೀಯರನ್ನು ಆಗಾಗ ಅಪ್ಪಿ, ಸಂತಸ ಹಂಚಿಕೊಳ್ಳಬೇಕು. ಫ್ರೆಂಡ್ಸ್ ,ಆಪ್ತರೇಷ್ಟರೊಂದಿಗೆ ಸದಾ ಖುಷಿ ಖುಷಿಯಾಗಿ ನಸುನಗುತ್ತಾ ವ್ಯವಹರಿಸಬೇಕು.

ಇಂಥ ಸಣ್ಣಪುಟ್ಟ ಉಪಾಯಗಳನ್ನು ನಾವು ನಿಷ್ಠೆಯಿಂದ ಪಾಲಿಸಿದರೆ, ಎಷ್ಟೇ ನೋವಿದ್ದರೂ ನಲಿವಿನ ಮಂದಹಾಸ ತೇಲಿ ಬರುವುದರಲ್ಲಿ ಸಂದೇಹವಿಲ್ಲ. ಆಗ ನಾವು ಸಂತೋಷವಾಗಿಲ್ಲ ಎಂದು ಹೇಳಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಇದರ ಆಧಾರದಿಂದ ನಾವು ಜೀವನದ ಅತಿ ಕಠಿಣಕರ ಸವಾಲುಗಳನ್ನೂ ಎದುರಿಸಬಹುದು, ಎಂಥ ಕಷ್ಟವನ್ನಾದರೂ ಸಹಿಸಿ ಮುನ್ನಡೆಯಬಹುದು. ಸಣ್ಣಮಕ್ಕಳ ಮೂಡ್‌ ಕೆಟ್ಟಾಗ ಅವನ್ನು ರಮಿಸಿ, ಪ್ರೀತಿಯಿಂದ ವಾತ್ಸಲ್ಯ ತೋರುವಂತೆ, ಮುದ್ದಿಸಿದಾಗ ಅದಕ್ಕೆ ಎಷ್ಟೋ ಸಂತೋಷವಾಗುತ್ತದೆ.

ನಾವು ಇಂದಿನ ನಮ್ಮ ಆಧುನಿಕ ಪೀಳಿಗೆಯ ಟೀನೇಜ್‌ ಮಕ್ಕಳಿಗೂ ಸಹ ಸದಾ ಸಂತಸವಾಗಿರಲು ಏನು ಮಾಡಬೇಕೆಂದು ತಿಳಿಹೇಳಬೇಕು. ದುಬಾರಿ ಫೋನ್‌, ಲ್ಯಾಪ್‌ ಟಾಪ್‌, ಮಾಡ್‌ ಡ್ರೆಸ್‌, ಆಧುನಿಕ ಗ್ಯಾಜೆಟ್ಸ್ ಅಷ್ಟೇ ತೃಪ್ತಿಯ ಮೂಲವಲ್ಲ ಎಂದು ಮನವರಿಕೆ ಮಾಡಿಕೊಡಬೇಕು. ಸದಾ ಫ್ರೆಂಡ್ಸ್ ಜೊತೆ ಸಂತಸದಿಂದ ಸಮಯ ಕಳೆಯುಂತೆ ಹೇಳಬೇಕು. ಪರಸ್ಪರ ಕೊಟ್ಟು ತೆಗೆದುಕೊಂಡಾಗ, ಕಷ್ಟಸುಖ ಹಂಚಿಕೊಂಡಾಗ ಮಾತ್ರ ಖುಷಿ ಹೆಚ್ಚಲು ಸಾಧ್ಯ. ಅವರು ಗಳಿಸಿದ ಸಣ್ಣಪುಟ್ಟ ಬಹುಮಾನ, ಮಾಡಿದ ಸಾಧನೆಗಳನ್ನು ಗುರುತಿಸಿ ಸದಾ ಅವರನ್ನು ಪ್ರೋತ್ಸಾಹಿಸುತ್ತಿರಬೇಕು.

ಹಂಚಿಕೊಂಡಷ್ಟೂ ಸಂತೃಪ್ತಿ ಹೆಚ್ಚು

ಮಕ್ಕಳಿಗೆ ಹಂಚಿಕೊಳ್ಳುವ ಅಭ್ಯಾಸ ಕಲಿಸಿ. ಅದು ಅವರ ಓದುಬರಹಕ್ಕೆ ಸಂಬಂಧಿಸಿದ ಸ್ಟೇಷನರಿ ಇರಲಿ, ಟಿಫನ್‌ ಬಾಕ್ಸ್, ಹಣ್ಣುಹಂಪಲು, ಆಟಿಕೆಗಳು ಇತ್ಯಾದಿ ಏನೇ ಇರಲಿ, ಎಲ್ಲಾ ಮಕ್ಕಳೊಂದಿಗೂ ಅವನ್ನು ಹಂಚಿಕೊಂಡಷ್ಟೂ ಸಂತಸ ಹೆಚ್ಚುತ್ತದೆ ಎಂದು ಮನವರಿಕೆ ಮಾಡಿಸಿಕೊಡಿ.

ಅದೇ ತರಹ ಸಮವಯಸ್ಕ ಫ್ರೆಂಡ್ಸ್ ಜೊತೆ ಹಾರ್ದಿಕವಾಗಿ ಮನಬಿಚ್ಚಿ ಹರಟೆ, ಕೈ ಕುಲಕುವ, ಅಪ್ಪಿಕೊಳ್ಳುವುದು ಇತ್ಯಾದಿ ಬೆರೆತುಕೊಳ್ಳುವ ಗುಣವಿದ್ದರೆ ಪರಸ್ಪರ ಉತ್ತಮ ಬಾಂಧ್ಯ ಬೆಳೆಯುತ್ತದೆ. ಪರಸ್ಪರ ಬೆನ್ನುತಟ್ಟಿ ಪ್ರೋತ್ಸಾಹಿಸಿದಷ್ಟೂ ಗೆಳೆತನ ಗಟ್ಟಿಯಾಗುತ್ತದೆ.

ಹ್ಞಾಂ, ಇಂಥ ಹಾರ್ಮೋನ್ಸ್ ವೃದ್ಧಿಸಲು ಕೃತಕ ಸಾಧನಗಳಾದ ಡ್ರಗ್ಸ್, ಮೊಬೈಲ್ ‌ಗೇಮ್ಸ್, FB‌ನಲ್ಲಿ ಅತ್ಯಧಿಕ ಲೈಕ್ಸ್ ಗಳಿಸಲು ತಂತ್ರಗಳು, ಇತರರನ್ನು ಗೋಳುಗುಟ್ಟಿಸುವುದು, ಮಾತು ಮಾತಿಗೆ ಜಗಳಕ್ಕೆ ಹೋಗುವುದು, ತಲೆಕೆಟ್ಟ ವಿಡಿಯೋ ವೀಕ್ಷಣೆ ಇತ್ಯಾದಿ ಯಾವುದೂ ಸರಿಯಲ್ಲ. ಇವನ್ನೆಲ್ಲ ಬದಿಗಿರಿಸಿ ಮಾನವೀಯತೆಯಿಂದ ನಡೆದುಕೊಳ್ಳುವುದೊಂದೇ ಆದರ್ಶ ಮಾರ್ಗ ಎಂದು ತೋರಿಸಿಕೊಡಿ.

ಜಿ. ಕುಸುಮಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ