- ರಾಘವೇಂದ್ರ ಅಡಿಗ ಎಚ್ಚೆನ್.
ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಪತಿ ಅಗಲಿಕೆಯ ನೋವಿನಲ್ಲಿರುವ ಪತ್ನಿ ಶ್ರೀವಿದ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ.
“ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ನಾವು ಇನ್ನು ಮುಂದೆ ಅನುಭವಿಸುವ ಪ್ರತಿಯೊಂದು ದಯೆಯ ರೂಪದಲ್ಲಿ ನಮ್ಮೊಂದಿಗೇ ಇರುತ್ತಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾ, “ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಗೆ ಹೊಸ ಜೀವನ ಸಿಗಲಿ. ಆದರೆ ನಾನು ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ” ಎಂದು ಭಾವುಕವಾಗಿ ಹೇಳಿದ್ದಾರೆ.
ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಅವರು ದಾಂಪತ್ಯ ಜೀವನದಲ್ಲಷ್ಟೇ ಅಲ್ಲ, ವೃತ್ತಿಜೀವನದಲ್ಲೂ ಜೊತೆಯಾಗಿ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಇತ್ತೀಚಿನ ‘ಕೃಷ್ಣ ರುಕ್ಕು’ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳ ಹಿಂದೆ ಈ ಜೋಡಿಯ ಪರಿಶ್ರಮವಿತ್ತು.
ಶ್ರೀವಿದ್ಯಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ಧೈರ್ಯ ತುಂಬುತ್ತಿದ್ದಾರೆ.





