– ರಾಘವೇಂದ್ರ ಅಡಿಗ ಎಚ್ಚೆನ್.
ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ. ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಅವರು ಯಾವುದೇ ಕೆಟ್ಟ ಅಭ್ಯಾಸಗಳಿಲ್ಲದಿದ್ದರೂ 47ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೇ 12ರ ರಾತ್ರಿ ದಿಲೀಪ್ ರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಅವರು ಸ್ಮಾರ್ಟ್ ವಾಚ್ ಬಳಸಿ ಹೃದಯಬಡಿತ ನೋಡಿಕೊಂಡಿದ್ದರು. ಆದರೆ ವಾಚ್‌ನಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ತೋರಿದ್ದರಿಂದ ಅವರು ತಕ್ಷಣ ಆಸ್ಪತ್ರೆಗೆ ತೆರಳಲಿಲ್ಲ ಎಂದು ತಿಳಿದು ಬಂದಿದೆ.
ಮುಂದಿನ ದಿನ ಬೆಳಿಗ್ಗೆ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಪಡೆದಿದ್ದರು. ಆದರೆ ಚೆಕಪ್ ಮಾಡಿಸುವ ಮುನ್ನವೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ರಾತ್ರಿಯೇ ಆಸ್ಪತ್ರೆಗೆ ಹೋಗಿದ್ದರೆ ಪರಿಸ್ಥಿತಿ ಬೇರೆ ಆಗಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಘಟನೆ ಬಳಿಕ ಸ್ಮಾರ್ಟ್ ವಾಚ್‌ಗಳ ವಿಶ್ವಾಸಾರ್ಹತೆ ಕುರಿತು ಚರ್ಚೆ ಆರಂಭವಾಗಿದೆ. ಹೃದಯ ಬಡಿತ, ಆಮ್ಲಜನಕ ಮಟ್ಟ, ನಿದ್ರೆ ಸೇರಿದಂತೆ ಹಲವು ಆರೋಗ್ಯ ಮಾಹಿತಿಗಳನ್ನು ನೀಡುವ ಈ ಸಾಧನಗಳು ವೈದ್ಯಕೀಯ ಪರೀಕ್ಷೆಗೆ ಪರ್ಯಾಯವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ದಿಲೀಪ್ ರಾಜ್ ಅವರು ಕಿರುತೆರೆ, ಸಿನಿಮಾ, ಡಬ್ಬಿಂಗ್ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.





